ವಿದ್ಯಾರ್ಥಿಗಳಿಂದ ಮಿತಿಮೀರಿದೆಯಾ ಮೊಬೈಲ್ ಬಳಕೆ?; ಕರ್ನಾಟಕ ಸರ್ಕಾರದ ಮುಂದಿರುವ ಸವಾಲೇನು?
ಸ್ಮಾರ್ಟ್‌ಫೋನ್ (smartphones) ಬಳಕೆ ಇಂದು ಯುವ ಸಮೂಹದಲ್ಲಿ ಹೆಚ್ಚಾಗಿದೆ. ಕೊರೊನಾ ನಂತರ ಪ್ರೌಡಶಾಲಾ ವಿದ್ಯಾರ್ಥಿಗಳೂ ಸಹ ಸ್ಮಾರ್ಟ್‌ಫೋನ್ ಅನ್ನು ಅಗತ್ಯಕ್ಕೆ ಮೀರಿ ಬಳಕೆ ಮಾಡುವುದು ಸಾಮಾನ್ಯವಾದ ವಿಷಯವಾಗಿದೆ. ಇದು ಒಂದು ಕಡೆ ವರದಾನವಾದರೆ ಮತ್ತೊಂದೆಡೆ ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಅಗಾದವಾದ ಪರಿಣಾಮ ಬೀರುತ್ತವೆ ಎನ್ನಲಾಗಿದೆ.
ಹೌದು, ಮಿತಿಮೀರಿದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಮೇಲೆ ಆಗುವ ಪರಿಣಾಮಗಳ ಕುರಿತು ರಾಜ್ಯಾದ್ಯಂತ ಅಧ್ಯಯನ ನಡೆಸುವ ಸಾಧ್ಯತೆ ಬಗ್ಗೆ ಚರ್ಚಿಸಲು ಸಭೆ ನಡೆಸಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದುಬಂದಿದ್ದು, ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಫ್ರೆಸ್ ವರದಿ ಮಾಡಿದೆ. ಹಾಗಿದ್ರೆ, ಕರ್ನಾಟಕದಲ್ಲಿ ಮಕ್ಕಳ ಮೇಲೆ ಮೊಬೈಲ್‌ನಿಂದ ಆಗುತ್ತಿರುವ ಸಮಸ್ಯೆ ಏನು?, ಯಾಕೆ ಈ ಅಧ್ಯಯನದ ವಿಚಾರ ಮುನ್ನೆಲೆಗೆ ಬಂದಿದೆ ಎಂಬ ಬಗ್ಗೆ ತಿಳಿದುಕೊಳ್ಳಿ.

ಸಚಿವರನ್ನು ಭೇಟಿ ಮಾಡಿದ ಆಯೋಗ: ಮೊಬೈಲ್ ಫೋನ್‌ಗಳು ಮತ್ತು ಸೈಬರ್ ಅಪರಾಧದಿಂದ ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಪಿಸಿಆರ್) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿದೆ. ಈ ಮೂಲಕ ರಾಜ್ಯದ ಮಕ್ಕಳ ಭವಿಷ್ಯದ ಬಗ್ಗೆ ಚರ್ಚೆ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಮಕ್ಕಳು ಸೈಬರ್ ಅಪರಾಧಕ್ಕೆ ಒಡ್ಡಿಕೊಳ್ಳುವುದು ಹಾಗೂ ಅತಿಯಾದ ಇಂಟರ್ನೆಟ್ ಬಳಕೆಯಂತಹ ವಿಷಯಗಳನ್ನು ಒಳಗೊಂಡಿರುವ ಅಧ್ಯಯನದ ವಿವರಗಳಿಗೆ ಸಂಬಂಧಿಸಿದಂತೆ ಈ ಆಯೋಗ ಸಚಿವರನ್ನು ಸಂಪರ್ಕಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಅದರಂತೆ ಈ ಹಿಂದೆ ಕೆಎಸ್‌ಸಿಪಿಸಿಆರ್ ಅಧ್ಯಕ್ಷ ಕೆ ನಾಗಣ್ಣ ಗೌಡ ಅವರು ಮಕ್ಕಳಲ್ಲಿ ಮೊಬೈಲ್ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಮಕ್ಕಳು ಹೆಚ್ಚು ಸ್ಮಾರ್ಟ್‌ಫೋನ್ ಬಳಕೆ ಮಾಡುವ ಹಿನ್ನೆಲೆ ಮೆಮೊರಿ ನಷ್ಟದ ಸಮಸ್ಯೆ ಉಂಟಾಗುತ್ತದೆ ಎಂದು ಪ್ರತಿಪಾದಿಸಿದ್ದರು.
