ಟೈಟಾನಿಕ್ ಹಡಗಿನಂತೆ ದುರಂತ ಅಂತ್ಯ ಕಂಡ 'ಟೈಟಾನ್' ಜಲಾಂತರ್ಗಾಮಿ ನೌಕೆ!
ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿ ದುರಂತ ಕಥೆಯಾಗಿ ಉಳಿದಿರುವ ಟೈಟಾನಿಕ್ ಹಡಗಿನ ಅವಶೇಷ ವೀಕ್ಷಣೆಗೆ ತೆರಳಿ ನಾಪತ್ತೆಯಾಗಿದ್ದ ಸಬ್ ಮರಿನ್ ಟೈಟಾನ್ ನೌಕೆಯು ದುರಂತ ಸ್ಫೋಟಗೊಂಡಿದ್ದು (catastrophic implosion), ಅದರಲ್ಲಿದ್ದ ಐವರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ಅಮೆರಿಕ ಕೋಸ್ಟ್ ಗಾರ್ಡ್ ಹೇಳಿದೆ.
ಹೌದು, ಕಣ್ಮರೆಯಾಗಿದ್ದ ಟೈಟಾನ್ ಸಬ್ ಮರಿನ್ ನೌಕೆ ದುರಂತ ಸ್ಪೋಟವಾಗಿದೆ. ರೊಬೊಟಿಕ್ ಡೈವಿಂಗ್ ವಾಹನವು ಸಾಗರದ ಆಳದಲ್ಲಿ ಸಬ್ ಮರಿನ್ ಟೈಟಾನ್ ನೌಕೆಯ ಕೆಲವು ಭಾಗಗಳನ್ನು/ ತುಣುಕುಗಳನ್ನು ಗುರುತಿಸಿದೆ ಎಂದು ವರದಿಯಾಗಿದೆ. ಸಮುದ್ರದ ಆಳಕ್ಕೆ ಹೋದಂತೆ, ನೀರಿನ ಒತ್ತಡವು ಅಧಿಕವಾಗುತ್ತದೆ. ಈ ಪರಿಣಾಮದಿಂದಾಗಿ ಜಲಾಂತರ್ಗಾಮಿ ಟೈಟಾನ್ ಸ್ಫೋಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಭಾನುವಾರ ಟೈಟಾನ್ 1 ಗಂಟೆ 45 ನಿಮಿಷ ಪ್ರಯಾಣ ಬೆಳೆಸಿ, ಆ ನಂತರ ಸಂಪರ್ಕದಿಂದ ಮರೆಯಾಗಿತ್ತು. ಕಳೆದ ಭಾನುವಾರದಿಂದ ಅಮೆರಿಕ ಮತ್ತು ಕೆನಡಾ ಕರಾವಳಿ ಪಡೆಗಳು ಜಲಾಂತರ್ಗಾಮಿ ಟೈಟಾನ್ ಪತ್ತೆಗಾಗಿ ನಿರಂತರ ತೀವ್ರ ಶೋಧ ಕಾರ್ಯ ನಡೆಸಿದವು. ನೀರಿನ ಆಳದಲ್ಲಿ ಪತ್ತೆಯಾದ ಟೈಟಾನ್ ನೌಕೆಯ ಅವಶೇಷಗಳನ್ನು ಪರೀಕ್ಷಿಸಿದ ಬಳಿಕ ಅಮೆರಿಕ ಕರಾವಳಿ ಪಡೆ ನೌಕೆಯು ಸ್ಫೋಟ ಆಗಿರುವ ನಿರ್ಣಯಕ್ಕೆ ಬಂದಿದೆ.
ಇನ್ನು ಕಣ್ಮರೆಯಾಗಿದ್ದ ಸಬ್ ಮರಿನ್ ಟೈಟಾನ್ ನಲ್ಲಿ ಬ್ರಿಟನ್‌ನ ಆಕ್ಷನ್ ಗ್ರೂಪ್ ಹೂಡಿಕೆ ಸಂಸ್ಥೆಯ ಸಂಸ್ಥಾಪಕ ಮತ್ತು ಸಾಹಸಪ್ರಿಯ ಹಮೀಶ್ ಹರ್ಡಿಂಗ್ (58), ಫ್ರೆಂಚ್ ಕಡಲ ತಜ್ಞ ಪೌಲ್ ಹೆನ್ರಿ ನರ್ಜೋಲೆಟ್ (77), ವಾಷಿಂಗ್ಟನ್ ಮೂಲದ ಓಷನ್‌ಗೇಟ್ ಕಂಪನಿ ಎವೆರೆಟ್‌ನ ಸಿಇಓ ಸ್ಟಾಕ್ಟನ್ ರಶ್ (61), ಪಾಕಿಸ್ತಾನದ ಉದ್ಯಮಿ ಶಹಜಾದ ದಾವೂದ್ (48) ಮತ್ತು ಅವರ ಮಗ ಸುಲೇಮಾನ್ ದಾವೂದ್ (19) ಪ್ರಯಾಣಿಸಿದ್ದರು.
