Modi US visit: 10 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾದ ಗೂಗಲ್, ಮೋದಿಗೆ ಸುಂದರ್ ಪಿಚೈ ಹೇಳಿದ್ದೇನು?
ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ವಿವಿಧ ಕಂಪೆನಿಗಳ ಸಿಇಓಗಳೊಂದಿಗೆ ಮಹತ್ವದ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅದರಂತೆ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಮೋದಿಯನ್ನು ಭೇಟಿಯಾಗಿದ್ದು, ಇದಕ್ಕೂ ಮೊದಲು ಎಲಾನ್ ಮಸ್ಕ್ ಅವರೂ ಸಹ ಮೋದಿ ಭೇಟಿಯಾಗಿ ಸ್ಟಾರ್‌ಲಿಂಕ್ ಬಗ್ಗೆ ಮಾತನಾಡಿದ್ದರು.
ಹೌದು, ಇದೀಗ ಸುಂದರ್ ಪಿಚೈ ಅವರೊಂದಿಗೆ ಪ್ರಮುಖ ಟೆಕ್ನಾಲಜಿ ಸಂಬಂಧಿ ವಿಷಯಗಳ ಮೇಲೆ ಚರ್ಚೆ ನಡೆಸಲಾಗಿದ್ದು, ಗುಜರಾತ್‌ನಲ್ಲಿ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವುದಾಗಿ ಮತ್ತು ಭಾರತದ ಡಿಜಿಟಲೀಕರಣ ನಿಧಿಯಲ್ಲಿ $10 ಬಿಲಿಯನ್ ಹೂಡಿಕೆ ಮಾಡುವುದಾಗಿ ಪಿಚೈ ಘೋಷಣೆ ಮಾಡಿದ್ದಾರೆ. ಈ ಮೂಲಕ ಭಾರತದ ತಂತ್ರಜ್ಞಾನ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.

