ಕರ್ನಾಟಕ ಚುನಾವಣೆ 2023: cVIGIL ಆಪ್ ಮೂಲಕ ದಾಖಲಾದ ದೂರುಗಳೆಷ್ಟು ಗೊತ್ತಾ!?
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ cVIGIL ಅಪ್ಲಿಕೇಶನ್ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಆಪ್ ಮೂಲಕ ಚುನಾವಣಾ ಭ್ರಷ್ಟಾಚಾರವನ್ನು ವ್ಯವಸ್ಥಿತವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಈ ನಡುವೆ ಬೆಂಗಳೂರು ಸೇರಿದಂತೆ ವಿವಿಧ ಕಡೆ ದಾಖಲೆ ರೀತಿಯಲ್ಲಿ ದೂರುಗಳು ದಾಖಲಾಗಿವೆ. ಜೊತೆಗೆ ಸಾಕಷ್ಟು ಹಣ ಹಾಗೂ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹೌದು, ರಾಜ್ಯ ವಿಧಾನಸಭಾ ಚುನಾವಣೆ 2023ಗೆ ನಾಮಪತ್ರ ಸಲ್ಲಿಕೆ ಆರಂಭ ಆಗಿದ್ದು, ಸಾಕಷ್ಟು ರಾಜಕೀಯ ಮುಖಂಡರು ಇದೀಗ ಈ ಕೆಲಸದ ನಡುವೆ ಬ್ಯುಸಿ ಆಗಿದ್ದಾರೆ. ಈ ನಡುವೆ ಏಪ್ರಿಲ್ 14ರವರೆಗೆ ನಗದು, ಮದ್ಯ ಮತ್ತು ಹಾಗೂ ಇನ್ನಿತರೆ ವಸ್ತುಗಳು ಸೇರಿದಂತೆ 161 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗಿದ್ರೆ ಇದಕ್ಕೆಲ್ಲಾ cVIGIL ಆಪ್ ಹೇಗೆಲ್ಲಾ ಸಹಾಯ ಮಾಡಲಿದೆ?, ಈ ಮೂಲಕ ದೂರು ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಎಷ್ಟು ದೂರು ದಾಖಲಾಗಿವೆ?: ರಾಜ್ಯದಲ್ಲಿ ಜನರು ತಮ್ಮ ಸ್ಮಾರ್ಟ್‌ಫೋನ್ ಮೂಲಕ cVIGIL ಆಪ್ ಬಳಕೆ ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು 3,147 ದೂರುಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 2,643 ದೂರುಗಳು ನಿಜವೆಂದು ಕಂಡುಬಂದಿದೆ. ಇದರಿಂದಾಗಿ ಅಕ್ರಮ ಚುನಾವಣಾ ಪ್ರಕ್ರಿಯೆಗಳಿಗೆ ಬ್ರೇಕ್ ಹಾಕಲಾಗುತ್ತಿದೆ.
ಯಾವೆಲ್ಲಾ ರೂಪದ ದೂರು ದಾಖಲಾಗಿವೆ? : ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಅನುಮತಿಯಿಲ್ಲದೆ ಬ್ಯಾನರ್/ಪೋಸ್ಟರ್‌ಗಳನ್ನು ಹಾಕಿರುವುದು, ಹಣ, ಮದ್ಯ ಮತ್ತು ಆಸ್ತಿ ವಿರೂಪಗೊಳಿಸುವಿಕೆ ಹಾಗೂ ಫ್ಲೈಯಿಂಗ್ ಸ್ಕ್ವಾಡ್‌ಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್ ಹಾಗೂ ಅಮೂಲ್ಯ ಲೋಹಗಳು ಮತ್ತು ಉಚಿತ ವಸ್ತುಗಳನ್ನು ವಶಪಡಿಸಿಕೊಂಡ ಬಗ್ಗೆ ಒಟ್ಟು 1,334 ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ.
ಇದರಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಆದಾಯ ತೆರಿಗೆ ಇಲಾಖೆಯು ಚಿನ್ನ, ನಗದು ಸೇರಿದಂತೆ 25.45 ಕೋಟಿ ರೂ. ಗಳಿಗೂ ಹೆಚ್ಚಿನ ಹಣವನ್ನು ಬೆಂಗಳೂರಿನ ದಾಸರಹಳ್ಳಿ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಬಿಟಿಎಂ ಲೇಔಟ್ ಮತ್ತು ಮಲ್ಲೇಶ್ವರಂ ಸೇರಿದಂತೆ ವಿವಿಧ ಕಡೆ ಜಪ್ತಿ ಮಾಡಲಾಗಿದೆ.

