online scam: ಸಿಕ್ಕ ಸಿಕ್ಕಲ್ಲಿ ಉದ್ಯೋಗಕ್ಕಾಗಿ ರೆಸ್ಯೂಮ್ ಸಲ್ಲಿಕೆ ಮಾಡ್ತಾ ಇದ್ದೀರಾ?.. ಎಚ್ಚರ ನಿಮಗೂ ಈ ಮೋಸ ಆಗಬಹುದು!
ಕೊರೊನಾ ನಂತರದ ದಿನಗಳು ಅದೆಷ್ಟೋ ಜನರ ಜೀವನಕ್ಕೆ ಮಾರಕವಾಗಿದೆ. ಅದರಲ್ಲೂ ಉದ್ಯೋಗಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದ್ದು, ಈ ಕ್ಷಣಕ್ಕೂ ಹಲವಾರು ಜನರು ಉದ್ಯೋಗಕ್ಕಾಗಿ ಪರಿತಪಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಅದೆಷ್ಟೋ ಸ್ಕ್ಯಾಮರ್‌ಗಳು (Scammers) ಉದ್ಯೋಗಾಕಾಂಕ್ಷಿಗಳನ್ನು ಆನ್‌ಲೈನ್ ಮೂಲಕ ವಂಚನೆ (online scam) ಮಾಡಲಾಗುತ್ತಿದೆ.
ಹೌದು, ಎಲ್ಲಾದರೂ ಒಂದು ಕಡೆ ಉದ್ಯೋಗ ಸಿಗಲಿ ಎಂದು ಚಂಡೀಗಢದ ವ್ಯಕ್ತಿ ಸಿಕ್ಕಸಿಕ್ಕಲ್ಲಿ ತಮ್ಮ ರೆಸ್ಯೂಮ್ ಅನ್ನು ಅಪ್‌ಲೋಡ್ ಮಾಡಿದ್ದಾರೆ. ದುರಂತ ಏನೆಂದರೆ ಇವರು ಈ ರೆಸ್ಯೂಮ್ ಮೂಲಕ 6.4 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಆದರೆ ಇತ್ತ ಉದ್ಯೋಗವೂ ಇಲ್ಲ, ಉಳಿತಾಯ ಮಾಡಿದ್ದ ಹಣವೂ ಇಲ್ಲ ಎಂಬಂತೆ ಆಗಿದೆ. ಹಾಗಿದ್ರೆ ಈತ ಮೋಸ ಹೋಗಿದ್ದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಉದ್ಯೋಗ ಪಡೆಯಲು ಮುಂದಾಗಿ ಲಕ್ಷ ಲಕ್ಷ ಕಳೆದುಕೊಂಡ ವ್ಯಕ್ತಿ: ಉದ್ಯೋಗ-ಹುಡುಕಾಟ ಪೋರ್ಟಲ್‌ನಲ್ಲಿ ರೆಸ್ಯೂಮ್ (Resume) ಅನ್ನು ಅಪ್‌ಲೋಡ್ ಮಾಡುವುದು ಸಾಮಾನ್ಯವಾದ ವಿಚಾರ. ಅದರಲ್ಲೂ ಕಂಪನಿಗಳೊಂದಿಗೆ ಭೌತಿಕ ರೆಸ್ಯೂಮ್‌ಗಳನ್ನು ಸಲ್ಲಿಕೆ ಮಾಡುತ್ತಿದ್ದ ಆ ದಿನಗಳು ಬಹುತೇಕ ಮುಗಿದಿದ್ದು, ಬಹು ಉದ್ಯೋಗ-ಹುಡುಕಾಟ ಸೈಟ್‌ಗಳು ಆನ್‌ಲೈನ್ ಮೂಲಕವೇ ಕಾರ್ಯನಿರ್ವಹಣೆ ಮಾಡುತ್ತವೆ.
ಆದರೆ ಈ ಟೆಕ್ ಜಗತ್ತಿನಲ್ಲಿ ವಜಾಗೊಳಿಸುವಿಕೆಯು ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸ್ಕ್ಯಾಮರ್‌ಗಳು ನಕಲಿ ಉದ್ಯೋಗ ಲಿಸ್ಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಮೂಲಕ ಜನರ ಖಾಸಗಿ ಮಾಹಿತಿಯೊಂದಿಗೆ ಅವರ ಬ್ಯಾಂಕ್ ವಿವರ ಪಡೆದುಕೊಂಡು ಮೋಸ ಮಾಡುತ್ತಿದ್ದಾರೆ.
ಇತ್ತೀಚಿನ ಘಟನೆಯೊಂದರಲ್ಲಿ, ಚಂಡೀಗಢದ ವ್ಯಕ್ತಿಯೊಬ್ಬರು ತಮ್ಮ ರೆಸ್ಯೂಮ್ ಅನ್ನು ವಿವಿಧ ಉದ್ಯೋಗ ಹುಡುಕಾಟ ಪೋರ್ಟಲ್‌ಗಳಲ್ಲಿ ಅಪ್‌ಲೋಡ್ ಮಾಡಿದಾಗ 6 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಎಚ್‌ಟಿಯಲ್ಲಿ ಸಂಕ್ಷಿಪ್ತ ವರದಿ ಮಾಡಲಾಗಿದೆ. ನವಿನ್ ಗುಪ್ತಾ ಎಂಬ ವ್ಯಕ್ತಿ ತನ್ನ ರೆಸ್ಯೂಮ್ ಅನ್ನು ವಿವಿಧ ಉದ್ಯೋಗ ಹುಡುಕಾಟ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದು, ಜೂನ್ 22 ರಂದು ರಾಷ್ಟ್ರೀಯ ಮಾಧ್ಯಮ ಗುಂಪಿನಿಂದ ಎಂದು ಹೇಳಿಕೊಂಡ ವ್ಯಕ್ತಿ ಇವರನ್ನು ಸಂಪರ್ಕ ಮಾಡಿದ್ದಾರೆ.
