ಚಂದ್ರ ಗ್ರಹದ ಮೇಲೂ 4G ಮೊಬೈಲ್ ನೆಟ್‌ವರ್ಕ್: ನೋಕಿಯಾದ ಉದ್ದೇಶ ಏನು!?
ನೋಕಿಯಾ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಎಂದೆಂದಿಗೂ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆಯುತ್ತವೆ. ಅದರಲ್ಲೂ ಇತ್ತೀಚೆಗೆ ಬಜೆಟ್‌ಬೆಲೆಯಲ್ಲಿ ನೋಕಿಯಾದ ಸ್ಮಾರ್ಟ್‌ಫೋನ್‌ಗಳು ಲಭ್ಯವಾಗುತ್ತಿದ್ದು, ಹಲವಾರು ಸುಧಾರಿತ ಫೀಚರ್ಸ್ ಅನ್ನು ಪಡೆದಿವೆ. ಇದರ ನಡುವೆ ನೋಕಿಯಾ ಈಗ ಆಕಾಶಕ್ಕೆ ಏಣಿ ಹಾಕಿದೆ.
ಹೌದು, ನೋಕಿಯಾ ಭೂಮಿ ಮೇಲಿನ ಜನರಿಗೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ್ದು, ಇದೀಗ ಚಂದ್ರನತ್ತ ತನ್ನ ಸೇವೆಯನ್ನು ವಿಸ್ತರಣೆ ಮಾಡಿಕೊಳ್ಳಲು ಮುಂದಾಗಿದೆ. ಈ ಮೂಲಕ ಜಗತ್ತಿನಲ್ಲಿ ವಿಶೇಷವಾದ ಕೆಲಸವೊಂದಕ್ಕೆ ಕೈ ಹಾಕಿದ್ದು, ಚಂದ್ರನ ಬಳಿಗೆ ನೋಕಿಯಾ ಹೋಗುತ್ತಿರುವುದಾದರೂ ಯಾಕೆ?, ಅಲ್ಲಿ ಯಾವ ರೀತಿಯ ಸೇವೆ ನೀಡುತ್ತದೆ ಎಂಬ ನಿಮ್ಮ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಪರಿಹಾರ.

ಚಂದ್ರನೆಡೆಗೆ ನೋಕಿಯಾ: ನೋಕಿಯಾ ಈ ವರ್ಷದ ಅಂತ್ಯದಲ್ಲಿ ಚಂದ್ರನ ಮೇಲೆ 4G ಮೊಬೈಲ್ ನೆಟ್‌ವರ್ಕ್ ಅನ್ನು ಪ್ರಾರಂಭಿಸಲು ಯೋಜಿಸಿದ್ದು, ಈ ಸಂಬಂಧ ಎಲ್ಲಾ ತಯಾರಿ ನಡೆಸಿಕೊಳ್ಳುತ್ತಿದೆ. ಹಾಗೆಯೇ ಚಂದ್ರನ ಆವಿಷ್ಕಾರಗಳನ್ನು ಹೆಚ್ಚಿಸುವ ಭರವಸೆಯಲ್ಲಿ ನೋಕಿಯಾ ಕೆಲಸ ಮಾಡುತ್ತಿದ್ದು, ಚಂದ್ರ ಗ್ರಹದಲ್ಲಿ ಮಾನವ ಉಪಸ್ಥಿತಿಗೆ ಮಾರ್ಗವನ್ನು ಸುಗಮಗೊಳಿಸಲು ಸಜ್ಜಾಗಿದೆ.
ಈ ತಿಂಗಳ ಆರಂಭದಲ್ಲಿ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಟ್ರೇಡ್ ಶೋ ನಲ್ಲಿ ನೋಕಿಯಾದ ಪ್ರಧಾನ ಇಂಜಿನಿಯರ್ ಲೂಯಿಸ್ ಮೆಸ್ಟ್ರೋ ರೂಯಿಜ್ ಡಿ ಟೆಮಿನೊ
ಅವರು ಫಿನ್ನಿಷ್ ದೂರಸಂಪರ್ಕ ಗ್ರೂಪ್ ಮುಂಬರುವ ತಿಂಗಳುಗಳಲ್ಲಿ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ನೆಟ್‌ವರ್ಕ್ ಅನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಮಾಹಿತಿ ನೀಡಿದ್ದರು ಅದರಂತೆ ಇದೀಗ ಚಂದ್ರನತ್ತ ನೋಕಿಯಾ ಹೆಜ್ಜೆ ಇರಿಸಲು ಮುಂದಾಗಿದೆ.

