ಮೆಟಾದಿಂದ AI ಚಾಲಿತ ಸ್ಪೀಚ್ ಟ್ರಾನ್ಸಲೇಶನ್ ಮಾಡೆಲ್; ವಾಟ್ಸಾಪ್, ಫೇಸ್‌ಬುಕ್‌ನಲ್ಲೂ ಬಳಸಬಹುದು!
ಮೆಟಾ ತನ್ನ ಎಲ್ಲಾ ಆಪ್‌ಗಳಿಗೂ ಆಗಾಗ್ಗೆ ಹೊಸ ಹೊಸ ಸೌಲಭ್ಯ ಕಲ್ಪಿಸಿಕೊಡುತ್ತಾ ಬರುತ್ತಿರುತ್ತದೆ. ಅದರಲ್ಲೂ ವಿಶ್ವದಲ್ಲೇ ಹೆಚ್ಚಾಗಿ ಬಳಕೆ ಮಾಡುವ ವಾಟ್ಸಾಪ್ ಹಾಗೂ ಫೇಸ್‌ಬುಕ್‌ಗೆ ಮತ್ತೆ ಹೊಸ ಸೌಲಭ್ಯ ಕಲ್ಪಿಸಿಕೊಡುತ್ತಿದ್ದು, ಈ ಮೂಲಕ ಬಳಕೆದಾರರು ಉತ್ತಮ ಅನಭವ ಪಡೆಯಬಹುದಾಗಿದೆ.
ಹೌದು, 100 ಭಾಷೆಗಳಲ್ಲಿ ಸ್ಪೀಚ್ ಭಾಷಾಂತರಿಸಲು ಮತ್ತು ಲಿಪ್ಯಂತರ ಮಾಡುವ ಎಐ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಮೆಟಾ ತಿಳಿಸಿದೆ. ಇನ್ನು ಇದನ್ನು ಯಾವುದೇ ಭಾಷೆಯಲ್ಲಿ ಮಾಹಿತಿಯನ್ನು ಸಂವಹನ ಮಾಡಲು ಹಾಗೂ ಅದನ್ನು ಅರ್ಥಮಾಡಿಕೊಳ್ಳಲು ಬಳಕೆ ಮಾಡಲಾಗುತ್ತದೆ. ಹಾಗಿದ್ರೆ, ವಾಟ್ಸಾಪ್ ಹಾಗೂ ಫೇಸ್‌ಬುಕ್ ಬಳಕೆದಾರರಿಗೆ ಹೇಗೆ ಉಪಯುಕ್ತ?, ಯಾರಿಗೆಲ್ಲಾ ಲಭ್ಯ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಈ ಸಂಬಂಧ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಇಂದು ನಾವು ವಿವಿಧ ಭಾಷೆಗಳನ್ನು ಮಾತನಾಡುವ ಜನರು ಹೆಚ್ಚು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅನುವು ಮಾಡಿಕೊಡುವ ಹೊಸ ಮಲ್ಟಿಮೋಡಲ್ ಎಐ ಮಾದರಿಯಾದ 'SeamlessM4T' ಅನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.
ಹಾಗೆಯೇ ಈ ಎಐ ಮಾದರಿಯು 100 ಭಾಷೆಗಳಿಗೆ ಸ್ಪೀಚ್-ಟು-ಟೆಕ್ಸ್ಟ್, ಟೆಕ್ಸ್ಟ್-ಟು-ಸ್ಪೀಚ್, ಸ್ಪೀಚ್-ಟು-ಸ್ಪೀಚ್, ಟೆಕ್ಸ್ಟ್-ಟು-ಟೆಕ್ಸ್ಟ್ ಅನುವಾದ ಮತ್ತು ಸ್ಪೀಚ್ ರೆಕಗ್ನಿಷನ್ ಅನ್ನು ಮಾಡಬಹುದು ಎಂದು ತಿಳಿಸಲಾಗಿದ್ದು, ಇದರಿಂದಾಗಿ ಇನ್ಮುಂದೆ ಯಾರೇ ಬಳಕೆದಾರರು ಎಲ್ಲೇ ಹೋದರು ಯಾವುದೇ ಜನರನ್ನು ಸುಲಭವಾಗಿ ಮಾತನಾಡಿಸಬಹುದಾಗಿದೆ. ಈ ಮೂಲಕ ಭಾಷೆ ಅಡ್ಡಿಯ ಅಡ್ಡ ಗೋಡೆ ಇನ್ನಷ್ಟು ಪಕ್ಕಕ್ಕೆ ಸರಿದಿದೆ. ಅದರಲ್ಲೂ ಈ ಸೌಲಭ್ಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಮೆಸೆಂಜರ್ ಮತ್ತು ಥ್ರೆಡ್‌ಗಳಿಗೆ ಲಭ್ಯ ಇರಲಿದೆ.
