Jio: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್... 8 ನಗರಗಳಲ್ಲಿ ಈ ಸೇವೆ ಲಭ್ಯ.. 1Gbps ವೇಗ
ಜಿಯೋ (Jio) ಭಾರತೀಯರಿಗೆ ಗುಡ್‌ನ್ಯೂಸ್ ಮೇಲೆ ಗುಡ್‌ನ್ಯೂಸ್ ನೀಡುತ್ತಿದೆ. ಈ ನಡುವೆ ಭಾರತೀಯರು ಸಂತಸ ಪಡುವ ಮತ್ತೊಂದು ಶುಭ ಸುದ್ದಿ ನೀಡಲಾಗಿದ್ದು, ಈ ಮೂಲಕ ಭಾರತದ ಎಂಟು ನಗರಗಳಲ್ಲಿ ಈ ಸೇವೆ ಲಭ್ಯ ಆಗಲಿದೆ. ಅಷ್ಟೇ ಅಲ್ಲದೆ ಗ್ರಾಹಕರು 1Gbps ವೇಗದಲ್ಲಿ ಈ ಸೌಲಭ್ಯ ಪಡೆದುಕೊಳ್ಳಬಹುದು.
ಹೌದು, ಜಿಯೋ ತನ್ನ ಹೊಸ ವೈರ್‌ಲೆಸ್ ಇಂಟರ್ನೆಟ್ ಸೇವೆ, ಜಿಯೋ ಏರ್ ಫೈಬರ್ (Jio AirFiber) ದೇಶಾದ್ಯಂತ ಎಂಟು ನಗರಗಳಲ್ಲಿ ಆರಂಭಿಸಿದೆ. ಈ ಸೇವೆಯು ಹೈ-ಸ್ಪೀಡ್ ಇಂಟರ್ನೆಟ್, ಓಟಿಟಿ ಪ್ರಯೋಜನಗಳು ಮತ್ತು ಇತರ ಫೀಚರ್ಸ್‌ನೊಂದಿಗೆ ಒಟ್ಟಾರೆ ಪ್ಲ್ಯಾನ್ ಲಭ್ಯ ಇದೆ. ಹಾಗಿದ್ರೆ, ಏನಿದು ಹೊಸ ಸೌಲಭ್ಯ?, ಯಾರೆಲ್ಲಾ ಈ ಪ್ರಯೋಜನ ಪಡೆದುಕೊಳ್ಳಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಜಿಯೋದಿಂದ ಹೊಸ ಸೌಲಭ್ಯ: ಯುಪಿಐ ನಿಂದ ಸರ್ಕಾರಿ ಸೌಲಭ್ಯಗಳ ಡಿಜಿಟಲೀಕರಣದವರೆಗೆ ಎಲ್ಲಾ ಹಂತದಲ್ಲೂ ಜನರು ಕೆಲಸ ಮಾಡುವುದನ್ನು ಮುಂದುವರಿಸಲು ವೇಗದ ಇಂಟರ್ನೆಟ್ ಸೇವೆ ಅಗತ್ಯವಾಗಿದೆ. ಆದರೆ, ಈ ವೇಳೆ ಮೊಬೈಲ್ ನೆಟ್‌ವರ್ಕ್ ಅನ್ನೇ ನಂಬಿಕೊಂಡು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಉತ್ತಮ ಇಂಟರ್ನೆಟ್ (Internet) ಸೇವೆ ನೀಡುವ ಕೇಬಲ್ ಫೈಬರ್ ನೆಟ್‌ವರ್ಕ್‌ಗಳು ಸಹ ಎಲ್ಲೆಡೆ ಲಭ್ಯವಿರುವುದಿಲ್ಲ. ಆದರೆ, ಈಗ ಗ್ರಾಹಕರು ವೈರ್‌ಲೆಸ್ ಸಂಪರ್ಕದೊಂದಿಗೆ ವೇಗದ ಇಂಟರ್ನೆಟ್ ಸೇವೆಗೆ ಎಂಟ್ರಿ ನೀಡಬಹುದಾಗಿದೆ.
ಜಿಯೋ ಸೆಪ್ಟೆಂಬರ್ 2023ರಲ್ಲಿ ಜಿಯೋ ಫೈಬರ್ ಅನ್ನು ನೀಡಲು ಆರಂಭಿಸಿದ್ದು, ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು 5G ತಂತ್ರಜ್ಞಾನವನ್ನು ಬಳಕೆ ಮಾಡುತ್ತದೆ. ಮನೆ ಮನರಂಜನೆ, ಸ್ಮಾರ್ಟ್ ಹೋಮ್ ಸೇವೆಗಳು ಮತ್ತು ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್‌ನ ಅಗತ್ಯಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಸಾಂಪ್ರದಾಯಿಕ ಫೈಬರ್-ಆಪ್ಟಿಕ್ ಸಂಪರ್ಕಗಳಿಗೆ ಹೋಲಿಸಬಹುದಾದ ವೇಗವನ್ನು ನೀಡುತ್ತದೆ. ಅಷ್ಟೇ ಅಲ್ಲದೆ 1 Gbps ವರೆಗಿನ ವೇಗವನ್ನೂ ಸಹ ಪಡೆದುಕೊಳ್ಳಬಹುದಾಗಿದೆ.
