UPI ಪ್ಲಗಿನ್ ಮೂಲಕ ಹೊಸ ರೀತಿಯ ಪಾವತಿ ಆಯ್ಕೆ, ಫೋನ್‌ಪೇ, ಗೂಗಲ್‌ಪೇಗೆ ಎದುರಾಯ್ತಾ ಸಂಕಷ್ಟ?
ಡಿಜಿಟಲ್ ಪಾವತಿ ವ್ಯವಸ್ಥೆ (Digital Payment System) ದಿನಕಳೆದಂತೆ ಭಾರತದಲ್ಲಿ ಹೆಚ್ಚಾಗಿ ಬಳಕೆ ಆಗುತ್ತಿದೆ. ಈ ಕಾರಣಕ್ಕಾಗಿಯೇ ಜನರು ಫೋನ್‌ಪೇ ಹಾಗೂ ಗೂಗಲ್ ಪೇನಂತಹ ದೈತ್ಯ ಆಪ್‌ಗಳನ್ನು ಬಳಕೆ ಮಾಡಿಕೊಂಡು ಪಾವತಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಆದರೆ, ಈಗ ಈ ಎರಡೂ ಪಾವತಿ ಆಪ್‌ಗಳು ಶಾಕ್ ಆಗುವ ಸುದ್ದಿ ಹೊರಬಿದ್ದಿದೆ.
ಹೌದು, ಪ್ರಸ್ತುತ ಹೆಚ್ಚಾಗಿ ಬಳಕೆಯಲ್ಲಿರುವ ಯುಪಿಐ (UPI) ಅಪ್ಲಿಕೇಶನ್‌ಗಳಾದ ಫೋನ್ ಪೇ (PhonePe) ಮತ್ತು ಗೂಗಲ್ ಪೇ (Google Pay) ಈಗ ದಿಘ್ಬ್ರಮೆಗೆ ಒಳಗಾಗಿವೆ. ವರದಿಯ ಪ್ರಕಾರ ಎಲ್ಲಾ ಆನ್‌ಲೈನ್ ವಹಿವಾಟುಗಳಲ್ಲಿ (Online transaction) ಸುಮಾರು ಒಟ್ಟಾರೆ 60% ಅನ್ನು ಫೋನ್‌ಪೇ ಅಥವಾ ಗೂಗಲ್ ಪೇ ನಂತಹ ಯುಪಿಐ ಆಪ್‌ಗಳನ್ನು ಬಳಸಿಕೊಂಡು ಮಾಡಲಾಗುತ್ತದೆ. ಮುಂಬರುವ ವರ್ಷಗಳಲ್ಲಿ 75% ವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ನಡುವೆ ಹೊಸ UPI ಆವಿಷ್ಕಾರ ಇವುಗಳ ಮಾರುಕಟ್ಟೆ ಪಾಲನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ.

