ನೆಟ್‌ಫ್ಲಿಕ್ಸ್‌ನ ಈ ಚಂದಾದಾರರಿಗೆ ಮತ್ತಷ್ಟು ಸೌಲಭ್ಯ: ಯಾವುದೇ ಹೆಚ್ಚುವರಿ ವೆಚ್ಚವಿಲ್ಲ!
ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಮುಖ ಎನಿಸಿಕೊಂಡಿರುವ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸೇವೆ ನೀಡುತ್ತಾ ಬರುತ್ತಿದೆ. ಇದರ ಭಾಗವಾಗಿಯೇ ತನ್ನ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳಲು ಹಾಗೂ ಇನ್ನೂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಹೊಸ ರೀತಿಯ ಪ್ಲ್ಯಾನ್‌ಗಳನ್ನು ಸಹ ಘೋಷಣೆ ಮಾಡಿಕೊಂಡು ಬರುತ್ತಿದ್ದು, ಇದೀಗ ಮತ್ತೊಂದು ಸಂತಸದ ಸುದ್ದಿಯನ್ನು ನೀಡಿದೆ.
ಹೌದು, ನೆಟ್‌ಫ್ಲಿಕ್ಸ್ ಹಾಗೂ ಇನ್ನಿತರೆ ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಈಗ ಜಿಯೋ ಸಿನಿಮಾ ಮುನ್ನುಗ್ಗುತ್ತಿದೆ.ಈ ನಡುವೆ ನೆಟ್‌ಫ್ಲಿಕ್ಸ್ ಸಹ ವಿಭಿನ್ನ ರೀತಿಯಲ್ಲಿ ಚಂದಾದಾರನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದು,ಇದರ ಭಾಗವಾಗಿಯೇ ನೆಟ್‌ಫ್ಲಿಕ್ಸ್ ನೆಚ್ಚಿನ ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಹೆಚ್ಚು ಕೈಗೆಟುಕುವ ಮಾರ್ಗವನ್ನು ಹುಡುಕುತ್ತಿರುವ ಚಂದಾದಾರರಿಗೆ ಅವಕಾಶ ಕಲ್ಪಿಸುತ್ತಿದೆ. ಹಾಗಿದ್ರೆ, ಏನಿದು ನೆಟ್‌ಫ್ಲಿಕ್ಸ್ ನ ಹೊಸ ಪ್ಲ್ಯಾನ್?, ಇದರಿಂದ ಬಳಕೆದಾರರಿಗೆ ಆಗುವ ಲಾಭ ಏನು? ಎಂಬ ಮಾಹಿತಿಯನ್ನು ತಿಳಿಡಿಕೊಡಲಾಗಿದೆ ಓದಿರಿ.

ಅಗ್ಗದ ಜಾಹೀರಾತು ಬೆಂಬಲಿತ ಯೋಜನೆ: ಈ ಹಿಂದೆ ಜಾಹೀರಾತು ಬೆಂಬಲಿತ ಪ್ಲ್ಯಾನ್ ಅನ್ನು ಈ ನೆಟ್‌ಫ್ಲಿಕ್ಸ್ ಘೋಷಣೆ ಮಾಡಿತ್ತು. ಈ ಬಗ್ಗೆ ಉಲ್ಲೇಖ ಮಾಡಿರುವ ಕಂಪೆನಿ ಇದರಿಂದ ಸಾಕಷ್ಟು ಲಾಭ ಗಳಿಸಿಕೊಂಡಿದೆಯಂತೆ. ಇದರಿಂದಾಗಿ ಈ ರೀತಿಯ ಪ್ಲ್ಯಾನ್‌ಗಳಲ್ಲಿ ಇನ್ನಷ್ಟು ಹೆಚ್ಚಿನ ಫೀಚರ್ಸ್ ಅನ್ನು ನೀಡುವ ಬಗ್ಗೆ ಘೋಷಣೆ ಮಾಡಿದೆ. ಈ ಮೂಲಕ ಬಳಕೆದಾರರು ಈ ಹಿಂದೆ ಪಡೆದುಕೊಳ್ಳುತ್ತಿದ್ದ ಸೇವೆಗಿಂತ ಇನ್ನೂ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಈ ಸ್ಟ್ರೀಮಿಂಗ್ ದೈತ್ಯ ಈ ಬಗ್ಗೆ ಮಾಹಿತಿ ನೀಡಿದ್ದು, ಅದರಂತೆ ಚಂದಾದಾರರಿಗೆ ಈ ಫೀಚರ್ಸ್‌ಗಳು ಉತ್ತಮ ಮೌಲ್ಯವನ್ನು ಒದಗಿಸುತ್ತವೆ ಎಂದು ತಿಳಿಸಿದೆ. ಅಂದರೆ ವಿಡಿಯೋ ಗುಣಮಟ್ಟವನ್ನು 720p ನಿಂದ 1080p ಗೆ ಹೆಚ್ಚಿಸುತ್ತಿದೆ ಮತ್ತು ಬಳಕೆದಾರರಿಗೆ ಏಕಕಾಲದಲ್ಲಿ ಎರಡು ಸ್ಟ್ರೀಮ್‌ಗಳನ್ನು ವೀಕ್ಷಿಸಲು ಅವಕಾಶ ನೀಡುತ್ತದೆ. ಈ ಯೋಜನೆಯನ್ನು ಆಯ್ದ ದೇಶಗಳಲ್ಲಿ ಮಾತ್ರ ಪ್ರಾರಂಭಿಸಲಾಗಿರುವುದರಿಂದ, ಈ ಹೊಸ ಫೀಚರ್ಸ್ ಇಂದಿನಿಂದ ಕೆನಡಾ ಮತ್ತು ಸ್ಪೇನ್‌ನಲ್ಲಿರುವ ಚಂದಾದಾರರಿಗೆ ಲಭ್ಯವಿರಲಿದೆ ಎಂದು ತಿಳಿಸಿದೆ.

