ಆನ್‌ಲೈನ್‌ನಲ್ಲಿ ಹೋಟೆಲ್, ವಿಮಾನ ಬುಕ್ ಮಾಡುವವರೇ ಎಚ್ಚರ; ನಿಮ್ಮ ಖಾತೆ ಖಾಲಿಯಾಗುತ್ತೆ!
ಆನ್‌ಲೈನ್‌ನಲ್ಲಿ ವಿಮಾನ, ಬಸ್ ಮತ್ತು ಹೋಟೆಲ್‌ಗಳನ್ನು ಬುಕ್ ಮಾಡುವುದು ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಈ ಮೂಲಕ ತುಂಬಾ ಸುಲಭವಾಗಿ ತಮಗೆ ಬೇಕಾದ ಅಗತ್ಯ ಸೇವೆಗಳನ್ನು ರಿಯಾಯಿತಿ ದರದಲ್ಲಿ ಜನರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ನೀವೇನಾದರೂ ಆಲ್‌ಲೈನ್‌ನಲ್ಲಿ ಹೋಟೆಲ್,ವಿಮಾನ ಬುಕ್ ಮಾಡುತ್ತಿದ್ದೀರಿ ಎಂದಾದರೆ ಈ ಸುದ್ದಿ ಗಮನಿಸಿ.
ಹೌದು, ಭಾರತದಲ್ಲಿ ಶೇ. 51ರಷ್ಟು ಭಾರತೀಯರು ಆನ್‌ಲೈನ್ ಡೀಲ್‌ಗಳನ್ನು ಸರ್ಚ್ ಮಾಡುತ್ತಿರುತ್ತಾರೆ. ಅದರಲ್ಲೂ ಬುಕಿಂಗ್ ಪ್ರಕ್ರಿಯೆಯಲ್ಲಿ ಹಣವನ್ನು ಉಳಿಸಲು ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ. ಆದರೆ, ಮ್ಯಾಕ್‌ಅಫೀ ವರದಿಯೊಂದನ್ನು ಬಹಿರಂಗಪಡಿಸಿದ್ದು, ಈ ವರದಿಯಲ್ಲಿ ಏನಿದೆ ಎಂದು ನೀವೇನಾದರೂ ತಿಳಿದುಕೊಂಡರೆ ಖಂಡಿತಾ ಶಾಕ್ ಅಗ್ತೀರಾ. ಹಾಗಿದ್ರೆ, ಬನ್ನಿ ಆನ್‌ಲೈನ್ ಮೂಲಕ ವಿಮಾನ ಹಾಗೂ ಹೋಟೆಲ್ ಬುಕ್ ಮಾಡುವವರು ಹೇಗೆಲ್ಲಾ ಮೋಸ ಹೋಗುತ್ತಾರೆ ಎನ್ನುವುದನ್ನು ತಿಳಿಯೋಣ.

ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಯೋಚಿಸಿ: ನೀವು ನಿಮ್ಮ ಮುಂದಿನ ಪ್ರವಾಸವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಚಿಂತನೆ ನಡೆಸುತ್ತಿದ್ದರೆ ಖಂಡಿತಾ ಒಳ್ಳೆಯ ವಿಷಯ. ನಿಮ್ಮಿಷ್ಟದ ಪ್ರವಾಸಿ ಸ್ಥಳಗಳಿಗೆ ಹೋಗಿ ಬನ್ನಿ. ಆದರೆ, ಈ ವೇಳೆ ನಿಮಗೆ ಸಿಕ್ಕಿರುವ ಡೀಲ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕಿದೆ. ಯಾಕೆಂದರೆ ಭಾರತದಲ್ಲಿ ಆನ್‌ಲೈನ್ ಟ್ರಾವೆಲ್ ಬುಕ್ಕಿಂಗ್ ವಂಚನೆಗಳು ಹೆಚ್ಚಾಗುತ್ತಿವೆ.
