ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ವಿಶ್ವದಲ್ಲೇ ಮೊದಲ ಬಾರಿಗೆ ಈ ಆಫರ್!
ಟೆಲಿಕಾಂ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಜಿಯೋ ಸಂಸ್ಥೆಯು ಹಲವು ಭಿನ್ನ ಪ್ರೀಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಕೆಲವು ಪ್ರೀಪೇಯ್ಡ್ ಯೋಜನೆಗಳು ಓಟಿಟಿ ಪ್ರಯೋಜನ ಹಾಗೂ ಅಧಿಕ ಡೇಟಾ ಸೌಲಭ್ಯ ಸಹ ಒಳಗೊಂಡಿವೆ. ಇದೀಗ ಜಿಯೋ ತನ್ನ ಎರಡು ಯೋಜನೆಗಳ ಮೂಲಕ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.
ಹೌದು, ಇದೀಗ ನೆಟ್ ಫ್ಲಿಕ್ಸ್ ಚಂದಾದಾರಿಕೆಯ ಜೊತೆಗೆ ಬರುವಂಥ ಎರಡು ಹೊಸ 'ಜಿಯೋ-ನೆಟ್‌ಫ್ಲಿಕ್ಸ್ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು' ರಿಲಯನ್ಸ್ ಜಿಯೋ ಬಿಡುಗಡೆ ಮಾಡಿದೆ. 1099ರೂ. ಬೆಲೆಯ ಯೋಜನೆಯೊಂದಿಗೆ ಗ್ರಾಹಕರು ದಿನಕ್ಕೆ 2 GB ಡೇಟಾವನ್ನು ಪಡೆಯುತ್ತಾರೆ. ಇದೇ ರೀತಿ 1499 ರೂ. ಯೋಜನೆಯೊಂದಿಗೆ, ಕಂಪನಿಯು ದಿನಕ್ಕೆ 3 GB ಡೇಟಾವನ್ನು ಒದಗಿಸುತ್ತದೆ.

ಹಾಗೆಯೇ ಈ ಎರಡೂ ಪ್ರಿಪೇಯ್ಡ್ ಯೋಜನೆಗಳ ವ್ಯಾಲಿಡಿಟಿ 84 ದಿನಗಳು ಆಗಿರುತ್ತದೆ. ಆಯ್ದ ಜಿಯೋ ಪೋಸ್ಟ್‌ಪೇಯ್ಡ್ ಮತ್ತು ಜಿಯೋ ಫೈಬರ್ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ಈಗಾಗಲೇ ಲಭ್ಯವಿದ್ದರೂ ಪ್ರಿಪೇಯ್ಡ್ ಪ್ಲ್ಯಾನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ಲಭ್ಯ ಇರುವುದು ಇದೇ ಮೊದಲಾಗಿದೆ.
ವಿಶ್ವದಲ್ಲೇ ಮೊದಲ ಬಾರಿಗೆ ಎಂಬಂತೆ ನೆಟ್‌ಫ್ಲಿಕ್ಸ್ ಅನ್ನು ಪ್ರೀಪೇಯ್ಡ್ ಯೋಜನೆ ಜತೆಗೆ ಒದಗಿಸುತ್ತಿರುವ ಮೊದಲ ಟೆಲಿಕಾಂ ಆಪರೇಟರ್ ಜಿಯೋ ಆಗಿದೆ. ಇದರೊಂದಿಗೆ ಜಿಯೋದ 400 ಮಿಲಿಯನ್, ಅಂದರೆ ನಲವತ್ತು ಕೋಟಿ ಪ್ರಿಪೇಯ್ಡ್ ಗ್ರಾಹಕರು ನೆಟ್‌ಫ್ಲಿಕ್ಸ್ ಸಬ್ ಸ್ಕ್ರಿಪ್ಷನ್ ಜತೆಗೆ ಯೋಜನೆಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಪಡೆಯುತ್ತಾರೆ.
ನೆಟ್‌ಫ್ಲಿಕ್ಸ್ ಓಟಿಟಿಯೊಂದಿಗೆ ಗ್ರಾಹಕರು ಹಾಲಿವುಡ್‌ನಿಂದ ಬಾಲಿವುಡ್ ತನಕ ಜನಪ್ರಿಯ ಟಿವಿ ಶೋಗಳು, ಭಾರತೀಯ ಪ್ರಾದೇಶಿಕ ಸಿನಿಮಾಗಳು ಮತ್ತು ಇನ್ನೂ ಹೆಚ್ಚಿನದನ್ನು ತಮ್ಮ ಮೊಬೈಲ್ ಸಾಧನದಲ್ಲಿ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ವೀಕ್ಷಿಸಲು ಸಾಧ್ಯವಾಗುತ್ತದೆ. ಜಿಯೋದ ಇತರ ಪ್ಲ್ಯಾನ್‌ಗಳಂತೆ ಗ್ರಾಹಕರು ಆನ್‌ಲೈನ್ ಅಥವಾ ಆಫ್‌ಲೈನ್ ರೀಚಾರ್ಜ್ ಸೌಲಭ್ಯವನ್ನು ಎರಡೂ ಯೋಜನೆಗಳಲ್ಲಿ ಪಡೆಯುತ್ತಾರೆ.