ಈ ನಡುವೆ ರಾಜ್ಯದಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳ ಹರಡುವಿಕೆಯನ್ನು ನಿಭಾಯಿಸಲು ಆಯೋಗವು ಚೈಲ್ಡ್ ಫಂಡ್ ಇಂಡಿಯಾದೊಂದಿಗೆ ಎಂಒಯುಗೆ ಸಹಿ ಹಾಕಿದೆ. ವಿಶೇಷವಾಗಿ ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಶೋಷಣೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಅವಶ್ಯಕತೆ ಈಗ ತುಂಬಾ ಮಹತ್ವದ್ದಾಗಿದೆ ಎಂದು ಅಧ್ಯಕ್ಷ ನಾಗಣ್ಣ ಗೌಡ ಹೇಳಿದ್ದಾರೆ. ಹಾಗಿದ್ರೆ, ವಿದ್ಯಾರ್ಥಿಗಳು ಹೆಚ್ಚಾಗಿ ಫೋನ್ ಬಳಕೆ ಮಾಡಿದ್ರೆ ಏನೆಲ್ಲಾ ಲಾಭ-ನಷ್ಟ ಗಮನಿಸೋಣ ಬನ್ನಿ.
ಸುಲಭ ಮಾಹಿತಿಗೆ ಪ್ರವೇಶ: ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್ ಬಳಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದ ಮಾಹಿತಿಗೆ ಸುಲಭ ಪ್ರವೇಶವನ್ನು ಪಡೆದುಕೊಳ್ಳಬಹುದು. ಅಂದರೆ ಅವರು ತಮ್ಮ ಕಲಿಕೆಯ ಅನುಭವವನ್ನು ಹೆಚ್ಚಿಸಲು ಮತ್ತು ತ್ವರಿತವಾಗಿ ಮಾಹಿತಿಯನ್ನು ಸಂಗ್ರಹಿಸಲು ಸರ್ಚ್ ಎಂಜಿನ್‌ಗಳು ಹಾಗೂ ಶೈಕ್ಷಣಿಕ ಆಪ್‌ಗಳು ಜೊತೆಗೆ ಇತರೆ ಆನ್‌ಲೈನ್ ಸಂಪನ್ಮೂಲಗಳನ್ನು ಸಹಾಯಕವಾಗುತ್ತವೆ.
ಹೆಚ್ಚಿನ ಕಲಿಕೆಯ ಅವಕಾಶಗಳು: ಮೊಬೈಲ್ ಫೋನ್‌ಗಳನ್ನು ಶೈಕ್ಷಣಿಕ ಡಿವೈಸ್‌ಗಳಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸಂವಾದಾತ್ಮಕ ಕಲಿಕೆಯ ಅನುಭವಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ಶೈಕ್ಷಣಿಕ ಆಪ್‌ಗಳು, ಇ-ಪುಸ್ತಕಗಳು, ಭಾಷಾ ಕಲಿಕೆಯ ಟೂಲ್ಸ್‌ಗಳು ಮತ್ತು ಆನ್‌ಲೈನ್ ಕೋರ್ಸ್‌ಗಳನ್ನು ಪ್ರವೇಶಿಸಬಹುದು. ಇದು ಅಧ್ಯಯನಕ್ಕೆ ಪೂರಕವಾಗಿದ್ದು, ಅವರ ಜ್ಞಾನವನ್ನು ವಿಸ್ತರಿಸಬಹುದು.

ಸಂವಹನಕ್ಕೆ ಸಹಾಯಕ: ಮೊಬೈಲ್ ಫೋನ್‌ಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಸಂವಹನವನ್ನು ಸುಲಭಗೊಳಿಸುತ್ತವೆ. ಕಾರ್ಯಯೋಜನೆಗಳನ್ನು ಚರ್ಚಿಸಲು, ಪ್ರಾಜೆಕ್ಟ್‌ಗಳಲ್ಲಿ ಸಹಯೋಗಿಸಲು ಮತ್ತು ತಮ್ಮ ಗೆಳೆಯರು ಮತ್ತು ಶಿಕ್ಷಕರಿಂದ ಸ್ಪಷ್ಟೀಕರಣವನ್ನು ಪಡೆಯಲು ತಕ್ಷಣಕ್ಕೆ ಮೆಸೆಜ್ ಮಾಡುವ ಮೂಲಕ ಅಥವಾ ಕರೆ ಮಾಡುವ ಮೂಲಕ ಜೊತೆಗೆ ಇತರೆ ಆಪ್‌ಗಳ ಸಹಾಯ ಪಡೆಯುವ ಮೂಲಕ ತಮ್ಮ ಕೆಲಸವನ್ನು ಸುಲಭವಾಗಿ ಮಾಡಬಹುದು. ಆದಾಗ್ಯೂ ಹೆಚ್ಚಿನ ಮೊಬೈಲ್ ಬಳಕೆಯಿಂದ ಈ ಸಮಸ್ಯೆಗಳು ಸಹ ಎದುರಾಗುತ್ತವೆ.
