Facebook ಬಳಕೆದಾರರೇ ಗಮನಿಸಿ...ಇಷ್ಟು ಫೀಚರ್ಸ್ ಸಾಕು ನೀವು ಫೇಮಸ್ ಆಗಲು!
ಮೆಟಾ ಒಡೆತನದ ಫೇಸ್‌ಬುಕ್ (Facebook) ಇಂದು ಅಗಾದವಾದ ಬಳಕೆದಾರರನ್ನು ಹೊಂದಿದ್ದು, ಈ ಮೂಲಕ ಜಗತ್ತಿನ ಎಲ್ಲಾ ವಿಚಾರಗಳನ್ನು ಕ್ಷಣ ಮಾತ್ರದಲ್ಲೇ ತಿಳಿದುಕೊಳ್ಳುವಂತೆ ಮಾಡುತ್ತದೆ. ಅಷ್ಟು ಮಾತ್ರವಲ್ಲದೆ ಬಳಕೆದಾರರ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ಪ್ಲಾಟ್‌ಫಾರ್ಮ್ ಆಗಿಯೂ ರೂಪುಕೊಂಡಿದೆ. ಈ ನಡುವೆ ಮೆಟಾ (Meta) ಈ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸೌಲಭ್ಯ ಕಲ್ಪಿಸಿಕೊಟ್ಟಿದೆ.
ಹೌದು, ಫೇಸ್‌ಬುಕ್ ಬಳಕೆದಾರರು ಇನ್ಮುಂದೆ ಈಗ ಇರುವ ವಿಶೇಷ ಫೀಚರ್ಸ್‌ನೊಂದಿಗೆ ಆಕರ್ಷಕ ಹೊಸ ಫೀಚರ್ಸ್ (features) ಬಳಕೆ ಮಾಡಿಕೊಳ್ಳಬಹುದಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಶಾರ್ಟ್ ವಿಡಿಯೋಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಬಳಕೆದಾರರು ಸಹ ಇದರ ಪ್ರಯೋಜನ ಪಡೆಯುವ ಮೂಲಕ ಜನಪ್ರಿಯರಾಗುತ್ತಿದ್ದಾರೆ. ಅದರಂತೆ ಈಗ ಆಪ್‌ನಲ್ಲೇ ವಿಡಿಯೋ ಎಡಿಟಿಂಗ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಹಾಗಿದ್ರೆ, ಏನೆಲ್ಲಾ ಹೊಸ ಸೌಲಭ್ಯ ಕಲ್ಪಿಸಲಾಗಿದೆ ಬನ್ನಿ ನೋಡೋಣ.

ಸರಳೀಕೃತ ವಿಡಿಯೋ ಎಡಿಟಿಂಗ್: ಮೊದಲೇ ತಿಳಿಸಿದಂತೆ ಮೆಟಾ ಫೇಸ್‌ಬುಕ್‌ನಲ್ಲಿ ವಿಡಿಯೋ ವಿಭಾಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಈ ಮೂಲಕ ಸುಧಾರಿತ ವಿಡಿಯೋ ಎಡಿಟಿಂಗ್ ಟೂಲ್ಸ್(Video Editing) ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ವಿಡಿಯೋ ಕ್ರಿಯೇಟರ್ಸ್‌ಗಳು ಹೆಚ್ಚು ಕ್ರಿಯಾತ್ಮಕವಾಗಿ ತಮ್ಮ ವಿಡಿಯೋ ಎಡಿಟ್ ಮಾಡಲು ಹಾಗೂ ವಿಭಿನ್ನವಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ. ಇಲ್ಲಿವೆ ನೋಡಿ ಆ ವಿಶೇಷ ಟೂಲ್ಸ್‌ಗಳು.
ತಡೆರಹಿತ ವಿಡಿಯೋ ಎಡಿಟಿಂಗ್: ಇದೀಗ ಆಡಿಯೊ, ಮ್ಯೂಸಿಕ್ ಮತ್ತು ಪಠ್ಯ ಎಡಿಟಿಂಗ್ ಸಾಮರ್ಥ್ಯಗಳನ್ನು ರೀಲ್‌ಗಳಲ್ಲಿ ಸಂಯೋಜಿಸಿದೆ. ಇದು ಉತ್ತಮ ರೀಲ್‌ಗಾಗಿ ಸೃಜನಾತ್ಮಕ ಅಂಶಗಳನ್ನು ಸೇರಿಸಲು ಅನುವು ಮಾಡಿಕೊಡುತ್ತದೆ. ಇನ್ನು ಈ ಫೀಚರ್ಸ್ ಅನ್ನು ಫೀಡ್‌ನಲ್ಲಿನ ರೀಲ್‌ಗಳು ಮತ್ತು ವಿಡಿಯೋ ಕಂಟೆಂಟ್ ಎರಡಕ್ಕೂ ಮೆಟಾ ಬಿಸಿನೆಸ್ ಸೂಟ್‌ನಲ್ಲಿ ಪರಿಚಯಿಸಲಾಗಿದೆ.
