ಜಿಯೋ ಗ್ರಾಹಕರಿಗೆ ಬರೆ ಎಳೆಯಲು ಮುಂದಾಗಿದ್ದಾರೆ ಅಂಬಾನಿ!: ಹೊಸ ಪ್ಲ್ಯಾನ್ ಏನು?
ಭಾರತದಲ್ಲಿ ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಏರ್‌ಟೆಲ್ ಹಾಗೂ ವೋಡಾಫೋನ್ ಐಡಿಯಾ ಬಳಕೆದಾರರಿಗೆ ಹೋಲಿಕೆ ಮಾಡಿಕೊಂಡರೆ ಜಿಯೋದ ಚಂದಾದಾರರು ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಎಲ್ಲಾ ಬಳಕೆದಾರರಿಗೆ ಜಿಯೋ ಬರೆ ಎಳೆಯಲು ಮುಂದಾಗಿದೆ. ಹೀಗಾಗಿ ಇಂದಿನಿಂದಲೇ ನೀವು ಮಾನಸಿಕವಾಗಿ ಸಿದ್ಧರಾಗಬೇಕಿದೆ.
ಹೌದು, ಟೆಲಿಕಾಂ ವಲಯದಲ್ಲಿ ಜಿಯೋ ಅಗ್ರ ಸ್ಥಾನ ಪಡೆದುಕೊಳ್ಳುತ್ತಿದ್ದು, ಬಳಕೆದಾರರು ಜಿಯೋದ ವಿವಿಧ ರೀಚಾರ್ಜ್ ಪ್ಲ್ಯಾನ್ ಮೂಲಕ ಸಾಕಷ್ಟು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಕೆಲವೇ ದಿನಗಳಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದ್ದು, ಈ ಮೂಲಕ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳಲು ಮುಂದಾಗಿದೆ. ಹಾಗಿದ್ರೆ, ಜಿಯೋದ ಹೊಸ ನಿಯಮದಿಂದ ಗ್ರಾಹಕರಿಗೆ ಬೀಳುವ ಬರೆ ಏನು?, ಜಿಯೋ ಯಾಕೆ ಈ ನಿರ್ಧಾರ ಮಾಡುತ್ತಿದೆ ಎಂಬ ಬಗ್ಗೆ ತಿಳಿದುಕೊಳ್ಳಿ.

ಜಿಯೋದ ನಿರ್ಧಾರ ಏನು?: ರಿಲಯನ್ಸ್ ಜಿಯೋ ಈಗಾಗಲೇ ಏರ್‌ಟೆಲ್ ಹಾಗೂ ವಿ ಗೆ ಪೈಪೋಟಿ ನೀಡುವ ಕಾರಣಕ್ಕೆ ಹಲವಾರು ಕಡಿಮೆ ದರದ ಪ್ಲ್ಯಾನ್‌ಗಳನ್ನು ಘೋಷಣೆ ಮಾಡಿದೆ. ಜೊತೆಗೆ ಇದರಲ್ಲಿ ಸಾಕಷ್ಟು ಪ್ರಯೋಜನಗಳನ್ನು ಸಹ ನೀಡುತ್ತಿದೆ. ಆದರೆ, ಕಳೆದ ಎರಡು ತ್ರೈಮಾಸಿಕಗಳಲ್ಲಿ ಪ್ರತಿ ಬಳಕೆದಾರರ(ARPU) ಸರಾಸರಿ ಆದಾಯದಲ್ಲಿ ಉತ್ತಮ ಸಾಧನೆ ಕಂಡುಬಂದಿಲ್ಲ. ಈ ಕಾರಣಕ್ಕೆ ARPU ಬೆಲೆ ಏರಿಕೆಗೆ ಮುಂದಾಗಿದೆ.