ಚಂದ್ರನ ಮೇಲೆ 4G ಮೊಬೈಲ್ ನೆಟ್‌ವರ್ಕ್ ಹೇಗೆ ಕೆಲಸ ಮಾಡಲಿದೆ?: ನೋವಾ-ಸಿ ಲೂನಾರ್ ಲ್ಯಾಂಡರ್‌ನಲ್ಲಿ ಸಂಗ್ರಹಿಸಲಾದ ಆಂಟೆನಾ-ಸಜ್ಜಿತ ಬೇಸ್ ಸ್ಟೇಷನ್ ಮತ್ತು ಸೌರ-ಚಾಲಿತ ರೋವರ್‌ನಿಂದ ಈ ನೆಟ್‌ವರ್ಕ್ ಚಾಲಿತವಾಗುತ್ತದೆ. ಇನ್ನು ಈ ಬೇಸ್ ಸ್ಟೇಷನ್ ಅನ್ನು ಯುಎಸ್ ಬಾಹ್ಯಾಕಾಶ ಸಂಸ್ಥೆ ಇಂಟ್ಯೂಟಿವ್ ಮೆಷಿನ್ಸ್ ವಿನ್ಯಾಸಗೊಳಿಸಿದೆ. ಅದರಂತೆ ಚಂದ್ರನ ಮೇಲೆ ಇರುವ ಲ್ಯಾಂಡರ್ ಮತ್ತು ರೋವರ್ ನಡುವೆ LTE ಸಂಪರ್ಕವನ್ನು ಸ್ಥಾಪಿಸಲು ಪ್ಲ್ಯಾನ್ ರೂಪಿಸಲಾಗಿದೆ.
ಬಾಹ್ಯಾಕಾಶದ ಎಲ್ಲಾ ಪರಿಸ್ಥಿತಿಗಳನ್ನು ತಡೆದುಕೊಳ್ಳಲಿದೆ: ಇದು ಮೊದಲು ಚಂದ್ರನ ದಕ್ಷಿಣ ಭಾಗದ ಉದ್ದಕ್ಕೂ ಇರುವ ಶಾಕಲ್ಟನ್ ಕುಳಿಯ ಮೇಲೆ ಇಳಿಯಲಿದ್ದು, ಇದನ್ನು ಬಾಹ್ಯಾಕಾಶದ ಎಲ್ಲಾ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತ ತಂತ್ರಜ್ಞಾನವನ್ನು ಅಳವಡಿಸಿ ವಿನ್ಯಾಸಗೊಳಿಸಲಾಗಿದೆ ಎಂದು ನೋಕಿಯಾ ತಿಳಿಸಿದೆ. ಹಾಗೆಯೇ ಈ ನೆಟ್‌ವರ್ಕ್ ಅನ್ನು ನಾಸಾದ ಆರ್ಟೆಮಿಸ್ 1 ಮಿಷನ್‌ನಲ್ಲಿ ಬಳಸಲಾಗುವುದು ಎಂದು ತಿಳಿಸಲಾಗಿದೆ.
ಇದರ ಉದ್ದೇಶ ಏನು?: ಚಂದ್ರನ ಮೇಲೆ 1972 ರಿಂದಲೂ ಸಹ ವಿಶೇಷ ಅಧ್ಯಯನಗಳು ಆರಂಭವಾಗಿದ್ದು, ಅಲ್ಲಿಂದಲೂ ಸಹ ಮಾನವ ಗಗನಯಾತ್ರಿಗಳನ್ನು ಕಳುಹಿಸುವ ಗುರಿಯನ್ನು ಹೊಂದಲಾಗಿದೆ. ಅದರಂತೆ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳ ಸಂವಹನ ಅಗತ್ಯಗಳನ್ನು ಭೂಮಿಯ ಮೇಲಿನ ನೆಟ್‌ವರ್ಕ್‌ಗಳು ಪೂರೈಸಬಲ್ಲವು ಎಂಬುದನ್ನು ಕಂಡುಕೊಳ್ಳುವುದು ಇದರ ಗುರಿಯಾಗಿದೆ.

