ಪತ್ರಕರ್ತನಿಗೆ ಬಂತು ಅನಾಮಿಕ ಕರೆ; ಸಾವಿರಾರು ರೂ. ಹಣ ವಂಚನೆ!
ಈವರೆಗೂ ಸಾಮಾನ್ಯ ಜನರು ಆನ್‌ಲೈನ್‌ನಲ್ಲಿ ಮೋಸ ಹೋಗುವುದರ ಬಗ್ಗೆ ಪತ್ರಕರ್ತರು ತಮ್ಮ ಮಾಧ್ಯಮಗಳ ಮೂಲಕ ಜನರಿಗೆ ಎಚ್ಚರಿಕೆ ನೀಡುತ್ತಿದ್ದರು. ಆದರೆ, ಇಲ್ಲೊಂದು ಘಟನೆಯಲ್ಲಿ ಪತ್ರಕರ್ತರೇ ಈ ವಂಚನೆಯ ಬಲೆಗೆ ಬಿದ್ದಿದ್ದು, ಈ ಮೂಲಕ ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಘಟನೆ ನಮ್ಮದೇ ದೇಶದಲ್ಲಿ ಜರುಗಿದೆ.
ಹೌದು, ಫ್ರೀಲಾನ್ಸ್ ಪತ್ರಕರ್ತ ರಮೇಶ್ ಕುಮಾರ್ ರಾಜಾ ಅವರಿಗೆ ಇತ್ತೀಚೆಗೆ ಅಪರಿಚಿತರೊಬ್ಬರು ಫೋನ್ ಮಾಡುವ ಮೂಲಕ ಅವರನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಸೈಬರ್ ಕ್ರಿಮಿನಲ್‌ಗಳು ಯಾವಾಗಲೂ ಜನರನ್ನು ವಂಚಿಸಲು ಹೊಸ ಮಾರ್ಗಗಳೊಂದಿಗೆ ಬರುತ್ತಾರೆ ಎನ್ನುವುದಕ್ಕೆ ಈ ಘಟನೆ ನಿದರ್ಶನವಾಗಿದೆ. ಹಾಗಿದ್ರೆ, ಎಲ್ಲಿಯದು ಈ ಘಟನೆ, ಪತ್ರಕರ್ತ ಮೋಸ ಹೋಗಿದ್ದು ಹೇಗೆ? ಎಂದು ತಿಳಿದುಕೊಳ್ಳಿ.