ಕ್ಲಿಪ್ ಎಡಿಟಿಂಗ್ ಟೂಲ್ಸ್: ಬಳಕೆದಾರರು ಕ್ಲಿಪ್ ಎಡಿಟಿಂಗ್ ಟೂಲ್ಸ್ (Clip Editing Tools) ಬಳಕೆ ಮಾಡಿಕೊಂಡು ತಮ್ಮ ವಿಡಿಯೋಗಳಲ್ಲಿನ ಕ್ಲಿಪ್‌ಗಳ ವೇಗವನ್ನು ಸರಿಹೊಂದಿಸುವ ಮೂಲಕ ಹಾಗೂ ವಿಡಿಯೋಗಳನ್ನು ರಿವರ್ಸ್ ಮಾಡುವ ಮೂಲಕ ಅಥವಾ ಬದಲಿಸುವ ಮೂಲಕ ತಮ್ಮದೇ ಆದ ಸೃಜನಶೀಲತೆಯನ್ನು ವ್ಯಕ್ತಪಡಿಸಬಹುದಾಗಿದೆ. ಇದರಿಂದಾಗಿ ಇನ್ಮುಂದೆ ವಿಡಿಯೋ ಕಟ್ ಮಾಡಲು ಥರ್ಡ್ ಪಾರ್ಟಿ ಆಪ್ ಅವಶ್ಯಕತೆ ಇರುವುದಿಲ್ಲ.
ವರ್ಧಿತ ಆಡಿಯೊ: ಆಡಿಯೋ ವಿಚಾರದಲ್ಲೂ ಉತ್ತಮ ಫೀಚರ್ಸ್ ಕಲ್ಪಿಸಿಕೊಟ್ಟಿದ್ದು, ಆಡಿಯೊ ಕ್ಲಿಪ್‌ಗಳು ಮತ್ತು ವಾಯ್ಸ್‌ಓವರ್‌ಗಳನ್ನು ಅನ್ವೇಷಿಸುವ ಮತ್ತು ಸೇರಿಸುವ ಆಯ್ಕೆ ನೀಡಲಾಗಿದೆ. ಇದರೊಂದಿಗೆ ಬಳಕೆದಾರರು ವಿಡಿಯೋಗಳಲ್ಲಿ ಸರಿಯಾದ ಶಬ್ದಗಳನ್ನು ಮಿಕ್ಸ್ ಮಾಡಿ ಉತ್ತಮ ಸೌಂಡ್ ಸೃಷ್ಟಿಸಬಹುದು. ಜೊತೆಗೆ ಅನಗತ್ಯ ಶಬ್ದವನ್ನು ಕಡಿಮೆ ಮಾಡುವ ಮೂಲಕ ಆಕರ್ಷಕ ಆಡಿಯೊ ಅನುಭವವನ್ನು ಪಡೆದುಕೊಳ್ಳಬಹುದು.
HDR ವಿಡಿಯೋ ಅಪ್‌ಲೋಡ್: ಫೇಸ್‌ಬುಕ್ ಬಳಕೆದಾರರು ಇನ್ಮುಂದೆ ಹೆಚ್‌ಡಿಆರ್ ವಿಡಿಯೋಗಳನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ನೇರವಾಗಿ ರೀಲ್‌ಗಳಿಗೆ ಅಪ್‌ಲೋಡ್ ಮಾಡಬಹುದಾದ ಆಯ್ಕೆ ನೀಡಲಾಗಿದೆ. ಹಾಗಂದ ಮಾತ್ರಕ್ಕೆ ಅಪ್‌ಲೋಡ್ ಆದ ಮೇಲೆ ಕ್ವಾಲಿಟಿ ಕಡಿಮೆ ಆಗುತ್ತದೆ ಎಂದು ಭಾವಿಸಬೇಡಿ. ಪೂರ್ಣ ಹೆಚ್‌ಡಿಆರ್ ನಲ್ಲಿಯೇ ಗುಣಮಟ್ಟದ ಪ್ಲೇಬ್ಯಾಕ್ ಅನ್ನು ಖಾತ್ರಿಪಡಿಸಿಕೊಳ್ಳಬಹುದು.
ಏಕೀಕೃತ ವೀಡಿಯೊ ಅನುಭವ: ವಿಡಿಯೋ ಎಡಿಟಿಂಗ್ ಹೊರತುಪಡಿಸಿ ಫೇಸ್‌ಬುಕ್‌ನಲ್ಲಿ ವಿಡಿಯೋ ವೀಕ್ಷಣೆಯ ಅನುಭವವನ್ನು ಸಹ ಸುಧಾರಿಸಲಾಗಿದೆ. ಅಂದರೆ ಸುಲಭವಾದ ಅನ್ವೇಷಣೆ ಮತ್ತು ಎಂಗೇಜ್‌ಮೆಂಟ್‌ಗಾಗಿ ವಿವಿಧ ವಿಡಿಯೋ ಸ್ವರೂಪಗಳನ್ನು ಒಟ್ಟುಗೂಡಿಸಲಾಗುತ್ತದೆ. ಹಾಗೆಯೇ ಫೇಸ್‌ಬುಕ್ ವಾಚ್ (watch) ಅನ್ನು ವಿಡಿಯೋ ಟ್ಯಾಬ್ (Video tab) ಎಂದು ಮರುಬ್ರಾಂಡ್ ಮಾಡಲಾಗಿದ್ದು, ಇದು ಫೇಸ್‌ಬುಕ್‌ನಲ್ಲಿನ ಎಲ್ಲಾ ವಿಡಿಯೋ ಕಂಟೆಂಟ್‌ಗೆ ಪ್ರವೇಶ ನೀಡಲಿದೆ.

