Jio: ಎಲ್ಲೆಲ್ಲೂ ಅಂಬಾನಿ.. ಕೆಲವೇ ದಿನಗಳಲ್ಲಿ ಬರಲಿದೆ ಜಿಯೋ ಸೌಂಡ್‌ಬಾಕ್ಸ್, ಇದರಲ್ಲೂ ಕೊಡುಗೆ ಇದೆಯಾ?
ಜಿಯೋ ಟೆಲಿಕಾಂ (Jio) ಮೂಲಕ ಭಾರತದಲ್ಲಿ ತಮ್ಮದೇ ಆದ ಪ್ರಭಾವ ಬೀರಿರುವ ಅಂಬಾನಿ ಅವರು ಇದೀಗ ಮತ್ತೊಂದು ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯ ತೋರಲು ಸಜ್ಜಾಗಿದ್ದಾರೆ. ದೇಶದಲ್ಲಿ ಯಾವುದಾದರೂ ಒಂದು ಸಂಸ್ಥೆ ಸ್ವಲ್ಪ ಕುಂಟಲು ಮುಂದಾದರೆ ಸಾಕು ಅದನ್ನು ಓವರ್‌ಟೇಕ್ ಮಾಡಿ ಅಗ್ರಸ್ಥಾನ ಪಡೆಯುವ ಸಾಮರ್ಥ್ಯವನ್ನು ಜಿಯೋ ಕರಗತ ಮಾಡಿಕೊಂಡಿದೆ.
ಹೌದು, ಪೇಟಿಎಂ ಮತ್ತು ಫೋನ್‌ಪೇ (Paytm and Phonepe) ನಲ್ಲಿ ಕಂಡು ಬಂದ ಸಮಸ್ಯೆಗಳನ್ನೇ ಕೇದ್ರೀಕರಿಸಿಕೊಂಡು ಈಗ ಜಿಯೋ ಸೌಂಡ್‌ಬಾಕ್ಸ್ (Jio Soundbox) ಲಾಂಚ್ ಮಾಡಲು ಅಂಬಾನಿ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಸೌಂಡ್ ಬಾಕ್ಸ್ ಅನ್ನು ರಿಟೇಲರ್ ಸ್ಟೋರ್ ಗಳಿಗೆ ಪ್ರಾಯೋಗಿಕವಾಗಿ ನಿಯೋಜನೆ ಮಾಡಲಾಗುತ್ತಿದ್ದು , ಇದು ಇನ್ನೂ ಪರೀಕ್ಷೆ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸೌಂಡ್‌ಬಾಕ್ಸ್‌ನ ವಿಶೇಷತೆ ಏನು?, ಇದಕ್ಕೆ ಎಷ್ಟು ಪಾವತಿ ಮಾಡಬೇಕು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಜಿಯೋ ಸೌಂಡ್‌ಬಾಕ್ಸ್: ಟೆಲಿಕಾಂ ವಲಯದಲ್ಲಿ ದೊಡ್ಡ ಸಂಚಲನ ಉಂಟು ಮಾಡಿರುವ ಮುಖೇಶ್ ಅಂಬಾನಿ (Mukesh Ambani) ಅವರು ಇದೀಗ ಯುಪಿಐ ಕ್ಷೇತ್ರಕ್ಕೂ ಕಾಲಿಡಲು ಮುಂದಾಗಿದ್ದಾರೆ. ಅದರಂತೆ ಕೆಲವೇ ವಾರಗಳಲ್ಲಿ ಜಿಯೋ ಯುಪಿಐ ಸಿಸ್ಟಮ್ ಜಿಯೋ ಸೌಂಡ್‌ಬಾಕ್ಸ್ ಅನ್ನು ಪ್ರಾರಂಭಿಸಲು ಸಜ್ಜಾಗಿದೆ.
ಜಿಯೋ ಟೆಲಿಕಾಂ ಆರಂಭ ಆಗುವ ಮುನ್ನ ದೇಶದಲ್ಲಿ ಮೊಬೈಲ್ ಕರೆ ದರಗಳು ಮತ್ತು ಇಂಟರ್ನೆಟ್ ದುಬಾರಿಯಾಗಿತ್ತು. ಆದರೆ, ಜಿಯೋ ಪ್ರವೇಶಿಸಿದ ಬಳಿಕ ಉಚಿತ ಇಂಟರ್ನೆಟ್ ಬಳಕೆಯ ಸೌಲಭ್ಯವನ್ನು ಜನರು ಪಡೆದುಕೊಂಡರು. ಇದರಿಂದಾಗಿ ದೇಶದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಯ್ತು. ಅಲ್ಲದೆ ಈ ವಲಯದ ಇತರ ಕಂಪನಿಗಳು ಮಾರುಕಟ್ಟೆಯಲ್ಲಿ ಉಳಿಯಲು ತಮ್ಮ ಬೆಲೆಗಳನ್ನು ಕಡಿಮೆ ಮಾಡಿದವು. ಈ ಮೂಲಕ ದೇಶಕ್ಕೆ ಜಿಯೋ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿತ್ತು.