ಮೋದಿಗೆ ಸುಂದರ್ ಪಿಚೈರಿಂದ ಭರವಸೆ: ಅಮೆರಿಕಕ್ಕೆ ಐತಿಹಾಸಿಕ ಭೇಟಿ ನೀಡಿರುವ ಪ್ರಧಾನಿ ಮೋದಿಯವರನ್ನು ಭೇಟಿಯಾಗುವುದು ಗೌರವದ ವಿಷಯವಾಗಿದೆ. ಅದರಂತೆ ನಾವು ಭಾರತದ ಡಿಜಿಟಲೀಕರಣ ನಿಧಿಯಲ್ಲಿ 10 ಶತಕೋಟಿ ಡಾಲರ್‌ಗಳ ಗೂಗಲ್ ಹೂಡಿಕೆಯ ಬಗ್ಗೆ ಪ್ರಧಾನಿಯೊಂದಿಗೆ ಮಾತನಾಡಿದ್ದೇವೆ. ಹಾಗೂ ಗುಜರಾತ್‌ನ ಗಿಫ್ಟ್ ಸಿಟಿಯಲ್ಲಿ ನಮ್ಮ ಗ್ಲೋಬಲ್ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವ ಬಗ್ಗೆ ತಿಳಿಸಿದ್ದೇವೆ ಎಂದಿದ್ದಾರೆ.
ಇನ್ನು ಸುಂದರ್ ಪಿಚೈ ಅವರು ಗುಜರಾತ್‌ನ ಗಾಂಧಿನಗರವನ್ನು ಈ ವೇಳೆ ಗಿಫ್ಟ್ ಸಿಟಿ ಎಂದು ಉಲ್ಲೇಖ ಮಾಡಿದ್ದಾರೆ. ಗಿಫ್ಟ್ ಎಂದರೆ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ ಎಂದರ್ಥ. ಈ ಮೂಲಕ ಇನ್ಮುಂದೆ ಗಾಂಧಿನಗರವನ್ನು ಇತರೆ ದೇಶಗಳು ತಿರುಗಿ ನೋಡುವಂತೆ ಅಭಿವೃದ್ಧಿಪಡಿಸಲು ಮೋದಿ ಮುಂದಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಕೃತಕ ಬುದ್ಧಿಮತ್ತೆಯಲ್ಲಿ ಕೆಲಸ ಮಾಡುವ ಕಂಪನಿಗಳು ಸೇರಿದಂತೆ ಹೂಡಿಕೆಯನ್ನು ಮುಂದುವರಿಸುತ್ತೇವೆ. ಅದರ ಭಾಗವಾಗಿ ನಾವು 100 ಭಾಷೆಯ ಉಪಕ್ರಮವನ್ನು ಕೈಗೊಂಡಿದ್ದೇವೆ. ಶೀಘ್ರದಲ್ಲೇ ಹೆಚ್ಚಿನ ಭಾರತೀಯ ಭಾಷೆಗಳನ್ನು ತರುತ್ತೇವೆ ಎಂದೂ ಸಹ ಪಿಚೈ ಹೇಳಿದ್ದಾರೆ.
ಮುಂದುವರೆದು ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರದ ಪ್ರಮುಖ ಅಭಿಯಾನವಾದ ಡಿಜಿಟಲ್ ಇಂಡಿಯಾದ ಬಗ್ಗೆ ಹೊಗಳಿದ ಪಿಚ್ಚೈ, ಈ ಅಭಿಯಾನವು ಇತರ ದೇಶಗಳು ಅನುಕರಿಸಲು ಬಯಸುತ್ತವೆ ಎಂದು ತಿಳಿಸಿದ್ದಾರೆ. ಇನ್ನು ವಿಶೇಷ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುವ ತಂಡಗಳೊಂದಿಗೆ ಗೂಗಲ್ ಪೇ ಮತ್ತು ಗೂಗಲ್ ನಲ್ಲಿ ಇತರ ಉತ್ಪನ್ನ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ ಎಂದು ಗೂಗಲ್ ವಕ್ತಾರರು ಸಹ ಈ ವೇಳೆ ಭಾರತಕ್ಕೂ ಹಾಗೂ ಗೂಗಲ್ ಗೂ ಇರುವ ನಂಟಿನ ಬಗ್ಗೆ ವಿವರಿಸಿದ್ದಾರೆ.
ಗೂಗಲ್ 2004 ರಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಪ್ರತಿಭಾವಂತ ಉದ್ಯೋಗಿಗಳೊಂದಿಗೆ ದೇಶದಾದ್ಯಂತ ಐದು ಪ್ರಮುಖ ನಗರಗಳಲ್ಲಿ ಕಚೇರಿಗಳನ್ನು ಹೊಂದಿದೆ. ಅದರಲ್ಲಿ ಬೆಂಗಳೂರು, ಹೈದರಾಬಾದ್, ಗುರುಗಾಂವ್, ದೆಹಲಿ ಎನ್‌ಸಿಆರ್, ಮುಂಬೈ ಮತ್ತು ಪುಣೆಯಲ್ಲಿ ಕಚೇರಿಗಳನ್ನು ಹೊಂದಿದ್ದೇವೆ ಎಂದಿದ್ದಾರೆ.
ಇನ್ನು ನಾಲ್ಕು ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುವ 10 ಶತಕೋಟಿ ಡಾಲರ್ ಹೂಡಿಕೆ ಮಾಡುವ ಬದ್ಧತೆಯನ್ನು ಎತ್ತಿಹಿಡಿದಿರುವ ಗೂಗಲ್, ಮೊದಲನೆಯದಾಗಿ ಪ್ರತಿಯೊಬ್ಬ ಭಾರತೀಯರಿಗೆ ಅವರ ಸ್ವಂತ ಭಾಷೆಯಲ್ಲಿ ಕೈಗೆಟುಕುವ ಪ್ರವೇಶ ಮತ್ತು ಮಾಹಿತಿಯನ್ನು ಸಕ್ರಿಯಗೊಳಿಸುವುದು. ಎರಡನೆಯದಾಗಿ ಭಾರತದ ವಿಶಿಷ್ಟ ಅಗತ್ಯಗಳಿಗೆ ಸಂಬಂಧಿಸಿದ ಹೊಸ ಸೇವೆಗಳನ್ನು ರೂಪಿಸುವುದು ಹಾಗೂ ಮೂರನೆಯದಾಗಿ, ಡಿಜಿಟಲ್ ರೂಪಾಂತರವನ್ನು ಪ್ರಾರಂಭಿಸಿದಾಗ ವ್ಯವಹಾರಗಳನ್ನು ಸಶಕ್ತಗೊಳಿಸುವುದು. ನಾಲ್ಕನೆಯದಾಗಿ ಸಾಮಾಜಿಕ ಒಳಿತಿಗಾಗಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವುದಾಗಿದೆ.
ಕಳೆದ ವರ್ಷದ ಅಂತ್ಯದ ವೇಳೆಯಲ್ಲೂ ಸಹ ಗೂಗಲ್ ಭಾರತ ಡಿಜಿಟಲೈಸೇಶನ್ ಫಂಡ್ ಅಡಿಯಲ್ಲಿ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳ ಮೇಲೆ ಗಮನ ನೀಡುವ ಮೂಲಕ ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ಘೋಷಿಸಿತ್ತು. ಅದರಂತೆ ಎಐ ಅನ್ನು ಬಳಸಿಕೊಂಡು ಬೆಂಗಳೂರಿನ ಗೂಗಲ್ ಎಐ ಸಂಶೋಧನಾ ಕೇಂದ್ರವು 100 ಕ್ಕೂ ಹೆಚ್ಚು ಭಾರತೀಯ ಭಾಷೆಗಳನ್ನು ಬೆಂಬಲಿಸಲು ಮಾಟೆಲ್‌ಗಳನ್ನು ನಿರ್ಮಿಸುತ್ತಿದೆ. ಭಾರತದ ಭಾಷಿಣಿ ಯೋಜನೆಯ ಮೂಲಕ ಭಾಷಣ ಡೇಟಾದ ಮುಕ್ತ ಮೂಲವನ್ನು ಬೆಂಬಲಿಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನೊಂದಿಗೆ ಕೆಲಸ ಮಾಡಲಾಗುತ್ತಿದೆ.

ಈ ಭೇಟಿಯಲ್ಲಿ ಸುಂದರ್ ಪಿಚೈ ಒಳಗೊಂಡಂತೆ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಜೆರೋಡಾ ಮತ್ತು ಟ್ರೂ ಬೀಕನ್ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್ ಮನ್ ಮೊದಲಾದವರು ಹಾಜರಿದ್ದರು.


Click it and Unblock the Notifications








