ಆ ರೀತಿ ಏನಾದರೂ ಮಾಡಿದ್ರೆ UPI ಬಳಸುವುದನ್ನೇ ನಿಲ್ಲಿಸುತ್ತೇವೆ ಎಂದ ಜನರು! ಅಷ್ಟಕ್ಕೂ ಏನಿದು ವಿಷಯ?
ಇಂದಿನ ದಿನಗಳಲ್ಲಿ ಯುಪಿಐ (UPI) ಆಧಾರಿತ ಪಾವತಿ ವ್ಯವಸ್ಥೆ ವ್ಯಾಪಕವಾಗುತ್ತಿದೆ. ಈ ಮೂಲಕ ಕ್ಷಣ ಮಾತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಜನರು ಹಣಕಾಸಿನ ವ್ಯವಹಾರ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಅಚ್ಚರಿ ಮಾಹಿತಿ ಹೊರಬಿದ್ದಿದ್ದು, ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಹೌದು, ನೀವು ಯುಪಿಐ ಪಾವತಿ ವ್ಯವಹಾರ ಮಾಡುತ್ತಿದ್ದೀರಾ ಎಂದರೆ ಖಂಡಿತಾ ನಿಮಗೆ ಈ ವಿಷಯ ಶಾಕ್ ಕೊಡಬಹುದು. ಈ ಸಂಬಂಧ ದೊಡ್ಡ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಬಳಕೆದಾರರು ತಮ್ಮದೇ ಆದ ಅಭಿಪ್ರಾಯವನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗಿದ್ರೆ, ಬನ್ನಿ ಸಮೀಕ್ಷೆಯಿಂದ ತಿಳಿದುಬಂದಿದ್ದೇನು?, ಬಳಕೆದಾರರು ಈ ಸಂಬಂಧ ಹೇಳಿದ್ದೇನು ಅನ್ನೋದನ್ನು ಈ ಲೇಖನದ ಮೂಲಕ ತಿಳಿಯೋಣ.

ಯುಪಿಐ ಪಾವತಿಗಳ ಮೇಲೆ ಶುಲ್ಕ: ಈ ವಿಷಯಕ್ಕೆ ಸಂಬಂಧಿಸಿದಂತೆ 364 ಜಿಲ್ಲೆಗಳಲ್ಲಿನ ನಾಗರಿಕರಿಂದ 34,000ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ. ಈ ಸಮೀಕ್ಷೆಯ ಪ್ರಕಾರ ತಿಳಿದುಬಂದ ವಿಚಾರ ಏನೆಂದರೆ ಯುಪಿಐನಲ್ಲಿ ವಹಿವಾಟು ಶುಲ್ಕವನ್ನು ವಿಧಿಸಿದರೆ ಜನರು ನೈಜ-ಸಮಯದ ಪಾವತಿ ವ್ಯವಸ್ಥೆಯನ್ನೇ ಬಳಕೆ ಮಾಡುವುದನ್ನು ನಿಲ್ಲಿಸುತ್ತೇವೆ ಎಂದಿದ್ದಾರೆ. ಆದರೆ, ಈ ಸಮೀಕ್ಷೆ ಮೂಲಕ ಕೆಲವು ವ್ಯಾಪಾರಿಗಳು ಯುಪಿಐ ಪಾವತಿಗಳ ಮೇಲೆ ಶುಲ್ಕವನ್ನು ವಿಧಿಸುತ್ತಿದ್ದಾರೆ ಎಂದು ಕಂಡುಕೊಳ್ಳಲಾಗಿದೆ.
ಸಮೀಕ್ಷೆಗೆ ಒಳಗಾದ 23% ಯುಪಿಐ ಬಳಕೆದಾರರು ಪಾವತಿಯ ಮೇಲೆ ವಹಿವಾಟು ಶುಲ್ಕವನ್ನು ಭರಿಸಲು ಸಿದ್ಧರಿದ್ದಾರೆ. ಆದರೆ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 73% ಜನರು ವಹಿವಾಟು ಶುಲ್ಕವನ್ನು ಏನಾದರೂ ಜಾರಿ ಮಾಡಿದ್ರೆ ಯುಪಿಐ ಬಳಕೆ ಮಾಡುವುದನ್ನೇ ನಿಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ವಿಶೇಷ ಸಮೀಕ್ಷೆಯನ್ನು ಲೋಕಲ್ ಸರ್ಕಲ್ಸ್ ನಡೆಸಿದೆ. ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ 67% ಪುರುಷರು ಮತ್ತು 33% ಮಹಿಳೆಯರು ಇದ್ದರು.

