ಲೆನೊವೊದ ನವೀನ ತಂತ್ರಜ್ಞಾನ; ಡ್ಯುಯಲ್ ಡಿಸ್‌ಪ್ಲೇ ಲ್ಯಾಪ್‌ಟಾಪ್ ನೋಡಿ ವಾವ್ ಅಂತೀರ!
ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಈಗಾಗಲೇ ಹಲವಾರು ಭಿನ್ನ ವಿಭಿನ್ನ ರೀತಿಯ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಲ್ಲೂ ಫೋಲ್ಡಬಲ್ ಸ್ಮಾರ್ಟ್ ಡಿವೈಸ್‌ಗಳಿಗಂತೂ ಬೇಡಿಕೆ ಹೆಚ್ಚಾಗಿದೆ. ಹಾಗೆಯೇ ಡ್ಯುಯಲ್ ಡಿಸ್‌ಪ್ಲೇ ಇರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ನೀವು ಈಗಾಗಲೇ ತಿಳಿದುಕೊಂಡಿರಬಹುದು. ಇದೇ ಮಾದರಿ ಇನ್ಮುಂದೆ ಲ್ಯಾಪ್‌ಟಾಪ್‌ನಲ್ಲೂ ಕಾಣಿಸಿಕೊಳ್ಳಲಿದೆ.

ಹೌದು, ಸದ್ಯಕ್ಕೆ ನಮ್ಮ ಬಳಿ ಇರುವ ಲ್ಯಾಪ್‌ಟಾಪ್‌ಗಳಲ್ಲಿ ಒಂದು ಕಡೆ ಡಿಸ್‌ಪ್ಲೇ ಇನ್ನೊಂದು ಕಡೆ ಸಂಪೂರ್ಣವಾಗಿ ಕೀಪ್ಯಾಡ್ ವಿಭಾಗವನ್ನು ಕಾಣಬಹುದು. ಅದರಲ್ಲೂ ಇತ್ತೀಚೆಗಂತೂ ಫೋಲ್ಡಬಲ್ ಲ್ಯಾಪ್‌ಟಾಪ್ ಸಹ ಬಂದಿದ್ದು, ನವೀನ ತಂತ್ರಜ್ಞಾನದಿಂದ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಡುತ್ತಿವೆ. ಅದಾಗ್ಯೂ ಪ್ರಮುಖ ಸ್ಮಾರ್ಟ್ ಗ್ಯಾಜೆಟ್ ತಯಾರಿಕ ಸಂಸ್ಥೆಗಳಲ್ಲಿ ಒಂದಾದ ಲೆನೊವೊ ನೀವು ಈವರೆಗೂ ನಿರೀಕ್ಷಿಸದ ಸೌಲಭ್ಯದೊಂದಿಗೆ ವಿಶೇಷ ಲ್ಯಾಪ್‌ಟಾಪ್ ಪರಿಚಯಿಸುತ್ತಿದೆ.