ಇದಾದ ನಂತರದಲ್ಲಿ ಸಂದರ್ಶನವನ್ನು ನಿಗದಿಪಡಿಸಲು ಶುಲ್ಕವಾಗಿ 6,500ರೂ. ಗಳನ್ನು ಪಾವತಿ ಮಾಡಬೇಕು ಎಂದು ಕೇಳಿಕೊಂಡಿದ್ದಾನೆ. ಈ ಕರೆ ನಿಜ ಎಂದು ನಂಬಿದ ವ್ಯಕ್ತಿ ಹಣ ವರ್ಗಾವಣೆ ಮಾಡಿ ಅವರು ಏನೆಲ್ಲಾ ಹೇಳಿದ್ದರೋ ಅದನ್ನು ಪಾಲನೆ ಮಾಡಿದ್ದಾರೆ. ಇದರಲ್ಲಿ ಅವರು ಕಡ್ಡಾಯ ಕೋರ್ಸ್, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಐಟಿ ತರಬೇತಿ ನೆಪದಲ್ಲಿ ಪಾವತಿಸುವಂತೆ ಮತ್ತೆ ಮತ್ತೆ ಕೇಳಿದ್ದಾರೆ. ಇದಾದ ನಂತರದಲ್ಲಿ ಕೊನೆಗೆ ನಕಲಿ ನೇಮಕಾತಿ ಪತ್ರ ನೀಡಲಾಗಿದೆ.
ದುರಂತ ಏನೆಂದರೆ 6.4 ಲಕ್ಷಕ್ಕೂ ಹೆಚ್ಚು ಹಣವನ್ನು ಪಾವತಿಸಿದ ನಂತರ ವ್ಯಕ್ತಿ ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ (Cybercrime) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ರೀತಿಯ ವಂಚನೆಗಳು ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಪರಿಣಾಮ ಇವುಗಳಿಂದ ಎಚ್ಚರಿಕೆ ವಹಿಸಿವುದು ಹೇಗೆ ಎಂದು ತಿಳಿದುಕೊಳ್ಳಿ.
ನೀವು ಯಾವುದೇ ಖಾಸಗಿ ಉದ್ಯೋಗಕ್ಕಾ ಅರ್ಜಿ ಸಲ್ಲಿಕೆ ಮಾಡಲು ಮುಂದಾದರೆ ಲಿಂಕ್ಡ್‌ಇನ್, ನೌಕರಿ.ಕಾಮ್ ಹಾಗೂ ಇನ್‌ಡೀಡ್ ಸೇರಿದಂತೆ ಅಧಿಕೃತ ಸೈಟ್‌ಗಳನ್ನು ಅನುಸರಿಸಿ. ಆದಾಗ್ಯೂ, ನೀವು ಇತರ ವಿಧಾನಗಳ ಮೂಲಕ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬೇಕಾದರೆ, ಆಫರ್ ಮಾಡುತ್ತಿರುವ ವ್ಯಕ್ತಿಯ ಸಂಪೂರ್ಣ ಪರಿಶೀಲನೆಯನ್ನು ಮಾಡಿ ಕೆಲಸ ಮತ್ತು ಅವನು/ಅವಳು ಎಷ್ಟು ಕಾನೂನುಬದ್ಧ ಎಂದು ಪರಿಶೀಲಿಸಿ.
ಈ ವೇಳೆ ನೀವು ಅವರ ಹೆಸರು, ಅವರ ಕಂಪನಿಯ ಹೆಸರು ಇತ್ಯಾದಿ ವಿವರಗಳಿಗಾಗಿ ಅವರನ್ನೇ ಕೇಳಿ ಮಾಹಿತಿ ಪಡೆದುಕೊಳ್ಳಿ, ನಂತರ ಅವರು ಹೇಳಿದ ಮಾಹಿತಿಯನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿ ತಾಳೆ ಹಾಕಿ ನೋಡಿ. ಇದರಿಂದ ನಿಮಗೆ ಕರೆ ಮಾಡಿದ ವ್ಯಕ್ತಿ ನಕಲಿಯೋ ಅಥವಾ ಅಸಲಿಯೋ ಎಂಬ ಮಾಹಿತಿ ತಿಳಿದುಬರುತ್ತದೆ. ಇದರೊಂದಿಗೆ ಹೆಸರು, ಫೋನ್ ಸಂಖ್ಯೆ ಇತ್ಯಾದಿಗಳಂತಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡುವ ಮೊದಲು ಎಚ್ಚರಿಕೆ ಇರಲಿ.

ಜೊತೆಗೆ ಅಪರಿಚಿತರ ಬ್ಯಾಂಕ್ ಖಾತೆಗೆ ಹಣವನ್ನು ಎಂದಿಗೂ ವರ್ಗಾಯಿಸಬೇಡಿ ಮತ್ತು ನಿಮ್ಮ ಬ್ಯಾಂಕಿಂಗ್ ರುಜುವಾತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಪ್ರತಿಷ್ಠಿತ ಕಂಪನಿಗಳು ನಿಮಗೆ ಉದ್ಯೋಗ ನೀಡಲು ಯಾವುದೇ ರೀತಿಯ ಹಣವನ್ನು ಎಂದಿಗೂ ಕೇಳುವುದಿಲ್ಲ. ಅಕಸ್ಮಾತ್ ಕೇಳುತ್ತಾರೆ ಎಂದರೆ ಅದು ಮೋಸ ಎಂದು ಸುಲಭವಾಗಿ ಕಂಡುಕೊಳ್ಳಿ.


Click it and Unblock the Notifications








