Online scam: ಈ ನಕಲಿ ವೈದ್ಯ ಮಾಡಿದ ಮಹಾ ಮೋಸ ಎಂತಹುದು ಗೊತ್ತಾ? 36ಲಕ್ಷ ರೂ. ಕಳೆದುಕೊಂಡ ಮಹಿಳೆ!
ಆನ್‌ಲೈನ್ ವಂಚನೆ (Online scam) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವಂಚನೆಗಳು ಹೊಸ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ವಂಚನೆ ಎಂದು ಅರಿತುಕೊಳ್ಳುವ ಮುನ್ನವೇ ಜನರು ಹಣ ಹಾಗೂ ಖಾಸಗಿ ಮಾಹಿತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ಆತಂಕದಲ್ಲೇ ದಿನದೂಡುವಂತೆ ಆಗಿದೆ.
ಹೌದು, ವಂಚಕನೊಬ್ಬ ಮಹಿಳೆಯನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸಿ ಲಂಡನ್‌ನ ಲಾರ್ಡ್ ಆಸ್ಪತ್ರೆಯಲ್ಲಿ ವೈದ್ಯನಂತೆ ನಟಿಸಿ ಭಾರೀ ಹಣ ದೋಚಿದ್ದಾನೆ. ಅಷ್ಟೇ ಅಲ್ಲದೆ ಈ ಭಾರತದ ಮಹಿಳೆಯ ವಿಶ್ವಾಸ ಪಡೆದುಕೊಳ್ಳಲು ವಿವಿಧ ತಂತ್ರಗಳನ್ನು ಈ ವೇಳೆ ಬಳಕೆ ಮಾಡಿದ್ದಾನೆ. ಹಾಗಿದ್ರೆ, ಈತ ಮೋಸ ಮಾಡಿದ್ದು ಹೇಗೆ?, ಈ ರೀತಿಯ ವಂಚನೆಗಳಿಂದ ನೀವು ಎಚ್ಚರಿಕೆ ವಹಿಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದ ಮಹಿಳೆಗೆ 36 ಲಕ್ಷ ರೂ.ವಂಚನೆ: ಆನ್‌ಲೈನ್ ಸ್ಕ್ಯಾಮರ್‌ಗಳು (online scammer) ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಹೆಚ್ಚಾಗುತ್ತಿದ್ದಾರೆ. ಇವರು ಸಾಮಾನ್ಯ ಜನರನ್ನು ಮೋಸಗೊಳಿಸಲು ಮತ್ತು ಅವರನ್ನು ಗುರಿಯಾಗಿಸಲು ವಿವಿಧ ತಂತ್ರಗಳನ್ನು ಬಳಕೆ ಮಾಡುತ್ತಾ ಬಂದಿದ್ದಾರೆ. ಈ ನಡುವೆ ಕೆಲವು ವಾರಗಳ ಹಿಂದೆ ನಡೆದ ಸೈಬರ್ ವಂಚನೆಯ ಪ್ರಕರಣವೊಂದರಲ್ಲಿ ಕೇರಳದ ಪ್ಲಾಮೂಡಿನಲ್ಲಿ ನೆಲೆಸಿರುವ 66 ವರ್ಷದ ಮಹಿಳೆಯೊಬ್ಬರು ಭಾರೀ ಮೊತ್ತದ ಹಣ ಕಳೆದುಕೊಂಡಿದ್ದಾರೆ.
ಏನಿದು ಘಟನೆ?: ಜುಲೈನಲ್ಲಿ ಡೇವಿಡ್ ರೋಡಿಗರ್ ಎಂಬ ವ್ಯಕ್ತಿಯಿಂದ ಈ ಮಹಿಳೆ ವಾಟ್ಸಾಪ್ ಮೆಸೆಜ್‌ಒಂದನ್ನು ಸ್ವೀಕರಿಸಿದ್ದಾರೆ. ಆತ ಲಂಡನ್‌ನ ಲಾರ್ಡ್ಸ್ ಆಸ್ಪತ್ರೆಯಲ್ಲಿ ವೈದ್ಯ ಎಂದು ಪರಿಚಯಿಸಿಕೊಂಡಿದ್ದಾನೆ. ಇದಾದ ನಂತರದಲ್ಲಿ ಆ ವಂಚಕ ಮಹಿಳೆಯೊಂದಿಗೆ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾನೆ. ಕ್ರಮೇಣ ಮಹಿಳೆಯೊಂದಿಗೆ ಸ್ನೇಹ ಬೆಳೆದಿದೆ. ಅಷ್ಟೇ ಅಲ್ಲದೆ ಮಹಿಳೆಯ ಹಲವು ಸಮಸ್ಯೆಗಳಿಗೆ ಈತ ಪರಿಹಾರಗಳನ್ನು ನೀಡಿದ್ದಾನೆ.

