Instagram: ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೀಚರ್ಸ್! ಇನ್ಮುಂದೆ ಆ ತರಹದ ಫೋಟೋಗಳೆಲ್ಲಾ ಬ್ಲರ್..
ಸಾಮಾಜಿಕ ಮಾಧ್ಯಮಗಳ ಲಿಸ್ಟ್‌ನಲ್ಲಿ ಇನ್‌ಸ್ಟಾಗ್ರಾಮ್ (Instagram) ಸಹ ಪ್ರಮುಖವಾಗಿದೆ. ಮಿಲಿಯನ್‌ಗಟ್ಟಲೆ ಜನರು ಈ ಪ್ಲಾಟ್‌ಫಾರ್ಮ್ ಅನ್ನು ಬಳಕೆ ಮಾಡುತ್ತಿದ್ದು, ಈ ನಡುವೆ ಕೆಲವು ಬಳಕೆದಾರರು ಈ ಪ್ಲಾಟ್‌ಫಾರ್ಮ್ ಮೂಲಕವೇ ಜನಪ್ರಿಯತೆ ಪಡೆಯುತ್ತಿರುವುದು ನಮ್ಮ ಕಣ್ಣ ಮುಂದಿರುವ ಸತ್ಯ.
ಹೌದು, ಇನ್‌ಸ್ಟಾಗ್ರಾಮ್ ಅನ್ನು ಹೆಚ್ಚು ಸುರಕ್ಷಿತವಾಗಿಸುವ ಕಾರಣಕ್ಕೆ ಮೆಟಾ ವಿವಿಧ ಫೀಚರ್ಸ್ ಆಯ್ಕೆಯನ್ನು ಈಗಾಗಲೇ ನೀಡಿದೆ. ಈ ನಡುವೆ ನಗ್ನತೆಗೆ ಸಂಬಂಧಿಸಿದಂತೆ ಹೊಸ ಫೀಚರ್ಸ್ ಆಯ್ಕೆಯನ್ನು ನೀಡುತ್ತಿದ್ದು, ಇದು ಅಪೇಕ್ಷಿಸದ ನಗ್ನತೆ ಮತ್ತು ವಂಚನೆಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಹಾಗಿದ್ರೆ, ಈ ಟೂಲ್ಸ್ ಹೇಗೆ ಕೆಲಸ ಮಾಡಲಿದೆ?, ಇದನ್ನು ಯಾಕೆ ಘೋಷಣೆ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಸೌಲಭ್ಯ: ಇನ್‌ಸ್ಟಾಗ್ರಾಮ್‌ನಲ್ಲಿ ಯುವ ಪೀಳಿಗೆಯನ್ನು ರಕ್ಷಿಸಲು ಮತ್ತು ಲೈಂಗಿಕತೆಗೆ ಸಂಬಂಧಿಸಿದ ಕೆಟ್ಟ ವಿಚಾರಗಳಿಗೆ ಬಲಿಯಾಗುವುದನ್ನು ತಡೆಯಲು ನವೀನ ಕ್ರಮಗಳನ್ನು ಪರಿಚಯಿಸುತ್ತಿದೆ. ಅದರಲ್ಲೂ ಖಾಸಗಿ ಮೆಸೆಜ್‌ಳಲ್ಲಿ ಏನಾದರೂ ನಗ್ನತೆಯ ಫೋಟೋ ಅಥವಾ ಇನ್ನೇನಾದರೂ ಮೆಸೆಜ್ ಇದ್ದರೆ ಅದು ಆಟೋಮ್ಯಾಟಿಕ್ ಆಗಿ ನ್ಯುಡಿಟಿ ಪ್ರೊಟೆಕ್ಸನ್ ಫೀಚರ್ಸ್ ಬ್ಲರ್ ಮಾಡುವ ಕೆಲಸ ಮಾಡುತ್ತದೆ. ಲೈಂಗಿಕ ವಂಚನೆಯನ್ನು ತಡೆಯಲು ಈ ದೃಶ್ಯ ಶೋಷಣೆಯ (Visual exploitation) ವಿವಿಧ ರೂಪಗಳನ್ನು ಪರಿಹರಿಸುವ ಭಾಗವಾಗಿ ಈ ಟೂಲ್ಸ್ ಅನ್ನು ಪ್ರಯೋಗಿಸುವುದಾಗಿ ಕಂಪನಿ ಹೇಳಿಕೊಂಡಿದೆ.