ಜಿಯೋಗೆ ಬೇರೆ ದಾರಿ ಇಲ್ಲ: ಜಿಯೋಗೆ ಪ್ರತಿ ಬಳಕೆದಾರರಿಗೆ (ARPU) ಸರಾಸರಿ ಆದಾಯವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದ್ದು, ಇದನ್ನು ಬಿಟ್ಟು ಬೇರೆ ದಾರಿ ಇಲ್ಲ ಎಂಬಂತೆ ಆಗಿದೆ. ಈ ಕಾರಣಕ್ಕೆ ಮನೆಯಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಜಿಯೋ ಬಳಕೆದಾರರು ಇದ್ದರೆ ಅವರು ಭಾರೀ ಬೆಲೆ ತೆರೆಬೇಕಾದ ಕಾಲ ಸನಿಹವೇ ಇದೆ.
ಭಾರತದಲ್ಲಿ ಬಳಕೆದಾರರಿಗೆ ಆತಂಕ ನಿರ್ಮಾಣ ಮಾಡುವ ವಿಷಯ ಏನೆಂದರೆ ಯಾವ ಕಂಪೆನಿ ಮೊದಲು ತನ್ನ ಶುಲ್ಕವನ್ನು ಹೆಚ್ಚಿಗೆ ಮಾಡುತ್ತವೆ ಎಂಬ ವಿಚಾರ. ಅದರಂತೆ ಈ ಸಾಲಿನಲ್ಲಿ ಏರ್‌ಟೆಲ್ ಮೊದಲಿಗನಾಗಿದೆ. ತನ್ನ ಮೂಲ ಪ್ರಿಪೇಯ್ಡ್ ರೀಚಾರ್ಜ್ 99ರೂ.ಗಳನ್ನು ಎಲ್ಲಾ ವಲಯಗಳಿಂದ ತೆಗೆದುಹಾಕಿದ್ದು, ಇದರ ಬದಲಿಗೆ 155ರೂ.ಗಳ ಹೊಸ ಮೂಲ ರೀಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ. ಈ ಮೂಲಕ ಭಾರತೀಯ ಟೆಲಿಕಾಂ ಉದ್ಯಮದಲ್ಲಿ ದರ ಏರಿಕೆಯ ಮೊದಲ ಹೆಜ್ಜೆಯನ್ನು ಏರ್‌ಟೆಲ್ ಇರಿಸಿದೆ.

ಏರ್‌ಟೆಲ್ ಈ ನಿರ್ಧಾರ ಮಾಡಿ ಬಹಳ ದಿನಗಳಾದರೂ ಜಿಯೋ ಈವರೆಗೂ ಈ ಸಂಬಂಧ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಇದೀಗ ರಿಲಯನ್ಸ್ ಜಿಯೋ ಕೂಡ ಆದಷ್ಟು ಬೇಗ ತನ್ನ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಶುಲ್ಕದ ಬೆಲೆ ಏರಿಕೆಯನ್ನು ಘೋಷಿಸುವ ಸಾಧ್ಯತೆಯಿದೆ. ಇದರ ನಡುವೆ ವಿ ಕಡೆ ಜಿಯೋ ಒಂದು ಕಣ್ಣಿರಿಸಿದೆ.
ಇನ್ನು ವೊಡಾಫೋನ್ ಐಡಿಯಾ ಸೇವೆಗೆ ಬೇಸತ್ತು ಈಗಾಗಲೇ ಹಲವಾರು ಬಳಕೆದಾರರು ಇದರಿಂದ ಮುಕ್ತರಾಗುತ್ತಿದ್ದಾರೆ. ಈ ವೇಳೆ ಏನಾದರೂ ವಿ ಬೆಲೆ ಏರಿಕೆ ಘೋಷಣೆ ಮಾಡಿದರೆ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಈ ವೇಳೆ ಇದರ ಗ್ರಾಹಕರು ಜಿಯೋ ಕಡೆ ವಾಲುತ್ತಾರೆ ಎನ್ನುವುದು ಸಹ ಕಂಪೆನಿಯ ಲೆಕ್ಕಾಚಾರ. ಈ ರೀತಿಯಾದರೆ ಮತ್ತಷ್ಟು ಹೆಚ್ಚಿನ ಗ್ರಾಹಕರನ್ನು ಪಡೆದುಕೊಳ್ಳುವ ಜಿಯೋ ನಂತರ ತನ್ನ ಚಾಣಾಕ್ಷ ನಡೆ ತೋರಿಸಲಿದೆ.