ಇದೆಲ್ಲಾ ಆದ ಮೇಲೆ ಈತನೊಂದಿಗೆ ಮಹಿಳೆಗೆ ನಂಬಿಕೆ ಹೆಚ್ಚಾಗಿದೆ. ಬಳಿಕ ಆ ನಕಲಿ ವೈದ್ಯ ತನ್ನ ಮೋಸದ ಪ್ಲ್ಯಾನ್ ಒಂದನ್ನು ಈಕೆಗೆ ಹೇಳಿದ್ದಾನೆ. ಅದೇನೆಂದರೆ ಅನೇಕ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುತ್ತಿದ್ದೇನೆ, ಇದರೊಂದಿಗೆ ಅನೇಕ ಬಡ ಕುಟುಂಬಗಳಿಗೂ ಸಹಾಯ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಇಷ್ಟೇ ಅಲ್ಲದೆ ಭಾರತದಲ್ಲಿರುವ ಹಿಂದುಳಿದ ಮಕ್ಕಳಿಗೆ ಬೆಂಬಲ ನೀಡಲು ಮುಂದಾಗಿದ್ದೇನೆ ಇದಕ್ಕೆ ನಿಮ್ಮ ಸಹಾಯ ಬೇಕು ಎಂದು ನಂಬಿಸಿದ್ದಾನೆ.
ಇದರಿಂದ ಸಂತಸಗೊಂಡ ಮಹಿಳೆ ಉತ್ತಮ ಕೆಲಸ ಎಂದು ಹೇಳಿದ್ದಾರೆ. ಇದಾದ ಕೆಲವು ದಿನಗಳ ನಂತರ ಕರೆ ಮಾಡಿದ ಈತ ದತ್ತಿ ಉದ್ದೇಶಗಳಿಗಾಗಿ 83 ಲಕ್ಷ ರೂ.ಗಳನ್ನು ನಿಮಗೆ ಕಳುಹಿಸಿದ್ದೇನೆ ಎಂದು ಹೇಳಿದ್ದಾನೆ. ಆದರೆ ಇನ್ನೂ ಸಹ ಈಕೆಗೆ ಯಾವುದೇ ಹಣ ಬಂದಿರಲಿಲ್ಲ. ಬದಲಾಗಿ ಕೆಲವು ಕರೆಗಳು ಈಕೆಯ ಫೋನ್‌ಗೆ ಬಂದಿವೆ. ವಲಸೆ ಇಲಾಖೆಯ ಅಧಿಕಾರಿಗಳು ಎಂದು ಹೇಳಿಕೊಳ್ಳುವ ಹಲವಾರು ಜನರು ಈಕೆಗೆ ಕರೆ ಮಾಡಿ ಯುಕೆಯಿಂದ ಕೊರಿಯರ್‌ವೊಂದು ಬಂದಿದೆ. ಅದನ್ನು ಪಡೆದುಕೊಳ್ಳಲು ತೆರಿಗೆ ಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಈ ಕೋರಿಯರ್‌ನಲ್ಲಿ ಡಾಲರ್‌ಗಳು, ಚಿನ್ನ ಮತ್ತು ಲ್ಯಾಪ್‌ಟಾಪ್ ಇದೆ ಎಂದು ಮಹಿಳೆಗೆ ನಕಲಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಕಾನೂನುಬದ್ಧ ಪ್ರಕ್ರಿಯೆ ಎಂದು ಭಾವಿಸಿದ ಮಹಿಳೆ ಕೊರಿಯರ್ ಸ್ವೀಕರಿಸಲು ಮುಂದಾಗಿದ್ದಾರೆ. ಇದರ ಭಾಗವಾಗಿಯೇ ಒಂಬತ್ತು ವ್ಯಕ್ತಿಗಳ ಖಾತೆಗಳಿಗೆ ಒಟ್ಟು 36 ಲಕ್ಷ ರೂ.ಗಳನ್ನು ಪಾವತಿ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಯಾವುದೇ ಪಾರ್ಸೆಲ್ ಅನ್ನು ಈ ಮಹಿಳೆ ಸ್ವೀಕಾರ ಮಾಡಿಲ್ಲ. ತರುವಾಯ ವಂಚನೆಗೆ ಒಳಗಾಗಿದ್ದೇವೆ ಎಂದು ಅರಿತುಕೊಂಡಿದ್ದಾರೆ.