ಇದೇ ತಂತ್ರವನ್ನು ಈಗ ಉಪಿಐ ವ್ಯವಸ್ಥೆಯಲ್ಲಿ ಅನುಸರಿಲು ಮುಂದಾಗಿದೆ. ಈ ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಪಡೆದಿರುವ ಪೇಟಿಎಂ, ಫೋನ್‌ಪೇ, ಗೂಗಲ್‌ಪೇಗೆ ತೀವ್ರ ಪೈಪೋಟಿ ನೀಡಲಿದೆ. ಅದರಲ್ಲೂ ಪ್ರಮುಖವಾಗಿ ಪೇಟಿಎಂಗೆ ಉಂಟಾದ ಬಿಕ್ಕಟ್ಟನ್ನೇ ಜಿಯೋ ಸದುಪಯೋಗ ಮಾಡಿಕೊಳ್ಳಲು ಮುಂದಾದಂತೆ ಕಂಡಿದೆ. ಈ ಮೂಲಕ ಈ ಮಾರುಕಟ್ಟೆಯನ್ನು ಜಿಯೋ ಆಕ್ರಮಿಸಿಕೊಳ್ಳಲು ವಿವಿಧ ಕೊಡುಗೆಗಳನ್ನು ಸಹ ನೀಡಬಹುದು ಎಂದು ತಿಳಿದುಬಂದಿದೆ. ಇದರಿಂದ ಇತರ ಕಂಪನಿಗಳಲ್ಲಿ ಈಗಾಗಲೇ ಕಳವಳ ಹೆಚ್ಚಾಗಿದೆ.
ಜೈಪುರ, ಇಂದೋರ್ ಮತ್ತು ಲಕ್ನೋ ಸೇರಿದಂತೆ ಟೈರ್ -2 ಮತ್ತು ಸಣ್ಣ ಮೆಟ್ರೋ ನಗರಗಳಲ್ಲಿ ನಡೆಸಿದ ಎರಡು ಪ್ರಾಯೋಗಿಕ ಪ್ಲ್ಯಾನ್‌ಗಳ ನಂತರ ಜಿಯೋ ಸೌಂಡ್‌ಬಾಕ್ಸ್ ಅನ್ನು ಲಾಂಚ್ ಮಾಡಲಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇನ್ನು ವ್ಯಾಪಾರಿಯ ಕ್ಯೂಆರ್ ಕೋಡ್ ಅನ್ನು ಸಂಯೋಜಿಸುವ ಮೂಲಕ ಸೌಂಡ್‌ಬಾಕ್ಸ್ ಪಾಯಿಂಟ್-ಆಫ್-ಸೇಲ್ ಘಟಕವಾಗಿಯೂ ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದೆ.ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ್ರೆ ಸೌಂಡ್‌ಬಾಕ್ಸ್ 2024 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಹಾಗೆಯೇ ಜಿಯೋ ಆರಂಭಿಕ ಖರೀದಿ ಶುಲ್ಕವನ್ನು ಹೊಂದಿರಲಿದ್ದು, ನಂತರದಲ್ಲಿ ಮಾಸಿಕ ಚಂದಾದಾರಿಕೆ ಶುಲ್ಕಗಳು ಇರಲಿವೆ ಎಂದು ಹೇಳಲಾಗಿದೆ. ಜಿಯೋ ಸೌಂಡ್‌ಬಾಕ್ಸ್‌ನ ನಿರ್ದಿಷ್ಟ ಬೆಲೆ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಮಾರುಕಟ್ಟೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಉತ್ಪನ್ನಗಳೊಂದಿಗೆ ಸ್ಪರ್ಧಾತ್ಮಕವಾಗಿರುತ್ತವೆ ಎಂದು ತಿಳಿದುಬಂದಿದೆ. ಅಂದರೆ ಫೋನ್‌ಪೇ ಸೌಂಡ್‌ಬಾಕ್ಸ್‌ನ ಬೆಲೆಯು 50ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು 50ರೂ.ಗಳ ಮಾಸಿಕ ಚಂದಾದಾರಿಕೆ ಶುಲ್ಕವನ್ನು ವಿಧಿಸುತ್ತದೆ.

ಈ ಸೌಂಡ್‌ಬಾಕ್ಸ್‌ಗಳು ಕ್ಯೂಶರ್ ಕೋಡ್‌ಗಳನ್ನು ಬಳಸುವ ವಹಿವಾಟುಗಳಿಗೆ ಪಾಯಿಂಟ್-ಆಫ್-ಸೇಲ್ (POS) ಡಿವೈಸ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಈಗಾಗಲೇ ಸಾಕಷ್ಟು ಜನರು ಬಳಕೆ ಮಾಡುತ್ತಿದ್ದು, ಅನಕ್ಷರಸ್ಥರು ಕೂಡ ಯುಪಿಐ (UPI) ವ್ಯವಹಾರ ನಡೆಸಲು ಸಹಾಯ ಮಾಡಿವೆ. ಅದರಲ್ಲೂ ಫೋನ್ ಪೇ ಕನ್ನಡದ ಖ್ಯಾತ ನಟ ಸುದೀಪ್ (kiccha Sudeep) ಅವರ ಧ್ವನಿಯನ್ನು ಬಳಕೆ ಮಾಡುತ್ತಿದ್ದು, ಈ ಮೂಲಕ ನಾಡಿನಲ್ಲಿ ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ.


Click it and Unblock the Notifications








