ನೆಟ್‌ಫ್ಲಿಕ್ಸ್ ನಿಂದ ಮಹತ್ವದ ನಿರ್ಧಾರ; ಚಂದಾದಾರಿಕೆ ಬೆಲೆಯಲ್ಲಿ ಭಾರೀ ಇಳಿಕೆ!
ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ನೆಟ್‌ಫ್ಲಿಕ್ಸ್‌ನಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳು ಜರುಗಿವೆ. ಅದರಲ್ಲೂ ಹೊಸ ರೀತಿಯ ಪ್ಲ್ಯಾನ್‌ಗಳನ್ನು ಪರಿಚಯಿಸಲಾಗಿದ್ದು, ಇದೆಲ್ಲದರ ನಡುವೆ ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಈ ಮೂಲಕ ಅಗ್ಗದ ದರದಲ್ಲಿ ನೆಟ್‌ಫ್ಲಿಕ್ಸ್‌ಗೆ ಎಂಟ್ರಿಯಾಗಬಹುದು.
ಹೌದು, ಓಟಿಟಿ ಪ್ಲಾಟ್‌ಫಾರ್ಮ್ ಎಂದರೆ ಮೊದಲ ಸ್ಥಾನದಲ್ಲಿ ನಿಲ್ಲುವುದು ನೆಟ್‌ಫ್ಲಿಕ್ಸ್. ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪಡೆಯಲು ವಿವಿಧ ಪ್ಲ್ಯಾನ್‌ಗಳಿದ್ದು, ಇವು ಕೆಲವರಿಗೆ ದೊಡ್ಡ ಮೊತ್ತ ಎನಿಸಿರುವುದಂತೂ ಸತ್ಯ. ಹೀಗಾಗಿ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯಲು ಹಾಗೂ ಹೊಸ ಚಂದಾದಾರರಿಗೆ ವಿಶೇಷ ಅನುಭವ ನೀಡುವ ಉದ್ದೇಶದಿಂದ ಈಗ ಕೆಲವು ದೇಶಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲ್ಯಾನ್ ದರವನ್ನು ಕಡಿಮೆ ಮಾಡಲಾಗಿದೆ. ಹಾಗಿದ್ರೆ, ಭಾರತದಲ್ಲೂ ಈ ಸೌಲಭ್ಯ ಇದೆಯಾ?,ಯಾವೆಲ್ಲಾ ದೇಶಗಳಲ್ಲಿ ಬೆಲೆ ಕಡಿಮೆ ಎಂದು ತಿಳಿಯೋಣ.

ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲ್ಯಾನ್‌ದರ ಇಳಿಕೆ
ಸ್ಟ್ರೀಮಿಂಗ್ ದೈತ್ಯ ಎನಿಸಿಕೊಂಡಿರುವ ನೆಟ್‌ಫ್ಲಿಕ್ಸ್ ಹೆಚ್ಚು ಚಂದಾದಾರರನ್ನು ಆಕರ್ಷಿಸುವ ಸಲುವಾಗಿ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಯನ್ನು 30 ಕ್ಕೂ ಹೆಚ್ಚು ದೇಶಗಳಲ್ಲಿ ಕಡಿಮೆ ಮಾಡಿದೆ. ಈ ಮೂಲಕ ಪಟ್ಟಿ ಮಾಡಲಾದ ದೇಶದ ಜನರು ಅಗ್ಗದ ದರದಲ್ಲಿ ನೆಟ್‌ಫ್ಲಿಕ್ಸ್‌ಗೆ ಭೇಟಿ ನೀಡಿ ತಮಗೆ ಇಷ್ಟವಾದ ಶೋ ಗಳನ್ನು ವೀಕ್ಷಣೆ ಮಾಡಲು ಅನುವು ಮಾಡಿಕೊಡಲಾಗಿದೆ.
ಯಾವೆಲ್ಲಾ ದೇಶಗಳಲ್ಲಿ ದರ ಇಳಿಕೆ
ಈಜಿಪ್ಟ್, ಯೆಮೆನ್, ಜೋರ್ಡಾನ್, ಲಿಬಿಯಾ, ಇರಾನ್, ಕೀನ್ಯಾ, ಕ್ರೊಯೇಷಿಯಾ, ಸ್ಲೊವೇನಿಯಾ, ಬಲ್ಗೇರಿಯಾ, ನಿಕರಾಗುವಾ, ಈಕ್ವೆಡಾರ್, ವೆನೆಜುವೆಲಾ, ಇಂಡೋನೇಷ್ಯಾ, ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್, ಮಲೇಷ್ಯಾ ಸೇರಿದಂತೆ ಇನ್ನಿತರೆ ದೇಶಗಳಲ್ಲಿ ಹೆಚ್ಚಿನ ಚಂದಾದಾರಿಕೆ ಸೌಲಭ್ಯವನ್ನು ಕೈಬಿಡಲಾಗಿದೆ. ನೆಟ್‌ಫ್ಲಿಕ್ಸ್ ಅನ್ನು ಹೆಚ್ಚಾಗಿ ಬಳಕೆ ಮಾಡುವ ದೇಶಗಳಲ್ಲಿ ಭಾರತವೂ ಸಹ ಪ್ರಮುಖವಾಗಿದೆಯಾದರೂ ಈ ಪಟ್ಟಿಯಲ್ಲಿ ಭಾರತದ ಹೆಸರು ಇಲ್ಲದಿರುವುದು ಬೇಸರದ ವಿಷಯ.
ಇದರ ನಡುವೆ ಮಧ್ಯ ಮತ್ತು ದಕ್ಷಿಣ ಅಮೇರಿಕಾ (CSA), ಉಪ-ಸಹಾರನ್ ಆಫ್ರಿಕಾ (SSA), ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ (MENA), ಮಧ್ಯ ಮತ್ತು ಪೂರ್ವ ಯುರೋಪ್ (CEE) ಮತ್ತು ಏಷ್ಯಾ ಪೆಸಿಫಿಕ್ (APAC) ಪ್ರದೇಶಗಳು ಸೇರಿದಂತೆ ಇನ್ನಿತರೆ ಪ್ರಾಂತ್ಯಗಳಲ್ಲಿ ಹೆಚ್ಚಿನ ದರ ಇಳಿಕೆ ಮಾಡಲಾಗಿದೆ. ಅಂದರೆ, 20 ಪ್ರತಿಶತದಿಂದ ಸುಮಾರು 60 ಪ್ರತಿಶತದವರೆಗೆ ದರ ಇಳಿಕೆಯಾಗಲಿದೆ.