ಈ SeamlessM4T AI ಹೇಗೆ ಕೆಲಸ ಮಾಡಲಿದೆ?:
ಈ ಸಂಬಂಧ ಮೆಟಾ ಮಾಹಿತಿ ನೀಡಿದ್ದು, ಈ ಮಾದರಿಯು 100 ಭಾಷೆಗಳಲ್ಲಿ ವಾಯ್ಸ್ ರೆಕಗ್ನಿಷನ್ ಅನ್ನು ಬೆಂಬಲಿಸುತ್ತದೆ. ಆದರೆ, ಪಠ್ಯದಿಂದ ಸ್ಪೀಚ್‌ಗೆ ಬಂದಾಗ ಈ 100 ಭಾಷೆಗಳ ಸಂಖ್ಯೆ ಕಡಿಮೆಯಾಗಬಹುದು ಎನ್ನಲಾಗಿದೆ. ಇದರೊಂದಿಗೆ ಸುಮಾರು 100 ಇನ್‌ಪುಟ್ ಮತ್ತು ಔಟ್‌ಪುಟ್ ಭಾಷೆಗಳಿಗೆ ಸ್ಪೀಚ್-ಟು-ಟೆಕ್ಸ್ಟ್ ಅನುವಾದ ಮಾಡಲಿದೆ.
ಸ್ಪೀಚ್-ಟು-ಸ್ಪೀಚ್ ಅನುವಾದ ವಿಷಯದಲ್ಲಿ ಸುಮಾರು 100 ಇನ್‌ಪುಟ್ ಭಾಷೆಗಳು ಮತ್ತು 36 ಔಟ್‌ಪುಟ್ ಭಾಷೆಗಳನ್ನು ಬೆಂಬಲಿಸಲಿದ್ದು, 100 ಭಾಷೆಗಳಿಗೆ ಪಠ್ಯದಿಂದ ಪಠ್ಯಕ್ಕೆ ಅನುವಾದ ಮಾಡಲಿದೆ. ಜೊತೆಗೆ ಪಠ್ಯದಿಂದ ಸ್ಪೀಚ್‌ಗೆ 100 ಇನ್‌ಪುಟ್ ಭಾಷೆಗಳು ಮತ್ತು 35 ಔಟ್‌ಪುಟ್ ಭಾಷೆಗಳನ್ನು ಬೆಂಬಲಿಸುತ್ತದೆ. ಹಾಗೆಯೇ ಸಂಶೋಧಕರು ಮತ್ತು ಡೆವಲಪರ್‌ಗಳಿಗೆ ಈ ಕೆಲಸವನ್ನು ನಿರ್ಮಿಸಲು ಅನುವು ಮಾಡಿಕೊಡಲು ನಾವು ಸಂಶೋಧನಾ ಪರವಾನಗಿ ಅಡಿಯಲ್ಲಿ SeamlessM4T ಅನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ಮೆಟಾ ತಿಳಿಸಿದೆ.
