Jio smartphone: ಜಿಯೋದಿಂದ ವರ್ಷಾಂತ್ಯದಲ್ಲಿ ಲಾಂಚ್ ಆಗಲಿದೆ ಕೈಗೆಟುಕುವ 5G ಸ್ಮಾರ್ಟ್‌ಫೋನ್!
ಜಿಯೋ (Jio)ಕೇವಲ ಟೆಲಿಕಾಂವಲಯದಲ್ಲಿ ಅಷ್ಟೇ ಅಲ್ಲದೆ ಇತರೆ ವಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇದೆ. ಈಗಾಗಲೇ ಫೀಚರ್ ಫೋನ್‌ಗಳನ್ನು ಅನಾವರಣ ಮಾಡಿದ್ದು, ಈ ಫೋನ್‌ಗಳಲ್ಲಿ ಯುಪಿಐ ಫೀಚರ್ಸ್ ಸಹ ಇರುವುದು ವಿಶೇಷ. ಆದರೆ ಈಗ ಸ್ಮಾರ್ಟ್‌ಫೋನ್ ಮಾರುಕಟ್ಟೆಯೂ ಜಿಯೋ ಎಂಟ್ರಿ ನೀಡಲಿದೆ.
ಹೌದು, ಜಿಯೋ ಇನ್ಮುಂದೆ ತನ್ನದೇ ಆದ ಸ್ಮಾರ್ಟ್‌ಫೋನ್‌ಗಳನ್ನೂ ಸಹ ಲಾಂಚ್ ಮಾಡಲಿದೆ ಎಂದು ವರದಿಯಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಫೋನ್‌ಗಳು ಕೇವಲ ಭಾರತಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಇದಕ್ಕಾಗಿಯೇ ಜಿಯೋ ಹಾಗೂ ಕ್ವಾಲ್ಕಾಮ್ (Jio and Qualcomm) ಒಟ್ಟಾಗಿ ಕೆಲಸ ಮಾಡಲಿವೆ. ಹಾಗಿದ್ರೆ, ಜಿಯೋ ಲಾಂಚ್ ಮಾಡಲು ಮುಂದಾಗಿರುವ ಫೋನ್‌ಗಳ ಬೆಲೆ ಎಷ್ಟಿರಬಹುದು?, ಜಿಯೋದ ಉದ್ದೇಶ ಏನು ಅನ್ನೊ ಮಾಹಿತಿ ಇಲ್ಲಿದೆ ನೋಡಿ.

ಜಿಯೋ ಸ್ಮಾರ್ಟ್‌ಫೋನ್: ಯುಎಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಚಿಪ್‌ಮೇಕರ್ ಕ್ವಾಲ್ಕಾಮ್, ಭಾರತೀಯ ಮಾರುಕಟ್ಟೆಗೆ ಎಂಟ್ರಿ ನೀಡುವ ಕೆಲಸ ಮಾಡಿದೆ. ಈ ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ $ 99 (8,209ರೂ.ಗಳು) ಕ್ಕಿಂತ ಕಡಿಮೆ ಬೆಲೆಯ ಕೈಗೆಟುಕುವ 5G ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಅನುಕೂಲವಾಗುವಂತೆ ಹೊಸ ಚಿಪ್‌ಸೆಟ್ ಅನ್ನು ಅನಾವರಣಗೊಳಿಸಲು ಕಂಪನಿ ಉದ್ದೇಶಿಸಿದೆ ಎಂದು ತಿಳಿದುಬಂದಿದೆ.
ಆಗಸ್ಟ್ 2022 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ಮತ್ತು ಕ್ವಾಲ್ಕಾಮ್ ನಡುವಿನ ಪಾಲುದಾರಿಕೆಯನ್ನು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಅಭಿವೃದ್ಧಿಪಡಿಸಲು ಘೋಷಣೆ ಮಾಡಿದ್ದರು. ಅದರಂತೆ ಇತ್ತೀಚಿನ ಚಿಪ್‌ಸೆಟ್ ಭಾರತದಲ್ಲಿ ಸ್ಮಾರ್ಟ್‌ಫೋನ್ ಶಕ್ತಗೊಂಡ 5G ಪರಿಸರಕ್ಕೆ ಪರಿವರ್ತನೆಗೊಳ್ಳಲು 2G ಬಳಕೆದಾರರನ್ನು ಉತ್ತೇಜಿಸುತ್ತದೆ ಎಂದು ಕ್ವಾಲ್ಕಾಮ್ ಹೇಳಿದೆ.