ಈ ಸಂಬಂಧ ನೆಟ್‌ಫ್ಲಿಕ್ಸ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದು, ಅದರಂತೆ ಇಂದಿನಿಂದ ಮಲೇಷ್ಯಾದಲ್ಲಿ ನಮ್ಮ ಮೂಲ ಯೋಜನೆಯು ಈಗ ಹೊಸ ಮತ್ತು ಅಸ್ತಿತ್ವದಲ್ಲಿರುವ ಸದಸ್ಯರಿಗೆ ತಿಂಗಳಿಗೆ RM28 (522 ರೂ. ಗಳು) ಗಳಲ್ಲಿ ಲಭ್ಯವಿದೆ. ಈ ಹಿಂದೆ ಇಲ್ಲಿ ಈ ಫ್ಲ್ಯಾನ್ ತಿಂಗಳಿಗೆ RM35 (653 ರೂ. ಗಳು.) ಇತ್ತು ಎಂದು ತಿಳಿಸಿದೆ.
ನಿರಂತರವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗಮನಾರ್ಹ ಬದಲಾವಣೆ ಮಾಡಿಕೊಂಡು ಬರುತ್ತಿರುವ ನೆಟ್‌ಫ್ಲಿಕ್ಸ್ ಈ ಹಿಂದೆ ಕೆನಡಾ, ನ್ಯೂಜಿಲೆಂಡ್, ಪೋರ್ಚುಗಲ್ ಮತ್ತು ಸ್ಪೇನ್ ಸೇರಿದಂತೆ ಇನ್ನಿತರೆ ದೇಶಗಳಲ್ಲಿ ಪಾಸ್‌ವರ್ಡ್ ಹಂಚಿಕೆ ಫೀಚರ್ಸ್ ಪರಿಚಯಿಸಿತ್ತು. ಈ ಫೀಚರ್ಸ್ ಅನ್ನು ಮೊದಲು ಲ್ಯಾಟಿನ್ ಅಮೆರಿಕಾದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗಿದ್ದು, ಹಲವು ದೇಶಗಳಿಗೆ ಅನ್ವಯಿಸಲಾಗುತ್ತಿದೆ. ಈ ಪಾಸ್‌ವರ್ಡ್ ಹಂಚಿಕೆ ಫೀಚರ್ಸ್ ನಲ್ಲಿ ಬಳಕೆದಾರರು ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ, ಆದರೂ ಅವರು ಪ್ರೊಫೈಲ್‌ಗಳನ್ನು ಶೇರ್ ಮಾಡಿಕೊಳ್ಳಬಹುದು.

ನೆಟ್‌ಫ್ಲಿಕ್ಸ್ ತನ್ನ ಸ್ಟ್ರೀಮಿಂಗ್ ಸೇವೆಯನ್ನು 16 ವರ್ಷಗಳಿಂದ ನೀಡುತ್ತಾ ಬರುತ್ತಿದ್ದು, ತನ್ನ ಪ್ಲಾನ್ ಬೆಲೆಗಳನ್ನು ಆಗಾಗ್ಗೆ ಕಡಿಮೆ ಮಾಡಿಕೊಂಡು ಬರುತ್ತಲೇ ಇದೆ. ಜನವರಿ 2022 ರಲ್ಲಿ ಯುಎಸ್ ಮತ್ತು ಕೆನಡಾದಲ್ಲಿ ಚಂದಾದಾರರಿಗೆ ಬೆಲೆ ಹೆಚ್ಚಳವನ್ನು ಪರಿಚಯಿಸಿತ್ತು. ನಂತರ ಅಂದರೆ ನವೆಂಬರ್ 2022 ರಲ್ಲಿ ಜಾಹೀರಾತುಗಳೊಂದಿಗೆ ತಿಂಗಳಿಗೆ $6.99 (578 ರೂ.) ಅಗ್ಗದ ಯೋಜನೆಯನ್ನು ಪರಿಚಯಿಸಿತ್ತು. ಆದರೆ, ಇದು ಅಷ್ಟಾಗಿ ನೆಟ್‌ಫ್ಲಿಕ್ಸ್ ಗೆ ಆದಾಯ ತಂದುಕೊಟ್ಟಿಲ್ಲ ಎನ್ನುವ ವರದಿ ಸಹ ಬಹಿರಂಗವಾಗಿದೆ.


Click it and Unblock the Notifications








