ಭಾರತದಲ್ಲಿ ಟೆಲಿಕಾಂ ಸಂಸ್ಥೆಗಳಿಗೆ ಶಾಕ್ ನೀಡಿದ 100 ಮಿಲಿಯನ್‌ಗೂ ಹೆಚ್ಚಿನ ಮೊಬೈಲ್ ಬಳಕೆದಾರರು!?
ಭಾರತದಲ್ಲಿ ಏರ್‌ಟೆಲ್, ಜಿಯೋ, ವಿ ಹಾಗೂ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಗಳು ತಮ್ಮದೇ ಆದ ಸೇವೆ ನೀಡುತ್ತಿದ್ದು, ಈ ನಡುವೆ ಏರ್‌ಟೆಲ್ ಹಾಗೂ ಜಿಯೋ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರೊಂದಿಗೆ ಭಾರತದಲ್ಲಿ ಅಚ್ಚರಿ ಬೆಳವಣಿಗೆಯೊಂದು ನಡೆದಿದ್ದು, ಈ ಸಂಬಂಧ ವರದಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಈ ಮೂಲಕ ಗ್ರಾಹಕರು ತಮಗೆ ಬೇಕಾದ ಅಗತ್ಯ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಹೌದು, ಭಾರತದಲ್ಲಿ 2023 ರ ಆರ್ಥಿಕ ವರ್ಷದಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಮೊಬೈಲ್ ಫೋನ್ ಚಂದಾದಾರರು ತಮ್ಮ ಟೆಲಿಕಾಂ ಆಪರೇಟರ್ ಅನ್ನು ಬದಲಾಯಿಸಲು ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದಿದು ಬಂದಿದೆ. ಈ ಸಂಬಂಧ ಟ್ರಾಯ್ ಮಾಹಿತಿ ನೀಡಿದೆ. ಹಾಗಿದ್ರೆ, ಯಾವ ಕಾರಣಕ್ಕೆ ಭಾರತೀಯರು ಈ ನಿರ್ಧಾರ ಮಾಡಿದ್ದರೆ?, ಇದರಿಂದ ಟೆಲಿಕಾಂ ಸಂಸ್ಥೆಗಳಿಗೆ ಆಗುವ ಲಾಭ ಹಾಗೂ ನಷ್ಟ ಏನು? ಎಂದು ತಿಳಿದುಕೊಳ್ಳಲು ಈ ಲೇಖನ ಓದಿರಿ.

10 ಮಿಲಿಯನ್ ಮೊಬೈಲ್ ನಂಬರ್ ಪೋರ್ಟ್: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಈ ಅಚ್ಚರಿ ಮಾಹಿತಿ ಬಿಡುಗಡೆ ಮಾಡಿದ್ದು, ಈ ಮಾಹಿತಿಯ ಪ್ರಕಾರ ಭಾರತದ ಒಟ್ಟು ಮೊಬೈಲ್ ಚಂದಾದಾರರಲ್ಲಿ ಸರಿಸುಮಾರು 12 % ರಷ್ಟು ಜನರು ಒಂದು ಸೇವೆಯಿಂದ ಮತ್ತೊಂದು ಸೇವೆಗೆ ಬದಲಾಗಿದ್ದಾರೆ. ಈ ಮೂಲಕ ಟೆಲಿಕಾಂ ಉದ್ಯಮದಲ್ಲಿನ ಗ್ರಾಹಕರ ಆದ್ಯತೆಗಳಲ್ಲಿ ಗಮನಾರ್ಹ ಬದಲಾವಣೆಯನ್ನು ಕಾಣಲಾಗಿದೆ.
ಇನ್ನು ಕೋಟಾಕ್ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್‌ನ ವರದಿಯಲ್ಲಿ ಉಲ್ಲೇಖ ಮಾಡಿರುವಂತೆ 2023ರ ಆರ್ಥಿಕ ವರ್ಷದಲ್ಲಿ ಪ್ರತಿ ತಿಂಗಳು ಸರಾಸರಿ 10 ಮಿಲಿಯನ್ ಮೊಬೈಲ್ ಚಂದಾದಾರರು ತಮ್ಮ ಸಂಖ್ಯೆಯನ್ನು ಪೋರ್ಟ್ ಮಾಡಿದ್ದಾರಂತೆ. ಪರಿಣಾಮ ಈ ಹಣಕಾಸಿನ ವರ್ಷದಲ್ಲಿ ಒಟ್ಟು 121 ಮಿಲಿಯನ್ ಪೋರ್ಟ್‌ಗಳು ಸಂಭವಿಸಿವೆ ಎಂದು ತಿಳಿದುಬಂದಿದೆ. ಇದರಿಂದ ಕಂಡುಕೊಂಡ ಮಾಹಿತಿ ಏನೆಂದರೆ ಕಡಿಮೆ-ಟಿಕೆಟ್ ಪ್ರಿಪೇಯ್ಡ್ ಪ್ಲ್ಯಾನ್‌ಗಳಿಂದಾಗಿ ಚಂದಾದಾರರನ್ನು ಸ್ವಿಚ್ ಆಪರೇಟರ್‌ಗಳ ಕಡೆ ಸೆಳೆಯಲಾಗಿದೆ ಎಂಬುದು.