ಕಂಪೆನಿಯ ನವೆಂಬರ್‌ನಲ್ಲಿ ಪ್ರಾರಂಭಿಸಲಾದ ತನ್ನ ಬೇಸಿಕ್ ವಿಥ್ ಆಡ್ಸ್ ಯೋಜನೆಯ ಪ್ರಗತಿಯೊಂದಿಗೆ ನೆಟ್‌ಫ್ಲಿಕ್ಸ್ ಸಂತೋಷವಾಗಿದೆ. ಜಾಹೀರಾತುಗಳ ಯೋಜನೆಗಾಗಿ ಯುಎಸ್ ನಲ್ಲಿನ ಪ್ರತಿ ಸದಸ್ಯತ್ವದ ಒಟ್ಟು ಸರಾಸರಿ ಆದಾಯವು ಈಗಾಗಲೇ ಪ್ರಮಾಣಿತ ಪ್ಲ್ಯಾನ್ ಅನ್ನು ಮೀರಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಜೊತೆಗೆ ಈ ರೀತಿಯ ಕ್ರಮವು ಗ್ರಾಹಕರನ್ನು ಹೆಚ್ಚು ಜಾಹೀರಾತುಗಳ ಯೋಜನೆಗೆ ಆಕರ್ಷಿಸಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಅತ್ಯಂತ ಒಳ್ಳೆಯ ಚಂದಾದಾರಿಕೆ ಆಯ್ಕೆಯಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.
ಇದೀಗ ನೆಟ್‌ಫ್ಲಿಕ್ಸ್ ಬೇಸಿಕ್ ವಿಥ್ ಆಡ್ಸ್ ಯೋಜನೆಯಲ್ಲಿ ಹೆಚ್ಚಿನ ಟಿವಿ ಶೋಗಳು ಮತ್ತು ಚಲನಚಿತ್ರಗಳು ಲಭ್ಯವಾಗುವಂತೆ ಮಾಡಲು ಕಂಟೆಂಟ್ ಮಾಲೀಕರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಕಾರಣಕ್ಕೆ ಚಂದಾದಾರರು ತಮಗೆ ಬೇಕಾದ ಹೆಚ್ಚಿನ ಕಂಟೆಂಟ್ ಅನ್ನು ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಯಾಕೆಂದರೆ ಈ ಹಿಂದೆ ಈ ಪ್ಲ್ಯಾನ್ ಅನ್ನು ಘೋಷಣೆ ಮಾಡಿದ್ದಾಗ ಅದರಲ್ಲಿ ಕಂಟೆಂಟ್ ಕೊರತೆಯ ಬಗ್ಗೆ ಹಲವು ದೂರುಗಳು ಕೇಳಿಬಂದಿದ್ದವಂತೆ.

ತನ್ನ ಬೇಸಿಕ್ ವಿಥ್ ಆಡ್ಸ್ ಪ್ಲ್ಯಾನ್ ಅಪ್‌ಗ್ರೇಡ್ ಮಾಡುವುದರ ಜೊತೆಗೆ ಕಂಪೆನಿಯು ಇತ್ತೀಚೆಗೆ ಕೆಲವು ಬದಲಾವಣೆಗಳನ್ನೂ ಸಹ ಮಾಡಿದೆ. ಅದರಲ್ಲಿ ಪಾಸ್‌ವರ್ಡ್ ಹಂಚಿಕೆ ವಿಚಾರದ ಹಾಗೂ DVD ಶಿಪ್ಪಿಂಗ್ ಸೇವೆ ಸ್ಥಗಿತ ಸಹ ಪ್ರಮುಖವಾಗಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಜಾಹೀರಾತು ಬೆಂಬಲಿತ ಯೋಜನೆಗೆ ಹೆಚ್ಚಿನ ಚಂದಾದಾರಿಕೆ ಸಹ ಜರುಗುತ್ತಿವೆ ಎನ್ನಲಾಗಿದೆ. ಈ ಮೂಲಕ ಬಳಕೆದಾರರು ಇನ್ನೂ ಹೆಚ್ಚಿನ ತಮ್ಮ ನೆಚ್ಚಿನ ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಸಹಾಯ ಆಗಲಿದೆ.


Click it and Unblock the Notifications