ಇನ್ನು ಲೈಂಗಿಕ ಬ್ಲ್ಯಾಕ್‌ಮೇಲ್‌ನ ಭಾಗವಾಗಿ ಸೆಕ್ಸ್‌ಟಾರ್ಶನ್ (Sextortion) ಸಹ ಪ್ರಮುಖವಾಗಿ. ವ್ಯಕ್ತಿಗಳನ್ನು ಆನ್‌ಲೈನ್‌ನಲ್ಲಿ ಅಶ್ಲೀಲ ಫೋಟೋಗಳನ್ನು ಸಲ್ಲಿಸುವಂತೆ ಒತ್ತಾಯಿಸುವುದನ್ನು ಇದು ಒಳಗೊಂಡಿರುತ್ತದೆ. ನಂತರ ಹಣ ಕೊಡದಿದ್ದರೆ ನಿನ್ನ ಮಾನಹಾನಿ ಮಾಡಲಾಗುತ್ತದೆ ಎಂದು ಬೆದರಿಕೆ ಹಾಕಲಾಗುತ್ತದೆ. ಅಷ್ಟೇ ಅಲ್ಲದೆ ಈಗಾಗಲೇ ನೀವು ಲೋನ್ ಆಪ್ ವಿಚಾರದಲ್ಲಿ ಈ ರೀತಿಯ ಸಮಸ್ಯೆ ಎದುರಿಸಿರುವ ವ್ಯಕ್ತಿಗಳ ವರದಿಗಳನ್ನು ಗಮನಿಸಿರಬಹುದು.

ನ್ಯುಡಿಟಿ ಪ್ರೊಟೆಕ್ಸನ್ ಫೀಚರ್ಸ್ ಹೇಗೆ ಕೆಲಸ ಮಾಡಲಿದೆ?: ಇನ್‌ಸ್ಟ್ರಾಗ್ರಾಮ್ ಪರಿಚಯಿಸುತ್ತಿರುವ ಟೂಲ್ಸ್‌ನಲ್ಲಿ ಈ ನ್ಯುಡಿಟಿ ಪ್ರೊಟೆಕ್ಸನ್ ಫೀಚರ್ಸ್ ಪ್ರಮುಖವಾಗಿದೆ. ಇದು ಬೆತ್ತಲೆ ಫೋಟೋಗಳನ್ನು ತಂತಾನೆ ಬ್ಲರ್ ಮಾಡುವ ಸಾಮರ್ಥ್ಯ ಪಡೆದಿದೆ. ಅಲ್ಲದೆ ಅಂತಹ ಫೋಟೋಗಳನ್ನು ಯಾರೊಂದಿಗಾದರೂ ಶೇರ್ ಮಾಡಿಕೊಳ್ಳುವಾಗಲೂ ಮೊದಲು ಮರುಪರಿಶೀಲಿಸುವಂತೆ ಬಳಕೆದಾರರನ್ನು ಪ್ರೇರೇಪಿಸುತ್ತದೆ.
ಈ ಫೀಚರ್ಸ್ ಅನ್ನು ಜಾಗತಿಕವಾಗಿ 18 ವರ್ಷದೊಳಗಿನವರಿಗೆ ಪೂರ್ವನಿಯೋಜಿತವಾಗಿ ಆನ್ ಮಾಡಲಾಗಿದ್ದು, ವಯಸ್ಕರು ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಲು ಪ್ರಾಂಪ್ಟ್‌ಗಳನ್ನು ಪಡೆಯಬಹುದಾಗಿದೆ. ಇನ್ನು ಈ ಟೂಲ್ಸ್ ನಗ್ನ ಚಿತ್ರಗಳನ್ನು ಪತ್ತೆಹಚ್ಚಲು ಬಳಕೆದಾರರ ಡಿವೈಸ್‌ನಲ್ಲಿ ಸಂಪೂರ್ಣವಾಗಿ ಚಾಲನೆಯಲ್ಲಿರುವ ಕೃತಕ ಬುದ್ಧಿಮತ್ತೆಯನ್ನು (AI) ಬಳಕೆ ಮಾಡುತ್ತದೆ ಎಂದು ಎಂದು ವರದಿಯಾಗಿದೆ.
