ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತು ಕಾಣೆಯಾಗಬಹುದು! ಈ ಸೇವೆ ಮೊದಲು ಎಲ್ಲಿ ಗೊತ್ತಾ!?
ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಸ್ಥಾನದಲ್ಲಿ ಇರುವ ಮೆಟಾ ಒಡೆತನದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ (Facebook, Instagram) ನಲ್ಲಿ ಜಾಹೀರಾತುಗಳ ಕಿರಿಕಿರಿ ಹೆಚ್ಚಾಗಿದೆ. ಆದರೆ, ಇನ್ಮುಂದೆ ಈ ಸಮಸ್ಯೆ ಕಾಣಿಸುವುದಿಲ್ಲ ಎನ್ನಲಾಗಿದೆ. ಈ ಮೂಲಕ ಬಳಕೆದಾರರು ಜಾಹೀರಾತು-ಮುಕ್ತ ಅನುಭವ ಪಡೆಯಬಹುದಾಗಿದೆಯಂತೆ.
ಹೌದು, ಮೆಟಾ ಒಡೆತನದ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಏನಾದರೂ ಕಂಟೆಂಟ್ ವೀಕ್ಷಣೆ ಮಾಡುವಾಗ ಆಗಾಗ್ಗೆ ಕಾಣಿಸಿಕೊಳ್ಳುವ ಜಾಹೀರಾತುಗಳು ಬಳಕೆದಾರರಿಗೆ ಒಂದು ರೀತಿಯಲ್ಲಿ ತೊಂದರೆ ನೀಡುತ್ತವೆ. ಆದರೆ, ಈ ಸಂಬಂಧ ಮೆಟಾ ಪ್ರಮುಖವಾದ ನಿರ್ಧಾರವೊಂದನ್ನು ಮಾಡಿದೆ. ಅದುವೇ ಜಾಹೀರಾತು ಇಲ್ಲದೇ ಈ ಸೇವೆ ಪಡೆಯುವುದು. ಹಾಗಿದ್ರೆ, ಇದನ್ನು ಎಲ್ಲಿ ಜಾರಿ ಮಾಡಲಾಗುತ್ತದೆ?, ಚಂದಾದಾರಿಕೆಗೆ ಬೆಲೆ ಎಷ್ಟು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಮೆಟಾ ಈಗ ಯುರೋಪಿಯನ್ ಯೂನಿಯನ್ (EU) ನಲ್ಲಿನ ಬಳಕೆದಾರರಿಗೆ ಜಾಹೀರಾತು-ಮುಕ್ತ ಅನುಭವಗಳನ್ನು ನೀಡಲು ಪಾವತಿಸಿದ ಚಂದಾದಾರಿಕೆ ಪ್ಲ್ಯಾನ್ ಪರಿಚಯಿಸಲು ಮುಂದಾಗಿದೆ. ಅಂದರೆ ಯುರೋಪಿಯನ್ ಯೂನಿಯನ್ ಬಳಕೆದಾರರಿಗೆ ಡೆಸ್ಕ್‌ಟಾಪ್ ಪ್ರವೇಶದ ವೆಚ್ಚವು ತಿಂಗಳಿಗೆ ಸರಿಸುಮಾರು 10 ಯೂರೋಗಳಾಗಿರಬಹುದು ಎನ್ನಲಾಗಿದೆ. ಜೊತೆಗೆ ಲಿಂಕ್ ಮಾಡಿದ ಖಾತೆಗಳಿಗೆ ಹೆಚ್ಚುವರಿ ಶುಲ್ಕಗಳನ್ನೂ ಸಹ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿದುಬಂದಿದೆ.
ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನ ಮೂಲ ಕಂಪನಿಯಾದ ಮೆಟಾ ಹೊಸ ಪಾವತಿಸಿದ ಚಂದಾದಾರಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಕಂಪನಿಯು ಕಾನೂನು ನಿಯಮಗಳಿಗೆ ಅನುಸಾರವಾಗಿ ಚಂದಾದಾರಿಕೆಯನ್ನು ಅಭಿವೃದ್ಧಿಪಡಿಸುವ ಆರಂಭಿಕ ಹಂತದಲ್ಲಿದೆ ಮತ್ತು ಡೇಟಾ ಗೌಪ್ಯತೆ ಮತ್ತು ಉದ್ದೇಶಿತ ಜಾಹೀರಾತಿನ ಬಗ್ಗೆ ಕಾಳಜಿಯನ್ನು ಹೊಂದಿದೆ ಎಂದು ಮೆಟಾ ಹೇಳಿಕೊಂಡಿದೆ.