ಈ ಯುಪಿಐ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 2022 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿವಿಧ ಮೊತ್ತದ ಬ್ಯಾಂಡ್‌ಗಳ ಆಧಾರದ ಮೇಲೆ ಯುಪಿಐ ಪಾವತಿಗಳ ಮೇಲೆ ಶ್ರೇಣೀಕೃತ ರಚನೆ ಶುಲ್ಕವನ್ನು ಪ್ರಸ್ತಾಪಿಸುವ ಚರ್ಚಾ ಪ್ರಕಟಣೆಯನ್ನು ಬಿಡುಗಡೆ ಮಾಡಿತ್ತು. ಇದಾದ ನಂತರದಲ್ಲಿ ಅಂತಹ ಶುಲ್ಕವನ್ನು ವಿಧಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿತ್ತು.
ಇಷ್ಟೆಲ್ಲಾ ಆದರೂ ಸಹ ಕಳೆದ ವರ್ಷದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ತಮ್ಮ ಯುಪಿಐ ಪಾವತಿಯ ಮೇಲೆ ವಹಿವಾಟು ಶುಲ್ಕವನ್ನು ಪಡೆದಿದ್ದಾರೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಸಾಕಷ್ಟು ಜನರು ಹೇಳಿಕೊಂಡಿದ್ದಾರೆ. ಅದರಲ್ಲೂ 37% ಯುಪಿಐ ಬಳಕೆದಾರರು ಕಳೆದ 12 ತಿಂಗಳುಗಳಲ್ಲಿ ತಮ್ಮ ಯುಪಿಐ ಪಾವತಿಯ ಮೇಲೆ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ವಹಿವಾಟು ಶುಲ್ಕವನ್ನು ಪಾವತಿ ಮಾಡಿದ್ದಾರಂತೆ.
ಇನ್ನು ಈ ಶುಲ್ಕದ ವಿಚಾರದಲ್ಲಿ ಸಾಕಷ್ಟು ಜನರು ಐಆರ್‌ಸಿಟಿಸಿ ಕಡೆ ಬೆಟ್ಟು ಮಾಡಿ ತೋರಿಸಿದ್ದಾರೆ. ಐಆರ್‌ಸಿಟಿಸಿ ಯುಪಿಐ ಪಾವತಿಗಳಿಗೆ ವಿಧಿಸುವ 20 ರೂ.ಗಳು ಅನುಕೂಲ (convenience) ಶುಲ್ಕವಾಗಿದೆ. ಹಲವಾರು ಇತರ ಪಾವತಿ ಗೇಟ್‌ವೇಗಳು ಯುಪಿಐಗಾಗಿ ವಹಿವಾಟು ಶುಲ್ಕವನ್ನು ವಿಧಿಸುತ್ತಿವೆ ಎಂದು ವರದಿಯಾಗಿದೆ. ಇದರ ಜೊತೆಗೆ ಕೆಲವು ಪ್ಲಾಟ್‌ಫಾರ್ಮ್‌ಗಳು ಅಥವಾ ವ್ಯಾಪಾರಿಗಳು ಅನುಕೂಲ (convenience ) ಅಥವಾ ವಹಿವಾಟು ಶುಲ್ಕವನ್ನು ವಿಧಿಸುತ್ತಿದ್ದಾರೆ ಎಂದು ಲೋಕಲ್ ಸರ್ಕಲ್ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಯುಪಿಐನಿಂದ ಸಕ್ರಿಯಗೊಳಿಸಲಾದ ಡಿಜಿಟಲ್ ವ್ಯವಹಾರಗಳು ಭಾರತವನ್ನು ಸುಂಟರಗಾಳಿಯಂತೆ ತನ್ನ ವ್ಯಾಪ್ತಿಗೆ ಸೆಳೆದುಕೊಂಡುಬಿಟ್ಟಿದೆ. ಅತ್ಯಾಧುನಿಕ ಮಳಿಗೆಗಳಿಂದ, ಪಾನ್ ಅಂಗಡಿಗಳವರೆಗೆ, ದೇಶದ ಅತ್ಯಂತ ದೂರದ ಭಾಗಗಳಲ್ಲಿಯೂ ಸಹ ಆನ್‌ಲೈನ್ ಹಣ ವರ್ಗಾವಣೆಗಾಗಿ ಸ್ಕ್ಯಾನರ್‌ಗಳನ್ನು ನೀವು ಕಾಣಬಹುದು. ಫೆಬ್ರವರಿ 2024 ರಲ್ಲಿ ಭಾರತದಲ್ಲಿ ಯುಪಿಐ ವಹಿವಾಟಿನ ಮೌಲ್ಯವು 18.28 ಲಕ್ಷ ಕೋಟಿಗಳನ್ನು ತಲುಪಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಪ್ರತಿ ದಿನದ ವಹಿವಾಟುಗಳು ಜನವರಿಯಲ್ಲಿ 39.3 ಕೋಟಿಯಿಂದ ಕಳೆದ ತಿಂಗಳು 41.7 ಕೋಟಿಗೆ ಏರಿದೆ. ಯುಪಿಐ ವಹಿವಾಟುಗಳಿಗಾಗಿ ದೇಶದ ಅಗ್ರ ಮೂರು ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದ್ದ ಪೇಟಿಎಮ್ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದೆಯಾದರೂ ಈ ಯುಪಿಐ ಪಾವತಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ.


Click it and Unblock the Notifications