ಅದರಲ್ಲೂ ಗಗನಯಾತ್ರಿಗಳು ಪರಸ್ಪರ ಸಂವಹನ ನಡೆಸಲು ಮತ್ತು ಮಿಷನ್ ಕಂಟ್ರೋಲ್‌ನೊಂದಿಗೆ ಮತ್ತು ರೋವರ್ ಅನ್ನು ದೂರದಿಂದಲೇ ಕಂಟ್ರೋಲ್ ಮಾಡಲು ಮತ್ತು ನೈಜ-ಸ್ಟ್ರೀಮ್ ಮಾಡಲು ಈ ನೆಟ್‌ವರ್ಕ್ ಅನುಮತಿಸುತ್ತದೆ ಎಂದು ನೋಕಿಯಾ ಹೇಳಿಕೊಂಡಿದೆ. ಹಾಗೆಯೇ ಚಂದ್ರನ ಅದ್ಯಯನಕ್ಕೆ ಸಂಬಂಧಿಸಿದ ಡಾಟಾವನ್ನು ಪಡೆದುಕೊಳ್ಳಲು ಇದು ಸುಲಭಮಾರ್ಗ ಕಲ್ಪಿಸಲಿದೆ.
ಚಂದ್ರನ ಮಂಜುಗಡ್ಡೆ: ಚಂದ್ರನ ಮೇಲಿನ ಮಂಜುಗಡ್ಡೆಯನ್ನು ಕಂಡುಹಿಡಿಯುವುದು ಮತ್ತೊಂದು ಸಾಧನೆಯಾಗಿದೆ. ಚಂದ್ರನ ಮೇಲ್ಮೈಯ ಬಹುಭಾಗವು ಈಗ ಒಣಗಿದೆ. ಆದರೆ, ಚಂದ್ರನ ಇತ್ತೀಚಿನ ಮಾನವರಹಿತ ಕಾರ್ಯಾಚರಣೆಗಳು ಧ್ರುವಗಳ ಸುತ್ತಲಿನ ಆಶ್ರಯದ ಕುಳಿಗಳಲ್ಲಿ ಸಿಕ್ಕಿಬಿದ್ದಿರುವ ಹಿಮದ ಅವಶೇಷಗಳ ಆವಿಷ್ಕಾರಗಳನ್ನು ಪತ್ತೆ ಮಾಡಿವೆ. ಹೀಗಾಗಿ ಚಂದ್ರನ ಮಂಜುಗಡ್ಡೆ ಮೇಲೆಯೂ ನೋಕಿಯಾ ಕೇಂದ್ರೀಕರಿಸಿದೆ.
ಇನ್ನು ಅಲ್ಲಿ ಕಂಡುಬರುವ ಮಂಜಿನ ನೀರನ್ನು ಸಂಸ್ಕರಿಸಿ ಕುಡಿಯಲು ಬಳಸಬಹುದು ಹಾಗೂ ರಾಕೆಟ್‌ಗೆ ಇಂಧನವಾಗಿ ಬಳಸಲು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸಬಹುದು ಇದರೊಂದಿಗೆ ಗಗನಯಾತ್ರಿಗಳಿಗೆ ಉಸಿರಾಡುವ ಆಮ್ಲಜನಕವನ್ನು ಒದಗಿಸಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಕಾರಣಕ್ಕೆ ನೋಕಿಯಾ ಈಗ ಮಂಜುಗಡ್ಡೆಯ ಮೇಲೆ ಹೆಚ್ಚಿನ ಗುರಿ ಇರಿಸಿಕೊಂಡಿದೆ. ಜೊತೆಗೆ ಗಣಿಗಾರಿಕೆ ಸಂಬಂಧದ ಬಗ್ಗೆಯೂ ಇದು ಕೆಲಸ ಮಾಡಲು ಯೋಜಿಸಿದೆ.


Click it and Unblock the Notifications








