ಒನ್‌ಪ್ಲಸ್ 11 ಮಾರ್ಬಲ್ ಒಡಿಸ್ಸಿ ಶೀಘ್ರದಲ್ಲೇ ಭಾರತಕ್ಕೆ; ಬೆಲೆ ವಿವರ ಲೀಕ್!
ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಪ್ರೊಸೆಸರ್ ಬಲ ಹಾಗೂ ಉತ್ತಮ ಕ್ಯಾಮೆರಾ ಫೀಚರ್ಸ್‌ನೊಂದಿಗೆ ಬಳಕೆದಾರರಿಗೆ ಹೆಚ್ಚು ಪ್ರಿಯವಾಗುತ್ತಿವೆ. ಈ ನಡುವೆ ಒನ್‌ಪ್ಲಸ್ ಆಗಾಗ್ಗೆ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಇದೀಗ ಮತ್ತೊಂದು ವಿಶೇಷ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಲಾಂಚ್ ಆಗಲಿದೆ. ನೀವೇನಾದರೂ ಈ ವೇಳೆ ಒನ್‌ಪ್ಲಸ್ ಫೋನ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಸ್ವಲ್ಪ ಸಮಯ ಕಾಯಿರಿ.
ಹೌದು, ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಒನ್‌ಪ್ಲಸ್ 11 ಮಾರ್ಬಲ್ ಒಡಿಸ್ಸಿ (OnePlus 11 Marble Odyssey) ಅನಾವರಣ ಆಗಲಿದ್ದು, ಇದಕ್ಕೂ ಮೊದಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈ ಫೋನ್ ಇತರೆ ಕಂಪೆನಿಗಳು ನಡುಗುವಂತೆ ಮಾಡಿದೆ. ಜೊತೆಗೆ ಲಾಂಚ್ ಆಗುವ ಮುನ್ನವೇ ಫೋನ್‌ನ ಬೆಲೆ ವಿವರ ಬಹಿರಂಗ ಆಗಿದೆ. ಹಾಗಿದ್ರೆ, ಈ ವಿಶೇಷ ಫೋನ್ ಬೆಲೆ ಎಷ್ಟಿರಬಹುದು, ಇದರ ಫೀಚರ್ಸ್ ಏನು ಎಂಬ ಬಗ್ಗೆ ತಿಳಿಯೋಣ ಬನ್ನಿ.

ಭಾರತದಲ್ಲಿ ಅಪಾರ ಅನುಯಾಯಿಗಳನ್ನು ಹೊಂದಿರುವ ಒನ್‌ಪ್ಲಸ್ ಈ ರೀತಿಯ ವಿಶೇಷ ಆವೃತ್ತಿಯ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿಯ ಕಾರ್ಯತಂತ್ರಗಳನ್ನು ನಡೆಸಿದ್ದು, ಈ ಮೂಲಕ ಕಂಪೆನಿಯು ಡಿಸೈನರ್-ರಚಿಸಿದ ಪರಿಕಲ್ಪನೆಯ ಫೋನ್‌ಗಳನ್ನು ಪರಿಚಯಿಸುತ್ತಾ ಬರುತ್ತಿದೆ. ಅದರಂತೆ ಈ ವರ್ಷದ ಆರಂಭದಲ್ಲಿ ಒನ್‌ಪ್ಲಸ್ 11 5G ಅನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಆಕ್ಟಿವ್ ಕ್ರಯೋ ಫ್ಲಕ್ಸ್ ಕೂಲಿಂಗ್ ತಂತ್ರಜ್ಞಾನ ಇರುವ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಇದೀಗ ಒನ್‌ಪ್ಲಸ್ 11 ಮಾರ್ಬಲ್ ಒಡಿಸ್ಸಿ ವಿಶೇಷ ಆವೃತ್ತಿ ಶೀಘ್ರದಲ್ಲೇ ಲಾಂಚ್ ಆಗಲಿದ್ದು, ಇದು ಕಲೆ ಮತ್ತು ತಂತ್ರಜ್ಞಾನದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂದು ಕಂಪೆನಿಯ ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ. ಜೊತೆಗೆ ಈ ಬಗ್ಗೆ ಕೆಲವು ಮಾಹಿತಿಯನ್ನು ಈ ಹಿಂದೆ ನೀಡಿತ್ತಾದರೂ ಇದರ ಬೆಲೆ ಹಾಗೂ ಇತರೆ ವಿವರವನ್ನು ಕಂಪೆನಿ ನೀಡಿರಲಿಲ್ಲ. ಆದರೀಗ ಈ ಫೋನ್‌ನ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಲೀಕ್ ಆಗಿದೆ.

