New SIM Card Rules: ಇಂದಿನಿಂದ ಸಿಮ್ ಸಂಬಂಧ ಹೊಸ ರೂಲ್ಸ್ ಜಾರಿ: ನೀವು ತಿಳಿಯಲೇಬೇಕಾದ ಮಾಹಿತಿ ಇದು
ಭಾರತದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆ (Online fraud) ಹಾಗೂ ಇನ್ನಿತರೆ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬರುತ್ತಿದೆ. ಇದರ ಭಾಗವಾಗಿ ಇನ್ಮುಂದೆ ಸಿಮ್ ಅನ್ನು ಸುಲಭವಾಗಿ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ.
ಹೌದು, ಸಿಮ್ ಖರೀದಿ ಸಂಬಂಧ ಸರ್ಕಾರ ಹೊಸ ಯೋಜನೆಯನ್ನು ಈಗಾಗಲೇ ಜಾರಿ ಮಾಡಿದ್ದು, ಇಂದಿನಿಂದ (ಡಿಸೆಂಬರ್ 1 ) ಅನುಷ್ಠಾನ ಆಗಲಿದೆ. ಪರಿಷ್ಕೃತ ನಿಯಮಗಳ ಅಡಿಯಲ್ಲಿ, ಸರ್ಕಾರವು ಸಿಮ್ ಕಾರ್ಡ್ ಮಾರಾಟಗಾರರ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ಬೃಹತ್ ಸಂಪರ್ಕಗಳ ನಿಬಂಧನೆಯನ್ನು ರದ್ದುಗೊಳಿಸಿದೆ. ಹಾಗಿದ್ರೆ, ಸಿಮ್ ಖರೀದಿ ಮಾಡಲು ಅಥವಾ ಸಿಮ್ ಮಾರಲು ಏನೆಲ್ಲಾ ನಿಬಂಧನೆಗಳಿವೆ ಅನ್ನೋದನ್ನು ಬಳಕೆದಾರರು ತಿಳಿಯಲೇಬೇಕಿದೆ.
ಸಿಮ್ ಖರೀದಿ ಸಂಬಂಧ ಇಂದಿನಿಂದ ಹೊಸ ನಿಯಮ: ಭಾರತದ ದೂರಸಂಪರ್ಕ ಇಲಾಖೆ (DoT) ಇಂದಿನಿಂದ ಅಂದರೆ ಡಿಸೆಂಬರ್ 1, 2023 ರಿಂದ ಸಿಮ್ ಕಾರ್ಡ್‌ಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಿದೆ. ಕೇಂದ್ರ ಸರ್ಕಾರವು ಈ ವರ್ಷದ ಆಗಸ್ಟ್‌ನಲ್ಲಿ ಈ ನಿಯಮಗಳನ್ನು ಘೋಷಿಸಿದ್ದರೂ, ಇದರ ಅನುಷ್ಠಾನವನ್ನು ಮುಂದೂಡಲಾಗಿತ್ತು. ಅದರಂತೆ ಈಗ ಸರ್ಕಾರವು ಸಿಮ್ ಕಾರ್ಡ್ (SIM card) ಮಾರಾಟಗಾರರ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ಈ ಕ್ರಮವು ಆನ್‌ಲೈನ್ ಹಣಕಾಸು ವಂಚನೆಯನ್ನು ತಡೆಯುವ ಗುರಿಯನ್ನು ಹೊಂದಿದೆ.
ಭಾರತದಲ್ಲಿ ನಕಲಿ ಸಿಮ್‌ಗಳನ್ನು (Fake SIM) ಬಳಕೆ ಮಾಡಿಕೊಂಡು ಮಾಡಲಾಗುತ್ತಿದ್ದ ವಂಚನೆಗಳ ತೀವ್ರತೆಯನ್ನು ಪರಿಗಣಿಸಿ ಸರ್ಕಾರವು ಈ ಕ್ರಮಗಳನ್ನು ಕೈಗೊಂಡಿದೆ ಮತ್ತು ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಎಚ್ಚರಿಸಿದೆ. ಹಾಗಿದ್ರೆ, ಬನ್ನಿ ಹೊಸ ಸಿಮ್ ಕಾರ್ಡ್ ನಿಯಮಗಳ ಕುರಿತು ಈ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕಡ್ಡಾಯ ನೋಂದಣಿ: ಟೆಲಿಕಾಂ ಆಪರೇಟರ್‌ಗಳು ಫ್ರಾಂಚೈಸಿಗಳು, ವಿತರಕರು ಮತ್ತು ಪಾಯಿಂಟ್-ಆಫ್-ಸೇಲ್ (ಪಿಒಎಸ್) ಏಜೆಂಟ್‌ಗಳನ್ನು ನೋಂದಾವಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಏಜೆಂಟ್‌ಗಳು ಅನಗತ್ಯ ವಿಷಯಗಳಿಗೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಸಿಮ್ ಕಾರ್ಡ್‌ಗಳನ್ನು ನೀಡುವುದನ್ನು ತಡೆಯಲು
ಪ್ರತಿ ಪಿಒಎಸ್ ಏಜೆಂಟ್ ಪರವಾನಗಿದಾರರೊಂದಿಗೆ ಲಿಖಿತ ಒಪ್ಪಂದದ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ, ಪಿಒಎಸ್ ಏಜೆಂಟ್ ಹೊಸ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಅವರು ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇಷ್ಟೇ ಅಲ್ಲದೆ ಅವರು ಮೂರು ವರ್ಷಗಳವರೆಗೆ ಬ್ಲಾಕ್ ಲಿಸ್ಟ್‌ಗೆ ಸೇರ್ಪಡೆ ಆಗುತ್ತಾರೆ.
ಇ-ಕೆವೈಸಿ : ಪ್ರತಿ ಸಿಮ್ ಬಳಕೆದಾರರ ಡಿಜಿಟಲ್ ಪರಿಶೀಲನೆಗೆ ಅನುಕೂಲವಾಗುವಂತೆ ಡಿಜಿಟಲ್ ನೌ ಯುವರ್ ಕಸ್ಟಮರ್ ಅಥವಾ ಇ-ಕೆವೈಸಿ ಪ್ರಕ್ರಿಯೆ ಕೂಡ ಡಿಸೆಂಬರ್ 1 ರಿಂದ ಕಡ್ಡಾಯವಾಗಿದೆ. ಹಾಗೆಯೇ ಪ್ರತಿ ಸಿಮ್ ಕಾರ್ಡ್ ಡೀಲ್ ಕೂಡ ಡಿಜಿಟಲ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಅವುಗಳನ್ನು ಮಾರಾಟ ಮಾಡುವಾಗ ಸಿಮ್ ಕಾರ್ಡ್ ಅನ್ನು ನೋಂದಾಯಿಸಿಕೊಳ್ಳಬೇಕು.

