semiconductor: 3 ಸೆಮಿಕಂಡಕ್ಟರ್ ಯೋಜನೆಗೆ ಇಂದು ಮೋದಿ ಶಂಕುಸ್ಥಾಪನೆ! ಭಾರತದಲ್ಲಿ ಸೆಮಿಕಂಡಕ್ಟರ್ ಅಗತ್ಯ ಎಷ್ಟಿದೆ?
ಭಾರತ ಇನ್ನೇನು ಕೆಲವೇ ವರ್ಷಗಳಲ್ಲಿ ಜಾಗತಿಕವಾಗಿ ಎಲ್ಲಾ ರಂಗದಲ್ಲೂ ಅಗ್ರಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಹೆಚ್ಚಾಗಿ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ (Make in India, Made in India) ಪರಿಕಲ್ಪನೆಯಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದ್ದು, ಈ ನಡುವೆ ಸೆಮಿಕಂಡಕ್ಟರ್ ವಿಭಾಗದಲ್ಲಿ ಭಾರತ ದೊಡ್ಡ ಮಟ್ಟದ ಸಾಧನೆ ಮಾಡಲು ಸಜ್ಜಾಗಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು 1.25 ಲಕ್ಷ ಕೋಟಿ ಮೌಲ್ಯದ ಮೂರು ಸೆಮಿಕಂಡಕ್ಟರ್ ಯೋಜನೆಗಳಿಗೆ (Semiconductor project) ಅಡಿಪಾಯ ಹಾಕಲಿದ್ದಾರೆ. ಈ ಮೂಲಕ ಭಾರತವನ್ನು ಅರೆವಾಹಕ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಜಾಗತಿಕ ಕೇಂದ್ರವಾಗಿ ಮಾಡುವುದು ಅದರಲ್ಲೂ ಇಲ್ಲಿನ ಯುವಜನರಿಗೆ ಉದ್ಯೋಗಾವಕಾಶಗಳ ಸೃಷ್ಟಿಯನ್ನು ಹೆಚ್ಚಿಗೆ ಮಾಡುವ ಉದ್ದೇಶ ಹೊಂದಲಾಗಿದೆ. ಹಾಗಿದ್ರೆ, ಬನ್ನಿ ಸೆಮಿಕಂಡಕ್ಟರ್ ಯಾಕೆ ಪ್ರಮುಖ, ಇದನ್ನು ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

3 ಸೆಮಿಕಂಡಕ್ಟರ್ ಯೋಜನೆಗಳಿಗೆ ಅಡಿಪಾಯ: ಈ ವೇಳೆ ಒಟ್ಟಾರೆ ಮೂರು ವಿಭಿನ್ನ ಸೆಮಿಕಂಡಕ್ಟರ್ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದು, ಇವುಗಳಲ್ಲಿ ಗುಜರಾತ್‌ನ ಢೋಲೆರಾ ವಿಶೇಷ ಹೂಡಿಕೆ ಪ್ರದೇಶದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಸೌಲಭ್ಯ (DSIR), ಅಸ್ಸಾಂನ ಮೊರಿಗಾಂವ್‌ನಲ್ಲಿ ಹೊರಗುತ್ತಿಗೆ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್(OSAT) ಮತ್ತು ಗುಜರಾತ್‌ನ ಸಾನಂದ್‌ನಲ್ಲಿ ಹೊರಗುತ್ತಿಗೆ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (OSAT) ಯೋಜನೆಗೆ ಅಡಿಪಾಯ ಹಾಕಲಿದ್ದಾರೆ.
ಇನ್ನು ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್‌ಗಳನ್ನು ನಿರ್ಮಾಣ ಮಾಡಲು DSIR ನಲ್ಲಿ ಫ್ಯಾಬ್ರಿಕೇಶನ್ ಸೌಲಭ್ಯವನ್ನು ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ (TEPL) ಸ್ಥಾಪನೆ ಮಾಡಲಿದೆ. ಇದು 91,000 ಕೋಟಿ ಹೂಡಿಕೆಯೊಂದಿಗೆ ದೇಶದ ಮೊದಲ ವಾಣಿಜ್ಯ ಸೆಮಿಕಂಡಕ್ಟರ್ ಫ್ಯಾಬ್ ಆಗಲಿದೆ. ಇನ್ನು ಮೋದಿ ಅವರು 'ಇಂಡಿಯಾಸ್ ಟೆಕ್‌ಡೇಡ್: ಚಿಪ್ಸ್ ಫಾರ್ ವಿಕ್ಷಿತ್ ಭಾರತ್' (India's Techade: Chips for Viksit Bharat) ಎಂಬ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗಿಯಾಗಲಿದ್ದಾರೆ.