ಈ ಚಂದಾದಾರಿಕೆಯ ಮೂಲಕ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ನ ಡೆಸ್ಕ್‌ಟಾಪ್ ಆವೃತ್ತಿಗೆ ಪ್ರವೇಶಕ್ಕಾಗಿ ಯುರೋಪಿಯನ್ ಯೂನಿಯನ್ ನಲ್ಲಿರುವ ಗ್ರಾಹಕರು ತಿಂಗಳಿಗೆ ಸರಿಸುಮಾರು 10 ಯೂರೋಗಳನ್ನು ($10.46) ಪಾವತಿಸಬೇಕಾಗಬಹುದು. ಪ್ರತಿ ಹೆಚ್ಚುವರಿ ಲಿಂಕ್ ಮಾಡಿದ ಖಾತೆಗೆ ಸುಮಾರು 6 ಯೂರೋಗಳ ಹೆಚ್ಚುವರಿ ಶುಲ್ಕವಿರಬಹುದು. ಆದಾಗ್ಯೂ, ಆಪಲ್ ಮತ್ತು ಗೂಗಲ್ ನ ಆಪ್ ಸ್ಟೋರ್‌ಗಳು ವಿಧಿಸುವ ಕಮಿಷನ್ ಶುಲ್ಕದಿಂದಾಗಿ, ಮೊಬೈಲ್ ಡಿವೈಸ್‌ಗಳಿಗೆ ಒಂದೇ ಖಾತೆಯ ವೆಚ್ಚವು ಪ್ರತಿ ತಿಂಗಳು ಸುಮಾರು 13 ಯುರೋಗಳಿಗೆ ಹೆಚ್ಚಾಗಬಹುದು ಎಂದು ಊಹಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಐರ್ಲೆಂಡ್‌ನ ಡೇಟಾ ಗೌಪ್ಯತೆ ಆಯುಕ್ತರು 390 ಮಿಲಿಯನ್ ಯುರೋ ದಂಡವನ್ನು ವಿಧಿಸಿದ ನಂತರ, ಮೆಟಾ ಈ ಈ ಹೊಸ ಸೇವೆ ಕಲ್ಪಿಸಿಕೊಡಲು ಮುಂದಾಗಿದೆ. ಅಂದರೆ ಈ ಚಂದಾದಾರಿಕೆ ಮಾದರಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದೆ. ಜೊತೆಗೆ ವ್ಯಕ್ತಿಗಳ ಆನ್‌ಲೈನ್ ಚಟುವಟಿಕೆಯ ಆಧಾರದ ಮೇಲೆ ಜಾಹೀರಾತುಗಳನ್ನು ವಿತರಿಸದಂತೆ ಮೆಟಾಗೆ ಸೂಚಿಸಲಾಗಿದೆ ಎನ್ನಲಾಗಿದೆ.
ಇನ್ನು ನಿಯಂತ್ರಕ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಜಾಹೀರಾತುಗಳನ್ನು ನೀಡಲು ಕಂಪನಿಗಳಿಗೆ ಅನುಮತಿಸುವ ಮೊದಲು ಬಳಕೆದಾರರ ಅನುಮೋದನೆಯನ್ನು ಕೋರುವ ಉದ್ದೇಶವನ್ನು ಮೆಟಾ ಸೂಚಿಸಿದೆ. ಸಬ್‌ಸ್ಕ್ರಿಪ್ಷನ್ ನೋ ಆಡ್ಸ್ (SNA) ಪ್ರಸ್ತಾಪಿತ ಜಾಹೀರಾತು-ಮುಕ್ತ ಪ್ರೋಗ್ರಾಂ ಮುಂಬರುವ ತಿಂಗಳುಗಳಲ್ಲಿ ಯುರೋಪಿಯನ್ ಗ್ರಾಹಕರಿಗೆ ಮಾತ್ರ ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ವೈಯಕ್ತೀಕರಿಸಿದ ಜಾಹೀರಾತುಗಳಿಂದ ಬೆಂಬಲಿತವಾದ ಉಚಿತ ಸೇವೆಗಳನ್ನು ಒದಗಿಸಲು ಸಮರ್ಪಿತವಾಗಿದೆ ಎಂದು ಕಂಪನಿ ಹೇಳಿದರೆ, ನಾವು ವಿಕಸನಗೊಳ್ಳುತ್ತಿರುವ ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಆಯ್ಕೆಗಳನ್ನು ನೋಡುತ್ತಿದ್ದೇವೆ ಮೆಟಾ ವಕ್ತಾರರು ಹೇಳಿದ್ದಾರೆ. ಈ ಹೇಳಿಕೆಯ ಹೊರತಾಗಿಯೂ ಯುರೋಪಿಯನ್ ಕಮಿಷನ್ ಮತ್ತು ಐರ್ಲೆಂಡ್‌ನ ಡೇಟಾ ಪ್ರೊಟೆಕ್ಷನ್ ಕಮಿಷನ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.



Click it and Unblock the Notifications








