ಕರ್ನಾಟಕದ ಮೊದಲ ಆಧಾರ್ ವಂಚನೆ ಇದು, ಬೆಂಗಳೂರು ಮಹಿಳೆಯನ್ನು ವಂಚಿಸಿದ್ದೇಗೆ ಗೊತ್ತಾ?
ಆಧಾರ್ ಕಾರ್ಡ್ (Aadhaar Card) ಬಳಕೆ ಇಂದು ಎಲ್ಲಾ ಕಡೆ ಅಗತ್ಯವಾಗಿದೆ. ಅದರಲ್ಲೂ ಬ್ಯಾಂಕ್ ವ್ಯವಹಾರಕ್ಕೆ ಆಧಾರ್ ಅತ್ಯಗತ್ಯ. ಈ ನಡುವೆ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ಸಹ ಬಳಕೆಯಲ್ಲಿದ್ದು, ಈ ಮೂಲಕ ಸುಲಭವಾಗಿ ಬ್ಯಾಂಕ್ ವ್ಯವಹಾರ ನಡೆಸಲಾಗುತ್ತಿದೆ. ಆದರೆ, ಇದನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯೋರ್ವರಿಗೆ ಮೋಸ ಮಾಡಲಾಗಿದೆ. ಅದೂ ಸಹ ನಮ್ಮ ರಾಜ್ಯದಲ್ಲೇ.
ಹೌದು, ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (Aadhaar enabled payment system) ಇಂದು ಎಲ್ಲಾ ಕಡೆ ಯಶಸ್ವಿಯಾಗುತ್ತಿದೆ. ಇದನ್ನೇ ಆಧಾರವಾಗಿರಿಸಿಕೊಂಡು ಸ್ಕ್ಯಾಮರ್‌ಗಳು ಜನರ ಖಾತೆಯಲ್ಲಿ ಹಣ ಲಪಟಾಯಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು. ಈಗ ಈ ಸ್ಕ್ಯಾಮ್ ಕರ್ನಾಟಕದಲ್ಲೂ ತಲೆ ಎತ್ತಿದಂತೆ ಕಾಣಿಸುತ್ತಿದೆ. ಹಾಗಿದ್ರೆ, ಆಧಾರ್ ಬಳಕೆ ಮಾಡಿಕೊಂಡು ಮೋಸ ಮಾಡಿದ್ದು ಹೇಗೆ?, ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಕರ್ನಾಟಕದ ಮಹಿಳೆಗೆ ಮೋಸ : ಸುನೀತಾ ರವಿಕುಮಾರ್ ಎಂಬ ಮಹಿಳೆಯ ಖಾತೆಯಿಂದ ಸೆಪ್ಟೆಂಬರ್ 6 ಮತ್ತು 7 ರಂದು ತಲಾ 10,000 ರೂ.ಗಳನ್ನು ಅನಧಿಕೃತವಾಗಿ ಡ್ರಾ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ನಡೆದ ಮೊದಲ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AEPS) ವಂಚನೆ ಇದಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸರು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 66D ಅಡಿಯಲ್ಲಿ ಪ್ರಕರಣವನ್ನು ದಾಖಲಾಗಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?: ಈ ಘಟನೆ ಕರ್ನಾಟಕದ ಯಾವುದೋ ಹಳ್ಳಿ ಅಥವಾ ಪಟ್ಟದಲ್ಲಿ ನಡೆದಿರುವುದಲ್ಲ ಬದಲಾಗಿ ಬೆಂಗಳೂರಲ್ಲಿಯೇ ನಡೆದಿದೆ. ಬೆಂಗಳೂರಿನ ವಸಂತನಗರದ ನಿವಾಸಿ ಸುನಿತಾ ರವಿಕುಮಾರ್ ಅವರು ಸೆಪ್ಟೆಂಬರ್ 6 ಮತ್ತು 7 ರಂದು ತಮ್ಮ ಖಾತೆಯಿಂದ ತಲಾ ಎರಡು ಬಾರಿ 10,000 ರೂ.ಗಳು ಅನಧಿಕೃತವಾಗಿ ಡ್ರಾ ಆಗಿರುವುದನ್ನು ಕಂಡುಕೊಂಡಿದ್ದಾರೆ. ಈ ವಹಿವಾಟಿನಿಂದ ವಿಚಲಿತರಾದ ಸುನೀತಾ ಅವರು ಯೂನಿಯನ್ ಬ್ಯಾಂಕ್‌ನ ಶಾಖೆಗೆ ಭೇಟಿ ನೀಡಿದ್ದಾರೆ. ಅದಾಗಲೇ ತಾವು ಮೋಸ ಹೋಗಿದ್ದೇವೆ ಎಂದು ಕಂಡುಕೊಂಡಿದ್ದಾರೆ.