ಈ ಯೋಜನೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಸಿಇಒ ಕಿರಣ್ ಥಾಮಸ್, 'ನಮ್ಮ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ತರಲು ನಾವು ಬದ್ಧರಾಗಿದ್ದೇವೆ. ನಮ್ಮ ಪ್ರಿಪೇಯ್ಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್‌ನ ಪ್ರಾರಂಭವು ನಮ್ಮ ಸಂಕಲ್ಪವನ್ನು ತೋರಿಸುವಂಥ ಮತ್ತೊಂದು ಹಂತವಾಗಿದೆ. ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಪಾಲುದಾರರೊಂದಿಗೆ ನಮ್ಮ ಸಹಭಾಗಿತ್ವವು ಬಲವಾಗಿ ಬೆಳೆದಿದೆ ಮತ್ತು ಪ್ರಪಂಚದ ಉಳಿದ ಭಾಗಗಳಲ್ಲಿ ಇದನ್ನು ಅನುಸರಿಸಲು ನಾವು 'ಬಳಕೆಯ ಮೊದಲ ಪ್ರಕರಣವನ್ನು' ರೂಪಿಸುತ್ತಿದ್ದೇವೆ.' ಎಂದು ಅವರು ಹೇಳಿದರು.
ನೆಟ್‌ಫ್ಲಿಕ್ಸ್‌ನ ಏಷ್ಯಾ ಪೆಸಿಫಿಕ್ (APAC) ಪಾಲುದಾರಿಕೆಗಳ ಉಪಾಧ್ಯಕ್ಷ ಟೋನಿ ಜೆಮ್‌ಕೋವ್ ಸ್ಕಿ, 'ಜಿಯೋ ಜೊತೆಗಿನ ನಮ್ಮ ಸಂಬಂಧವನ್ನು ವಿಸ್ತರಿಸಲು ನಾವು ರೋಮಾಂಚಿತರಾಗಿದ್ದೇವೆ. ವರ್ಷಗಳಲ್ಲಿ, ನಮ್ಮ ಹಲವಾರು ಯಶಸ್ವಿ ಪ್ರಾದೇಶಿಕ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳನ್ನು ಭಾರತದಾದ್ಯಂತ ಪ್ರೇಕ್ಷಕರು ಇಷ್ಟಪಡುತ್ತಿದ್ದಾರೆ. ಜಿಯೋ ಜೊತೆಗಿನ ನಮ್ಮ ಹೊಸ ಪ್ರಿಪೇಯ್ಡ್ ಜತೆಗೆ ನೀಡುವಂಥ ಈ ಯೋಜನೆ ಪಾಲುದಾರಿಕೆಯು ಗ್ರಾಹಕರಿಗೆ ಭಾರತೀಯ ಕಂಟೆಂಟ್ ಮತ್ತು ಪ್ರಪಂಚದಾದ್ಯಂತದ ಕಂಟೆಂಟ್ ಗಳಿಗೆ ಸಂಪರ್ಕವನ್ನು ನೀಡುತ್ತದೆ.' ಎಂದು ಅವರು ಹೇಳಿದರು.
ಗ್ರಾಹಕರು ಬಯಸಿದರೆ ನೆಟ್‌ಫ್ಲಿಕ್ಸ್ ಅಪ್ಲಿಕೇಷನ್ ಅನ್ನು ಬಹು ಡಿವೈಸ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ಅದೇ ಲಾಗಿನ್ ಕ್ರೆಡೆನ್ಷಿಯಲ್ಸ್ ಗಳೊಂದಿಗೆ ಬಳಸಬಹುದು. ಆದರೆ ಇದನ್ನು ಒಂದು ಸಮಯದಲ್ಲಿ, ಒಂದು ಡಿವೈಸ್‌ನಲ್ಲಿ ಮಾತ್ರ ವೀಕ್ಷಿಸಬಹುದು. 1499ರೂ. ಬೆಲೆಯ ಯೋಜನೆಯಲ್ಲಿ ಟಿವಿ ಅಥವಾ ಲ್ಯಾಪ್‌ಟಾಪ್‌ನಂತಹ ಯಾವುದೇ ದೊಡ್ಡ ಸ್ಕ್ರೀನ್ ಮೇಲೆ ನೆಟ್‌ಫ್ಲಿಕ್ಸ್ ಅನ್ನು ಸ್ಟ್ರೀಮ್ ಮಾಡಬಹುದಾಗಿದೆ.


Click it and Unblock the Notifications