ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
ಜಿಯೊ ಇನ್ಫೊಕಾಮ್ ಲಿಮಿಟೆಡ್‌ನ ಲಾಭವು 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 13.16 ರಷ್ಟು ಏರಿಕೆ ಆಗಿದೆ. ಸಂಸ್ಥೆಯು 2022-23ನೇ ಹಣಕಾಸು ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಮೂರು ತಿಂಗಳ ಅವಧಿಯಲ್ಲಿ 4,716 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ 2023-24ನೇ ಹಣಕಾಸು ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಮೂರು ತಿಂಗಳ ಅವಧಿಯಲ್ಲಿ ನಿವ್ವಳ ಲಾಭ ಶೇ. 13.16 ರಷ್ಟು ಹೆಚ್ಚಾಗಿ 5,337 ಕೋಟಿಗೆ ಹೆಚ್ಚಳವಾಗಿದೆ.
2023-24ನೇ ಹಣಕಾಸು ವರ್ಷದಲ್ಲಿ ಕಂಪನಿಯ ನಿವ್ವಳ ಲಾಭ ಶೇ 12.4ರಷ್ಟು ಹೆಚ್ಚಾಗಿ 20,607 ಕೋಟಿಗೆ ತಲುಪಿದೆ. 2022-23ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ 18,299ರೂ. ಕೋಟಿಯಷ್ಟು ಇತ್ತು. ಕಂಪನಿಯ ವರಮಾನ 2022-23ನೇ ಹಣಕಾಸು ವರ್ಷದಲ್ಲಿ 91,373 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ 2023-24ನೇ ಹಣಕಾಸು ವರ್ಷದಲ್ಲಿ ಶೇ 10 ರಷ್ಟು ಹೆಚ್ಚಾಗಿ 1,00,891 ಕೋಟಿಗೆ ಏರಿಕೆ ಪಡೆದಿದೆ.

ರಿಲಯನ್ಸ್ ಇಂಡಸ್ಟ್ರೀಸ್ ನಾಲ್ಕನೇ ತ್ರೈಮಾಸಿಕ - ನಿವ್ವಳ ಲಾಭ 18,951 ಕೋಟಿ ರೂ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿಂದ ಹಣಕಾಸು ವರ್ಷ 2023-24ರ ನಾಲ್ಕನೇ ತ್ರೈಮಾಸಿಕ (2024ರ ಜನವರಿಯಿಂದ ಮಾರ್ಚ್) ಫಲಿತಾಂಶವನ್ನು ಸೋಮವಾರದಂದು (ಏ. 22 ರಂದು) ಪ್ರಕಟಿಸಲಾಗಿದೆ. ಪ್ರತಿ ಷೇರಿಗೆ ಹತ್ತು ರೂಪಾಯಿ ಮಧ್ಯಂತರ ಲಾಭಾಂಶ ಘೋಷಣೆ ಮಾಡಲಾಗಿದೆ. ಮಾರ್ಚ್ 31, 2024ಕ್ಕೆ ಕೊನೆಯಾದ ತ್ರೈ ಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಕಾರ್ಯಾಚರಣೆಯಿಂದ ಬಂದಂಥ ಏಕೀಕೃತ ಆದಾಯವು 2.40 ಲಕ್ಷ ಕೋಟಿ ರೂಪಾಯಿ ಆಗಿದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯದ ಲೆಕ್ಕದಲ್ಲಿ ಅತಿ ದೊಡ್ಡ ಸಂಸ್ಥೆಯಾದ ರಿಲಯನ್ಸ್ ವರ್ಷದ ಹಿಂದಿನ ಇದೇ ಅವಧಿಯಲ್ಲಿ (2023ರ ಜನವರಿಯಿಂದ ಮಾರ್ಚ್) 2.16 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿತ್ತು.
ಆಗಿನ ಮೊತ್ತಕ್ಕೆ ಹೋಲಿಸಿದಲ್ಲಿ ಈ ಬಾರಿ ಆದಾಯದಲ್ಲಿ ಶೇಕಡಾ 11ರಷ್ಟು ಹೆಚ್ಚಳವಾಗಿದೆ. 2024ರ ಜನವರಿಯಿಂದ ಮಾರ್ಚ್ ಅವಧಿಗೆ ಕಂಪನಿಯ ನಿವ್ವಳ ಲಾಭ 18,951 ಕೋಟಿ ರೂಪಾಯಿ ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ 19,299 ಕೋಟಿ ರೂಪಾಯಿ ಬಂದಿತ್ತು.
ಜಿಯೋ ಇನ್ಫೋಕಾಮ್
ರಿಲಯನ್ಸ್ ಜಿಯೋ ನಿವ್ವಳ ಲಾಭ 5,337 ಕೋಟಿ ರೂಪಾಯಿ ಬಂದಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ. 13 ರಷ್ಟು ಹೆಚ್ಚಳ ಆಗಿದೆ. 10.8 ಕೋಟಿಗೂ ಹೆಚ್ಚು ಚಂದಾದಾರರು ಜಿಯೋದ 5G ನೆಟ್‌ವರ್ಕ್‌ಗೆ ಬದಲಾಗಿದ್ದಾರೆ. ಇನ್ನು ಜಿಯೋದ ಏರ್ ಫೈಬರ್ ಸೇವೆಯು 5,900 ನಗರಗಳು/ ಪಟ್ಟಣಗಳಲ್ಲಿ ಸೇವೆ ನೀಡುತ್ತಿದೆ. ಜಿಯೋ ಪ್ರತಿ ಗ್ರಾಹಕರಿಂದ ಪಡೆಯುವಂಥ ಸರಾಸರಿ ಆದಾಯವು (ARPU) 181.7 ರೂಪಾಯಿಗೆ ಹೆಚ್ಚಳವಾಗಿದೆ.
ರಿಲಯನ್ಸ್ ರೀಟೇಲ್
ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಿವ್ವಳ ಲಾಭವು ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ. 11.7 ರಷ್ಟು ಏರಿಕೆಯಾಗಿದ್ದು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಬಂದಿದ್ದ 2,415 ಕೋಟಿ ರೂಪಾಯಿಗಳ ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ. 11.7 ರಷ್ಟು ಹೆಚ್ಚಳವಾಗಿ 2,698 ಕೋಟಿ ರೂಪಾಯಿಗೆ ತಲುಪಿದೆ.
ಕಾರ್ಯಾಚರಣೆಯಿಂದ ಬರುವಂಥ ಆದಾಯವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 9.8 ರಷ್ಟು ಏರಿಕೆಯಾಗಿ, 67,610 ಕೋಟಿ ರೂಪಾಯಿ ಮುಟ್ಟಿದೆ. ಇಷ್ಟು ಉತ್ತಮವಾದ ಫಲಿತಾಂಶ ಬರುವುದಕ್ಕೆ ದಿನಸಿ, ಫ್ಯಾಷನ್, ಲೈಫ್ ಸ್ಟೈಲ್ ಹಾಗೂ ಗ್ರಾಹಕ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿನ ಅತ್ಯುತ್ತಮ ಮಾರಾಟ ಕೊಡುಗೆ ನೀಡಿದೆ. ಇದೇ ಮೊದಲ ಬಾರಿಗೆ 3 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,60,394 ಕೋಟಿ ರೂಪಾಯಿ ಬಂದಿತ್ತು.


Click it and Unblock the Notifications








