ದೂರದೂರದಲ್ಲಿರುವ ಪ್ರೇಮಿಗಳಿಗಾಗಿ ಚುಂಬನದ ಡಿವೈಸ್: ಇದು ಹೇಗೆ ಕೆಲಸ ಮಾಡುತ್ತೆ!?
ಇನ್ಮುಂದೆ ಎಷ್ಟೇ ದೂರದಲ್ಲಿದ್ದರೂ ನಿಮ್ಮ ಪ್ರೇಮಿಗೆ ಚುಂಬನ ಕೊಡಬಹುದು. ಅರೇ.. ಅದೇಗೆ ಸಾಧ್ಯ ಅಂತೀರಾ.ತಂತ್ರಜ್ಞಾನ ಇಂದು ಎಲ್ಲವನ್ನು ಸಾಧ್ಯವಾಗಿಸಿದೆ. ಈ ಮೂಲಕ ಪ್ರೇಮಿಗಳು ಎಷ್ಟೇ ದೂರದಲ್ಲಿದ್ದರೂ ಅಷ್ಟೇ ಯಾಕೆ ವಿದೇಶದಲ್ಲಿದ್ದರೂ ಸಹ ನೈಜ ರೀತಿಯಲ್ಲಿ ನೀಡುವಂತೆಯೇ ಚುಂಬನ ಕೊಡಬಹುದು. ಇದಕ್ಕಾಗಿ ಹೊಸ ಡಿವೈಸ್ ಪರಿಚಯಿಸಲಾಗಿದೆ.
ಹೌದು, ಇದೀಗ ನಿಮ್ಮ ದೂರದಲ್ಲಿರುವ ಪ್ರೇಮಿಗೆ ಮುತ್ತು ಕೊಡುವ ಡಿವೈಸ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಇದನ್ನು ಚೀನಾದ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದೆ. ಹಾಗಿದ್ರೆ, ಇದನ್ನು ಯಾವ ಕಾರಣದಿಂದ ತಯಾರಿಸಲಾಗಿದೆ, ಇದರ ಬಳಕೆ ಹೇಗೆ?, ಇದರ ಸೆನ್ಸರ್ ಹೇಗೆ ಕೆಲಸ ಮಾಡಲಿದೆ ಎಂಬಿತ್ಯಾದಿ ಇಂಟ್ರೆಸ್ಟಿಂಗ್‌ಮಾಹಿತಿಗೆ ಈ ಲೇಖನ ಓದಿ.

ಚುಂಬನ ಯಂತ್ರ: ಸಾಮಾನ್ಯವಾಗಿ ನಾವು ದಿನನಿತ್ಯ ಯಂತ್ರಗಳೊಂದಿಗೆ ಜೀವನ ದೂಡುತ್ತೇವೆ. ಆದರೆ, ಈ ಡಿವೈಸ್ ಮಾತ್ರ ಎಷ್ಟೇ ದೂರದ ಪ್ರೇಮಿಯನ್ನು ಹತ್ತಿರದಲ್ಲೇ ಇರುವಂತೆ ಮಾಡುತ್ತದೆ. ಇದು ಸಿಲಿಕಾನ್ ಲಿಪ್ ಅನ್ನು ಹೊಂದಿದ್ದು, ಬಳಕೆದಾರರ ಚುಂಬನದ ಡೇಟಾವನ್ನು ಸಂಗ್ರಹಿಸಿ ಅದನ್ನು ಬೇಕಾದವರಿಗೆ ನೀಡುತ್ತದೆ. ಹಾಗೆಯೇ ಯಾವುದೇ ಸಮಯದ ವಿಳಂಬ ಇಲ್ಲದೆ ನೀಡಲಾಗುವ ಚುಂಬನವನ್ನು ಅದೇ ಕ್ಷಣದಲ್ಲಿ ಪ್ರೇಮಿ ಸ್ವೀಕರಿಸಬಹುದು.
ಈ ಚುಂಬನ ನೀಡುವ ಡಿವೈಸ್‌ನ ಹೆಸರೇನು!? : ಚುಂಬನ ನೀಡುವಾಗ ಬರುವ MUA ಎಂಬ ಶಬ್ಧವನ್ನೇ ಇದಕ್ಕೆ ಇಡಲಾಗಿದೆ. ವಿಶೇಷ ಎಂದರೆ ಚುಂಬನವನ್ನು ನೀಡುವ ಸಮಯದಲ್ಲಿ ಸಿಲಿಕಾನ್ ಲಿಪ್ ಬೆಚ್ಚನೆಯ ಅನುಭವ ನೀಡಲಿದ್ದು, ಈ ಮೂಲಕ ನೈಜತೆಯನ್ನು ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ.
ಯಾವ ಉದ್ದೇಶಕ್ಕೆ ಇದನ್ನು ಅಭಿವೃದ್ಧಿಪಡಿಸಲಾಗಿದೆ?: ಈ ಡಿವೈಸ್ ಅನ್ನು ತಯಾರಿಸಲು ಪ್ರಮುಖ ಕಾರಣ ಕೊರೊನಾ. ಕೊರೊನಾ ಬಂದ ಹಿನ್ನೆಲೆ ಲಾಕ್‌ಡೌನ್ ಅನ್ನು ಹಲವಾರು ಕಡೆ ಘೋಷಣೆ ಮಾಡಲಾಗಿತ್ತು. ಇದರಿಂದ ಸ್ನೇಹಿತರು, ಬಂಧುಗಳು ಹಾಗೂ ಹತ್ತಿರದವರು ದೂರವಾಗಿದ್ದರು. ಇದನ್ನೇ ಆಧಾರಾವಾಗಿರಿಸಿಕೊಂಡ ಚೀನಾದ ಸ್ಟಾರ್ಟ್-ಅಪ್ ಈ ಚುಂಬನದ ಡಿವೈಸ್ ಅನ್ನು ನಿರ್ಮಾಣ ಮಾಡಿದೆ.