ಈ ಜಿಯೋ ಫೈಬರ್ ವೈರ್‌ಲೆಸ್ 4G ಡಾಂಗಲ್‌ಗಳಿಗೆ ಹೋಲಿಕೆಯಾಗಲಿದೆಯಾದರೂ 5G ಮೂಲಕ ಬ್ರಾಡ್‌ಬ್ಯಾಂಡ್ ತರಹದ ವೇಗದಂತಹ ಹೆಚ್ಚುವರಿ ಪ್ರಯೋಜನಗಳನ್ನು ಇದು ನೀಡಲಿದೆ. ಅಂದರೆ ಬಳಕೆದಾರರು 30Mbps, 100Mbps, 150Mbps, 300Mbps, 500Mbps ಮತ್ತು 1Gbps ಯೋಜನೆಗಳ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಈ ಮೂಲಕ ಅತ್ಯುತ್ತಮ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಯಾವೆಲ್ಲಾ ನಗರಗಳಲ್ಲಿ ಜಿಯೋ ಏರ್‌ಫೈಬರ್ ಲಭ್ಯವಿದೆ?: ಜಿಯೋ ದೇಶಾದ್ಯಂತ ಏರ್‌ಫೈಬರ್ ಸೇವೆಯನ್ನು ಪರಿಚಯಿಸುತ್ತಿದೆಯಾದರೂ ಆರಂಭದಲ್ಲಿ ಕೆಲವು ನಗರಗಳಲ್ಲಿ ಮಾತ್ರ ಸೇವೆ ನೀಡಲಾಗಿದೆ. ಅಂದರೆ, ಈ ಸೇವೆ ಇದೀಗ ಎಂಟು ನಗರಗಳಲ್ಲಿ ಲಭ್ಯವಿದ್ದು, ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ಪುಣೆಯಲ್ಲಿ ಲಭ್ಯ ಇರಲಿದೆ.

ಜಿಯೋ ಏರ್‌ಫೈಬರ್ ಅನ್ನು ಹೇಗೆ ಬುಕ್ ಮಾಡುವುದು ಹೇಗೆ? : ನಿಮ್ಮ ಪ್ರದೇಶದಲ್ಲಿ ಜಿಯೋ ಫೈಬರ್ ಲಭ್ಯವಿದೆಯೇ ಎಂದು ಪರಿಶೀಲಿಸಲು ಜಿಯೋ ವೆಬ್‌ಸೈಟ್, ಮೈ ಜಿಯೋ ಆಪ್‌ನಲ್ಲಿ ತಿಳಿದುಕೊಳ್ಳಬಹುದು. ಜೊತೆಗೆ 60008-60008 ಗೆ ಮಿಸ್ಡ್ ಕಾಲ್ ನೀಡುವ ಮೂಲಕ, ಜಿಯೋ ವೆಬ್‌ಸೈಟ್ ಅಥವಾ ಮೈ ಜಿಯೋ ಆಪ್‌ಗೆ ಭೇಟಿ ನೀಡುವ ಮೂಲಕ ಅಥವಾ ನಿಮ್ಮ ಹತ್ತಿರದ ಜಿಯೋ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ನೀವು ಹೊಸ ಸಂಪರ್ಕವನ್ನು ಬುಕ್ ಮಾಡಬಹುದು.
ನೀವು ಒಮ್ಮೆ ಇದನ್ನು ಬುಕಿಂಗ್ ಮಾಡಿದ ನಂತರ ವೈ-ಫೈ ರೂಟರ್, 4K ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ಮತ್ತು ವಾಯ್ಸ್ ಆಕ್ಟಿವ್ ರಿಮೋಟ್ ಅನ್ನು ಒಳಗೊಂಡಿರುವ ನಿಮ್ಮ ಜಿಯೋ ಏರ್‌ಫೈಬರ್ ಅನ್ನು ಸ್ವೀಕರಿಸುತ್ತೀರಿ. ಇನ್ನು ಹೊರಾಂಗಣ ಘಟಕವನ್ನು ನಿಮ್ಮ ಟೆರೇಸ್/ಮೇಲ್ಛಾವಣಿಯ ಮೇಲೆ ಅಥವಾ ನಿಮ್ಮ ಮನೆಯ ಹೊರಗೆ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಜಿಯೋ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೊಸ ಸಂಪರ್ಕವನ್ನು ನೀಡುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಇರಲಿ.

