38,000 ಸಿಮ್‌ಗಳನ್ನು ಜಿಯೋಗೆ ಪೋರ್ಟ್ ಮಾಡುತ್ತಿದೆ ಕರ್ನಾಟಕ ಪೊಲೀಸ್; BSNL ಗೆ ಶಾಕ್!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸೇವೆಯನ್ನು ತ್ಯಜಿಸಿ ಕರ್ನಾಟಕ ಪೊಲೀಸ್ ಇಲಾಖೆಯು ಜಿಯೋದತ್ತ ಮುಖ ಮಾಡಿದೆ. ಇಲ್ಲಿಯವರೆಗೂ ಬಿಎಸ್‌ಎನ್‌ಎಲ್ ಸೇವೆ ಪಡೆಯುತ್ತಿದ್ದ ಪೊಲೀಸರು ಇದೀಗ ಜಿಯೋ ಸೇವೆ ಪಡೆಯಲು ಮುಂದಾಗಿರುವುದಕ್ಕೆ ಬಿಎಸ್‌ಎನ್‌ಎಲ್ ನೌಕರರ ಸಂಘ ಆಕ್ರೋಶ ಹೊರಹಾಕಿದೆ.
ಹೌದು, ಬಿಎಸ್‌ಎನ್‌ಎಲ್ ಇಂದು ಪ್ರಮುಖ ಹಾಗೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಏರ್‌ಟೆಲ್, ಜಿಯೋ ಹಾಗೂ ವಿ ಸೇವೆಗಳ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪೋಪೋಟಿ ನೀಡುತ್ತಾ ಬರುತ್ತಿದೆಯಾದರೂ ಕರ್ನಾಟಕದ ಪೊಲೀಸರು ಮಾತ್ರ ಈ ಸಮಸ್ಯೆಯ ಆಧಾರದ ಮೇಲೆ ಬೇರೆ ಟೆಲಿಕಾಂ ಸೇವೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಹಾಗಿದ್ರೆ, ಕರ್ನಾಟಕ ಪೊಲೀಸರ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಏನು?, ಇದರಿಂದ ಬಿಎಸ್‌ಎನ್‌ಎಲ್ ಗೆ ಆಗುವ ನಷ್ಟವೇನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಎಷ್ಟು ಸಿಮ್‌ಗಳನ್ನು ಪೋರ್ಟ್ ಮಾಡಲಾಗುತ್ತದೆ?
ಇದೀಗ ಬಿಎಸ್‌ಎನ್‌ಎಲ್‌ನ ಬರೋಬ್ಬರಿ 38,000 ಸಿಮ್ ಗಳನ್ನು ಜಿಯೋಗೆ ಪೋರ್ಟ್ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದ್ದು, ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಗರ ಬಡಿದಂತೆ ಆಗಿದೆ. ಯಾಕೆಂದರೆ ಇಷ್ಟು ಪ್ರಮಾಣದ ಗ್ರಾಹಕರನ್ನು ಈ ಮೂಲಕ ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿ ಬಿಎಸ್‌ಎನ್‌ಎಲ್ ಅಧಿಕಾರಿಗಳು ಈ ನೀತಿ ವಿರುದ್ಧ ಕಿಡಿಕಾರುತ್ತಿದ್ದಾರೆ.
ಈ ಸಂಬಂಧ ಹೆಚ್ಚುವರಿ ಮಹಾನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಟೆಲಿಕಾಂ ಸೇವಾ ಪೂರೈಕೆದಾರರನ್ನು ಬಿಎಸ್‌ಎನ್‌ಎಲ್‌ನಿಂದ ರಿಲಯನ್ಸ್ ಜಿಯೋಗೆ ಬದಲಾಯಿಸಲಾಗುತ್ತದೆ ಎಂದು ಉಲ್ಲೇಖಿಸಿದ್ದು, ಈ ಪ್ರಕ್ರಿಯೆ ಹಲವು ಹಂತಗಳಲ್ಲಿ ಜರುಗುತ್ತದೆ ಎಂದು ಎಲ್ಲಾ ಘಟಕಗಳ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಜೊತೆಗೆ ತುರ್ತು ಸೇವೆಗಾಗಿ ಲಭ್ಯವಿರುವ ನೆಟ್‌ವರ್ಕ್‌ನ ದಕ್ಷತೆಯನ್ನು ಹೆಚ್ಚಿಸಲು ಇದು ಸಂಪೂರ್ಣವಾಗಿ ವಾಣಿಜ್ಯ ನಿರ್ಧಾರವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯಾವ ಉದ್ದೇಶಕ್ಕಾಗಿ ಈ ನಿಯಮ ಜಾರಿ
ಪೊಲೀಸ್ ಸೇವೆ ಎಂಬುದು ನಾಡಿನ ಮೂಲೆ ಮೂಲೆಗೂ ಇದೆ. ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಹಲವಾರು ವ್ಯವಹಾರಿಕ ಸಂಪರ್ಕಗಳನ್ನು ದಿನವೂ ನಡೆಸಬೇಕಿದೆ. ಅದರಲ್ಲೂ ದೂರದ ಊರುಗಳಲ್ಲೂ ಠಾಣೆಗಳಿದ್ದು, ಈ ವೇಳೆ ನೆಟ್‌ವರ್ಕ್ ಸಮಸ್ಯೆಯಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಉತ್ತಮ ನೆಟ್‌ವರ್ಕ್ ಲಭ್ಯ ಇರುವ ಟೆಲಿಕಾಂ ಸೇವೆ ಪಡೆಯಲು ಇಲಾಖೆ ಮುಂದಾಗಿದೆ.

