ಮೊಟೊ G 5G (2023) ಸ್ಮಾರ್ಟ್‌ಫೋನ್ ಲಾಂಚ್: ಬೆಲೆ ಎಷ್ಟು?, ಫೀಚರ್ಸ್ ಏನಿದೆ?
ಮೊಟೊ G13 ಸ್ಮಾರ್ಟ್‌ಫೋನ್ ಅನ್ನು ಕೆಲವು ತಿಂಗಳ ಹಿಂದಷ್ಟೇ ಲಾಂಚ್ ಮಾಡಲಾಗಿತ್ತು. ಇದರೊಂದಿಗೆ ಹಲವು ಮೊಟೊ ಸ್ಮಾರ್ಟ್‌ಫೋನ್‌ಗಳಗೆ ಭರ್ಜರಿ ಆಫರ್ ಸಹ ನೀಡುತ್ತಾ ಗ್ರಾಹಕರ ಬೇಡಿಕೆ ಈಡೇರಿಸುತ್ತಿರುವ ಮೊಟೊ ಇದೀಗ ಮತ್ತೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಒಟ್ಟಾಗಿ ಲಾಂಚ್ ಮಾಡಿದೆ. ಈ ಫೋನ್‌ಗಳು ವಿವಿಧ ರೀತಿಯ ಫೀಚರ್ಸ್ ಪಡೆದುಕೊಂಡಿವೆ.
ಹೌದು, ಈ ಮೂರು ಫೋನ್‌ಗಳಲ್ಲಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆಗಿರುವ ಮೊಟೊ G 5G 2023 (moto G 5G 2023) ಸ್ಮಾರ್ಟ್‌ಫೋನ್ ಅನ್ನು ಸಹ ಅನಾವರಣ ಮಾಡಲಾಗಿದ್ದು, ಈ ಫೋನ್ ಸ್ನಾಪ್‌ಡ್ರಾಗನ್ 480+ ನಿಂದ ಕಾರ್ಯನಿರ್ವಹಿಸಲಿದ್ದು, 15W ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಪರಿಚಯಾತ್ಮಕ ಬೆಲೆ ಎಷ್ಟು?, ಎಂದಿನಿಂದ ಖರೀದಿ ಲಭ್ಯ ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೊಟೊ G 5G (2023) ಡಿಸ್‌ಪ್ಲೇ ವಿವರ: ಈ ಮೊಟೊ G 5G ಫೋನ್ 6.5 ಇಂಚಿನ HD+ IPS ಡಿಸ್‌ಪ್ಲೇ ಹೊಂದಿದ್ದು, 1600 x720 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಆಯ್ಕೆ ಇದರಲ್ಲಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ಸಿಗಲಿದೆ. ಹಾಗೆಯೇ 20:9 ಆಕಾರ ಅನುಪಾತ ಮತ್ತು 269ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ.
ಮೊಟೊ G 5G (2023) ಪ್ರೊಸೆಸರ್ ಯಾವುದು?: ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480+ 8nm ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ಅಡ್ರಿನೊ 619 GPU ನಿಂದಾಗಿ ಗೇಮರ್‌ಗಳಿಗೆ ಉತ್ತಮ ಫೋನ್ ಆಗಲಿದೆ. ಜೊತೆಗೆ ಆಂಡ್ರಾಯ್ಡ್ 13 ರನ್ ಮಾಡಲಿದೆ. ಇನ್ನು 4GB RAM ಹಾಗೂ 128GB ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗಿದ್ದು, ಎಸ್‌ಡಿ ಕಾರ್ಡ್ ಆಯ್ಕೆಯೊಂದಿಗೆ 1TB ವರೆಗೆ ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಬಹುದು.
ಮೊಟೊ G 5G (2023) ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿದ್ದು, f/1.7 ದ್ಯುತಿರಂಧ್ರದೊಂದಿಗೆ 48 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ , ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನದೊಂದಿಗೆ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ f/2.0 ದ್ಯುತಿರಂಧ್ರದೊಂದಿಗೆ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸೌಲಭ್ಯ ಇದರಲ್ಲಿದೆ.

ಮೊಟೊ G 5G (2023) ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಮೊಟೊ G 5G 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 15W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇನ್ನುಳಿದಂತೆ 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 5G SA/NSA, ಡ್ಯುಯಲ್ 4G VoLTE, ವೈ-ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಕನೆಕ್ಟವಿಟಿ ಆಯ್ಕೆ ಪಡೆದಿದೆ.

ಮೊಟೊ G 5G (2023) ಬೆಲೆ ಹಾಗೂ ಲಭ್ಯತೆ: ಮೊಟೊ G 5G ಫೋನ್ ಒಂದೇ ವೇರಿಯಂಟ್‌ನಲ್ಲಿ ಕಂಡುಬಂದಿದೆ. ಅಂದರೆ 4GB RAM + 128GB ಸ್ಟೋರೇಜ್ ವೇರಿಯಂಟ್‌ಗೆ $249.99 (ಭಾರತದಲ್ಲಿ ಇದ ಬೆಲೆ ಸುಮಾರು 20,500ರೂ.ಗಳು) ನಿಗದಿಪಡಿಸಲಾಗಿದೆ. ಇದರೊಂದಿಗೆ ಇಂಕ್ ಬ್ಲೂ ಮತ್ತು ಹಾರ್ಬರ್ ಮಿಸ್ಟ್ ಬಣ್ಣದ ಆಯ್ಕೆಗಳಲ್ಲಿ ಇದು ಕಾಣಿಸಿಕೊಂಡಿದೆ. ಈ ಫೋನ್ ಅನ್ನು ಖರೀದಿ ಮಾಡಲು ನೀವು ಕೆಲವು ದಿನಗಳ ಕಾಯಬೇಕು. ಯಾಕೆಂದರೆ ಮೇ 25 ರಿಂದ ಮಾರಾಟಕ್ಕೆ ಮುಕ್ತವಾಗಲಿದೆ.


Click it and Unblock the Notifications