ಏನಿದು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ?: ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯು ವ್ಯಕ್ತಿಯ ಬ್ಯಾಂಕ್ ಖಾತೆಯನ್ನು ಅವರ ಆಧಾರ್ ಖಾತೆಯೊಂದಿಗೆ ಲಿಂಕ್ ಮಾಡುವ ತಂತ್ರಜ್ಞಾನವಾಗಿದೆ. ಈ ವಿಭಾಗದಲ್ಲಿ ಬಯೋಮೆಟ್ರಿಕ್ ದೃಢೀಕರಣವನ್ನು ಬಳಕೆ ಮಾಡಿಕೊಂಡು ಆರ್ಥಿಕ ವ್ಯವಹಾರ ನಡೆಸಲಾಗುತ್ತದೆ ಹಾಗೂ ಹಣವನ್ನು ಡ್ರಾ ಮಾಡಿಕೊಳ್ಳಬಹುದಾಗಿದೆ. ಆದರೆ ಈ ವೇಳೆ ಸೈಬರ್ ಅಪರಾಧಿಗಳು ಸುನೀತಾ ಅವರ ಬಯೋಮೆಟ್ರಿಕ್ಸ್ ಅನ್ನು AEPS ತಂತ್ರಜ್ಞಾನದ ಸಹಾಯದಿಂದ ಅಕ್ರಮವಾಗಿ ಪ್ರವೇಶಿಸಲು ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸುನೀತಾ ಅವರು ಇತ್ತೀಚೆಗೆ ದಾವಣಗೆರೆಯಲ್ಲಿ ಆಸ್ತಿ ಮಾರಾಟ ಮಾಡುವಾಗ ಬಯೋಮೆಟ್ರಿಕ್ ಮಾಹಿತಿ ಹಂಚಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಮೂಲಕ ಪೊಲೀಸರು ಆಸ್ತಿ ವಹಿವಾಟಿನಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಲು ಮುಂದಾಗಿದ್ದಾರೆ. ಆದರೆ, ವಂಚನೆಯ ಬ್ಯಾಂಕ್ ವಹಿವಾಟು ಎಲ್ಲಿಂದ ಮತ್ತು ಹೇಗೆ ನಡೆದಿದೆ ಎಂಬುದು ಇನ್ನೂ ಸಹ ತಿಳಿಯಲು ಸಾಧ್ಯವಾಗಿಲ್ಲ.
ನಾವು ಐಟಿ ಕಾಯಿದೆ 2000 ರ ಸೆಕ್ಷನ್ 66D ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಹಾಗೆಯೇ ತನಿಖೆ ನಡೆಯುತ್ತಿದೆ ಎಂದು ಹೈಗ್ರೌಂಡ್ಸ್ ಪೊಲೀಸ್ ಇನ್ಸ್‌ಪೆಕ್ಟರ್ ಎಚ್ ಶಿವ ಸ್ವಾಮಿ ಮಾಹಿತಿ ನೀಡಿದ್ದು, ಯೂನಿಯನ್ ಬ್ಯಾಂಕ್‌ನ ತಾಂತ್ರಿಕ ತಂಡವು ಘಟನೆಯ ಬಗ್ಗೆ ತನಿಖೆಯನ್ನು ಆರಂಭ ಮಾಡಿದೆ. ಅವರು ಪ್ರಕರಣವನ್ನು ಭೇದಿಸಲು ಪೊಲೀಸರ ಸೈಬರ್ ವಿಭಾಗದ ಸಹಾಯವನ್ನು ಕೋರಿದ್ದಾರೆ ಎಂದು ಈ ವೇಳೆ ತಿಳಿಸಿದ್ದಾರೆ. ಹಾಗೆಯೆ ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ.