ಕ್ವಾಲ್ಕಾಮ್ ಭಾರತದ ಉನ್ನತ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಮತ್ತು ಫೋನ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಾರಂಭಿಸಲು ಮೂಲ ಟೂಲ್ಸ್ ತಯಾರಕರೊಂದಿಗೆ (OEM ಗಳು) ಕೆಲಸ ಮಾಡುತ್ತಿದೆ. ಸದ್ಯಕ್ಕೆ ಜಿಯೋ ಪ್ರಸ್ತುತ ನೀಡುತ್ತಿರುವ 5G ಸ್ಟ್ಯಾಂಡ್ ಅಲೋನ್ ಆರ್ಕಿಟೆಕ್ಚರ್ ಅನ್ನು ಬೆಂಬಲಿಸುತ್ತದೆ ಎಂದು ಕ್ವಾಲ್ಕಾಮ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಗಿಗಾಬಿಟ್ 5G ಸ್ಮಾರ್ಟ್‌ಫೋನ್ SA-2Rx ಸಾಮರ್ಥ್ಯವನ್ನು ಬಳಕೆ ಮಾಡಿಕೊಂಡು ಮೀಸಲಾದ ಕಡಿಮೆ ವೆಚ್ಚದ ಕಸ್ಟಮೈಸ್ ಮಾಡಿದ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 5G ನೆಟ್‌ವರ್ಕ್‌ನಲ್ಲಿ ಗಿಗಾಬಿಟ್ ವೇಗದ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಕ್ವಾಲ್ಕಾಮ್‌ನ ಎಸ್‌ವಿಪಿ ಮತ್ತು ಹ್ಯಾಂಡ್‌ಸೆಟ್‌ಗಳ ಜನರಲ್ ಮ್ಯಾನೇಜರ್ ಕ್ರಿಸ್ ಪ್ಯಾಟ್ರಿಕ್ ಬಾರ್ಸಿಲೋನಾದಲ್ಲಿ ಮನಿ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ.
ಈ ನಡುವೆ ಜನವರಿ 2024 ರಲ್ಲಿ ಕ್ವಾಲ್ಕಾಮ್ ಚೆನ್ನೈನಲ್ಲಿ ವಿನ್ಯಾಸ ಕೇಂದ್ರವನ್ನು ಸ್ಥಾಪಿಸಲು 177.27 ರೂ.ಕೋಟಿ ಹೂಡಿಕೆ ಮಾಡುವುದಾಗಿ ತಿಳಿಸಿತ್ತು. ಕೇಂದ್ರವು ವೈ-ಫೈ ತಂತ್ರಜ್ಞಾನಗಳಿಗೆ ಪೂರಕವಾಗಿರುವ ಮತ್ತು 5G ಸೆಲ್ಯುಲಾರ್ ತಂತ್ರಜ್ಞಾನದಲ್ಲಿ ಕ್ವಾಲ್ಕಾಮ್‌ನ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳಿಗೆ ಕೊಡುಗೆ ನೀಡುವ ಕ್ಷೇತ್ರಗಳಲ್ಲಿನ ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸಿದೆ.

ಇದರೊಂದಿಗೆ ಕಂಪನಿಯು ಹಲವಾರು ವರ್ಷಗಳಿಂದ 'ಕ್ವಾಲ್ಕಾಮ್ ಡಿಸೈನ್ ಇನ್ ಇಂಡಿಯಾ ಚಾಲೆಂಜ್' ಮತ್ತು 'ಕ್ವಾಲ್ಕಾಮ್ ಸೆಮಿಕಂಡಕ್ಟರ್ ಮೆಂಟರ್‌ಶಿಪ್ ಪ್ರೋಗ್ರಾಂ' ನಂತಹ ಕಾರ್ಯಕ್ರಮಗಳ ಮೂಲಕ ದೇಶದಲ್ಲಿ ವಿನ್ಯಾಸ-ಕೇಂದ್ರಿತ ಉಪಕ್ರಮಗಳಲ್ಲಿ ಹೂಡಿಕೆ ಮಾಡುತ್ತಿದೆ. ಕ್ವಾಲ್ಕಾಮ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳಿಗಾಗಿ ಸ್ಯಾನ್ ಡಿಯಾಗೋದ ಹೊರಗೆ ಭಾರತವು ಎರಡನೇ ಅತಿದೊಡ್ಡ ನೆಲೆಯಾಗಿದೆ. ಹಾಗೆಯೇ ಭಾರತದಲ್ಲಿ, ಕ್ವಾಲ್ಕಾಮ್ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ನೋಯ್ಡಾದಲ್ಲಿ ಆರ್ & ಡಿ ಕೇಂದ್ರಗಳನ್ನೂ ಹೊಂದಿದೆ.


Click it and Unblock the Notifications