ಅದರಲ್ಲೂ ಇಂದಿನ ದಿನಗಳಲ್ಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಜೊತೆಗೆ ಫೋನ್ ಅಥವಾ ಇನ್ನಿತರೆ ಡಿವೈಸ್‌ಗಳ ಮೂಲಕ ಲೊಕೇಶನ್, ಫೋಟೋಗಳು, ವಿಡಿಯೋಗಳು ಹಾಗೂ ಇನ್ನಿತರೆ ದಾಖಲೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸುತ್ತಲೇ ಇರಬೇಕು. ಇದು ಸರಾಗವಾದರೆ ಅವರ ಕರ್ತವ್ಯ ಸಹ ಸಲೀಸಾಗಿ ಜರುಗಲಿದೆ. ಆದರೆ, ನೆಟ್‌ವರ್ಕ್ ಸಮಸ್ಯೆಯಿಂದ ಈ ಪ್ರಕ್ರಿಯೆ ಕಠಿಣವಾಗುತ್ತಿದ್ದು, ಪೊಲೀಸ್ ಕೆಲಸಗಳು ತಡವಾಗುತ್ತಿವೆ ಎನ್ನಲಾಗಿದೆ.
ಇನ್ನು ಇತರೆ ನೆಟ್‌ವರ್ಕ್‌ಗಳು ಇಂದು ಭಾರೀ ಪೈಪೋಟಿಯಲ್ಲಿ 5G ಸೇವೆ ನೀಡುತ್ತಾ ಬರುತ್ತಿವೆ. ಆದರೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಮಾತ್ರ ಇನ್ನೂ 4G ಸೇವೆ ನೀಡಲು ಬಹಳ ಕಸರತ್ತು ನಡೆಸುತ್ತಿರುವುದು ನಮಗೆಲ್ಲಾ ತಿಳಿದ ವಿಚಾರ. ಹೀಗಾಗಿ ತುರ್ತು ಸೇವೆಗೆ ಬಿಎಸ್‌ಎನ್‌ಎಲ್ ಅನುಸರಿಸುವುದು ಪೊಲೀಸರಿಗೆ ಶೋಚನೀಯವಾಗಿ ಮಾರ್ಪಟ್ಟಿದೆ ಎನ್ನಲಾಗಿದೆ. ಈ ಎಲ್ಲಾ ಪ್ರಮುಖ ಕಾರಣಗಳು ಜಿಯೋ ಸೇವೆ ಪಡೆಯಲು ನಾಂದಿ ಹಾಡಿವೆ ಎಂದು ತಿಳಿದುಬಂದಿದೆ.

ಸರ್ಕಾರಿ ಅಧಿಕಾರಿಗಳ ಈ ರೀತಿಯ ನಿರ್ಧಾರಗಳು ಇದೇ ಮೊದಲಲ್ಲ...
ಕರ್ನಾಟಕ ಪೊಲೀಸರು ಈ ಹಾದಿ ತುಳಿದ ಮೊದಲಿಗರಲ್ಲ ಬದಲಾಗಿ ಭಾರತೀಯ ರೈಲ್ವೇ ಮತ್ತು ತೆಲಂಗಾಣ ಪೊಲೀಸರು ಸೇರಿದಂತೆ ಕೇಂದ್ರ ಸರ್ಕಾರದ ಹಲವು ಇಲಾಖೆಗಳು ರಿಲಯನ್ಸ್ ಜಿಯೋಗೆ ಬದಲಾಗಿವೆ, ಬದಲಾಗುತ್ತಿವೆ. ಅದರಂತೆ ಇದೀಗ ಕರ್ನಾಟಕದ ಸರದಿ ಬಂದಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುಂಡಣ್ಣ ಸಿ.ಕೆ. ಮಾಹಿತಿ ನೀಡಿದ್ದಾರೆ.


Click it and Unblock the Notifications