ಇನ್ನು ಆನ್‌ಲೈನ್ ಪ್ರಯಾಣ ಬುಕಿಂಗ್ ಪ್ರಕ್ರಿಯೆಯಲ್ಲಿ ಶೇ.51 ರಷ್ಟು ಪ್ರಯಾಣಿಕರು ಈಗಾಗಲೇ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಮ್ಯಾಕ್‌ಅಫೀಯ ಹೊಸ ವರದಿ ಬಹಿರಂಗಪಡಿಸಿದೆ. ಈ ವರದಿಯಲ್ಲಿ ಆನ್‌ಲೈನ್ ಪ್ರಯಾಣ ಬುಕಿಂಗ್‌ಗೆ ಸಂಬಂಧಿಸಿದ ಸುರಕ್ಷತೆಯ ಅಪಾಯಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಅದರಲ್ಲೂ ವಿದೇಶ ಪ್ರವಾಸಕ್ಕಾಗಿ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡುವಾಗ ನೀವು ದೊಡ್ಡ ಮಟ್ಟದಲ್ಲೇ ಎಚ್ಚರಿಕೆ ವಹಿಸಬೇಕಿದೆ.
ಮ್ಯಾಕ್‌ಅಫೀ ವರದಿಯಲ್ಲೇನಿದೆ?: ಭಾರತದ 1,000 ಜನರು ಸೇರಿದಂತೆ ಏಳು ದೇಶಗಳಲ್ಲಿ 7,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು,'ಸುರಕ್ಷಿತ ರಜಾದಿನಗಳು' ಎಂಬ ವಿಷಯದ ಮೇಲೆ ಮಾಹಿತಿ ಕಲೆ ಹಾಕಲಾಗಿದೆ. ಈ ಸಮೀಕ್ಷೆಯಲ್ಲಿ ತಿಳಿದುಬಂದ ಅಚ್ಚರಿ ವಿಷಯ ಏನೆಂದರೆ ಭಾರತೀಯ ಪ್ರಯಾಣಿಕರು ಆನ್‌ಲೈನ್ ವಂಚನೆಗಳಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ ಎಂಬುದು. ಜೊತೆಗೆ ಅವರು ಡಿಜಿಟಲ್ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು.
ಪ್ರಯಾಣಕ್ಕೂ ಮುನ್ನ ಹಣ ಕಳೆದುಕೊಂಡ ಹಲವು ಜನರು: ಹಣ ಕಳೆದುಕೊಂಡ ಪ್ರಯಾಣಿಕರಲ್ಲಿ ಶೇ. 34 ರಷ್ಟು ಜನರು ತಮ್ಮ ಪ್ರವಾಸವನ್ನು ಪ್ರಾರಂಭಿಸುವ ಮೊದಲೇ ಸುಮಾರು 83,000 ರೂ.ವರೆಗೆ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಶೇ. 30 ರಷ್ಟು ವಯಸ್ಕರೇ ಈ ಸ್ಕ್ಯಾಮರ್‌ಗಳ ಬಲೆಗೆ ಬಿದ್ದಿದ್ದಾರೆ. ಹಣವನ್ನು ಉಳಿಕೆ ಮಾಡಲು ಹೋಗಿ ಅನಗತ್ಯ ಲಿಂಕ್ ಮೂಲಕ ಇವರು ಇರುವ ಹಣವನ್ನೂ ಕಳೆದುಕೊಂಡಿರುವುದು ದುರಂತ.

ಮೋಸದ ಪ್ಲಾಟ್‌ಫಾರ್ಮ್‌ಗಳು: ಹಾಗಿದ್ರೆ, ಆನ್‌ಲೈನ್ ಟ್ರಾವೆಲ್ ಬುಕಿಂಗ್‌ನಲ್ಲಿ ಸ್ಕ್ಯಾಮರ್‌ಗಳು ಜನರನ್ನು ಹೇಗೆ ಮರುಳು ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಖಂಡಿತಾ ಮೂಡಿರುತ್ತದೆ. ಬನ್ನಿ ಆ ವಿವರವನ್ನೂ ತಿಳಿಯೋಣ. ಇನ್ನು ವಂಚಕರು ಜನರನ್ನು ಮೋಸಗೊಳಿಸುವ ವಿವಿಧ ಬಲೆಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಸಮೀಕ್ಷೆಗೆ ಒಳಗಾದ ಭಾರತೀಯ ವಯಸ್ಕರಲ್ಲಿ ಶೇ.27ರಷ್ಟು ಜನರು ಮೋಸದ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಹಣ ಕಳೆದುಕೊಂಡಿದ್ದಾರೆ.
