ಮತ್ತೆ ಎಂಟ್ರಿ ಕೊಡ್ತು ನೋಕಿಯಾ ಫ್ಲಿಪ್ ಫೋನ್; ಇದರ ಡಿಸೈನ್‌ಗೆ ಗ್ರಾಹಕರು ಫಿದಾ!
ಜನಪ್ರಿಯ ನೋಕಿಯಾ ಸಂಸ್ಥೆಯು ಮಾರುಕಟ್ಟೆಗೆ ಪಾಪ್ ಪಿಂಕ್ ಮತ್ತು ಲಷ್ ಗ್ರೀನ್ ಕಲರ್ ಒಳಗೊಂಡ ಎರಡು ಹೊಸ ನೋಕಿಯಾ 2660 ಮಡಚುವ ಫ್ಲಿಪ್ ಫೋನ್‌ಗಳನ್ನು (Flip phones) ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಫ್ಲಿಪ್ ಹಾಗೂ ಮಡಚುವ ಫೋನ್‌ಗಳು ಟ್ರೆಂಡ್ ಪಡೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಂಸ್ಥೆಯು ಫ್ಲಿಪ್ ಮಾದರಿಯ ಫೋನ್ ಲಾಂಚ್ ಮಾಡಿ ಗಮನ ಸೆಳೆದಿದೆ.
ಹೌದು, ನೋಕಿಯಾ ಸಂಸ್ಥೆಯು ಹೊಸದಾಗಿ ನೋಕಿಯಾ 2660 ಮಡಚುವ ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಂದಹಾಗೆ ಈ ಮೊದಲು ನೋಕಿಯಾ 2660 ಫ್ಲಿಪ್ 2007 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಮೊದಲ ನೋಕಿಯಾ ಮಡಚುವ ಫೋನ್ 1998 ರಲ್ಲಿ ಬಿಡುಗಡೆಯಾಗಿತ್ತು. ಆದಾಗ್ಯೂ, ನೋಕಿಯಾ ಕಂಪನಿಯು ಈಗ ಮತ್ತೆ ಮಡಚುವ ಫೋನ್ ಪರಿಚಯಿಸಿದೆ.

ಮಾರುಕಟ್ಟೆಯಲ್ಲಿ ಅಬ್ಬರಿಸಲು ಈಗ ಹೊಸ ಅಪ್‌ಡೇಟ್‌ನೊಂದಿಗೆ ಮತ್ತೆ ನೋಕಿಯಾ 2660 ಫ್ಲಿಪ್ ಎಂಟ್ರಿ ಪಡೆದಿದೆ. ಸ್ಟೈಲಿಶ್ ಲುಕ್ ಅನ್ನು ಹೊಂದಿರುವ ಈ ಫೋನ್ ಫ್ಲಿಪ್ ಕವರ್ ನಲ್ಲಿಯೂ 1,77 ಇಂಚಿನ ಸೆಕೆಂಡರಿ ಸ್ಕ್ರೀನ್ ಒಳಗೊಂಡಿದೆ. ಹಾಗಾದರೆ ನೋಕಿಯಾ 2660 ಫ್ಲಿಪ್ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ನೋಕಿಯಾ 2660 ಫ್ಲಿಪ್ ವಿನ್ಯಾಸ ಹೇಗಿದೆ :
ನೋಕಿಯಾ 2660 ಫ್ಲಿಪ್ ಫೋನ್ ಪಾಪ್ ಪಿಂಕ್ ಮತ್ತು ಲಷ್ ಗ್ರೀನ್ ಕಲರ್‌ಗಳಲ್ಲಿ ಸುಂದರವಾದ ಮತ್ತು ದೀರ್ಘ ಬಾಳಿಕೆ ಬರುವ ಕ್ಲಾಮ್ಷೆಲ್ ವಿನ್ಯಾಸ ಹೊಂದಿದೆ. ಇದು ಲೋ-ಫೈ ವೈ2ಕೆ ಶೈಲಿಯ ಫೋಟೋಗಾಗಿ ಹಿಂಬದಿಯ ಕ್ಯಾಮರಾ ಪಡೆದಿದೆ. ಜೊತೆಗೆ ದೀರ್ಘ ಬಾಳಿಕೆಯ ಬ್ಯಾಟರಿ, ಎಸ್ಎಂಎಸ್ ಮತ್ತು ಮೊಬೈಲ್ ಕರೆಗಳನ್ನು ಮಾಡಬಹುದಾದ ಈ ಫೀಚರ್ ಫೋನ್ ಕ್ಲಾಸಿಕ್ ಸ್ನೇಕ್ ಗೇಮ್ ಆಯ್ಕೆ ಪಡೆದಿದೆ.