ಇಷ್ಟು ಮಾತ್ರವಲ್ಲದೆ ಇದರಲ್ಲಿ ವರ್ಟಿಕಲ್ ಫೀಡ್ ಆಯ್ಕೆಯನ್ನೂ ಸಹ ನೀಡಲಾಗಿದ್ದು, ರೀಲ್‌ಗಳು(Reels), ದೀರ್ಘ-ರೂಪದ ವಿಡಿಯೋಗಳು ಮತ್ತು ಲೈವ್ ಕಂಟೆಂಟ್ ಸೇರಿದಂತೆ ವ್ಯಾಪಕ ಶ್ರೇಣಿಯ ವಿಡಿಯೋ ಕಂಟೆಂಟ್ ಅನ್ನು ಇಲ್ಲಿ ಶಿಫಾರಸು ಮಾಡಲಾಗುತ್ತದೆ. ಇದರೊಂದಿಗೆ ವಿಡಿಯೋ ಟ್ಯಾಬ್ ಹೊಸ ಅಡ್ಡವಾದ-ಸ್ಕ್ರಾಲ್ ರೀಲ್‌ಗಳ ವಿಭಾಗಗಳನ್ನು ಸಹ ಪರಿಚಯಿಸಲಿದ್ದು, ಇದರಲ್ಲಿ ಶಾರ್ಟ್ ಶೈಲಿಯ ವಿಡಿಯೋ ಕಂಟೆಂಟ್‌ಗೆ (Short video) ತ್ವರಿತ ಪ್ರವೇಶ ನೀಡುತ್ತದೆ.
ಉಳಿದಂತೆ ಈ ವಿಡಿಯೋ ಟ್ಯಾಬ್ ಶೀಘ್ರದಲ್ಲೇ ಶಾರ್ಟ್‌ಕಟ್ ಬಾರ್‌ನಲ್ಲಿ ಮೀಸಲಾದ ಟ್ಯಾಬ್ ಆಗಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಅದರಲ್ಲೂ ಐಓಎಸ್ ನಲ್ಲಿ ಅಪ್ಲಿಕೇಶನ್‌ನ ಕೆಳಭಾಗದಲ್ಲಿ ಮತ್ತು ಆಂಡ್ರಾಯ್ಡ್‌ನಲ್ಲಿ ಆಪ್‌ನ ಮೇಲ್ಭಾಗದಲ್ಲಿ ಇದು ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಬಾರ್‌ನಲ್ಲಿನ ಶಾರ್ಟ್‌ಕಟ್‌ಗಳು ಬಳಕೆದಾರರು ಹೆಚ್ಚಾಗಿ ಪ್ರವೇಶಿಸುವ ವೈಶಿಷ್ಟ್ಯಗಳ ಆಧಾರದ ಮೇಲೆ ಕಾಣಿಸಿಕೊಳ್ಳುತ್ತವೆ.
ಇದಿಷ್ಟು ಮಾತ್ರವಲ್ಲದೆ ವಿಡಿಯೋ ಅನ್ವೇಷಣೆಯನ್ನು ಹೆಚ್ಚಿಗೆ ಮಾಡಲು ಫೇಸ್‌ಬುಕ್ ಎಕ್ಸ್‌ಪ್ಲೋರ್ ಫೀಚರ್ಸ್ ಅನ್ನು ಮರುವಿನ್ಯಾಸಗೊಳಿಸಿದೆ. ಇದು ಬಳಕೆದಾರರಿಗೆ ಜನಪ್ರಿಯ ವಿಡಿಯೋ ಕಂಟೆಂಟ್‌ಗಳನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. ವಿಡಿಯೋ ಟ್ಯಾಬ್‌ನಲ್ಲಿ ಸರ್ಚ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಬಳಕೆದಾರರು ಎಕ್ಸ್‌ಪ್ಲೋರ್ ವಿಭಾಗಕ್ಕೆ ಎಂಟ್ರಿ ಕೊಡಬಹುದು. ಇದು ರೀಲ್‌ಗಳ ಸ್ಟೋರೇಜ್, ದೀರ್ಘ ರೂಪದ ವಿಡಿಯೋಗಳು ಮತ್ತು ಸಂಬಂಧಿತ ಕಂಟೆಂಟ್‌ಗಳು ಹಾಗೂ ಹ್ಯಾಶ್‌ಟ್ಯಾಗ್‌ಗಳಿಗೆ ಸಂಬಂಧಿಸಿದ ಲೈವ್ ವಿಡಿಯೋಗಳನ್ನು ತೋರಿಸುತ್ತದೆ.


Click it and Unblock the Notifications