ಏನಿದು UPI ಪ್ಲಗಿನ್?: ಈವರೆಗೂ ಯಾರೇ ಆದರೂ ಸಹ ಯಾವುದಾದರೂ ಆಪ್‌ನಲ್ಲಿ ಖರೀದಿ ಮಾಡಿದಾಗ ಮೂರನೇ ಆಪ್‌ಗೆ ಎಂಟ್ರಿ ಆಗುವ ಮೂಲಕ ಪಾವತಿ ಮಾಡಬೇಕಾಗಿತ್ತು. ಇದನ್ನು ತಪ್ಪಿಸುವ ಕಾರಣಕ್ಕಾಗಿಯೇ ಈ UPI ಪ್ಲಗಿನ್ (UPI plugin) ಅನ್ನು ಪರಿಚಯಿಸಲಾಗುತ್ತಿದೆ. ತಡೆರಹಿತ ಪಾವತಿಗಳನ್ನು ಸಕ್ರಿಯಗೊಳಿಸುವ ಗುರಿಯನ್ನ ಇದು ಹೊಂದಿದ್ದು, ಆನ್‌ಲೈನ್ ವ್ಯಾಪಾರಿಗಳಿಗೆ ವರ್ಚುವಲ್ ಪಾವತಿ ವಿಳಾಸವನ್ನು (Virtual Payment Address) ಸೇರಿಸಲು ಅನುವು ಮಾಡಿಕೊಡುತ್ತದೆ.
ಅಂದರೆ ಬಳಕೆದಾರರು ಯಾವುದೇ ಪಾವತಿ ಆಪ್‌ಗಳನ್ನು ಬಳಕೆ ಮಾಡದೆಯೇ ಪಾವತಿ ನಡೆಸಬಹುದು. ಪ್ರಸ್ತುತ, UPI ಅಪ್ಲಿಕೇಶನ್‌ಗಳು ಅದರಲ್ಲೂ ಮೊದಲೇ ಉಲ್ಲೇಖಿಸಿದ ಫೋನ್‌ಪೇ ಹಾಗೂ ಗೂಗಲ್ ಪೇ ಮೊಬೈಲ್ ಪಾವತಿಗಳ ವಿಭಾಗದಲ್ಲಿ ಪ್ರಾಬಲ್ಯವನ್ನು ಹೊಂದಿವೆ. ಆದರೆ, ಈ ಹೊಸ ಬೆಳವಣಿಗೆಯು ಇವುಗಳಿಗೆ ಕಠಿಣ ಸವಾಲಾಗಿ ಪರಿಣಮಿಸಬಹುದು ಎಂದು ಹೇಳಲಾಗಿದೆ.
ಇದು ಹೇಗೆ ಕೆಲಸ ಮಾಡಲಿದೆ?: ಉದಾಹರಣೆ ಸಹಿತ ಹೇಳುವುದಾದರೆ ನೀವು ಯಾವುದಾದರೂ ಆಪ್ ಬಳಕೆ ಮಾಡಿಕೊಂಡು ಆಹಾರ ಆರ್ಡರ್ ಮಾಡಿದ್ದೀರ ಎಂದುಕೊಳ್ಳಿ. ಬಳಿಕ ಆ ವಸ್ತುವಿಗೆ ಪಾವತಿ ಮಾಡುವಾಗ ನಿಮ್ಮನ್ನು ನೇರವಾಗಿ ಫೋನ್‌ಪೇ ಅಥವಾ ಗೂಗಲ್ ಪೇ ನಂತಹ ಸಂಬಂಧಿತ UPI ಆಪ್‌ಗೆ ಕರೆದೊಯ್ಯಲಾಗುತ್ತದೆ. ಇದಾದ ಬಳಿಕ ಮತ್ತೆ ಫುಡ್ ಆರ್ಡರ್ ಮಾಡಿದ ಆಪ್‌ಗೆ ಹಿಂತಿರುಗಬೇಕು.
ಈ ಹೆಚ್ಚುವರಿ ಹಂತವು ಹಲವಾರು ಕಾರಣಗಳಿಂದಾಗಿ ಪಾವತಿ ವೈಫಲ್ಯಗಳಿಗೆ ಕಾರಣವಾಗುತ್ತಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರವೇ ಹೌದು. ಕೆಲವೊಮ್ಮೆ ತಾಂತ್ರಿಕವಾಗಿ ಈ ಸಮಸ್ಯೆ ಕಂಡು ಬಂದರೆ ಇನ್ನೂ ಕೆಲವೊಮ್ಮೆ ಬಳಕೆದಾರರು ತಪ್ಪಾಗಿ ಏನಾದರೂ ಒತ್ತಿದಾಗ ಅಥವಾ ಆ ವೇಳೆ ಏನಾದರೂ ಫೋನ್ ಆದಾಗ ಈ ಸಮಸ್ಯೆ ಹೆಚ್ಚು. ಆದರೆ, ಈ ರೀತಿಯ ಸಮಸ್ಯೆಯನ್ನು ಈ ಹೊಸ UPI ಪ್ಲಗಿನ್ ಪರಿಹರಿಸುತ್ತದೆ.

ಅಂದರೆ ಹೆಚ್ಚುವರಿ ಯಾವುದೇ ಹಂತವಿಲ್ಲದೆ ಜೊತೆಗೆ ಸಮಯಾವಕಾಶವನ್ನೂ ನೀಡದೆ ಅದರಲ್ಲೂ ಫೋನ್‌ಪೇ ಅಥವಾ ಗೂಗಲ್ ಪೇ ನಂತಹ ನಿರ್ದಿಷ್ಟ ಆಪ್‌ಗಳಿಗೆ ನಿಮ್ಮನ್ನು ಕರೆದೊಯ್ಯದೆ ಯಾವ ಆಪ್‌ನಲ್ಲಿ ಏನನ್ನು ಆರ್ಡರ್ ಮಾಡಿದ್ದೀರೋ ಅದಕ್ಕೆ ಅಲ್ಲೇ ಪಾವತಿ ಮಾಡಲು ಇದು ಅನುಕೂಲ ಮಾಡಿಕೊಡುತ್ತದೆ. ಇದರಿಂದಾಗಿಯೇ ಈಗ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಆಪ್‌ಗಳು ಆತಂಕಕ್ಕೆ ಒಳಗಾಗುವಂತೆ ಆಗಿದೆ.
ಈ ವ್ಯವಸ್ಥೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI) ಸಂಸ್ಥೆ ಪರಿಚಯಿಸಿದ್ದು, ಪೇಮೆಂಟ್ ಗೇಟ್ವೇ ಮತ್ತು ಪ್ರೋಸಸಿಂಗ್ ಕಂಪೆನಿಗಳಾದ ರೇಜರ್ಪೇ, ಜಸ್ಪೇ, ಪೇಟಿಎಂ ಈಗಾಗಲೇ ತಮ್ಮ ವರ್ತಕರಿಗೆ ಈ ಯುಪಿಐ ಪ್ಲಗಿನ್ ಅಥವಾ ಎಸ್ಡಿಕೆ ಬಳಕೆಗೆ ಅವಕಾಶ ಮಾಡಿಕೊಟ್ಟಿದೆ. ಈ ನಡುವೆ ಇದನ್ನು ಎಲ್ಲಾ ಕಡೆ ಸಂಪೂರ್ಣವಾಗಿ ಬಳಕೆ ಮಾಡಲು ಜನರು ಮುಂದಾದರೆ ಫೋನ್ ಪೇ ಮತ್ತು ಗೂಗಲ್ ಪೇಗೆ ಬಹಳ ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ. ಈಗ ಫೋನ್‌ಪೇ 47% ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಗೂಗಲ್ ಪೇ 33% ಮಾರುಕಟ್ಟೆ ಪಾಲನ್ನು ಹೊಂದಿದೆ.


Click it and Unblock the Notifications