ಸೆಮಿಕಂಡಕ್ಟರ್ ಎಂದರೇನು?: ಸೆಮಿಕಂಡಕ್ಟರ್ ಎನ್ನುವುದು ಭೌತಿಕ ವಸ್ತುವಾಗಿದ್ದು, ಎಲೆಕ್ಟ್ರಾನಿಕ್ ಡಿವೈಸ್‌ಗಳು ಮತ್ತು ಉಪಕರಣಗಳಲ್ಲಿನ ಪ್ರವಾಹದ ಹರಿವನ್ನು ನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಮುಕ್ತವಾಗಿ ಹರಿಯುವ ವಿದ್ಯುತ್ ಪ್ರವಾಹವನ್ನು ಅನುಮತಿಸುವ ಬದಲಾಗಿ ಅಥವಾ ಅದನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸುವ ಕೆಲಸ ಮಾಡುತ್ತದೆ. ಇದು ಕಂಡಕ್ಟರ್ ಮತ್ತು ಇನ್ಸುಲೇಟರ್ ನಡುವೆ ಇರಲಿದ್ದು, ಎಲೆಕ್ಟ್ರಾನಿಕ್ ಚಿಪ್ಸ್, ಕಂಪ್ಯೂಟಿಂಗ್ ಘಟಕಗಳು ಮತ್ತು ಡಿವೈಸ್‌ಗಳ ಅಭಿವೃದ್ಧಿಯಲ್ಲಿ ಬಳಕೆ ಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಸಿಲಿಕಾನ್, ಜರ್ಮೇನಿಯಮ್ ಅಥವಾ ಇತರ ಶುದ್ಧ ಅಂಶಗಳನ್ನು ಬಳಕೆ ಮಾಡಿಕೊಂಡು ತಯಾರು ಮಾಡಲಾಗುತ್ತದೆ.
ಸೆಮಿಕಂಡಕ್ಟರ್ ಅನ್ನು ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆ?: ದೈನಂದಿನ ಜೀವನದಲ್ಲಿ ಬಳಕೆ ಮಾಡುವ ಅನೇಕ ಡಿವೈಸ್‌ಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. ಅಂದರೆ, ಸ್ಮಾರ್ಟ್‌ಫೋನ್‌ಗಳು, ಡಿಜಿಟಲ್ ಕ್ಯಾಮೆರಾಗಳು, ಸ್ಮಾರ್ಟ್‌ಟಿವಿಗಳು, ವಾಷಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್‌ಗಳು ಮತ್ತು ಎಲ್‌ಇಡಿ ಬಲ್ಬ್‌ಗಳು ಸೇರಿದಂತೆ ಸಾಕಷ್ಟು ವಿಭಾಗಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.

ಇನ್ನು ಭಾರತದ ಸೆಮಿಕಂಡಕ್ಟರ್ ಉದ್ಯಮವು ಸಂಪೂರ್ಣವಾಗಿ ಆಮದುಗಳನ್ನು ಅವಲಂಬಿಸಿತ್ತು. ಅಂದರೆ ಯುಎಸ್‌ಎ ಚೀನಾ, ಜಪಾನ್, ತೈವಾನ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಅರೆವಾಹಕಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತವೆ. ಆದರೆ, ಈಗ ಭಾರತವು ಸೆಮಿಕಂಡಕ್ಟರ್‌ಗಳ ಪ್ರಮುಖ ಗ್ರಾಹಕನಾಗಿದ್ದು, ಅವುಗಳ ಪೂರೈಕೆಗಾಗಿ ಬಾಹ್ಯ ಮೂಲಗಳ ಮೇಲೆ ಹೆಚ್ಚು ಅವಲಂಬಿತವಾಗುವುದನ್ನು ಇನ್ಮುಂದೆ ಕಡಿಮೆ ಮಾಡಲಿದೆ. ಇದರಿಂದ ಆರ್ಥಿಕ ದುರ್ಬಲತೆಗಳನ್ನು ಹೊಡೆದೋಡಿಸಲಿದೆ.
ಈ ಅತ್ಯಾಧುನಿಕ ಸೌಲಭ್ಯಗಳು ಭಾರತದ ಸೆಮಿಕಂಡಕ್ಟರ್ ಲ್ಯಾಂಡ್‌ಸ್ಕೇಪ್ ಅನ್ನೇ ಬದಲು ಮಾಡುವ ಸಾಮರ್ಥ್ಯ ಪಡೆದಿವೆ. ಅಲ್ಲದೆ ಈ ಹೈಟೆಕ್ ಡೊಮೇನ್‌ನಲ್ಲಿ ದೇಶಕ್ಕೆ ದೃಢವಾದ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಸೆಮಿಕಂಡಕ್ಟರ್ ವಲಯದಲ್ಲಿ ಮಾತ್ರವಲ್ಲದೆ ಇತರೆ ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕಗಳಂತಹ ಪೂರಕ ಉದ್ಯಮಗಳಲ್ಲಿ ಭಾರತೀಯ ಯುವಕರಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಈ ಮೂಲಕ ನಿರುದ್ಯೋಗ ಸಮಸ್ಯೆ ಸಹ ನಿವಾರಣೆ ಆಗಲಿದೆ.
ಇನ್ನು ತೈವಾನ್, ದಕ್ಷಿಣ ಕೊರಿಯಾ ಮತ್ತು ಚೀನಾ ಜಾಗತಿಕ ಸಾಮರ್ಥ್ಯದ ಸುಮಾರು 70 ಪ್ರತಿಶತವನ್ನು ನಿಯಂತ್ರಿಸುತ್ತವೆ. ಆದರೆ, ಇನ್ಮುಂದೆ ಭಾರತ ಸಹ ಇವುಗಳಿಗೆ ತೀವ್ರ ಪೈಪೋಟಿ ನೀಡಲಿದೆ. ಅದರಂತೆ ಎಲ್ಲಾ ಫ್ಯಾಬ್‌ಗಳು ಒಟ್ಟಾಗಿ ತಿಂಗಳಿಗೆ 30 ಮಿಲಿಯನ್ ಯೂನಿಟ್‌ಗಳನ್ನು ರವಾನೆ ಮಾಡಲಿವೆ. ಅಲ್ಲದೆ ಭಾರತ 17 ವರ್ಷಗಳ ಶ್ರಮದ ನಂತರ ಈ ಅರೆವಾಹಕ ವಿಭಾಗದಲ್ಲಿ ತನ್ನ ಸಾಮರ್ಥ್ಯ ತೋರಿಸಲು ಮುಂದಾಗಿರುವುದು ಭಾರತೀಯರೆಲ್ಲರೂ ಸಂತಸಪಡುವ ವಿಷಯವಾಗಿದೆ.


Click it and Unblock the Notifications








