ಅಡುಗೆ ಮಾಡಲು ಸಮಯವಿಲ್ಲವೇ?..ಚಿಂತೆ ಬಿಡಿ ಈ ರೋಬೋಟ್ ಮಾಡಿಕೊಡುತ್ತೆ!
ಮನೆ ಊಟ-ತಿಂಡಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಇಂದಿನ ಬ್ಯುಸಿ ಜೀವನ ಶೈಲಿಯಲ್ಲಿ ಅನೇಕರಿಗೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಸಮಯ ಇಲ್ಲದಂತಾಗಿದೆ. ಮಹಾನಗರಗಳು ಮತ್ತು ಮೆಟ್ರೋ ಸಿಟಿಗಳಲ್ಲಿ ಜನರು ತಮಗೆ ಬೇಕಾದ ಊಟ, ಉಪಹಾರವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡುವುದು ಈಗ ಸಾಮಾನ್ಯವಾಗಿದೆ. ಬ್ಯುಸಿ ಲೈಫ್‌ಸ್ಟೈಲ್‌ನಿಂದಾಗಿ ಮನೆ ಅಡುಗೆ ಮಿಸ್ ಮಾಡ್ಕೋತಿದೀವಿ ಅನ್ನೋರಿಗೆ ಈಗ ಖುಷಿ ಸುದ್ದಿ. ನಿಮ್ಮ ಇಷ್ಟದ ಊಟವನ್ನು ಮನೆಯಲ್ಲಿಯೇ ಸಿದ್ಧಪಡಿಸುತ್ತೆ ರೋಬೋಟ್.

ಹೌದು, ಬೆಂಗಳೂರು ಮೂಲದ ಯುಫೋಟಿಕ್ ಲ್ಯಾಬ್ಸ್ ತಂಡ್ ಕಿಚನ್ ರೊಬೊಟಿಕ್ ಸ್ಟಾರ್ಟ್ಅಪ್ 'ನೋಶ್ (Nosh)' ಎಂಬ ಅಪ್ಲಿಕೇಶನ್-ಚಾಲಿತ ಸ್ವಾಯತ್ತ ಅಡುಗೆ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದೆ. ಈ ಕಿಚನ್ ರೋಬೋಟ್ ಕಡೈ ಪನೀರ್, ಮಾತಾರ್ ಪನೀರ್, ಚಿಕನ್ ಕರಿ, ಫಿಶ್ ಕರಿ, ಕ್ಯಾರೆಟ್ ಹಲ್ವಾ, ಆಲೂಗಡ್ಡೆ ಫ್ರೈ ಸೇರಿದಂತೆ ಸುಮಾರು 200 ಭಿನ್ನ ಊಟ-ತಿಂಡಿಗಳನ್ನು ಮಾಡಿಕೊಡುತ್ತದೆ. ಜನರು ವೈಯಕ್ತಿಕ ರುಚಿ ಆದ್ಯತೆ ಅನುಗುಣವಾಗಿ ರೋಬೋಟ್‌ಗೆ ಸೂಚನೆ ನೀಡಬಹುದು.

ಪ್ರತಿಯೊಬ್ಬರಿಗೂ ಅವರು ರುಚಿ ಆದ್ಯತೆ, ಕೆಲಸದ ವೇಳಾಪಟ್ಟಿ ಮತ್ತು ಆರೋಗ್ಯದ ಅಗತ್ಯಕ್ಕೆ ಅನುಗುಣವಾಗಿ ತಾಜಾ ಮತ್ತು ಬಿಸಿ ಬೇಯಿಸಿದ ಆಹಾರವನ್ನು ಹೊಂದುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಯುಫೋಟಿಕ್ ಲ್ಯಾಬ್ಸ್‌ನ ಸಹ ಸಂಸ್ಥಾಪಕ ಯತಿನ್ ವರಾಚಿಯಾ ಹೇಳಿದ್ದಾರೆ.

ಹಾರ್ಡ್‌ವೇರ್ ತಜ್ಞ ಆಗಿರುವ ಯತಿನ್ ವರಾಚಿಯಾ, ಯಾವಾಗಲೂ ಉತ್ಪನ್ನ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿದ್ದರು. ಆದ್ದರಿಂದ, ಅವರು ತಮ್ಮ ಆಹಾರ ಸಮಸ್ಯೆಯನ್ನು ಪರಿಹರಿಸುವಂತಹ ರೋಬೋಟ್ ನಿರ್ಮಿಸುವ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ನೋಶ್ ರೋಬೋಟ್ ನಿರ್ಮಿಸಲು ಯತಿನ್ 2018 ರಲ್ಲಿ ಯುಫೋಟಿಕ್ ಲ್ಯಾಬ್ಸ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು. ನಂತರ, ಇಂಜಿನಿಯರಗಳಾದ ಪ್ರಣವ್ ರಾವಲ್, ಅಮಿತ್ ಗುಪ್ತಾ ಮತ್ತು ಸುದೀಪ್ ಗುಪ್ತಾ ಅವರು ಸಹ-ಸಂಸ್ಥಾಪಕರಾಗಿ ಲ್ಯಾಬ್ಸ್ ಸೇರಿಕೊಂಡರು. ಅದರ ಪ್ರತಿಫಲವೇ ಈ ಅಡುಗೆ ರೋಬೋಟ್ ನಾಶ್ ಆಗಿದೆ.
ನೋಶ್ ರೋಬೋಟ್ ಹೇಗೆ ಕಾರ್ಯನಿರ್ವಹಿಸುತ್ತದೆ
ರೋಬೋಟ್ ಅನ್ನು ಬಳಸಲು, ಬಳಕೆದಾರರು ಬಾಕ್ಸ್ ಆಕಾರದ ರೋಬೋಟ್‌ನಲ್ಲಿ ಪದಾರ್ಥಗಳನ್ನು ಹಾಕಬೇಕು. ಉದಾಹರಣೆಗೆ ನೀರು, ಎಣ್ಣೆ, ಹೆಚ್ಚಿರುವ ತರಕಾರಿ, ಮತ್ತು ಮಸಾಲೆಗಳು ಬಾಕ್ಸ್‌ನಲ್ಲಿ ಹಾಕುವುದು. ನಂತರ ಮೆನುವಿನಲ್ಲಿ ತಮಗೆ ಬೇಕಾದ ಖಾದ್ಯವನ್ನು ಪಂಚ್/ಸೆಟ್ ಮಾಡುವುದು. ನೀವು ಸೆಟ್ ಮಾಡಿರುವ ಖಾದ್ಯವನ್ನು ರೋಬೋಟ್ ರೆಡಿ ಮಾಡಿ ಕೊಡುತ್ತದೆ.


Click it and Unblock the Notifications