SeamlessM4T ಎಂಬುದು ಮೆಟಾದ ನೋ ಲಾಂಗ್ವೇಜ್ ಲೆಫ್ಟ್ ಬಿಹೈಂಡ್, ಟೆಕ್ಸ್ಟ್-ಟು-ಟೆಕ್ಸ್ಟ್ ಮೆಷಿನ್ ಅನುವಾದ ಮಾದರಿ ಮತ್ತು ಯೂನಿವರ್ಸಲ್ ಸ್ಪೀಚ್ ಟ್ರಾನ್ಸ್‌ಲೇಟರ್‌ಗೆ ಉತ್ತರಾಧಿಕಾರಿಯಾಗಿದೆ ಮತ್ತು 1,100 ಕ್ಕೂ ಹೆಚ್ಚು ಭಾಷೆಗಳಲ್ಲಿ ಸ್ಪೀಚ್ ಗುರುತಿಸುವಿಕೆ, ಭಾಷಾ ಗುರುತಿಸುವಿಕೆ ಮತ್ತು ಸ್ಪೀಚ್ ಸಂಶ್ಲೇಷಣೆ ತಂತ್ರಜ್ಞಾನವನ್ನು ಒದಗಿಸುವ ಮೆಟಾದ ಚೌಕಟ್ಟಿನ ಬೃಹತ್ ಬಹುಭಾಷಾ ಸ್ಪೀಚ್ ಅನ್ನು ಇದು ನಿರ್ಮಿಸುತ್ತದೆ.
ಅತ್ಯಾಧುನಿಕ ಎಐ ಅನುವಾದ ಮತ್ತು ಪ್ರತಿಲೇಖನ ಟೂಲ್ಸ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಾಡುವುದು ಮೆಟಾ ಮಾತ್ರವಲ್ಲ. ಬದಲಾಗಿ ಇತರೆ ಕಂಪೆನಿಗಳು ಮುಂದೆ ಇದ್ದು, ಅದರಲ್ಲಿ ಅಮೆಜಾನ್, ಮೈಕ್ರೋಸಾಫ್ಟ್, ಓಪನ್ ಎಐ ಸಹ ಇದೆ. ಆದರೆ, SeamlessM4T ಅನುವಾದ ಮತ್ತು ಪ್ರತಿಲೇಖನ ಸಾಮರ್ಥ್ಯಗಳನ್ನು ಒಂದೇ ಮಾದರಿಯಲ್ಲಿ ಸಂಯೋಜಿಸಲಿದ್ದು, ಇಲ್ಲಿಯವರೆಗಿನ ಹೆಚ್ಚು ಮಹತ್ವಾಕಾಂಕ್ಷೆಯ ಪ್ರಯತ್ನಗಳಲ್ಲಿ ಒಂದಾಗಿದೆ.

ಇದನ್ನು ಅಭಿವೃದ್ಧಿಪಡಿಸುವಾಗ ವೆಬ್‌ನಿಂದ ಸಾರ್ವಜನಿಕವಾಗಿ ಲಭ್ಯವಿರುವ ಪಠ್ಯವನ್ನು ಮತ್ತು ಸ್ಪೀಚ್ ಅನ್ನು (4 ಮಿಲಿಯನ್ ಗಂಟೆ) ಸ್ಕ್ರ್ಯಾಪ್ ಮಾಡಲಾಗಿದೆ. ಈ ಬಗ್ಗೆ ಡೇಟಾದ ನಿಖರವಾದ ಮೂಲಗಳನ್ನು ಬಹಿರಂಗಪಡಿಸುವುದಿಲ್ಲ, ಅವುಗಳಲ್ಲಿ ಹಲವಾರು ಇವೆ ಎಂದು ಎಐ ಸಂಶೋಧನಾ ವಿಭಾಗದ ಸಂಶೋಧನಾ ವಿಜ್ಞಾನಿ ಮತ್ತು ಈ ಯೋಜನೆಯಲ್ಲಿ ಕೊಡುಗೆದಾರರಾದ ಜುವಾನ್ ಪಿನೊ ಅವರು ಹೇಳಿದ್ದಾರೆ.


Click it and Unblock the Notifications