ಇದರೊಂದಿಗೆ ಪ್ರಮುಖ ಹಣಕಾಸು ಸೇವೆಗಳ ಕಂಪನಿಯಾದ IIFL ನಡೆಸಿದ ಇತ್ತೀಚಿನ ಗ್ರಾಮೀಣ ಸಮೀಕ್ಷೆಯ ಪ್ರಕಾರ ಮುಂಬರುವ ತಿಂಗಳುಗಳಲ್ಲಿ ಒಟ್ಟಾರೆ ಚಂದಾದಾರರ ವಿಭಾಗದಲ್ಲಿ ಮಂದಗತಿಯ ಸಂಭಾವ್ಯ ಕುಸಿತವನ್ನು ಸೂಚಿಸಲಾಗಿದೆ. ಅದರಲ್ಲೂ ಮುಂಬೈ ಮತ್ತು ಹತ್ತಿರದ ಗ್ರಾಮೀಣ ಹಾಗೂ ಅರೆ ನಗರ ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಚಂದಾದಾರರನ್ನು ಪಡೆದುಕೊಳ್ಳಲು ಟೆಲಿಕಾಂ ಸಂಸ್ಥೆಗಳು ಇನ್ಮುಂದೆ ಭಾರೀ ಶಿಸ್ತಿನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಭಾರತೀಯ ಟೆಲಿಕಾಂ ಕ್ರಿಯಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಲೇ ಇದ್ದು, ಬಳಕೆದಾರರು ಆಕರ್ಷಕ ಪ್ಲ್ಯಾನ್‌ಗಳು ಮತ್ತು ಇತರೆ ಸೇವೆಗಳ ಲಾಭ ಪಡೆದುಕೊಳ್ಳುವ ಉದ್ದೇಶದಿಂದ ಆಪರೇಟರ್‌ಗಳನ್ನು ಬದಲಾಯಿಸಿಕೊಂಡು ಬರುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಟೆಲಿಕಾಂ ಸಂಸ್ಥೆಗಳು ಸಹ ಗ್ರಾಹಕರನ್ನು ತಮ್ಮತ್ತ ಸೆಳೆಯುವ ಉದ್ದೇಶದಿಂದ ಕೆಲವು ತಂತ್ರಗಳನ್ನು ಪರಿಷ್ಕರಿಸಲು ಮುಂದಾಗಿದ್ದಾರೆ. ಈ ಬೆಳವಣಿಗೆ ಭಾರತದಲ್ಲಿ ಹೆಚ್ಚು ಸ್ಪರ್ಧಾತ್ಮಕ ಮತ್ತು ಗ್ರಾಹಕ-ಕೇಂದ್ರಿತ ಟೆಲಿಕಾಂ ಪರಿಸರಕ್ಕೆ ಉತ್ತಮ ದಾರಿ ಮಾಡಿಕೊಡುತ್ತಿದೆ.
ಏನಿದು ಎಮ್‌ಎನ್‌ಪಿ?: ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNP) ಎಂದು ಕರೆಯಲ್ಪಡುವ ಸಿಮ್ ಪೋರ್ಟಬಿಲಿಟಿಯಿಂದ ಮೊಬೈಲ್ ಹೊಂದಿರುವ ಗ್ರಾಹಕರು ತಮಗೆ ಅಗತ್ಯ ಇರುವ ಸೇವೆಗೆ ನೆಟ್‌ವರ್ಕ್ ಅನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಇದು ಉಚಿತವಾಗಿ ಲಭ್ಯವಿದೆ. ಈ ಮೂಲಕ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸದೆಯೇ ತಮ್ಮ ಸೇವಾ ಪೂರೈಕೆದಾರರನ್ನು ಬದಲಾಯಿಸಲು ಅನುಕೂಲ.

ನೀವೇನಾದರೂ ಈಗಿರುವ ಸಿಮ್‌ನಿಂದ ಬೇಸತ್ತು ಬೇರೆ ಸಿಮ್ ನ ನೆಟ್‌ವರ್ಕ್ ಸೇವೆ ಪಡೆದುಕೊಳ್ಳಲು ಮುಂದಾಗಿದ್ದೀರ ಎಂದಾದರೆ ಮೊದಲು ನಿಮ್ಮ ಸ್ಮಾರ್ಟ್‌ಫೋನ್ ನ ಮೆಸೆಜ್ ವಿಭಾಗದಲ್ಲಿ 'PORT' ಎಂದು ಬರೆದು ಸ್ವಲ್ಪ ಸ್ಪೇಸ್ ಬಿಡಿ ಬಳಿಕ ಪೋರ್ಟ್ ಮಾಡಬೇಕಾದ ಹತ್ತು ಅಂಕಿಯ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಿ. ಇದಾದ ನಂತರ 1900 ಗೆ ಎಸ್ಎಮ್‌ಎಸ್ ಮಾಡಿ.


Click it and Unblock the Notifications








