ಅನಾಮಿಕರು ಕಳುಹಿಸಿದ್ದ ಲಿಂಕ್ ಕ್ಲಿಕ್ ಮಾಡಿ 15 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ!
ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅದನ್ನು ದುರುಪಯೋಗ ಪಡಿಸಿಕೊಂಡು ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈ ಮೊದಲು ದೇಶದ ವಿವಿಧೆಡೆ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ, ಇದೀಗ ಕರ್ನಾಟಕದಲ್ಲಿ ಅದರಲ್ಲೂ ಮಂಗಳೂರಿನ ವ್ಯಕ್ತಿಯೋರ್ವರು ಬರೋಬ್ಬರಿ 15 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಹೌದು, ಈವರೆಗೂ ದೇಶದ ಹಾಗೂ ವಿದೇಶದಲ್ಲಿ ಸೈಬರ್ ಕಳ್ಳರು ಜನರಿಂದ ಲಕ್ಷ ಲಕ್ಷ ಹಣವನ್ನು ವಂಚಿಸುತ್ತಿದ್ದರು. ಆದರೆ, ಇದೀಗ ಕರ್ನಾಟಕದ ಮಂಗಳೂರಿನಲ್ಲಿ ಈ ರೀತಿಯ ಪ್ರಕರಣ ಬೆಳಕಿಗೆ ಬಂದಿದ್ದು, ಈ ಮೂಲಕ ನಾಡಿನ ಜನ ಎಚ್ಚೆತ್ತುಕೊಳ್ಳಬೇಕಿದೆ. ಹಾಗಿದ್ರೆ, ಯಾವ ರೀತಿಯಲ್ಲಿ ಸೈಬರ್ ಕಳ್ಳರು ಇವರನ್ನು ವಂಚಿಸಿದ್ದಾರೆ. ಈ ರೀತಿಯ ಘಟನೆಗಳು ಜರುಗದಂತೆ ನೀವು ಹೇಗೆ ಎಚ್ಚರಿಕೆ ವಹಿಸಬೇಕು ಎಂದು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.
ಸ್ಕ್ಯಾಮರ್‌ಗಳು ಕಳ್ಳ ಮಾರ್ಗದಲ್ಲಿ ಹಣ ಗಳಿಸುವ ಉದ್ದೇಶದಿಂದ ಜನರನ್ನು ಯಾವಾಗಲು ಮೋಸ ಮೋಸಗೊಳಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಇದರಲ್ಲಿ ಯಾರಾದರೂ ಅಮಾಯಕರು ಒಮ್ಮೆ ಇವರ ಬಲೆಗೆ ಬಿದ್ದರೆ ಅವರ ಬ್ಯಾಂಕ್‌ನಿಂದ ಹಣ ದೋಚುವ ಮೂಲಕ ಅವರ ಬ್ಯಾಂಕ್ ಖಾತೆಯಲ್ಲಿ ಹಣವೇ ಇಲ್ಲದಂತೆ ಮಾಡುತ್ತಾರೆ. ಈ ಪ್ರಕ್ರಿಯೆ ಕೇವಲ ಒಂದು ಲಿಂಕ್ ಕ್ಲಿಕ್‌ನಲ್ಲಿ ನಡೆಯುತ್ತದೆ ಎಂಬುದನ್ನು ನೀವು ನಂಬಲೇಬೇಕು.

ಮಂಗಳೂರಿನಲ್ಲಿ ವಾಸಿಸುವ ವ್ಯಕ್ತಿಗೆ ಅಪರಿಚಿತ ಸಂಖ್ಯೆಯಿಂದ ಮಾರ್ಚ್ 4 ರಂದು ಒಂದು ಎಸ್‌ಎಮ್‌ಎಸ್ ಬಂದಿದೆ. ಈ ಎಸ್‌ಎಮ್‌ಎಸ್‌ನಲ್ಲಿ ಅರೆಕಾಲಿಕ ಹುದ್ದೆಯ ಭರವಸೆ ನೀಡಲಾಗಿತ್ತಂತೆ. ಇದನ್ನು ನಂಬಿದ ಅವರು ಬಂದಿದ್ದ ಮೆಸೆಜ್ ನಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ. ಆ ವೇಳೆ ಟೆಲಿಗ್ರಾಮ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ತಿಳಿಸಿ ಅದರ ಮೂಲಕ ಮತ್ತೊಂದು ಮಾರ್ಗದಲ್ಲಿ ಇವರಿಗೆ ಮೋಸ ಮಾಡಿದ್ದಾರೆ.
ಟೆಲಿಗ್ರಾಮ್‌ನಲ್ಲಿ ಹಣ ದ್ವಿಗುಣಗೊಳಿಸುವ ಆಸೆಯನ್ನು ತೋರಿಸಿದ ಅನಾಮಿಕರು ಆರಂಭದಲ್ಲಿ 150 ರೂ. ಗಳನ್ನು ಪಡೆದುಕೊಂಡಿದ್ದಾರೆ. ಇದಾದ ನಂತರ 2,000 ರೂ. ಗಳನ್ನು ಪಡೆದಿದ್ದಾರೆ. ಇದಾದ ಕೆಲವು ದಿನಗಳಲ್ಲಿ ಸಂತ್ರಸ್ತರಿಗೆ 2,800 ರೂ. ಗಳನ್ನು ಹಿಂದುರುಗಿಸಿದ್ದಾರೆ. ಇದರಿಂದ ಆ ಅನಾಮಿಕ ವ್ಯಕ್ತಿಗಳನ್ನು ನಂಬಿದ ಇವರು ದೊಡ್ಡ ಮೊತ್ತದ ಹಣ ನೀಡಲು ಮುಂದಾಗಿದ್ದಾರೆ.
ಇದಾದ ಬಳಿಕ ನಿಮ್ಮ ಹೆಸರಲ್ಲಿ ಒಂದು ಖಾತೆಯನ್ನು ತೆರೆಯಬೇಕು. ಹೀಗಾಗಿ ನಾವು ಕಳುಹಿಸುವ ಲಿಂಕ್ ಮೂಲಕ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಕಳುಹಿಸಿ ಎಂದು ತಿಳಿಸಿದ್ದಾರೆ. 2,800 ರೂ. ಗಳು ಬಂದಿದ್ದ ಖುಷಿಯಲ್ಲಿದ್ದ ಇವರು ಅನಾಮಿಕ ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿ ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ತಪ್ಪಿಲ್ಲದೆ ಭರ್ತಿ ಮಾಡಿದ್ದಾರೆ. ಇದಾದ ನಂತರ ಅವರ ಬ್ಯಾಂಕ್ ನಿಂದ 15.34 ಲಕ್ಷ ಗಳನ್ನು ಕಳೆದುಕೊಂಡಿದ್ದಾರೆ.