ಗೊಂದಲಗಳು: ಅತಿಯಾದ ಸ್ಮಾರ್ಟ್‌ಫೋನ್ ಬಳಕೆ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಬಹುದು. ವಿಶೇಷವಾಗಿ ತರಗತಿಯ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಫೋನ್‌ಗಳನ್ನು ಶೈಕ್ಷಣಿಕೇತರ ಉದ್ದೇಶಗಳಿಗಾಗಿ ಬಳಕೆ ಮಾಡುವ ಸಾಧ್ಯತೆ ಹೆಚ್ಚು. ಸಾಮಾಜಿಕ ಮಾಧ್ಯಮ, ಮೆಸೇಜಿಂಗ್ ಆಪ್‌ಗಳ ಬಳಕೆ, ಗೇಮಿಂಗ್ ವಿದ್ಯಾರ್ಥಿಗಳ ಗಮನವನ್ನು ಕಲಿಕೆಯಿಂದ ಬೇರೆಡೆಗೆ ಸೆಳೆಯುತ್ತದೆ. ಇದರಿಂದಾಗಿ ಅವರ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಮುಖಾಮುಖಿ ಸಂವಹನಗಳು ಕಡಿಮೆಯಾಗುತ್ತವೆ: ಇದೆಲ್ಲಕ್ಕೂ ಪ್ರಮುಕವಾಗಿ ಮೊಬೈಲ್ ಫೋನ್‌ಗಳ ಮೇಲಿನ ಹೆಚ್ಚಿದ ಅವಲಂಬನೆಯು ವಿದ್ಯಾರ್ಥಿಗಳಲ್ಲಿ ಮುಖಾಮುಖಿ ಸಂವಹನಗಳನ್ನು ಕಡಿಮೆ ಮಾಡಬಹುದು. ಈ ಮೂಲಕ ವಿದ್ಯಾರ್ಥಿಗಳ ಸಾಮಾಜಿಕ ಮತ್ತು ಸಂವಹನ ಕೌಶಲ್ಯಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರ ನಡವಳಿಕೆಯೇ ಅದಲು ಬದಲಾಗುತ್ತದೆ.
ಆರೋಗ್ಯ ಸಮಸ್ಯೆಗಳು: ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆಯು ವಿದ್ಯಾರ್ಥಿಗಳಲ್ಲಿ ಕಣ್ಣಿನ ಆಯಾಸ, ಕುತ್ತಿಗೆ ಮತ್ತು ಬೆನ್ನು ನೋವು, ಮತ್ತು ನಿದ್ರೆಯ ಸಮಸ್ಯೆಗಳನ್ನು ನಿರ್ಮಾಣ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ ಇದರೊಂದಿಗೆ ವಿವಿಧ ಆರೋಗ್ಯ ಸಮಸ್ಯೆ ಸಹ ಕಾಣಿಸಿಕೊಳ್ಳುತ್ತವೆ. ಅದೆಲ್ಲಕ್ಕೂ ಪ್ರಮುಖವಾಗಿ ಜಡ ಜೀವನಶೈಲಿಗೆ ಇದು ಕಾರಣವಾಗಬಹುದು, ದೈಹಿಕ ಚಟುವಟಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.
ಸೈಬರ್‌ಬುಲ್ಲಿಂಗ್ ಮತ್ತು ಆನ್‌ಲೈನ್ ಸುರಕ್ಷತೆ: ಮೊಬೈಲ್ ಫೋನ್‌ಗಳನ್ನು ವ್ಯಾಪಕವಾಗಿ ಬಳಸುವ ವಿದ್ಯಾರ್ಥಿಗಳು ಸೈಬರ್‌ಬುಲ್ಲಿಂಗ್, ಗೌಪ್ಯತೆ ಉಲ್ಲಂಘನೆ ಮತ್ತು ಸೂಕ್ತವಲ್ಲದ ವಿಷಯಕ್ಕೆ ಒಡ್ಡಿಕೊಳ್ಳುವುದು ಸೇರಿದಂತೆ ಆನ್‌ಲೈನ್ ಅಪಾಯಗಳಿಗೆ ಒಳಗಾಗುತ್ತಾರೆ. ಆನ್‌ಲೈನ್ ಸುರಕ್ಷತೆ ಮತ್ತು ಜವಾಬ್ದಾರಿಯುತ ಮೊಬೈಲ್ ಫೋನ್ ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಅತ್ಯಗತ್ಯ.
ಶಿಕ್ಷಣತಜ್ಞರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಲು ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಿದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಆಫ್‌ಲೈನ್ ಚಟುವಟಿಕೆಗಳು ಮತ್ತು ಮುಖಾಮುಖಿ ಸಂವಹನಗಳನ್ನು ನಡೆಸುವುದು ಅತ್ಯಗತ್ಯವಾದ ಕೆಲಸವಾಗಿದೆ.


Click it and Unblock the Notifications