ಕಾಯುವಿಕೆ ಯಾಕೆ?: ವೊಡಾಫೋನ್ ತನ್ನ ಶುಕ್ಕವನ್ನು ಹೆಚ್ಚಳ ಮಾಡುವವರೆಗೆ ಜಿಯೋ ಮತ್ತು ಏರ್‌ಟೆಲ್ ಪೂರ್ಣ ಪ್ರಮಾಣದ ಸುಂಕ ಹೆಚ್ಚಳವನ್ನು ಮಾಡುವುದಿಲ್ಲ. ಯಾಕೆಂದರೆ ಜಿಯೋ ಮತ್ತು ಏರ್‌ಟೆಲ್ ಏನಾದರೂ ಪೂರ್ಣ ಪ್ರಮಾಣದ ಶುಲ್ಕ ಹೆಚ್ಚಳ ಮಾಡಿದರೆ ವೊಡಾಫೋನ್ ಐಡಿಯಾ ಅತ್ಯಂತ ಅಗ್ಗದ ದರದಲ್ಲಿ ಸೇವೆಗಳನ್ನು ನೀಡುವ ಏಕೈಕ ಖಾಸಗಿ ಟೆಲಿಕಾಂ ಕಂಪೆನಿಯಾಗಲಿದೆ. ಈ ಮೂಲಕ ಗ್ರಾಹಕರು ಈ ಕಂಪೆನಿಯ ಕಡೆ ವಾಲು ಸಾಧ್ಯತೆ ಹೆಚ್ಚಾಗಿರುತ್ತದೆ.

ಇನ್ನು Q2 FY23 ಸಮಯದಲ್ಲಿ, ಜಿಯೋ ನ ARPU 177.2 ರೂ. ಆಗಿತ್ತು. ಮುಂದಿನ ತ್ರೈಮಾಸಿಕದಲ್ಲಿ ಇದು 178.2 ರೂ.ಗಳಿಗೆ ಏರಿತು ಇದಾದ ಬಳಿಕ Q4 FY23 ರಲ್ಲಿ 178.8ರೂ. ಆಯಿತು. ಈ ಮೂಲಕ ಜಿಯೋದ ಆದಾಯಗಳು ಮತ್ತು ನಿವ್ವಳ ಲಾಭಸುಧಾರಿಸಿದ್ದರೂ, ಇನ್ನೂ ಹೆಚ್ಚಿನ ಆದಾಯವನ್ನು ಗರಿಷ್ಠಗೊಳಿಸಲು ಜಿಯೋಗೆ ARPU ಅನ್ನು ಹೆಚ್ಚಿಸುವ ಅಗತ್ಯ ಇದೆ.
ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಜಿಯೋ ಮತ್ತು ಏರ್‌ಟೆಲ್ 5G ನೆಟ್‌ವರ್ಕ್ ಸೇವೆಗಳನ್ನ್ನು 4G ಚಂದಾದಾರರಿಕೆಯಲ್ಲಿಯೇ ನೀಡುತ್ತಿವೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಹಣವನ್ನು ಪಡೆದುಕೊಳ್ಳುತ್ತಿಲ್ಲ. ಈ ಮೂಲಕ ಜಿಯೋನ ARPU 200ರೂ.ಗಳನ್ನು ದಾಟುವುದಿಲ್ಲ. ಉದ್ಯಮದಲ್ಲಿ ಹೆಚ್ಚಿನ ARPU ಅನ್ನು ಇಟ್ಟುಕೊಳ್ಳುವುದರ ಬಗ್ಗೆ ಜಿಯೋ ಎಂದಿಗೂ ಚಿಂತೆ ಮಾಡಿಲ್ಲವಾದರೂ ಟೆಲಿಕಾಂ ವಲಯದಲ್ಲಿ ಜಿಯೋ ದೊಡ್ಡ ಸ್ಥಾನ ಪಡೆದುಕೊಳ್ಳಲು ಹಾತೊರೆಯುತ್ತಿದೆ.


Click it and Unblock the Notifications