ಇದೇ ರೀತಿಯ ಘಟನೆ ಕಳೆದ ತಿಂಗಳು ಮಂಗಳೂರಿನ ಮತ್ತೊಬ್ಬ ವ್ಯಕ್ತಿಗೆ ಆಗಿದ್ದು, ಅವರು ಸಹ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಇವರಿಗೂ ಅಪರಿಚಿತ ಸಂಖ್ಯೆಯಿಂದ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಹಣ ಗಳಿಸಬಹುದು ಎಂಬ ಸಂದೇಶ ಬಂದಿದೆ. ಇದರ ಬಗ್ಗೆ ವಿಚಾರಿಸಿದಾಗ ಟೆಲಿಗ್ರಾಮ್ ಚಾನೆಲ್‌ಗೆ ಸೇರಲು ಅನಾಮಿಕರು ಕೇಳಿಕೊಂಡಿದ್ದಾರೆ. ಈ ಮೂಲಕ ಕಳ್ಳರು ಹೆಣೆದ ಬಲೆಗೆ ವ್ಯಕ್ತಿ ಬಿದ್ದಿದ್ದಾರೆ.
ಇದಾದ ನಂತರ ನೋಂದಣಿಯಾಗಿ 9,000 ರೂ. ಗಳನ್ನು ಪಡೆದ ಅನಾಮಿಕರು ಕೆಲವು ದಿನಗಳ ನಂತರ ಆ ಹಣವನ್ನು ವಾಪಸ್ ಮಾಡಿದ್ದಾರೆ. ಇದರಿಂದ ಅನಾಮಿಕರ ಬಗ್ಗೆ ಹೆಚ್ಚಿನ ನಂಬಿಕೆ ಹುಟ್ಟಿಸಿಕೊಂಡ ಇವರು ಅನಾಮಿಕರು ಕಳುಹಿಸಿದ ಲಿಂಕ್‌ನಲ್ಲಿ ಬೇಕಾದ ಎಲ್ಲಾ ಬ್ಯಾಂಕಿಂಗ್ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ 18.43 ಲಕ್ಷ ಹಣ ಕಳೆದುಕೊಂಡಿದ್ದಾರೆ. ದುರಂತ ಎಂದರೆ ಒಮ್ಮೆ ಈ ರೀತಿಯಲ್ಲಿ ಕಳೆದುಕೊಂಡ ಹಣವನ್ನು ವಾಪಸ್ ಪಡೆದುಕೊಳ್ಳುವುದು ದೊಡ್ಡ ಕಷ್ಟದ ಕೆಲಸವಾಗಲಿದೆ.

ಈ ಎಲ್ಲಾ ಘಟನೆಗಳು ನಿಮಗೆ ಎಚ್ಚರಿಗೆ ಘಂಟೆಗಳಾಗಿದ್ದು, ಈ ಮೂಲಕ ನಿಮ್ಮ ಫೋನ್‌ಗೆ ಬರುವ ಯಾವುದೇ ಅನಾಮಿಕ ಕರೆ ಅಥವಾ ಮೋಸಗೊಳಿಸುವ ಸಂದೇಶಗಳನ್ನು ನಂಬಬೇಡಿ. ಅಕಸ್ಮಾತ್ ಅದು ನಂಬಿಕೆಗೆ ಅರ್ಹ ಎಂದು ನಿಮಗನಿಸಿ ಅವರು ಕೇಳಿದ ಮಾಹಿತಿ ನೀಡಿದ್ದೀರಾ ಎಂದಾದರೆ ಒಮ್ಮೆ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ಬಗ್ಗೆ ವಿಚಾರಿಸಿ. ಅದೂ ಸಾಧ್ಯವಾಗಲಿಲ್ಲ ಎಂದರೆ ಆನ್‌ಲೈನ್ ಮೂಲಕವೇ ಈ ರೀತಿಯ ಸೈಬರ್ ವಂಚನೆ ಬಗ್ಗೆ ದೂರು ನೀಡಬಹುದು.


Click it and Unblock the Notifications