ಟೈಟಾನ್ ಸಬ್‌ಮರ್ಸಿಬಲ್ ನೌಕೆಯ ಮಾಹಿತಿ:
ದುರಂತ ಅಂತ್ಯ ಕಂಡಿರುವ ಟೈಟಾನ್ ಸಬ್‌ಮರ್ಸಿಬಲ್ ನೌಕೆಯು ಐದು ಜನ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಸಂಸ್ಥೆಯ ವೆಬ್‌ಸೈಟ್‌ನ ಪ್ರಕಾರ 'ಟೈಟಾನಿಯಂ ಮತ್ತು ಫಿಲಮೆಂಟ್ ಗಾಯದ ಕಾರ್ಬನ್ ಫೈಬರ್' ನಿಂದ ಇದನ್ನು ಮಾಡಲಾಗಿದೆ.
ಟೈಟಾನ್ ನೌಕೆಯು 22 ಅಡಿ ಉದ್ದದ ಕ್ರಾಫ್ಟ್ ಹಾಗೂ 10,432 ಕೆಜಿ ತೂಕ ಹೊಂದಿತ್ತು. ಈ ನೌಕೆ 4,000 ಮೀಟರ್ ಅಥವಾ 13,123 ಅಡಿಗಳಷ್ಟು ಸಾಗರದ ಆಳಕ್ಕೆ ಇಳಿಯುವ ಬಲವನ್ನು ಪಡೆದಿದೆ. ಜೊತೆಗೆ ಆಳವಾದ ಸಾಗರದ ಪರಿಶೋಧನೆಗೆ ನೆರವಾಗಲು ಕ್ಯಾಮೆರಾಗಳು, ಲೈಟ್‌ಗಳು ಮತ್ತು ಸ್ಕ್ಯಾನರ್‌ಗಳ ಬ್ಯಾಟರಿಯನ್ನು ಇದು ಒಳಗೊಂಡಿತ್ತು.
ಟೈಟಾನಿಕ ಅವಶೇಷ ನೋಡುವ ಯಾನ ದುಬಾರಿ!
ದಶಕಗಳ ಹಿಂದೆ ಮುಳುಗಡೆಯಾಗಿರುವ ಪ್ರಸಿದ್ಧ ಟೈಟಾನಿಕ್ ಹಡಗಿನ ಅವಶೇಷ ಕಣ್ತುಂಬಿಕೊಳ್ಳುವ ಈ ಜಲಯಾನ ರೋಚಕ ಮತ್ತು ದುಬಾರಿ. ಟೈಟಾನಿಕ ಹಡಗಿನ ಅವಶೇಷ ವೀಕ್ಷಿಸುವ ಈ ಪ್ರಯಾಣದ ಶುಲ್ಕ ಒಬ್ಬರಿಗೆ 2,50,000 ಡಾಲರ್ (ಭಾರತದಲ್ಲಿ ಅಂದಾಜು 20,497,987ರೂ) ಎನ್ನಲಾಗಿದೆ.

ದುರಂತ ಕಥೆಯಾಗಿ ಉಳಿದ ಟೈಟಾನಿಕ್ ಹಡಗು
1912 ರಲ್ಲಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದೈತ್ಯ ಮಂಜುಗಡ್ಡೆಗೆ ಅಪ್ಪಳಿಸಿ ಮುಳುಗಡೆಯಾದ ಟೈಟಾನಿಕ್ ಹಡಗು ದುರಂತ ಕಥೆಯಾಗಿ ಉಳಿದಿದೆ. ಟೈಟಾನಿಕ್ ಹಡಗು ಇಂಗ್ಲೆಂಡ್‌ನ ಸೌತಾಂಪ್ಟನ್ ಪ್ರದೇಶದಿಂದ ಯುಎಸ್‌ಎಯ ನ್ಯೂಯಾರ್ಕ್ ಪ್ರದೇಶಕ್ಕೆ ಪ್ರಯಾಣ ಆರಂಭಿಸಿತ್ತು. ಆದರೆ ಸಾಗರದ ಮಧ್ಯದಲ್ಲೇ ಅದು ಮುಳುಗಡೆ ಆಯಿತು. ಈ ಘಟನೆಯಲ್ಲಿ ಸುಮಾರು 1500ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪಿದರು.
ಸಬ್‌ಮರ್ಸಿಬಲ್ ಮತ್ತು ಸಬ್ ಮರಿನ್ ನಡುವಿನ ವ್ಯತ್ಯಾಸ ಏನು?
ಜಲಾಂತರ್ಗಾಮಿ ನೌಕೆಯ (submersible) ಹಾಗೂ ಜಲಾಂತರ್ಗಾಮಿ (submarine) ನಡುವೆ ವ್ಯತ್ಯಾಸ ಇದೆ. ಸಬ್ ಮರಿನ್ ನೌಕೆ ಬಂದರನ್ನು ಬಿಟ್ಟು ತನ್ನ ಸಾಮರ್ಥ್ಯದ ಬಲದೊಂದಿಗೆ ಮರಳಿ ಬಂದರಿಗೆ ಬರುವ ಶಕ್ತಿ ಒಳಗೊಂಡಿರುತ್ತದೆ. ಆದರೆ ಸಬ್‌ಮರ್ಸಿಬಲ್ ನೌಕೆ ಸೀಮಿತ ವಿದ್ಯುತ್ ಮೀಸಲು ಪಡೆದಿದ್ದು, ಇದನ್ನು ಲಾಂಚ್ ಮಾಡಲು, ಮರುಪಡೆಯಲು ಮುಖ್ಯ ಹಡಗು ನೆರವು ಅಗತ್ಯ ಇರುತ್ತದೆ.


Click it and Unblock the Notifications