ಏನಿದು cVIGIL ಆಪ್?: ಚುನಾವಣಾ ನೀತಿ ಉಲ್ಲಂಘನೆಗಳನ್ನು ವರದಿ ಮಾಡಲು ನಾಗರಿಕರಿಗೆ cVIGIL ಆಪ್ ಅನ್ನು ಪರಿಚಯಿಸಲಾಗಿದ್ದು, ಇದರಿಂದ ಸಾಮಾನ್ಯ ಜನರು ಹಾಗೂ ಮತದಾರರು ಉಚಿತ ಕೊಡುಗೆಗಳು ಹಾಗೂ ಇನ್ನಿತರೆ ಆಮಿಷದ ವಿಷಯಗಳನ್ನು ಈ ಮೂಲಕ ಚುನಾವಣಾ ಆಯೋಗಕ್ಕೆ ತಿಳಿಸಬಹುದಾಗಿದೆ. ಈ ದೂರುಗಳು ವಿಡಿಯೋಗಳು ಅಥವಾ ಫೋಟೋಗಳ ರೂಪದಲ್ಲಿ ಇರಲಿವೆ.
ಈ ಆಪ್ ಅನ್ನು ಬಳಕೆ ಮಾಡಲು ನೀವು ಮೊದಲು ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಲಾಗಿನ್ ಆಗುವ ಮೂಲಕ ಹಾಗೂ ಲಾಗಿನ್ ಆಗದೆಯೂ ಇದನ್ನು ಬಳಕೆ ಮಾಡಬಹುದು. ಲಾಗಿನ್ ಆಗುವ ಮೂಲಕ ಈ ಆಪ್ ಬಳಕೆ ಮಾಡಲು ನಿಮ್ಮ ಹೆಸರು, ಫೋನ್ ನಂಬರ್ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಅಗತ್ಯ ಮಾಹಿತಿ ಭರ್ತಿ ಮಾಡಬೇಕು. ಲಾಗಿನ್ ಆಗದೆ ಬಳಕೆ ಮಾಡಬೇಕು ಎಂದರೆ ಇದರ ಅವಶ್ಯಕತೆ ಇರುವುದಿಲ್ಲ.
ಮೊಬೈಲ್ ನಂಬರ್ ಬಳಕೆ ಮಾಡಿಕೊಂಡು ಈ ಆಪ್‌ನಲ್ಲಿ ದೂರು ಸಲ್ಲಿಸಲು ಇಚ್ಚಿಸುವವರು ಆಪ್ ತೆರೆದ ತಕ್ಷಣ ಮೊಬೈಲ್ ನಂಬರ್ ಭರ್ತಿ ಮಾಡಲು ಕೇಳುತ್ತದೆ. ನಂತರ ಅಗತ್ಯ ಮಾಹಿತಿಯನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ಅಂದರೆ ಹೆಸರು, ವಿಳಾಸ, ವಿಧಾನಸಭೆ ಕ್ಷೇತ್ರ ಸೇರಿದಂತೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ನಿಮ್ಮ ಫೋನ್‌ನಲ್ಲಿ ಸೆರೆಹಿಡಿಯಲಾದ ವಿಡಿಯೋ ಅಥವಾ ಫೋಟೋ ರೂಪದ ದಾಖಲೆಗಳ ಮೂಲಕ ಸುಲಭವಾಗಿ ದೂರು ಸಲ್ಲಿಸಿ.

ಯಾವೆಲ್ಲಾ ಅಕ್ರಮದ ವಿರುದ್ಧ ದೂರು ಸಲ್ಲಿಸಬಹುದು?: ಹಣ ಹಂಚುವುದು, ಉಡುಗೊರೆಗಳು/ಕೂಪನ್‌ಗಳ ವಿತರಣೆ,ಮದ್ಯ ವಿತರಣೆ, ಅನುಮತಿಯಿಲ್ಲದೆ ಪೋಸ್ಟರ್‌ಗಳು/ಬ್ಯಾನರ್‌ಗಳನ್ನು ಹಂಚುವುದು, ಬಂದೂಕುಗಳ ಪ್ರದರ್ಶನ, ಬೆದರಿಕೆ, ಅನುಮತಿಯಿಲ್ಲದೆ ವಾಹನಗಳು ಅಥವಾ ಬೆಂಗಾವಲುಗಳನ್ನು ಬಳಕೆ ಮಾಡುವುದು, ಪಾವತಿಸಿದ ಸುದ್ದಿ, ಆಸ್ತಿ ವಿರೂಪಗೊಳಿಸುವಿಕೆ, ಮತದಾನದ ದಿನದಂದು ಮತದಾರರ ಸಾಗಣೆ, ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ ವಿಷಯಕ್ಕೆ ನೀವು ದೂರು ಸಲ್ಲಿಕೆ ಮಾಡಬಹುದು.
ಧಾರ್ಮಿಕ ಅಥವಾ ಕೋಮು ಭಾಷಣಗಳು, ಸಂದೇಶಗಳು, ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್‌ಗಳ ಬಳಕೆ, ರ್ಯಾಲಿಗಳಿಗೆ ಸಾರ್ವಜನಿಕರ ಸಾರಿಗೆ ಬಳಕೆ ಸೇರಿದಂತೆ ಇನ್ನಿತರೆ ದೂರುಗಳನ್ನು ನೀವು ಸಲ್ಲಿಕೆ ಮಾಡಬಹುದು. ನೀವು ದೂರು ಸಲ್ಲಿಕೆ ಮಾಡಿದ ನಂತರ ನೀವು ಅದನ್ನು ಟ್ರ್ಯಾಕ್ ಮಾಡಬಹುದಾಗಿದೆ. ಈ ಮೂಲಕ ಯಾವ ಹಂತದಲ್ಲಿ ನಿಮ್ಮ ದೂರು ಇದೆ ಎಂದು ತಿಳಿದುಕೊಳ್ಳಲು ಅನುವು ಮಾಡಿಕೊಡಲಾಗಿದೆ.


Click it and Unblock the Notifications