ಇದೇ ರೀತಿಯ ಘಟನೆಯನ್ನು ಈ ವೇಳೆ ತಿಳಿಸುವುದಾದರೆ ಫೆಬ್ರವರಿ 9 ರಂದು ಆಂಧ್ರಪ್ರದೇಶದ ಕಡಪಾ ಪೊಲೀಸರ ಸೈಬರ್ ಕ್ರೈಂ ವಿಭಾಗವು ಅಂತರ-ರಾಜ್ಯ ದಂಧೆಯನ್ನು ಭೇದಿಸಿತ್ತು, ಅಲ್ಲಿ ಸೈಬರ್ ಅಪರಾಧಿಗಳು ಎಇಪಿಎಸ್ ತಂತ್ರಜ್ಞಾನದ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಂದ ಹಣವನ್ನು ಹಿಂಪಡೆಯಲು ಖಾತೆದಾರರ ಬೆರಳಚ್ಚುಗಳನ್ನು ಬಳಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ರೀತಿಯ ವಂಚನೆಗಳಿಂದ ಪಾರಾಗುವುದು ಹೇಗೆ?: ಆಧಾರ್ ಒಂದೇ ಮಾತ್ರವಲ್ಲದೆ ಸ್ಕ್ಯಾಮರ್‌ಗಳು ವಿವಿಧ ರೀತಿಯಲ್ಲಿ ಮೋಸ ಮಾಡಲು ರೆಡಿಯಾಗಿದ್ದಾರೆ. ಇದನ್ನು ತಡೆಯಬೇಕು ಅಥವಾ ಈ ರೀತಿಯ ವಂಚನೆಗಳು ನಿಮಗೆ ಆಗಬಾರದು ಎಂದರೆ ಎಂದಿಗೂ ನಿಮಗೆ ಗೊತ್ತಿಲ್ಲದ ವ್ಯಕ್ತಿಗಳ ಜೊತೆ ಆಧಾರ್ ಸೇರಿದಂತೆ ಯಾವುದೇ ದಾಖಲೆಗಳನ್ನು ನೀಡಬೇಡಿ. ಹಾಗೂ ಈ ಸಂಬಂಧ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.

ಯಾರೇ ಅಧಿಕೃತ ವ್ಯಕ್ತಿಗಳು ಸಹ ಫೋನ್ ಮೂಲಕ ನಿಮಗೆ ಕರೆ ಮಾಡಿ ಓಟಿಪಿಯನ್ನಾಗಲಿ ಅಥವಾ ಬ್ಯಾಂಕ್ ವಿವರಗಳನ್ನಾಗಲಿ ಕೇಳುವುದಿಲ್ಲ. ಅಕಸ್ಮಾತ್ ಅವರು ಆ ಎಲ್ಲಾ ಮಾಹಿತಿಯನ್ನು ಕೇಳುತ್ತಿದ್ದಾರೆ ಎಂದಾದರೆ ಅವರು ಸ್ಕ್ಯಾಮರ್‌ಗಳು ಎಂದು ಕಂಡುಕೊಳ್ಳಿ. ಇಷ್ಟೇ ಅಲ್ಲದೆ ನಿಮ್ಮ ಆಧಾರ್‌ಗೆ ಭದ್ರತೆಯನ್ನು ಹೆಚ್ಚು ಮಾಡಿ. ಅಂದರೆ ಯಾರಿಗಾದರೂ ಆಧಾರ್ ಕಳುಹಿಸುವಾದ ಅದಕ್ಕೆ ಪಾಸ್‌ವರ್ಡ್ ಸ್ಟ್ರಾಂಗ್ ಆಗಿ ಇರಲಿ. ಜೊತೆಗೆ ಆಧಾರ್ ಲಾಕ್ ಹಾಗೂ ಅನ್‌ಲಾಕ್ ಅನ್ನು ಸಹ ಆಪ್ ಮೂಲಕ ಮಾಡಬಹುದು.


Click it and Unblock the Notifications