ಲೆನೊವೊ ತನ್ನ ಲೆನೊವೊ ಯೋಗಾಬುಕ್ 9i 13 (Lenovo YogaBook 9i 13 ) ಅನ್ನು ಮುಂದಿನ ವರ್ಷದಲ್ಲಿ ಅನಾವರಣ ಮಾಡಲಿದ್ದು, ಈಗಾಗಲೇ ಇದರ ಕೆಲ ಫೀಚರ್ಸ್ ಲೀಕ್ ಆಗಿವೆ. ಫೀಚರ್ಸ್‌ಗಿಂತ ಲ್ಯಾಪ್‌ಟಾಪ್‌ನ ರಚನೆಯೇ ಹೆಚ್ಚು ಗಮನಸೆಳೆಯುತ್ತಿದ್ದು, ಟೆಕ್ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇನ್ನು ಈ ಡ್ಯುಯಲ್ ಡಿಸ್‌ಪ್ಲೇ ಲ್ಯಾಪ್‌ಟಾಪ್ ಅನ್ನು ಎರಡು ಭಾಗಗಳಾಗಿ ಫೋಲ್ಡ್ ಮಾಡಬಹುದಾಗಿದ್ದು, ಟ್ಯಾಬ್ಲೆಟ್ ಶೈಲಿಯಲ್ಲಿಯೂ ಇದನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇನ್ನು ಲೀಕ್ ಆದ ಮಾಹಿತಿ ಪ್ರಕಾರ ಈ ಲ್ಯಾಪ್‌ಟಾಪ್ ಲೈಟ್‌ಪೊಪ್ ಡಿವೈಸ್ ಥಿಂಕ್‌ಪ್ಯಾಡ್ X1 ಫೋಲ್ಡ್ ಲ್ಯಾಪ್‌ಟಾಪ್‌ನಂತೆಯೇ ಕಾಣಿಸಿಕೊಳ್ಳಲಿದ್ದು, ಡ್ಯುಯಲ್ 13 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಎರಡೂ ಕಡೆ ಡಿಸ್‌ಪ್ಲೇ ಇದೆ ಅಂದ ಮೇಲೆ ಕೀಬೋರ್ಡ್ ಎಲ್ಲಿರಲಿದೆ ಎನ್ನುವುದು ಸಾಮಾನ್ಯ ಪ್ರಶ್ನೆ. ಇನ್ನು ಫ್ರೀ-ಫ್ಲೋಟಿಂಗ್ ಕೀಬೋರ್ಡ್ ನೀಡಲಾಗಿದ್ದು, ಲ್ಯಾಪ್‌ಟಾಪ್‌ನಂತೆ ಅಥವಾ ಟ್ಯಾಬ್ಲೆಟ್ ಶೈಲಿಯಲ್ಲಿ ಫೋಲ್ಡ್ ಮಾಡಿದರೆ ಅದರಲ್ಲಿ ಮಧ್ಯ ಸ್ವಲ್ಪ ಸ್ಥಳ ಉಳಿದುಕೊಳ್ಳುತ್ತದೆ. ಅದರಲ್ಲಿ ಈ ಕೀಬೋರ್ಡ್ ಅನ್ನು ಇರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಸ್ಟೈಲಸ್ ಪೆನ್ ಆಯ್ಕೆ ಸಹ ಇದೆ ?
ಈ ಲ್ಯಾಪ್‌ಟಾಪ್ ನ ಶೈಲಿಯೇ ಹೆಚ್ಚು ಆಕರ್ಷಕ ಇದರ ನಡುವೆ ಸ್ಟೈಲಸ್ ಪೆನ್ ಆಯ್ಕೆಯನ್ನು ನೀಡುತ್ತಿರುವುದು ಇನ್ನೂ ಅತ್ಯಾಕರ್ಷಕ ಎಂದೇ ಹೇಳಬಹುದು. ಇದನ್ನು ಫೋಲ್ಡ್ ಮಾಡಿದಾಗ ಟ್ಯಾಬ್ಲೆಟ್ ರೀತಿಯಲ್ಲಿ ಬಳಕೆ ಮಾಡುವ ಅವಕಾಶ ಇರುವುದರಿಂದ ಸ್ಟೈಲಸ್ ಪೆನ್ ಆಯ್ಕೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಮುಖ ವಿಷಯ ಎಂದರೆ ಈ ಲ್ಯಾಪ್‌ಟಾಪ್‌ನ ಡ್ಯುಯಲ್ ಡಿಸ್‌ಪ್ಲೇ ವಿಷಯ ಹಾಗೂ ಕ್ಯಾಮೆರಾ ಮತ್ತು ಫೆಸ್ ಅನ್‌ಲಾಕ್ ಫಿಚರ್ಸ್ ಹೊರತುಪಡಿಸಿ ಉಳಿದ ಯಾವುದೇ ಮಾಹಿತಿ ಲೀಕ್ ಆಗಿಲ್ಲ. ಅದಾಗ್ಯೂ ಡಿವೈಸ್‌ನಲ್ಲಿ ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಇರುವಂತೆ ಕಂಡುಬರುತ್ತಿದೆ. ಜೊತೆಗೆ ಇದು ಗಮನ ಸೆಳೆಯುವ ಡಾರ್ಕ್ ಟರ್ಕೋಯಿಸ್ ಬಣ್ಣವನ್ನು ಹೊಂದಿರಲಿದ್ದು, ಇದೊಂದೇ ಬಣ್ಣದಲ್ಲಿ ಅಲ್ಲದೆ ಇತರೆ ಬಣ್ಣದ ಆಯ್ಕೆಯಲ್ಲಿಯೂ ಈ ಲ್ಯಾಪ್‌ಟಾಪ್ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಯಾವಾಗ ಲಭ್ಯ?
ಲೆನೊವೊದಾ ಈ ಹೊಸ ಲ್ಯಾಪ್‌ಟಾಪ್ ಅನ್ನು ನೀವು ಆದಷ್ಟು ಬೇಗ ಖರೀದಿ ಮಾಡಬಹುದು. ಯಾಕೆಂದರೆ ಮುಂದಿನ ವರ್ಷದ ಮೊದಲ ತಿಂಗಳ ಆರಂಭದಲ್ಲಿಯೇ ಈ ಲ್ಯಾಪ್‌ಟಾಪ್ ಅನಾವರಣದ ಬಗ್ಗೆ ಕಂಪೆನಿಯು ಮಾಹಿತಿ ನೀಡಲಿದೆ. ಅಂತೆಯೇ ಜನವರಿ 5 ರಿಂದ ಲಾಸ್ ವೇಗಾಸ್‌ನಲ್ಲಿ ಈವೆಂಟ್ ಜರುಗಲಿದ್ದು, ಅಲ್ಲಿ ಈ ಲ್ಯಾಪ್‌ಟಾಪ್ ಅನ್ನು ಪ್ರದರ್ಶನ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


Click it and Unblock the Notifications