ಈ ಫೋನ್ ಬಗ್ಗೆ ಟ್ವಿಟರ್ ಬಳಕೆದಾರ ಮುಕುಲ್ ಶರ್ಮಾ ಅವರು ಪೋಸ್ಟ್ ಮಾಡಿದ್ದು, ಈ ಒನ್‌ಪ್ಲಸ್ 11 ಮಾರ್ಬಲ್ ಒಡಿಸ್ಸಿ ಬೆಲೆ 64,999ರೂ.ಗಳಾಗಿರಬಹುದು ಎಂದು ತಿಳಿಸಿದ್ದಾರೆ. ಇದಿಷ್ಟೇ ಅಲ್ಲದೆ ಗ್ರಾಹಕರು ಉಚಿತ ಒನ್‌ಪ್ಲಸ್ Z2 ಇಯರ್‌ಬಡ್‌ಗಳನ್ನು ಸಹ ಪಡೆಯುತ್ತಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಇನ್ನುಳಿದಂತೆ ಈ ಫೋನ್ ಒನ್‌ಪ್ಲಸ್ 11 ಲಿಮಿಟೆಡ್ ಜುಪಿಟರ್ ರಾಕ್ ಆವೃತ್ತಿಯ ಮರುಬ್ರಾಂಡೆಡ್ ಆವೃತ್ತಿಯಂತೆಯೇ ಇದೆ ಎಂದು ಭಾವಿಸಲಾಗಿದೆ.
ಒನ್‌ಪ್ಲಸ್ 11 ಲಿಮಿಟೆಡ್ ಜುಪಿಟರ್ ರಾಕ್ ಫೋನ್ ಮಾರ್ಚ್‌ನಲ್ಲಿ ಚೀನಾದಲ್ಲಿ ಲಾಂಚ್ ಆಗಿದ್ದು, ಜುಪಿಟರ್ ರಾಕ್ ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹದ ಮೇಲ್ಮೈಯಿಂದ ಸ್ಫೂರ್ತಿ ಪಡೆದಿದೆ ಎಂದು ಒನ್‌ಪ್ಲಸ್ ಹೇಳಿಕೊಂಡಿತ್ತು. ಜೊತೆಗೆ ಫೋನ್ ಚಾಸಿಸ್‌ಗಾಗಿ 3D ಮೈಕ್ರೋಕ್ರಿಸ್ಟಲಿನ್ ರಾಕ್ ಎಂಬ ವಸ್ತುವನ್ನು ಸಹ ಬಳಕೆ ಮಾಡಿದ್ದೇವೆ ಎಂದು ತಿಳಿಸಿತ್ತು. ಈ ಶೈಲಿಯ ಹೊರತಾಗಿ ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 2 SoC ಬಲ ಪಡೆದುಕೊಂಡಿರಲಿದೆ ಎನ್ನಲಾಗಿದೆ.
ಇದರೊಂದಿಗೆ ಹ್ಯಾಸಲ್‌ಬಾಲ್ಡ್-ಟ್ಯೂನ್ಡ್ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿರಲಿದ್ದು, 50 ಮೆಗಾಪಿಕ್ಸೆಲ್ ಸೋನಿ IMX890 ಕ್ಯಾಮೆರಾ ಆಯ್ಕೆಯೊಂದಿಗೆ 48 ಮೆಗಾಪಿಕ್ಸೆಲ್ ಸೋನಿ IMX581 ಅಲ್ಟ್ರಾ ವೈಡ್-ಆಂಗಲ್ ಕ್ಯಾಮರಾ ಮತ್ತು 32 ಮೆಗಾಪಿಕ್ಸೆಲ್ ಪೋರ್ಟ್ರೇಟ್ ರಿಯರ್ ಕ್ಯಾಮೆರಾ ರಚನೆ ಇರಬಹುದು ಎಂದು ನಂಬಲಾಗಿದೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ಪಡೆದಿರಬಹುದು ಎಂದು ತಿಳಿದುಬಂದಿದೆ. ಇನ್ನುಳಿದಂತೆ 100W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯೂ ಇರಲಿದೆ ಎಂದು ತಿಳಿದುಬಂದಿದೆ.

ಇನ್ನು ಈ ಫೋನ್‌ನ ಸ್ಟೋರೇಜ್ ವಿಷಯಕ್ಕೆ ಬಂದರೆ ಇದು ವಿಶೇಷ ಆವೃತ್ತಿಯ ಫೋನ್ ಆಗಿರುವುದರಿಂದ 16GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯ ಪಡೆದಿರಲಿದೆ ಎನ್ನಲಾಗಿದ್ದು, ಈ ವೇರಿಯಂಟ್‌ಗೆ 64,999ರೂ. ಗಳ ಬೆಲೆ ನಿಗದಿಪಡಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಒನ್‌ಪ್ಲಸ್ 11 ಫೋನ್‌ನ 128GBಯ ಸಾಮಾನ್ಯ ವೇರಿಯಂಟ್ ಬೆಲೆ 56,999ರೂ.ಗಳಾಗಿದೆ. ಹಾಗೂ 256GB ಸ್ಟೋರೇಜ್ ಹೊಂದಿರುವ ವೇರಿಯಂಟ್ ಬೆಲೆ 61,999 ರೂ.ಗಳಾಗಿದೆ.
ಹಾಗೆಯೇ ಒನ್‌ಪ್ಲಸ್ 5T ಸ್ಟಾರ್ ವಾರ್ಸ್ ಆವೃತ್ತಿ, ಒನ್‌ಪ್ಲಸ್ 6 ಅವೇಂಜರ್ ಆವೃತ್ತಿ, ಒನ್‌ಪ್ಲಸ್ 7T ಪ್ರೊ McLaren ಆವೃತ್ತಿ, ಒನ್‌ಪ್ಲಸ್ 10 ಮಾರ್ವೆಲ್ ಆವೃತ್ತಿ, ಒನ್‌ಪ್ಲಸ್ ನಾರ್ಡ್ 2 ಪ್ಯಾಕ್‌ಮ್ಯಾನ್ ಆವೃತ್ತಿ ಫೋನ್‌ಗಳು ಈ ಮೊದಲು ಭಾರತದಲ್ಲಿ ಸೀಮಿತ ಪ್ರಮಾಣದಲ್ಲಿ ಲಾಂಚ್ ಆದ ವಿಶೇಷ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಾಗಿವೆ.


Click it and Unblock the Notifications