ನ್ಯಾಯಬೆಲೆ ಅಂಗಡಿಗಳಿಗೆ ಐರಿಸ್ ಸ್ಕ್ಯಾನರ್ ಅಳವಡಿಕೆಗೆ ಆದೇಶ; ಮೋಸ ಮಾಡಲು ಚಾನ್ಸೇ ಇಲ್ಲ!
ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ 'ಅನ್ನಭಾಗ್ಯ' ಯೋಜನೆಯು ಇಂದು ರಾಜ್ಯಾದ್ಯಂತ ಯಶಸ್ವಿಯಾಗಿದೆ. ಆದರೆ, ಕೆಲವು ಕಡೆ ಅನ್ನಭಾಗ್ಯ ಅಕ್ಕಿಯ ಕಳ್ಳತನ ಎಗ್ಗಿಲ್ಲದೆ ಸಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಮೂಲಕ ಪಡಿತರ ಚೀಟಿದಾರರಿಗೆ ಕಡಿಮೆ ಅಕ್ಕಿ ಕೊಟ್ಟರೆ ಸೈರನ್ ಎಚ್ಚರಿಸಲಿದೆ.
ಹೌದು, ಕರ್ನಾಟಕ ಸರ್ಕಾರ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಹೊಸ ಮೆಶಿನ್ ಒಂದನ್ನು ಅಳವಡಿಕೆ ಮಾಡಲು ಆದೇಶ ನೀಡಿದ್ದು, ಈ ಮೆಶಿನ್ ಮೂಲಕ ಯಾವುದೇ ಅಕ್ರಮಕ್ಕೂ ಕಡಿವಾಣ ಹಾಕಬಹುದು ಎಂಬುದು ಸರ್ಕಾರದ ಚಿಂತನೆ. ಹಾಗಿದ್ರೆ, ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶ ಏನು?, ಯಾವ ಮೆಶಿನ್ ಅಳವಡಿಸಿಕೊಳ್ಳಲು ಸೂಚಿಸಿದೆ?, ಇದು ಹೇಗೆ ಕೆಲಸ ಮಾಡಲಿದೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐರಿಸ್‌ಸ್ಕ್ಯಾನರ್ ಬಳಕೆಗೆ ಆದೇಶ
ಕರ್ನಾಟಕ ಸರ್ಕಾರ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಈಗ ಐರಿಸ್‌ಸ್ಕ್ಯಾನರ್ ಬಳಕೆ ಮಾಡುವಂತೆ ಆದೇಶ ನೀಡಿದ್ದು, ಈ ಮೂಲಕ ರಾಜ್ಯದಲ್ಲಿ ಪಡಿತರ ವ್ಯವಸ್ಥೆಯಲ್ಲಿ ಆಗುತ್ತಿರುವ ಹಲವಾರು ಅನಾನುಕೂಲಗಳನ್ನು ಸರಿಪಡಿಸಲು ಮುಂದಾಗಿದೆ. ಜೊತೆಗೆ ಧ್ವನಿ ಮುದ್ರಿತ ತೂಕದ ಯಂತ್ರವನ್ನು ಅಳವಡಿಸುವಂತೆ ಸೂಚಿಸಿದ್ದು, ಇದರಿಂದ ಪಡಿತರದಾರರಿಗೆ ಕಡಿಮೆ ಪಡಿತರ ನೀಡಿದರೆ ಜೋರಾದ ಶಬ್ಧ ಮಾಡಲಿದೆ.
ಏನಿದು ಐರಿಸ್ ಸ್ಕ್ಯಾನರ್?
ಈ ಹಿಂದೆ ಇದ್ದ ಬಯೋಮೆಟ್ರಿಕ್ ರೀತಿಯಲ್ಲಿಯೇ ಇದು ಕೆಲಸ ಮಾಡುತ್ತದೆಯಾದರೂ ಹಲವು ವಿಶೇಷತೆಗಳು ಈ ಮೆಶಿನ್‌ನಲ್ಲಿ ಇವೆ. ಅದರಂತೆ ಈ ಐರಿಸ್ ಸ್ಕ್ಯಾನರ್ ಬಯೋಮೆಟ್ರಿಕ್ ಗುರುತಿಸುವಿಕೆಯ ಆಟೋಮ್ಯಾಟಿಕ್ ವಿಧಾನವಾಗಿದ್ದು, ಇದು ವ್ಯಕ್ತಿಯ ಕಣ್ಣುಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ. ಹೀಗಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಕೊಂಡುಕೊಳ್ಳಲು ಬರುವ ಎಲ್ಲರ ಕಣ್ಣುಗಳನ್ನು ಈ ಮೂಲಕ ಸೆರೆಹಿಡಿದುಕೊಳ್ಳಬೇಕಿದೆ.
ಇದಾದ ನಂತರ ಅಕ್ಕಿ ಖರೀದಿ ಮಾಡುವಾಗ ಅವರನ್ನು ಈ ಮೆಶಿನ್ ಮುಂದೆ ಕೂರಿಸಿದರೆ ಅವರಿಗೆ ಎಷ್ಟು ಪ್ರಮಾಣದ ಅಕ್ಕಿಯನ್ನು ಪಡಿತರವನ್ನು ವಿತರಣೆ ಮಾಡಬೇಕು ಎಂಬ ಮಾಹಿತಿ ತೋರಿಸುತ್ತದೆ. ಅದರಂತೆ ಅವರು ಅಷ್ಟೇ ಪ್ರಮಾಣದ ಅಕ್ಕಿಯನ್ನು ತೂಕದ ಯಂತ್ರದಲ್ಲಿ ಹಾಕಬೇಕು. ಈ ವೇಳೆ ಏನಾದರೂ ಕೇವಲ ಅರ್ಧ ಕೆಜಿ ಕಡಿಮೆ ಮಾಡಿದರೂ ಈಗ ಅಳವಡಿಸಿಕೊಳ್ಳಲು ಸೂಚಿಸಿರುವ ಧ್ವನಿ ಮುದ್ರಿತ ತೂಕದ ಯಂತ್ರದಿಂದ ಸೈರನ್ ಬರುತ್ತದೆ. ಇದರಿಂದಾಗಿ ಜನರು ಮೋಸ ಹೋಗುತ್ತಿದ್ದೇವೆ ಎಂದು ತಿಳಿದುಕೊಳ್ಳಬಹುದು.