ಆದರೂ ಸಹ ಕಂಪನಿಯು 1,000 ರೂಗಳ ಇನ್‌ಸ್ಟಾಲ್ ಸೇವೆಯನ್ನು ವಿಧಿಸುತ್ತದೆ. ನೀವು ವಾರ್ಷಿಕ ಯೋಜನೆಯನ್ನು ಆರಿಸಿಕೊಂಡರೆ ಈ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ವಾರ್ಷಿಕ ಯೋಜನೆಯ ಪ್ರಯೋಜನಗಳನ್ನು ಆನಂದಿಸುತ್ತಿರುವಾಗಲೂ ಸಹ ಬಳಕೆದಾರರು ಕ್ರೆಡಿಟ್/ಡೆಬಿಟ್ ಕಾರ್ಡ್ ಆಧಾರಿತ ಇಎಮ್‌ಐ ಅನ್ನು ಬಳಸಿಕೊಂಡು ಮಾಸಿಕ ಆಧಾರದ ಮೇಲೆ ಪಾವತಿಸುವ ಆಯ್ಕೆಯನ್ನೂ ಸಹ ಪಡೆದುಕೊಳ್ಳಬಹುದಾಗಿದೆ.
ಜಿಯೋ ಏರ್‌ಫೈಬರ್ ಪ್ಲ್ಯಾನ್‌ಗಳು: ಜಿಯೋ ಏರ್‌ಫೈಬರ್‌ನ ಪರಿಚಯದೊಂದಿಗೆ ಕಂಪನಿಯು ಆರು ಏರ್‌ಫೈಬರ್ ಯೋಜನೆಗಳನ್ನು ಅನಾವರಣಗೊಳಿಸಿದೆ, ಪ್ರತಿಯೊಂದೂ ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಪೂರಕ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಜಿಯೋ ಏರ್‌ಫೈಬರ್ ಯೋಜನೆಗಳು ಎರಡು ವಿಭಿನ್ನ ವರ್ಗಗಳಾಗಿರುತ್ತವೆ ಅವುಗಳೆಂದರೆ ಏರ್‌ಫೈಬರ್ ಮತ್ತು ಏರ್‌ಫೈಬರ್ ಮ್ಯಾಕ್ಸ್ ಯೋಜನೆಗಳು.
ಜಿಯೋ ಏರ್‌ಫೈಬರ್ ಪ್ಲ್ಯಾನ್: ಈ ವರ್ಗದ ಅಡಿಯಲ್ಲಿ, ಜಿಯೋ ಕ್ರಮವಾಗಿ 599ರೂ., 899ರೂ., ಮತ್ತು 1199 ರೂ. ಬೆಲೆಗಳೊಂದಿಗೆ ಮೂರು ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು 550 ಕ್ಕೂ ಹೆಚ್ಚು ಡಿಜಿಟಲ್ ಚಾನಲ್‌ಗಳು ಮತ್ತು 14 ಒಟಿಟಿ ಅಪ್ಲಿಕೇಶನ್‌ಗಳಿಗೆ ಎಂಟ್ರಿ ನೀಡುತ್ತದೆ. ಹಾಗೆಯೇ 100 Mbps ವರೆಗಿನ ಇಂಟರ್ನೆಟ್ ವೇಗವನ್ನು ಸಹ ಇದು ಒದಗಿಸುತ್ತವೆ. 1199ರೂ. ಯೋಜನೆಯು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋಸಿನಿಮಾ ಪ್ರೀಮಿಯಂಗೆ ಪೂರಕ ಚಂದಾದಾರಿಕೆಗಳನ್ನು ನೀಡುತ್ತದೆ.

ಜಿಯೋ ಫೈಬರ್ ಮ್ಯಾಕ್ಸ್ ಪ್ಲ್ಯಾನ್: ಈ ವರ್ಗದಲ್ಲಿ, ಜಿಯೋ ಕ್ರಮವಾಗಿ 1499ರೂ., 2499 ರೂ. ಹಾಗೂ 3999ರೂ. ಬೆಲೆಯ ಮೂರು ಪ್ಲ್ಯಾನ್ ಆಯ್ಕೆ ನೀಡಿದೆ. ಈ ಪ್ಲ್ಯಾನ್‌ನಲ್ಲಿ 1Gbps ವರೆಗಿನ ಇಂಟರ್ನೆಟ್ ವೇಗವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ 550 ಕ್ಕೂ ಹೆಚ್ಚು ಡಿಜಿಟಲ್ ಚಾನೆಲ್‌ಗಳು ಮತ್ತು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಜಿಯೋ ಸಿನಿಮಾ ಪ್ರೀಮಿಯಂ ನಂತಹ 14 ಒಟಿಟಿ ಆಪ್‌ಗಳಿಗೆ ಇದು ಪ್ರವೇಶ ನೀಡಲಿದೆ.


Click it and Unblock the Notifications








