Online scam: ಆಭರಣ ಅಂಗಡಿಯ ಇಮೇಲ್ ಐಡಿ ಕದ್ದು 18 ಲಕ್ಷ ರೂ. ವಂಚನೆ! ಅದೇಗೆ ಅಂತೀರಾ!?
ಆನ್‌ಲೈನ್ ವಂಚನೆಗಳು (Online scam) ಆಗಾಗ್ಗೆ ವರದಿಯಾಗುತ್ತಲೇ ಇವೆ. ಈ ನಡುವೆ ಮತ್ತೊಂದು ಹೊಸ ಪ್ರಕರಣ ಜರುಗಿದ್ದು, ಎರಡು ಖಾತೆಗಳಿಗೆ 18 ಲಕ್ಷ ರೂ.ಗಳನ್ನು ಜಮೆ ಮಾಡಿಕೊಂಡು ಸ್ಕ್ಯಾಮರ್‌ಗಳು ಬ್ಯಾಂಕ್‌ಗೆ ವಂಚನೆ ಮಾಡಿದ್ದಾರೆ. ಈ ನಡುವೆ ಚಿನ್ನ ಮಾರುವವರು ಆತಂಕಕ್ಕೆ ಒಳಗಾಗುವಂತೆ ಆಗಿದೆ.
ಹೌದು, ಭಾರತದಲ್ಲಿ ಆನ್‌ಲೈನ್ ವಂಚನೆಗಳ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಂತೆ ಇತ್ತೀಚಿನ ಘಟನೆಯಲ್ಲಿ ಮುಂಬೈನ ನಗರ ಸಹಕಾರಿ ಬ್ಯಾಂಕ್‌ಗೆ ವಂಚಿಸಿದ ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳು ಆಭರಣ ಮಳಿಗೆಯ ಮಾಲೀಕರಂತೆ ನಟಿಸಿ 18 ಲಕ್ಷ ರೂಪಾಯಿಗಳನ್ನು ಎಗರಿಸಿದ್ದಾರೆ. ಹಾಗಿದ್ರೆ, ಈ ಘಟನೆ ನಡೆದಿದ್ದು ಹೇಗೆ? ಇದನ್ನು ಹೇಗೆ ಮಾಡಲಾಯಿತು ಎಂಬ ಮಾಹಿತಿ ಇಲ್ಲಿದೆ ನೋಡಿ.

18 ಲಕ್ಷ ರೂ.ವಂಚನೆ: ಸ್ಕ್ಯಾಮರ್‌ಗಳು ಮೊದಲು ಆಭರಣ ಅಂಗಡಿಯ ಇಮೇಲ್ ವಿಳಾಸವನ್ನು ಕದ್ದಿದ್ದಾರೆ. ನಂತರ ಸ್ಟೋರ್‌ನ ಖಾತೆಯನ್ನು ಹೊಂದಿರುವ ಬ್ಯಾಂಕ್‌ನೊಂದಿಗೆ ಸಂವಹನ ನಡೆಸಲು ಇದನ್ನು ಬಳಕೆ ಮಾಡಿದ್ದಾರೆ. ಆ ಇಮೇಲ್ ಐಡಿ ಬಳಸಿ, ವಂಚಕರು ಬ್ಯಾಂಕ್ ಮ್ಯಾನೇಜರ್‌ಗೆ ಇಮೇಲ್ ಒಂದನ್ನು ಕಳುಹಿಸಿದ್ದಾರೆ. ಈ ಮೂಲಕ ಎರಡು ವಿಭಿನ್ನ ಖಾತೆಗಳಿಗೆ 18 ಲಕ್ಷ ರೂಪಾಯಿಗಳನ್ನು ವರ್ಗಾಯಿಸುವಂತೆ ಕೇಳಿದ್ದಾರೆ. ಇದು ಅಸಲಿ ಇಮೇಲ್ ಎಂದು ಭಾವಿಸಿ, ಬ್ಯಾಂಕ್ ಮ್ಯಾನೇಜರ್ ಹಣ ವರ್ಗಾವಣೆ ಮಾಡಿದ್ದಾರೆ.
