ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ'ಟೇಕ್ ಇಟ್ ಡೌನ್' ಸೌಲಭ್ಯ; ಹದಿಹರೆಯದವರಿಗೆ ಅನುಕೂಲ!
ಮೆಟಾ ಒಡೆತನದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಅನ್ನು ಬಹುಪಾಲು ಎಲ್ಲರೂ ಬಳಕೆ ಮಾಡುತ್ತಾರೆ. ಈ ಪ್ಲಾಟ್‌ಫಾರ್ಮ್ ಬಳಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು. ಈ ಕಾರಣಕ್ಕೆ ಮೆಟಾ ಕೆಲವು ಕಟ್ಟುನಿಟ್ಟಿನ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬರುತ್ತಿದ್ದು, ಇದರ ಸಾಲಿಗೆ ಹೊಸ ಟೂಲ್ ಸೇರಿಕೊಳ್ಳಲಿದೆ.
ಹೌದು, ಈಗಂತೂ ಯುವತಿಯರ ಹಾಗೂ ಹದಿಹರೆಯದವರ ಫೋಟೋ ಅಥವಾ ವಿಡಿಯೋ ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬೆದರಿಸುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇನ್ಮುಂದೆ ಇದಕ್ಕೆ ಕಡಿವಾಣ ಬೀಳಲಿದ್ದು, ಈ ಮೂಲಕ ಯಾವುದೇ ಕೆಟ್ಟ ಚಿತ್ರ ಹಾಗೂ ವಿಡಿಯೋ ವಿರುದ್ಧ ಈ ಹೊಸ ಟೂಲ್ಸ್ ಮೂಲಕ ಸಮರ ಸಾರಬಹುದಾಗಿದೆ. ಹಾಗಿದ್ರೆ, ಮೆಟಾದ ಈ ಹೊಸ ಸೌಲಭ್ಯ ಏನು? ಇದರಿಂದ ಪ್ರಯೋಜನ ಏನು ಎಂಬ ಕುತೂಹಲಕ್ಕೆ ಈ ಲೇಖನ ಓದಿ.

ಏನಿದು ಹೊಸ ಟೂಲ್
ಟೇಕ್ ಇಟ್ ಡೌನ್ (Take It Down) ಎಂಬುದು ಉಚಿತ ಸೇವೆಯಾಗಿದ್ದು, ಇದನ್ನು ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರದೊಂದಿಗೆ ನಿರ್ವಹಿಸಲು ಮೆಟಾ ಕೈ ಜೋಡಿಸಿದೆ.ಈ ಟೂಲ್ ನಿಂದಾಗಿ ಹದಿಹರೆಯದವರು ಅಥವಾ ಅವರ ಪೋಷಕರು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾದ ಕೆಟ್ಟ ವಿಡಿಯೋ ಅಥವಾ ಪೋಟೋ ಬಗ್ಗೆ ಭಯಪಡಬೇಕಿಲ್ಲ. ಈ ರೀತಿಯ ಫೋಟೋಗಳನ್ನು ವೆಬ್ ಆಧಾರಿತ ಡಿವೈಸ್‌ಗೆ ಅಪ್‌ಲೋಡ್ ಮಾಡಬಹುದಾಗಿದ್ದು. ಇದು ಚಿತ್ರಗಳನ್ನು ಹ್ಯಾಶ್‌ಗಳೆಂದು ಕರೆಯಲ್ಪಡುವ ಡಿಜಿಟಲ್ ಫಿಂಗರ್‌ಪ್ರಿಂಟ್‌ಗಳಾಗಿ ಪರಿವರ್ತಿಸುತ್ತದೆ.
ಇದಾದ ನಂತರ ಈ ಮಾಹಿತಿಯನ್ನು NCMEC ಗೆ ರವಾನಿಸಲಿದ್ದು, ಇತರೆ ಪ್ಲಾಟ್‌ಫಾರ್ಮ್‌ಗಳೊಂದಿಗೆ ಶೇರ್ ಮಾಡಿಕೊಳ್ಳಲಾಗುತ್ತದೆ. ಇದರಿಂದ ಎಲ್ಲೆಲ್ಲಿ ಈ ರೀತಿಯ ಕೆಟ್ಟ ಫೋಟೋ ಅಥವಾ ವಿಡಿಯೋ ಅಪ್‌ಲೋಡ್ ಆಗಿದೆಯೋ ಅವುಗಳನ್ನು ಆ ಸೈಟ್‌ನಿಂದ ಡಿಲೀಟ್ ಮಾಡಿಸಬಹುದಾಗಿದೆ. ಜೊತೆಗೆ ಪೂರ್ವದಲ್ಲಿಯೇ ಮೂಲ ಚಿತ್ರಗಳನ್ನು ಅಪ್‌ಲೋಡ್ ಮಾಡುವ ಯಾವುದೇ ಯತ್ನಗಳನ್ನು ಮಾಡದಿರಲು ಹಾಗೂ ನಿರ್ಬಂಧಿಸಲು ಇದು ಸಹಾಯಕ.
ಇದಿಷ್ಟೇ ಅಲ್ಲದೆ ಈ ಕಾರ್ಯಕ್ಕೆ ಇದು ಹ್ಯಾಶ್ ಮ್ಯಾಚಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡಲಿದ್ದು, ಈ ಸೌಲಭ್ಯವು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹೊರತುಪಡಿಸಿ ಮಿಂಡ್‌ಗೀಕ್ ಒಡೆತನದ ಯುಬೊ, ಓನ್ಲಿ ಫ್ಯಾನ್ಸ್ ಮತ್ತು ಪೋರ್ನ್‌ಹಬ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಲಭ್ಯವಿದೆ. ಇದರಿಂದಾಗಿ ಹದಿಹರೆಯದವರ ಮೇಲೆ ಆಗುತ್ತಿರುವ ಮಾನಸಿಕ ಕಿರುಕುಳವನ್ನು ನಿಯಂತ್ರಿಸಬಹುದಾಗಿದೆ.