ನೋಕಿಯಾ 2660 ಫ್ಲಿಪ್ ಡಿಸ್‌ಪ್ಲೇ ರಚನೆ ಮಾಹಿತಿ :
ನೋಕಿಯಾ 2660 ಫ್ಲಿಪ್ ಫೋನ್ 2.8 ಇಂಚಿನ ಡಿಸ್‌ಪ್ಲೇ ವ್ಯವಸ್ಥೆ ಇದೆ. ಅಲ್ಲದೇ ಇದು ಝೂಮ್-ಇನ್ ಯೂಸರ್ ಇಂಟರ್ಫೇಸ್ ಹೊಂದಿದೆ. ಹೀಗಂದರೆ ಬಳಕೆದಾರರು ಸ್ಕ್ರೀನ್ ಮೇಲೆ ಏನಿದೆ ಎಂಬುದನ್ನು ಊಹಿಸಲು ಹೆಚ್ಚು ಸಮಯ ವ್ಯರ್ಥ ಮಾಡುವುದಿಲ್ಲ ಎಂದರ್ಥ, ಅನುಕೂಲಕರ ಕವರ್ ಸ್ಕ್ರೀನ್ ಒಳಬರುವ ಕರೆಗಳನ್ನು ಸುಲಭವಾಗಿ ಗುರುತಿಸುವುದನ್ನು ಖಚಿತಪಡಿಸುತ್ತದೆ.
ನೋಕಿಯಾ 2660 ಫ್ಲಿಪ್ ಪ್ರೊಸೆಸರ್ ಹಾಗೂ ಬ್ಯಾಟರಿ :
ನೋಕಿಯಾ 2660 ಫ್ಲಿಪ್ ಫೋನ್ Unisoc T107 ಪ್ರೊಸೆಸರ್ ಪವರ್ ಅನ್ನು ಹೊಂದಿದ್ದು, ಇದರ ಜೊತೆಗೆ 1450 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ವಾರಗಳ ಕಾಲ ಬಳಕೆ ಸೌಲಭ್ಯ ಒದಗಿಸಲಿದೆ.
ನೋಕಿಯಾ 2660 ಫ್ಲಿಪ್ ಕ್ಯಾಮೆರಾ ರಚನೆ :
ನೋಕಿಯಾ 2660 ಫ್ಲಿಪ್ ಫೋನ್ ಸಿಂಗಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಅದು 0.3 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರ ಜೊತೆಗೆ ಎಲ್‌ಇಡಿ ಪ್ಲ್ಯಾಶ್ ಸೌಲಭ್ಯ ಕೂಡಾ ಪಡೆದುಕೊಂಡಿದೆ.
ನೋಕಿಯಾ 2660 ಫ್ಲಿಪ್ ಬೆಲೆ ಮತ್ತು ಲಭ್ಯತೆ :
ನೋಕಿಯಾ 2660 ಫ್ಲಿಪ್ ಫೋನ್ ಭಾರತದಲ್ಲಿ, ಅಮೆಜಾನ್.ಕಾಮ್ (Amazon.com) ನಲ್ಲಿ ಮತ್ತು ಅಧಿಕೃತ ನೋಕಿಯಾ ವೆಬ್‌ಸೈಟ್ ಖರೀದಿಗೆ ಲಭ್ಯ ಇರುತ್ತದೆ. ಇನ್ನು ಅಮೆಜಾನ್ ತಾಣದಲ್ಲಿ 2023 ರ ಆಗಸ್ಟ್ 24 ರ ಮಧ್ಯಾಹ್ನ 12:00 ಗಂಟೆಗೆ ಮಾರಾಟ ಪ್ರಾರಂಭ ಆಗಲಿದೆ. ಈ ಫೋನಿನ ಬೆಲೆಯು 4,699ರೂ. ಆಗಿದೆ.


Click it and Unblock the Notifications