ಘಟನೆ ವಿವರ: ದೆಹಲಿ ಮೂಲದ ಫ್ರೀಲಾನ್ಸ್ ಪತ್ರಕರ್ತ ರಮೇಶ್ ಕುಮಾರ್ ರಾಜಾ ಅವರಿಗೆ ಅಪರಿಚಿತರೊಬ್ಬರು ಕರೆ ಮಾಡಿ 40,000ರೂ. ಗಳನ್ನು ಪಡೆದುಕೊಂಡಿದ್ದಾರೆ. ವಿಚಿತ್ರವೆಂದರೆ ಕರೆ ಮಾಡಿದವರಿಂದ ತನಗೆ ಹಿಪ್ನೋಟೈಸ್ ಆಗಿದೆ ಎಂದು ಪತ್ರಕರ್ತ ಹೇಳಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಪೇಟಿಎಂ ಯುಪಿಐ ಮೂಲಕ ರಾಜಾ ಅವರು ಎರಡು ಬಾರಿ 20,000 ರೂ.ಗಳನ್ನು ಕಳೆದುಕೊಂಡಿದ್ದಾರಂತೆ.
ಈ ಬಗ್ಗೆ ರಾಜಾ ಅವರು ಮಾಹಿತಿ ನೀಡಿದ್ದು,ನನಗೆ ಕರೆ ಮಾಡಿದವರು ಬಹಳ ಆತ್ಮವಿಶ್ವಾಸದಿಂದ ಮಾತನಾಡಿದರು.ಆ ವ್ಯಕ್ತಿ ನನ್ನ ಮನಸ್ಸು ಮತ್ತು ಆಲೋಚನಾ ಪ್ರಕ್ರಿಯೆಯನ್ನು ಬೇರೆಡೆಗೆ ತಿರುಗಿಸಿದನು. ಅದರಂತೆ ನನ್ನನ್ನು ಸಂಮೋಹನಗೊಳಿಸಿದನು. ಈ ಕಾರಣಕ್ಕೆ ನನ್ನ ಬ್ಯಾಂಕ್ ಖಾತೆಯಿಂದ ಪೇಟಿಎಂ ಯುಪಿಐ ಮೂಲಕ 20,000ರೂ.ಗಳ ಎರಡು ವಹಿವಾಟು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಕರೆಮಾಡಿದ ವ್ಯಕ್ತಿ ಹೇಳಿದ್ದೇನು?: ಕರೆ ಮಾಡಿದ ಅನಾಮಿಕ ರಾಜಾ ಅವರನ್ನು ಈ ಹಿಂದೆಯೇ ಪರಿಚಯ ಇದೆ ಎಂಬಂತೆ ಮಾತನಾಡಿದ್ದಾನಂತೆ.ಅದರಲ್ಲೂ ಆರೋಗ್ಯ ಮತ್ತು ಕುಟುಂಬ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾನೆ.ಈ ವೇಳೆ ನೀವು ವೈದ್ಯರೇ ಎಂದು ರಾಜಾ ಕೇಳಿದಾಗ ಆತ ಹೌದು ನಾನು ವೈದ್ಯ ಎಂದೂ ಪ್ರತಿಕ್ರಿಯೆ ನೀಡಿದ್ದಾನೆ. ಈ ವೇಳೆ ಅವರ ಧ್ವನಿಯು ವೈದ್ಯರಾಗಿರುವ ನನ್ನ ಸ್ನೇಹಿತನ ಧ್ವನಿಯನ್ನೇ ಹೋಲುವ ಕಾರಣ ಮೋಸ ಹೋಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಕರೆ ಮಾಡಿದ ಅನಾಮಿಕ ರಾಜಾ ಅವರಿಗೆ ಸ್ವಲ್ಪ ಹಣವನ್ನು ಜಮಾ ಮಾಡಬೇಕಾಗಿದೆ ಮತ್ತು ಸಂಜೆಯ ನಂತರ ವಾಪಸ್ ಮಾಡುವುದಾಗಿ ತಿಳಿಸಿದ್ದಾನೆ. ಈ ವೇಳೆ ಆತ ರಾಜಾ ಅವರಿಗೆ ಒಂದು ಸಂದೇಶ ಕಳುಹಿಸಿದ್ದಾರೆ. ಪೇಟಿಎಮ್ ಖಾತೆಗೆ ಕಳುಹಿಸಿದ ಸಂದೇಶವನ್ನು ಕ್ಲಿಕ್ ಮಾಡಲು ಆತ ಹೇಳಿದ್ದಾನೆ. ಅದರಂತೆ ಆ ಮೆಸೆಜ್ ಅನ್ನು ಕ್ಲಿಕ್ ಮಾಡಿದಾಗ ಆರಂಭಿಕವಾಗಿ ಎರಡು ರೂಗಳು ಕಡಿತವಾಗಿದೆ.
ನಂತರ ಕರೆ ಮಾಡಿದವರ ಸೂಚನೆಗಳನ್ನು ಪಾಲಿಸಿ ಎರಡನೇ ಮೆಸೇಜ್ ಮೇಲೆ ಕ್ಲಿಕ್ ಮಾಡಿದಾಗ ರಾಜಾ ಅವರ ಖಾತೆಯಿಂದ 20 ಸಾವಿರ ರೂ. ಕಡಿತವಾಗಿದೆ. ಇದಾದ ನಂತರ ಕರೆ ಮಾಡಿದವರಿಗೆ ತನ್ನ ಖಾತೆಯಲ್ಲಿ ಹಣ ಕಡಿತ ಆಗುತ್ತಿದೆ ಎಂದು ತಿಳಿಸಿದಾಗ ಅವರು ಕ್ಷಮೆಯಾಚಿಸಿ ಸರಿಯಾಗುತ್ತದೆ ಈ ಮೆಸೆಜ್ ಅನ್ನು ಓಪನ್ ಮಾಡಿ ಎಂದು ಮತ್ತೊಮ್ಮೆ ಮೆಸೆಜ್ ಕಳುಹಿಸಿದ್ದಾರೆ. ಈ ವೇಳೆಯೂ ಸಹ ಹೆಚ್ಚುವರಿಯಾಗಿ 20,000 ರೂ.ಹಣ ಕಡಿತವಾಗಿದೆ.

ಸೈಬರ್ ತಜ್ಞರ ಪ್ರಕಾರ, ಈ ರೀತಿಯ ಅಪರಾಧವು ಇತರ ಜನರ ಸಕಾರಾತ್ಮಕತೆ ಮತ್ತು ಸ್ನೇಹಪರ ಸ್ವಭಾವವನ್ನು ಬಳಸಿಕೊಳ್ಳುವ ಹೊಸ ಮಾರ್ಗವಾಗಿದೆ. ಈ ಪ್ರಕರಣವು ಅಪೇಕ್ಷಿಸದ ಫೋನ್ ಕರೆಗಳಿಂದ ಹೆಚ್ಚು ಹೆಚ್ಚಾಗಿ ಜರುಗುತ್ತಿದ್ದು, ಈ ಕರೆ ಸ್ವೀಕರಿಸುವಾಗ ಜಾಗರೂಕರಾಗಿರಬೇಕು ಮತ್ತು ಯಾವುದೇ ವೈಯಕ್ತಿಕ ಮಾಹಿತಿ ಅಥವಾ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬಾರದು ಎಂದು ಸೂಚನೆ ನೀಡಿದ್ದಾರೆ.


Click it and Unblock the Notifications