ಫಿಂಗರ್‌ಪ್ರಿಂಟ್ ಗಿಂತ ವಿಭಿನ್ನವಾಗಿದೆ
ಫಿಂಗರ್‌ಪ್ರಿಂಟ್ ಹೇಗೆ ಪ್ರತಿ ವ್ಯಕ್ತಿಗೂ ಭಿನ್ನವಾಗಿರುತ್ತವೋ ಅದೇ ರೀತಿಯಲ್ಲಿ ಕಣ್ಣುಗಳು ಸಹ ಭಿನ್ನತೆಯಿಂದ ಕೂಡಿರುತ್ತವೆ. ಅಕಸ್ಮಾತ್ ಆಗಿ ಫಿಂಗರ್‌ಪ್ರಿಂಟ್ ನಲ್ಲಿ ಮೋಸ ಮಾಡಿದರೂ ಈ ಐರಿಸ್ ಸ್ಕ್ಯಾನರ್ ಮೂಲಕ ಯಾವುದೇ ಕಾರಣಕ್ಕೂ ಮೋಸ ಮಾಡಲು ಸಾಧ್ಯವಾಗುವುದಿಲ್ಲ.ಯಾಕೆಂದರೆ ಪ್ರತಿ ಐರಿಸ್ 240 ಗುರುತಿಸುವಿಕೆ ಬಿಂದುಗಳನ್ನು ಹೊಂದಿರುತ್ತದೆ. ಇದು ಫಿಂಗರ್‌ಪ್ರಿಂಟ್ ಅಥವಾ ಮುಖವು ಒದಗಿಸುವ ಮಾಹಿತಿಗಿಂತ ಹೆಚ್ಚಿನ ಮಾಹಿತಿಯನ್ನು ಇದು ನೀಡುತ್ತದೆ. ಸಾಮಾನ್ಯವಾಗಿ ಈ ಸ್ಕ್ಯಾನರ್ ಅನ್ನು ಭದ್ರತಾ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳು ಬಳಕೆ ಮಾಡುತ್ತವೆ.

ಇದರಿಂದ ಪ್ರಯೋಜನೆ ಏನು?
ಈಗಾಗಲೇ ನ್ಯಾಯಬೆಲೆ ಅಂಗಡಿಯಲ್ಲಿ ಯಾವುದೇ ಅಕ್ರಮ ನಡೆಯಬಾರದು ಎಂದು ಹಲವಾರು ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ವಿವಿಧ ರೀತಿಯಲ್ಲಿ ಪ್ರಯೋಗ ನಡೆಸಲಾಗಿದೆ. ಹಾಗೆಯೇ ಬಯೋಮೆಟ್ರಿಕ್ ಮೂಲಕ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಯಾರಾದರೊಬ್ಬ ಸದಸ್ಯರು ಅಕ್ಕಿಯನ್ನು ಪಡೆದುಕೊಳ್ಳಬಹುದು. ಆದರೆ, ಇದರಲ್ಲಿ ಹಲವಾರು ಬಾರಿ ಸರ್ವರ್ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಕೆಲವು ಬಾರಿ ಅಕ್ಕಿ ಪಡೆಯಲು ಒಂದು ದಿನವನ್ನೇ ಮೀಸಲಿಡಬೇಕಿದೆ. ಆದರೆ, ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ.


Click it and Unblock the Notifications








