ನಾಳೆ ಚಂದ್ರಗ್ರಹಣ: ಖಗೋಳದಲ್ಲಿ ಅಪರೂಪದ ವಿದ್ಯಮಾನ ಗೋಚರ!
ಪ್ರಸಕ್ತ ವರ್ಷದ ಮೊದಲ ಚಂದ್ರಗ್ರಹಣ ನಾಳೆ (ಮೇ 26) ಸಂಭವಿಸಲಿದೆ. ಅದೇ ದಿನ ಸೂಪರ್ ಮೂನ್ ಹಾಗೂ ಬ್ಲಡ್ ಮೂನ್ ಎರಡೂ ವಿದ್ಯಮಾನವು ಗೋಚರವಾಗಲಿದೆ. ಹೀಗಾಗಿ ಈ ಅಪರೂಪದ ವಿದ್ಯಮಾನವನ್ನು ವೀಕ್ಷಿಸಿಲು ಖಗೋಳಾಸಕ್ತರು ಕುತೂಹಲದಿಂದ ಕಾಯುತ್ತಿದ್ದಾರೆ.

ಭಾರತದ ಈಶಾನ್ಯ ಭಾಗಗಳು (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 26 ರಂದು ಭಾಗಶಃ ಚಂದ್ರ ಗ್ರಹಣ ಗೋಚರಿಸುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿ ಇದು ಗೋಚರಿಸುತ್ತದೆ.

ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಎಲ್ಲಾ ಮೂರು ವಸ್ತುಗಳನ್ನು ಜೋಡಿಸಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಮತ್ತು ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ.

ಏನಿದು ಸೂಪರ್ ಮೂನ್ - ಬ್ಲಡ್ ಮೂನ್
ಭೂಮಿಯ ಸನಿಹಕ್ಕೆ ಚಂದ್ರ ಬಂದು ಎಂದಿಗಿಂತ ದೊಡ್ಡದಾಗಿ ಕಾಣುವುದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಇದು ಹುಣ್ಣಿಮೆಯ ದಿನ ಘಟಿಸುತ್ತದೆ. ಭೂಮಿಯ ನೆರಳು ಹುಣ್ಣಿಮೆಯ ದಿನ ಚಂದ್ರನ ಏಲೆ ಬಿದ್ದಾಗ ಚಂದ್ರ ಮರೆಯಾಗುತ್ತಾನೆ, ಇದನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಭೂಮಿಯ ಸಂಪೂರ್ಣ ನೆರಳಿನಿಂದ ಚಂದ್ರ ಆವೃತ್ತವಾಗಿ ಕೆಂಪುಬಣ್ಣ ಗೋಚರವಾದರೆ ಅದನ್ನು ಬ್ಲಡ್ ಮೂನ್ ಎಂದು ಕರೆಯುತ್ತಾರೆ.

ಯಾವಾಗ ಗೋಚರಿಸಲಿದೆ
ಗ್ರಹಣದ ಭಾಗಶಃ ಹಂತವು ಮಧ್ಯಾಹ್ನ 3.15 ರ ಸುಮಾರಿಗೆ ಪ್ರಾರಂಭವಾಗುತ್ತದೆ ಮತ್ತು 6.23ರವರೆಗೆ ಇರಲಿದೆ ಎಂದು ಸಚಿವಾಲಯ ತಿಳಿಸಿದೆ. ಸಂಜೆ 5.38ರಿಂದ ಪೋರ್ಟ್ ಬ್ಲೇರ್‌ನಿಂದ 45 ನಿಮಿಷಗಳ ಕಾಲ ಗ್ರಹಣ ವೀಕ್ಷಿಸಬಹುದು, ಸಂಜೆ 6.21ರಿಂದ ಪುರಿ ಮತ್ತು ಮಾಲ್ಡಾದಿಂದ ನೋಡಬಹುದು, ಆದರೆ ಎರಡು ನಿಮಿಷ ಮಾತ್ರ ಕಾಣಿಸುತ್ತದೆ. ಸಂಪೂರ್ಣ ಚಂದ್ರಗ್ರಹಣ ಸಂಜೆ 4.39ಕ್ಕೆ ಪ್ರಾರಂಭವಾಗಿ ಸಂಜೆ 4.58ಕ್ಕೆ ಕೊನೆಗೊಳ್ಳಲಿದೆ.

ಯಾವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳಲಿದೆ
ಫೆಸಿಫಿಕ್ ಸಾಗರದ ಮಧ್ಯಭಾಗ, ಆಸ್ಟ್ರೇಲಿಯಾ, ಏಷ್ಯಾದ ಪೂರ್ವ ಕರಾವಳಿ, ಅಮೆರಿಕದ ಪಶ್ಚಿಮ ಕರಾವಳಿ, ಈಶಾನ್ಯ ಭಾರತದಲ್ಲಿ ಚಂದ್ರಗ್ರಹಣ, ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ಕಾಣಿಸಲಿದೆ.

ಆನ್‌ಲೈನ್‌ನಲ್ಲಿ ವೀಕ್ಷಿಸಬಹುದೆ?
ಆನ್‌ಲೈನ್‌ನಲ್ಲಿ ಚಂದ್ರ ಗ್ರಹಣ ವೀಕ್ಷಿಸಬಹುದೆ? ಖಂಡಿತಾ ಆನ್‌ಲೈನ್‌ನಲ್ಲಿ ಚಂದ್ರ ಗ್ರಹಣ ನೇರ ದೃಶ್ಯಾವಳಿಗಳನ್ನು (Live) ವೀಕ್ಷಿಸಬಹುದಾಗಿದೆ. ಇದಕ್ಕೆ ಹಲವು ಲಿಂಕ್‌ಗಳು ಸಿಗುತ್ತವೆ.

ಮತ್ತೆ ಚಂದ್ರಗ್ರಹಣ ಯಾವಾಗ?
ಮುಂದಿನ ಚಂದ್ರಗ್ರಹಣವು ನವೆಂಬರ್ 19 ರಂದು ಭಾರತದಿಂದ ಗೋಚರಿಸುತ್ತದೆ ಮತ್ತು ಇದು ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಈಶಾನ್ಯ ಭಾಗಗಳಿಂದ ಚಂದ್ರೋದಯದ ನಂತರ ಭಾಗಶಃ ಹಂತದ ಅಂತ್ಯವು ಬಹಳ ಕಡಿಮೆ ಅವಧಿಗೆ ಗೋಚರಿಸುತ್ತದೆ.


Click it and Unblock the Notifications