ಇಷ್ಟೇ ಅಲ್ಲದೆ ಈ ಫೀಚರ್ಸ್ ಬಳಕೆದಾರರನ್ನು ಅಪೇಕ್ಷಿಸದ ನಗ್ನತೆಯಿಂದ ರಕ್ಷಿಸುವ ಗುರಿಯನ್ನು ಹೊಂದಿದ್ದು, ನಗ್ನ ಫೋಟೋಗಳ ವಿನಿಮಯವನ್ನು ಹೊಂದಿರುವ ಹಗರಣದ ಪ್ರಯತ್ನಗಳನ್ನು ತಡೆಯುವ ಕೆಲಸ ಮಾಡುತ್ತದೆ. ಹಾಗೆಯೇ ಬಳಕೆದಾರರಿಗೆ ಅವುಗಳನ್ನು ವೀಕ್ಷಿಸಲು, ಕಳುಹಿಸುವವರನ್ನು ನಿರ್ಬಂಧಿಸಲು ಅಥವಾ ಸಂವಾದವನ್ನು ವರದಿ ಮಾಡಲು ಆಯ್ಕೆಯನ್ನು ನೀಡುತ್ತದೆ.

ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್: ಇನ್ನು ಈಗಾಗಲೇ ಈ ರೀತಿಯ ವಂಚನೆಗೆ ಸಾಕಷ್ಟು ಹದಿಹರೆಯದವರು ಬಲಿಯಾಗಿದ್ದಾರೆ. ಈ ಕಾರಣಕ್ಕೆ ಮೆಟಾ ಪ್ಲಾಟ್‌ಫಾರ್ಮ್‌ಗಳ ಸಿಇಓ ಮಾರ್ಕ್ ಜುಕರ್‌ಬರ್ಗ್, ಸೆನೆಟ್ ಸಾಕ್ಷ್ಯದ ಸಮಯದಲ್ಲಿ ಪೀಡಿತ ಕುಟುಂಬಗಳಿಗೆ ಕ್ಷಮೆಯಾಚನೆ ಮಾಡಿದ್ದಾರೆ. ಏನೇ ಆದರೂ ಯಾವುದೇ ಇಂಟರ್ನೆಟ್ ಆಧಾರಿತ ಪ್ಲಾಟ್‌ಫಾರ್ಮ್ ಅನ್ನು ಬಳಕೆ ಮಾಡುವಾಗ ನಮ್ಮದೇ ಆದ ಜಾಗೃತಿ ಅಗತ್ಯ ಇರಲೇಬೇಕಾಗುತ್ತದೆ.
ಈ ಕಾರಣಕ್ಕೆ ಪೋಷಕರು ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡುವಾಗ ಈ ರೀತಿಯ ವಿಷಯಗಳ ಬಗ್ಗೆ ಮುಕ್ತವಾಗಿ ಮಾಹಿತಿ ನೀಡಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಅವರು ಮುಂದೆ ಈ ರೀತಿಯ ಸಮಸ್ಯೆಗಳಿಗೆ ಸಿಲುಕಿ ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುವ ಹಂತಕ್ಕೆ ತಲುಪಬಹುದು. ಅದರ ಬದಲಾಗಿ ನೀವೇ ಅವರಿಗೆ ಇಂತಹ ವಿಷಯಗಳು ಅದರಲ್ಲೂ ಸ್ಕ್ಯಾಮರ್‌ಗಳು ಹೇಗೆಲ್ಲಾ ವಂಚನೆ ಮಾಡುವ ಕೆಲಸ ಮಾಡುತ್ತಾರೆ ಅನ್ನೋದನ್ನು ವಿವರಿಸಿ. ಜೊತೆಗೆ ನಿಮ್ಮ ಮಕ್ಕಳು ಫೋನ್ ಪಡೆದು ಏನೆಲ್ಲಾ ಮಾಡಿದ್ದಾರೆ ಅನ್ನೋದನ್ನು ಪರಿಶೀಲನೆ ಮಾಡಿ.


Click it and Unblock the Notifications