ಮೇಟಾ ಹೇಳಿದ್ದೇನು?
ಹದಿಹರೆಯದವರ ಅಶ್ಲೀಲ ಚಿತ್ರಗಳು ಆನ್‌ಲೈನ್‌ನಲ್ಲಿ ಶೇರ್ ಆಗುವುದನ್ನು ಪೂರ್ವಭಾವಿಯಾಗಿ ತಡೆಗಟ್ಟಲು ವಿನ್ಯಾಸಗೊಳಿಸಲಾದ ಹೊಸ ಟೂಲ್ ಕಂಡುಹಿಡಿಯಲು NCMEC ಯೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ ಎಂದು ಮೆಟಾ ಮಾಹಿತಿ ನೀಡಿದೆ. ಟೇಕ್ ಇಟ್ ಡೌನ್ ಎಂದು ಹೆಸರಿಸಲಾದ ಉಪಕ್ರಮವು ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಭಾವ್ಯವಾಗಿ ಹಂಚಿಕೊಳ್ಳಬಹುದಾದ ಕಂಟೆಂಟ್ ಅನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು CSAM ಚಿತ್ರಗಳ ಹ್ಯಾಶ್ ವ್ಯಾಲ್ಯೂ ಬಳಕೆ ಮಾಡುತ್ತದೆ ಎಂದು ವಿವರಿಸಿದ್ದಾರೆ.
ಟೇಕ್ ಇಟ್ ಡೌನ್ ಅನ್ನು ಪ್ರಾರಂಭಿಸುವುದರೊಂದಿಗೆ, ಎಲ್ಲಾ ವಯಸ್ಕ ಬಳಕೆದಾರರ ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಆತ್ಮೀಯ ಫೋಟೋಗಳು ಎಗ್ಗಿಲ್ಲದೆ ಶೇರ್ ಆಗುವುದನ್ನು ತಡೆಯಬಹುದಾಗಿದೆ. ಇದರೊಂದಿಗೆ ಅನುಮಾನಾಸ್ಪದ ವ್ಯಕ್ತಿಗಳು ಹದಿಹರೆಯದವರೊಂದಿಗೆ ಸಂವಹನ ನಡೆಸುವುದನ್ನು ನಡೆಸಲು ಸಾಧ್ಯವಿರದ ಹಾಗೆ ಮಾಡಲಾಗಿದ್ದು, ಇದಕ್ಕಾಗಿ ಹೊಸ ಫೀಚರ್ಸ್ ಸಹ ಪರಿಚಯಿಸಲಾಗಿದೆ.
ವಯಸ್ಕರು ಪೋಸ್ಟ್ ಅನ್ನು ಇಷ್ಟಪಟ್ಟ ಜನರ ಪಟ್ಟಿಯನ್ನು ಸ್ಕ್ರೋಲ್ ಮಾಡುವಾಗ ಅಥವಾ ಖಾತೆಯ ಅನುಯಾಯಿಗಳು ಅಥವಾ ಅನುಸರಿಸದವರ ಪಟ್ಟಿಯನ್ನು ವೀಕ್ಷಿಸುವಾಗ ಇನ್ನು ಮುಂದೆ ಹದಿಹರೆಯದ ಖಾತೆಗಳನ್ನು ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಕ್ಕಳು ಯಾವುದೇ ತೊಂದರೆ ಹಾಗೂ ಇರುಸುಮುರುಸಿನ ಅನುಭವ ಇಲ್ಲದೆ ಪ್ಲಾಟ್‌ಫಾರ್ಮ್ ಅನ್ನು ಬಳಕೆ ಮಾಡಲು ಮೆಟಾ ಅನುಕೂಲ ಮಾಡಿಕೊಟ್ಟಿದೆ. ಇದಕ್ಕಾಗಿ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಿದೆ.

ಇನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹದಿಹರೆಯದವರು ಮತ್ತು ಅವರ ಪೋಷಕರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು 30 ಕ್ಕೂ ಹೆಚ್ಚು ಟೂಲ್ಸ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಪೋಷಕರಿಗೆ ಮೇಲ್ವಿಚಾರಣಾ ಟೂಲ್ಸ್‌ಗಳು ಮತ್ತು ಹದಿಹರೆಯದವರಿಗೆ ವಯಸ್ಸಿಗೆ ಸೂಕ್ತವಾದ ಆನ್‌ಲೈನ್ ಅನುಭವಗಳನ್ನು ಸರ್ಚ್ ಮಾಡಲು ಸಹಾಯ ಮಾಡುವ ಫೀಚರ್ಸ್ ಸೇರಿದಂತೆ ಅನೇಕ ತಂತ್ರಜ್ಞಾನ ಸೇವೆಗಳು ಸಾಕಷ್ಟು ಸಹಾಯಕವಾಗಿವೆ ಎಂದು ಮೆಟಾ ಹೇಳಿದೆ.


Click it and Unblock the Notifications