ಎಲ್ಲಕ್ಕಿಂತ ಮಿಗಿಲಾಗಿ ಪೊಲೀಸ್ ಪರಿಶೀಲನೆಗೆ ಒಳಗಾಗುವುದು ಟೆಲಿಕಾಂ ಆಪರೇಟರ್‌ಗಳ ಜವಾಬ್ದಾರಿಯಾಗಿದೆ. ಡಿಜಿಟಲ್ ಕೆವೈಸಿ ಅನುಸರಿಸಲು ವಿಫಲವಾದರೆ ಡೀಲರ್ 10 ಲಕ್ಷದವರೆಗೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿಮ್ ಬದಲಾವಣೆಯ ಸಂದರ್ಭದಲ್ಲಿ, ಎಲ್ಲಾ ಬಳಕೆದಾರರು 24 ಗಂಟೆಗಳ ಒಳಗೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
ಆಧಾರ್ ದುರ್ಬಳಕೆ ತಡೆ: ಹೊಸ ಮಾರ್ಗಸೂಚಿಗಳು ಮುದ್ರಿತ ಆಧಾರ್‌ನ ಹೆಚ್ಚಿನ ದುರುಪಯೋಗದ ಮೇಲೆ ಕೇಂದ್ರೀಕರಿಸಿದೆ. ಮುದ್ರಿತ ಆಧಾರ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಜನಸಂಖ್ಯಾ ಮಾಹಿತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಅದಾಗ್ಯೂ ಮೊಬೈಲ್ ಸಂಖ್ಯೆಯನ್ನು ಕಡಿತಗೊಳಿಸುವ ಮೊದಲು 90 ದಿನಗಳ ಕೂಲ್-ಆಫ್ ಅವಧಿಯನ್ನು ನೀಡಲಾಗುತ್ತದೆ.

ಹೊಸ ಸಿಮ್ ಕಾರ್ಡ್ ನಿಯಮಗಳ ಪ್ರಕಾರ, ಬಳಕೆದಾರರು ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್‌ಗಳನ್ನು ಪಡೆಯಬಹುದು. ಈ ನಡುವೆ ಕದ್ದ ಅಥವಾ ಕಳೆದುಹೋದ ಮೊಬೈಲ್‌ಗಳನ್ನು ವರದಿ ಮಾಡಲು ಮತ್ತು ಅವುಗಳನ್ನು ನಿರ್ಬಂಧಿಸಲು ಸರ್ಕಾರವು ಈ ವರ್ಷದ ಆರಂಭದಲ್ಲಿ ಸಂಚಾರ ಸಾಥಿ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಅಕ್ರಮ ಮೊಬೈಲ್ ಸಂಪರ್ಕಗಳನ್ನು ಗುರುತಿಸಲು ಎಐ ಸಾಫ್ಟ್‌ವೇರ್ ASTR ಜೊತೆಗೆ ಸರ್ಕಾರ ಇದನ್ನು ಆರಂಭ ಮಾಡಿದೆ.


Click it and Unblock the Notifications