ಈ ರೀತಿಯ ವಂಚನೆಗಳಿಂದ ಎಚ್ಚರಿಕೆ ವಹಿಸಿ: ಅನಪೇಕ್ಷಿತ ಕರೆಗಳು ಮತ್ತು ಮೆಸೆಜ್‌ಗಳ ಬಗ್ಗೆ ಎಚ್ಚರದಿಂದಿರಿ. ಯಾಕೆಂದರೆ ಯಾರೇ ಕರೆ ಮಾಡಿ ಹಣದ ವಹಿವಾಟಿನ ಬಗ್ಗೆ ಮಾತನಾಡುತ್ತಾರೆ ಎಂದರೆ ಅವರನ್ನು ವಾರೆಗಣ್ಣಿನಿಂದ ನೋಡಬೇಕಾದ ಅನಿವಾರ್ಯತೆ ನಿಮಗಿರಲಿ. ಇದರೊಂದಿಗೆ ಇದು ನ್ಯಾಯಸಮ್ಮತವಾದ ಕರೆಯೇ ಅಥವಾ ನಕಲಿಯೇ ಎಂದು ಕಂಡುಕೊಳ್ಳಲು ಪ್ರಯತ್ನಿಸಿ.

ಯಾವುದೇ ಬ್ಯಾಂಕಿಂಗ್ ಮಾಹಿತಿ ನೀಡಬೇಡಿ: ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ಕಾರಣಕ್ಕೂ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಅಕಸ್ಮಾತ್ ಹಂಚಿಕೊಳ್ಳಲೇ ಬೇಕು ಎನಿಸಿದರೂ ತಪ್ಪಾದ ಮಾಹಿತಿ ನೀಡಿ ಆ ಕರೆಯಿಂದ ಮುಕ್ತಿ ಪಡೆದುಕೊಳ್ಳಿ. ಇದರೊಂದಿಗೆ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಕ್ಲಿಕ್ ಮಾಡಿದರೆ ನಿಮ್ಮ ಡಿವೈಸ್ ಅನ್ನು ಸ್ಕ್ಯಾಮರ್‌ಗಳು ರಿಮೋಟ್ ಕಂಟ್ರೋಲ್‌ಗೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಯಾವುದೇ ಕೋರಿಯರ್ ಕಂಪೆನಿಗಳು ಮುಂಗಡವಾಗಿ ಹಣ ಕೇಳುವುದಿಲ್ಲ: ಈ ವಿಷಯ ಮಾತ್ರ ನಿಮ್ಮ ಗಮನಕ್ಕೆ ಇರಲಿ. ಅಕಸ್ಮಾತ್ ಯಾರಾದರೂ ಈ ರೀತಿ ಹೇಳಿಕೊಂಡು ಸಂಪರ್ಕ ಮಾಡಿದ್ರೆ ಆ ಕರೆಯನ್ನು ನಿರ್ಲಕ್ಷಿಸಿ. ಅಷ್ಟೇ ಅಲ್ಲದೆ ಇವರೊಂದಿಗೆ ಇದು ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ, ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಮಾಹಿತಿಯನ್ನು ನೀಡಬೇಡಿ.


Click it and Unblock the Notifications








