Aadhaar ಕಾರ್ಡ್ ಬಳಕೆದಾರರೇ ಗಮನಿಸಿ; ನಿಮಗಾಗಿಯೇ ಈ ಹೊಸ ಸೌಲಭ್ಯ!
ಆಧಾರ್ ಕಾರ್ಡ್ (Aadhaar) ಭಾರತೀಯ ನಾಗರೀಕರಿಗೆ ಅತ್ಯಗತ್ಯ ದಾಖಲೆಯಾಗಿದ್ದು, ಎಲ್ಲಾ ರೀತಿಯಲ್ಲೂ ಇವು ಪ್ರಯೋಜನ ನೀಡುತ್ತಿದೆ. ಇದರೊಂದಿಗೆ ದೇಶದ ನಾಗರೀಕರಿಗೆ ಸುಲಭ ಮಾರ್ಗಗಳ ಮೂಲಕ ಆಧಾರ್ ಸೇವೆ ನೀಡಲು ಮುಂದಾಗಿರುವ ಭಾರತದ ಸರ್ಕಾರ, ಈಗ ಹೊಸದೊಂದು ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ.
ಹೌದು, ಭಾರತೀಯ ನಾಗರೀಕರು ಈಗ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) IVRS ನಲ್ಲಿ ನಿರ್ಮಿಸಲಾದ ಹೊಸ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಯುಐಡಿಎಐ ಆಧಾರ್ ಕಾಯಿದೆ 2016 ರ ನಿಬಂಧನೆಗಳ ಅಡಿಯಲ್ಲಿ ಭಾರತ ಸರ್ಕಾರವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಿದ ಶಾಸನಬದ್ಧ ಪ್ರಾಧಿಕಾರವಾಗಿದ್ದು, ಈ ಪ್ರಾಧಿಕಾರವು ಟೋಲ್-ಫ್ರೀ ಸಂಖ್ಯೆಯನ್ನು ಹೊಂದಿದೆ. ಹಾಗಿದ್ರೆ, ಏನಿದು ಹೊಸ IVRS ಸೇವೆ, ಇದರಿಂದ ಬಳಕೆದಾರರಿಗೆ ಏನೆಲ್ಲಾ ಲಾಭ? ಗಮನಿಸೋಣ ಬನ್ನಿ.

ಆಧಾರ್ ಬಳಕೆದಾರರಿಗೆ ಹೊಸ ಸೇವೆ: ಈಗಾಗಲೇ ಆಧಾರ್ ಪ್ರಾಧಿಕಾರ ಟೋಲ್-ಫ್ರೀ ಸಂಖ್ಯೆಯನ್ನು ಹೊಂದಿದ್ದು, ಹಲವಾರು ವಿಧದಲ್ಲಿ ಉಚಿತ ಸೇವೆ ನೀಡುತ್ತಾ ಬರುತ್ತಿದೆ. ಆದಾಗ್ಯೂ ಬಳಕೆದಾರರಿಗೆ ಇನ್ನಷ್ಟು ಪ್ರಯೋಜನ ನೀಡಲು ಮುಂದಾಗಿದೆ. ಹಾಗೆಯೇ UIDAI ಯ ಮಾನ್ಯ ಟೋಲ್ ಫ್ರೀ ಸಂಖ್ಯೆ 1947 ಆಗಿದ್ದು, ಇದನ್ನು 2016 ರಲ್ಲಿ ಪರಿಚಯಿಲಾಗಿತ್ತು. ಈ ಟೋಲ್-ಫ್ರೀ ಸಂಖ್ಯೆ ಎಲ್ಲಾ ಸಮಯದಲ್ಲೂ ಅಂದರೆ 24/7 ಬಳಕೆಗೆ ಲಭ್ಯ ಇದೆ.
ಈ ವರ್ಷದ ಆರಂಭದಲ್ಲಿ UIDAI ಈ ಟೋಲ್ ಫ್ರೀ ಸಂಖ್ಯೆಯಲ್ಲಿ ಹಲವಾರು ಹೊಸ ಸೇವೆಗಳನ್ನು ಹೊರತಂದಿತ್ತು. ಅದರಲ್ಲಿ ನಿಮ್ಮ ಆಧಾರ್ ನೋಂದಣಿ/ಅಪ್‌ಡೇಟ್ ಸ್ಥಿತಿಯನ್ನು ತಿಳಿಯಿರಿ, ನಿಮ್ಮ ಆಧಾರ್ PVC ಕಾರ್ಡ್ ಸ್ಥಿತಿಯನ್ನು ತಿಳಿಯಿರಿ, ನಿಮ್ಮ ಆಧಾರ್ ದೂರಿನ ಸ್ಥಿತಿಯನ್ನು ತಿಳಿಯಿರಿ, ಆಧಾರ್ ನೋಂದಣಿ ಕೇಂದ್ರವನ್ನು ಪತ್ತೆ ಮಾಡಿ, ಎಸ್‌ಎಮ್‌ಎಸ್ ಮೂಲಕ ಆಧಾರ್ ಮತ್ತು ಸಂಬಂಧಿತ ಸೇವೆಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ ಎಂಬ ಆಯ್ಕೆಗಳನ್ನು ನೀಡಲಾಗಿತ್ತು.
ಇದರೊಂದಿಗೆ IVRS ನಲ್ಲಿ ಹೊಸ ಸೇವೆಗಳನ್ನು ಸಹ ನೀಡಲಾಗಿದ್ದು, ಈ ಮೂಲಕ ಜನರು ತಮ್ಮ ಆಧಾರ್ ನೋಂದಣಿ ಅಥವಾ ನವೀಕರಣ ಸ್ಥಿತಿ, ಪಿವಿಸಿ ಕಾರ್ಡ್ ಸ್ಥಿತಿಯನ್ನು ಕಂಡುಕೊಳ್ಳಲು ಎಸ್‌ಎಮ್‌ಎಸ್ ಸೇವೆ ಪಡೆದುಕೊಳ್ಳಬಹುದು. ಇದಕ್ಕಾಗಿ UIDAI ಟೋಲ್-ಫ್ರೀ ಸಂಖ್ಯೆ 1947 ಎಲ್ಲಾ ಸಮಯದಲ್ಲೂ ಅಂದರೆ 24x7 ಗೆ ಕರೆ ಮಾಡಬಹುದು ಎಂದು UIDAI ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಜೊತೆಗೆ ಚಾಟ್‌ಬಾಟ್ ಆಧಾರ್ ಮಿತ್ರಕ್ಕೂ ಎಂಟ್ರಿ ಕೊಟ್ಟು ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ನವೆಂಬರ್ 2022 ರಲ್ಲಿ UIDAI ತನ್ನ ಹೊಸ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ-ಆಧಾರಿತ ಚಾಟ್‌ಬಾಟ್ 'ಆಧಾರ್ ಮಿತ್ರ' ವನ್ನು ಆರಂಭ ಮಾಡಿದೆ. ಇದರ ಮೂಲಕ ಜನರು ತಮ್ಮ ಆಧಾರ್ ಕಾರ್ಡ್-ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ದೂರು ಸಲ್ಲಿಕೆ ಮಾಡಬಹುದು, ದೂರಿನ ಸ್ಥಿತಿಯನ್ನು ಪರಿಶೀಲಿಸಬಹುದು. ಇದರೊಂದಿಗೆ ಆಧಾರ್ ಮಿತ್ರ ಚಾಟ್‌ಬಾಟ್ ಅನ್ನು ಪ್ರವೇಶಿಸಲು ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ ಕೋಡ್ ಆಯ್ಕೆಯನ್ನೂ ಸಹ ನೀಡಲಾಗಿದೆ

ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾವಣೆ ಮಾಡುವುದು ಹೇಗೆ?: ಈ ನಡುವೆ ಕೆಲವು ಆಧಾರ್ ಕಾರ್ಡ್ ಬಳಕೆದಾರರ ಫೋಟೋಗಳು ಕಳಪೆ ಆಗಿದ್ದು, ಇದನ್ನು ಬದಲಾವಣೆ ಮಾಡಲು ಸಾಕಷ್ಟು ಜನರು ಕಾತುರದಿಂದ ಇರುತ್ತಾರೆ. ಅದರಂತೆ ನಿಮ್ಮ ಆಧಾರ್‌ನಲ್ಲಿನ ಫೋಟೋ ಕೆಟ್ಟದಾಗಿದ್ದರೆ ಅಥವಾ ನಿಮಗೆ ಇಷ್ಟ ಇಲ್ಲ ಎಂದಾದರೆ ಈ ರೀತಿ ಬದಲಾವಣೆ ಮಾಡಬಹುದು.
ಹಂತ 1: ಆರಂಭದಲ್ಲಿ ನಿಮ್ಮ ಫೋಟೋವನ್ನು ಬದಲಾವಣೆ ಮಾಡಲು ಮೊದಲು UIDAI ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಇದಾದ ನಂತರದಲ್ಲಿ ಆಧಾರ್ ವಿಭಾಗ ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ಅಲ್ಲಿ ದಾಖಲಾತಿ ಫಾರ್ಮ್ ನವೀಕರಣ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬೇಕು. ಡೌನ್‌ಲೋಡ್ ಮಾಡಿದ ಫಾರ್ಮ್‌ನಲ್ಲಿ ನೀವು ನಿಮ್ಮ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು.
ಹಂತ 2: ಈ ರೀತಿ ಮಾಡಿದ ನಂತರ ನಿಮ್ಮ ಸಮೀಪದ ದಾಖಲಾತಿ ಕೇಂದ್ರದಲ್ಲಿ ಆ ಅರ್ಜಿಯಲ್ಲಿ ಸಲ್ಲಿಕೆ ಮಾಡಬೇಕಿದೆ. ಇಲ್ಲಿ ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ನೀವು ನಿಗದಿತ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಇದೆಲ್ಲಾ ಆದ ಮೇಲೆ ನಿಮಗೆ ಅರ್ಜಿ ಸ್ವೀಕೃತಿ ಪತ್ರ ಸಿಗಲಿದ್ದು, ಕೆಲವೇ ದಿನಗಳಲ್ಲಿ ನಿಮ್ಮ ಆಧಾರ್‌ನಲ್ಲಿನ ಫೋಟೋ ಬದಲಾಗಲಿದೆ.


Click it and Unblock the Notifications