ಇದಕ್ಕಾಗಿ ಆಪ್ ಒಂದನ್ನು ಸಹ ಅಭಿವೃದ್ಧಿಪಡಿಸಲಾಗಿದ್ದು, ಇದರ ಮೂಲಕ ಚುಂಬನದ ಡೇಟಾವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಹಾಗೆಯೇ ಯಾವಾಗ ಎಷ್ಟು ಚುಂಬನ ನೀಡಲಾಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಈ MUA ಮೊಬೈಲ್ ಸ್ಟ್ಯಾಂಡ್ ಶೈಲಿಯಲ್ಲಿದ್ದು, ಇದು ನೈಜ ತುಟಿಗಳನ್ನೇ ಹೋಲಲಿದೆ.
ಇದನ್ನು ಬಳಕೆ ಮಾಡಬೇಕು ಎಂದರೆ ಕಡ್ಡಾಯವಾಗಿ ಪ್ರೇಮಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಆ ಚುಂಬನ ಯಂತ್ರಗಳನ್ನು ಜೋಡಿಸಬೇಕು, ಇದಕ್ಕಾಗಿ ಫೋನ್ ಚಾರ್ಜಿಂಗ್ ಪೋರ್ಟ್‌ಗೆ ಪ್ಲಗ್ ಮಾಡಬಹುದು. ಇದಾದ ನಂತರ ಈ ಡಿವೈಸ್ ಸಕ್ರಿಯವಾಗುತ್ತದೆ.
ಈ ಡಿವೈಸ್ ಬೆಲೆ ಎಷ್ಟು?: ಸದ್ಯಕ್ಕೆ ಈ ಡಿವೈಸ್‌ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ನಿರ್ಮಾಣ ಆಗಿದ್ದು, ಬಿಡುಗಡೆಯಾದ ಎರಡು ವಾರಗಳಲ್ಲಿ 3,000 ಕ್ಕೂ ಹೆಚ್ಚು ಚುಂಬನ ಯಂತ್ರಗಳನ್ನು ಮಾರಾಟ ಮಾಡಲಾಗಿದೆಯಂತೆ. ಹಾಗೆಯೇ ಸುಮಾರು 20,000 ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಇನ್ನುಳಿದಂತೆ ಈ ಡಿವೈಸ್‌ಗೆ $38 ಬೆಲೆ ನಿಗದಿ ಮಾಡಲಾಗಿದೆ. ಭಾರತದಲ್ಲಿ 3,129 ರೂ. ಗಳ ಬೆಲೆ ಹೊಂದಿದೆ.

ಇದನ್ನು ಸಂಶೋಧಕ ಝಾವೋ ಜಿಯಾನ್ಬೋ ಅವರು ನಿರ್ಮಿಸಿದ್ದು, ಯುನಿಸೆಕ್ಸ್ ತುಟಿಗಳೊಂದಿಗೆ ಹಲವಾರು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ. ಏನೇ ಇರಲಿ ಈ ಒಂದು ಡಿವೈಸ್ ಮಾರುಕಟ್ಟೆಯಲ್ಲಿ ಪರ ಹಾಗೂ ವಿರೋಧದ ಎರಡೂ ವಿಮರ್ಶೆಗಳನ್ನು ಪಡೆದುಕೊಂಡಿದ್ದು, ಕೆಲವರಂತೂ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.


Click it and Unblock the Notifications