ಕಾನೂನುಬದ್ಧ ಪ್ಲಾಟ್‌ಫಾರ್ಮ್‌ಗಳಂತೆ ಕಾಣಿಸಿಕೊಳ್ಳುವ ವೆಬ್‌ಸೈಟ್‌ಗಳು ಜನರನ್ನು ಸುಲಭವಾಗಿ ನಂಬುವಂತೆ ಮಾಡುತ್ತಿದ್ದು, ಈ ಮೂಲಕ ಜನರು ತಮ್ಮ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳುತ್ತಾರೆ. ಇದಕ್ಕಾಗಿಯೇ ಬಕಪಕ್ಷಿಗಳಂತೆ ಕಾಯುತ್ತ ಕುಳಿತ್ತಿರುವ ಸ್ಕ್ಯಾಮರ್‌ಗಳ ಬಳಕೆದಾರರಿಂದ ಹಣವನ್ನು ಪಡೆದು ಅವರಿಗೆ ಮೋಸ ಮಾಡುತ್ತಿದ್ದಾರೆ.
ಖಾಸಗಿ ಮಾಹಿತಿ ಕದ್ದಿರುವ ಸ್ಕ್ಯಾಮರ್‌ಗಳು: ಅದರಲ್ಲೂ ಈ ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯಲ್ಲಿ ಮೋಸ ಹೋಗಿರುವ ಶೇ.36 ರಷ್ಟು ಜನರು ತಮ್ಮ ಖಾಸಗಿ ಮಾಹಿತಿಯನ್ನೂ ಕದಿಯಲಾಗಿದೆ ಎಂದು ದೂರಿದ್ದಾರೆ. ಅಂದರೆ ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯಲ್ಲಿ ಪ್ರಯಾಣಿಕರು ತಮ್ಮ ವೈಯಕ್ತಿಕ ಮಾಹಿತಿಯನ್ನು ನಕಲಿ ವೆಬ್‌ಸೈಟ್‌ಗಳಲ್ಲಿ ನಮೂದಿಸಿದ ಹಿನ್ನೆಲೆ ಸ್ಕ್ಯಾಮರ್‌ಗಳು ಅವರ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ಫಿಶಿಂಗ್ ಇಮೇಲ್ ಗಳ ಮೂಲಕ ದುರುದ್ದೇಶಪೂರಿತ ಲಿಂಕ್‌ಗಳು ಅಥವಾ ಲಗತ್ತುಗಳನ್ನು ಕಳುಹಿಸುತ್ತಿದ್ದಾರಂತೆ.
ಇದರಲ್ಲಿ ಬೆಚ್ಚಿ ಬೀಳಿಸುವ ಸಂಗತಿ ಎಂದರೆ ಬುಕ್ಕಿಂಗ್‌ಸಂದರ್ಭದಲ್ಲಿ ಸುಮಾರು ಶೇ.13 ರಷ್ಟು ಜನರು ತಮ್ಮ ಪಾಸ್‌ಪೋರ್ಟ್ ಮಾಹಿತಿಯನ್ನು ಮೋಸದ ವೆಬ್‌ಸೈಟ್‌ಗಳೊಂದಿಗೆ ಹಂಚಿಕೊಂಡಿದ್ದಾರಂತೆ. ಜೊತೆಗೆ ಶೇ.23 ರಷ್ಟು ಜನರು ಈ ಮೋಸದ ವೆಬ್‌ಸೈಟ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ಮಾಹಿತಿಯನ್ನು ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನುವುದು. ಈ ಮೂಲಕ ದೊಡ್ಡ ದೊಡ್ಡ ವ್ಯಕ್ತಿಗಳನ್ನೇ ಸ್ಕ್ಯಾಮರ್‌ಗಳು ಹಳ್ಳಕ್ಕೆ ಕೆಡವಿದ್ದಾರೆ.
ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳು: ಈ ರೀತಿಯ ವಂಚನೆಗಳಿಗೆ ಪ್ರಯಾಣಿಕರನ್ನು ಗುರಿಯಾಗಿಸುವ ಅಪಾಯಕಾರಿ ಬೆಳವಣಿಗೆಯಲ್ಲಿ ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳು ಪ್ರಮುಖ ಪಾತ್ರ ವಹಿಸುತ್ತವಂತೆ. ಸಮೀಕ್ಷೆಗೆ ಒಳಗಾದ ಶೇ.38 ರಷ್ಟು ಪ್ರಯಾಣಿಕರು ತಮ್ಮ ಡಿವೈಸ್‌ಗಳಲ್ಲಿ ಉಚಿತ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಲ್ಲೇನಿದೆ ಮೋಸ ಎಂದುಕೊಳ್ಳಬೇಡಿ. ಯಾಕೆಂದರೆ ಸ್ಕ್ಯಾಮರ್‌ಗಳು ಸಂಪರ್ಕಿತ ಡಿವೈಸ್‌ಗಳನ್ನು ಹ್ಯಾಕ್ ಮಾಡಲು ಮತ್ತು ಮಾಹಿತಿಯನ್ನು ಕದಿಯಲು ಇವುಗಳನ್ನು ಬಳಕೆ ಮಾಡುತ್ತಾರೆ.

ಲಾಗ್ ಇನ್ ಆಗಿರುವ ಖಾತೆಗಳನ್ನು ಹಾಗೆಯೇ ಬಿಡುವುದು: ಇನ್ನು ನೀವು ತಂಗಿದ್ದ ಹೋಟೆಲ್‌ನಲ್ಲಿ ಟಿವಿಗಳಲ್ಲಿ ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯನ್ನು ಲಾಗ್ ಇನ್ ಮಾಡಿದ ನಂತರ ಹೋಟೆಲ್ ಬಿಡುವಾಗ ಕಡ್ಡಾಯವಾಗಿ ಲಾಗೌಟ್ ಮಾಡಿ. ಈ ಪ್ರಕ್ರಿಯೆ ಸಹ ಸಂಭಾವ್ಯ ವಂಚನೆಗಳಿಗೆ ಕಾರಣವಾಗಬಹುದು. ಸ್ಕ್ಯಾಮರ್‌ಗಳು ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರವೇಶಿಸಲು ನಿಮ್ಮ ಈ ಲಾಗಿನ್ ಮಾಹಿತಿಯನ್ನು ಬಳಕೆ ಮಾಡಿಕೊಳ್ಳುತ್ತಾರೆ. ಅದರಂತೆ ಶೇ.29 ರಷ್ಟು ಜನರು ತಮ್ಮ ಖಾತೆಗಳನ್ನು ಲಾಗೌಟ್ ಮಾಡಲು ಮರೆತಿದ್ದಾರಂತೆ.
ಇನ್ನು ಆನ್‌ಲೈನ್ ಮೂಲಕ ಈ ರೀತಿಯ ವಂಚನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಸರಳ ಸಲಹೆಗಳನ್ನು ಪಾಲಿಸಿ. ಮೊದಲು ಇಮೇಲ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡುವುದನ್ನು ತಪ್ಪಿಸಿ. ಅಂದರೆ ಎಲ್ಲಾ ಇಮೇಲ್‌ಗಳನ್ನಲ್ಲ ಬದಲಾಗಿ ನಿಮಗೆ ಅನುಮಾನಾಸ್ಪದವಾಗಿ ಕಂಡುಬಂದರೆ ಅಥವಾ ಅಪರಿಚಿತ ಮೂಲಗಳಿಂದ ಬಂದಿದ್ದರೆ ಮಾತ್ರ. ಜೊತೆಗೆ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸುವಾಗ ಜಾಗರೂಕರಾಗಿರಿ.


Click it and Unblock the Notifications