ಇದಾದ ನಂತರದಲ್ಲಿ ಚಿನ್ನಾಭರಣ ಮಳಿಗೆ ಮಾಲೀಕರು ಬ್ಯಾಂಕ್‌ಗೆ ಖುದ್ದು ಭೇಟಿ ನೀಡಿ ಅನಧಿಕೃತ ವಹಿವಾಟಿನ ಬಗ್ಗೆ ಮಾಹಿತಿ ಕೇಳಿದಾಗ ಸಹಕಾರಿ ಬ್ಯಾಂಕ್‌ಗೆ ವಂಚನೆ ಮಾಡಿರುವುದು ವ್ಯವಸ್ಥಾಪಕರಿಗೆ ತಿಳಿದುಬಂದಿದೆ. ಪರಿಣಾಮ ತಕ್ಷಣವೇ ಅವರು ಸೈಬರ್ ಪೊಲೀಸರಿಗೆ ಘಟನೆಯನ್ನು ವರದಿ ಮಾಡಿದ್ದು, ವಂಚನೆ, ನಕಲಿ ಮತ್ತು ಗುರುತಿನ ಕಳ್ಳತನಕ್ಕಾಗಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು ತನಿಖೆಯ ಸಮಯದಲ್ಲಿ ಪೊಲೀಸರು ಅಪರಾಧದಲ್ಲಿ ಭಾಗಿಯಾಗಿರುವ ಮೂವರು ಶಂಕಿತರನ್ನು ಪತ್ತೆಹಚ್ಚಿ ಬಂಧನ ಮಾಡಿದ್ದಾರೆ. ಅದರಲ್ಲಿ 27 ವರ್ಷದ ಆಟೋ ಚಾಲಕ ಯೋಗೇಶ್ ಶರ್ಮಾ, ಮಾಜಿ ಭದ್ರತಾ ಸಿಬ್ಬಂದಿ ಆದರ್ಶ್ ಸಿಂಗ್ ಹಾಗೂ ಕಾರ್ಮಿಕ ಉಮೇಶ್ ಗುಪ್ತಾ ಎಂಬ ಮೂವರು ಈಗ ಕಂಬಿ ಎಣಿಸುತ್ತಿದ್ದಾರೆ. ಗುಪ್ತಾ ಮತ್ತು ಶರ್ಮಾ ಕ್ರಮವಾಗಿ 9.5 ಲಕ್ಷ ರೂಪಾಯಿ ಮತ್ತು 8.5 ಲಕ್ಷ ರೂಪಾಯಿಗಳನ್ನು ಜಮೆ ಮಾಡಿಸಿಕೊಂಡಿದ್ದರು.
ಇನ್ನು ಆರೋಪಿಗಳಲ್ಲಿ ಸಿಂಗ್ ವಿವಿಧ ಜನರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಶಂಕಿತರಿಗೆ ಸಹಾಯ ಮಾಡಿದ್ದಾನೆ. ಜೊತೆಗೆ ಶಂಕಿತರು ಸೈಬರ್ ವಂಚನೆಗಳನ್ನು ನಡೆಸಲು ರಾಜಸ್ಥಾನದ ಕಾರ್ಮಿಕರ ಬ್ಯಾಂಕ್ ಖಾತೆಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಒಮ್ಮೆ ಈ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿದ ನಂತರ ವಂಚಕರು ಅದನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದರಂತೆ.
ಪ್ರಮುಖ ವಿಷಯ ಏನೆಂದರೆ ಸಿಂಗ್ ಬಿಹಾರದಿಂದ ರಾಜಸ್ಥಾನಕ್ಕೆ ಕಾರ್ಮಿಕರ ಗುಂಪನ್ನು ಕರೆದೊಯ್ದಿದ್ದ. ಅಲ್ಲಿ ಅವರು ಅಲ್ಪಾವಧಿಗೆ ಕೆಲಸ ಮಾಡುತ್ತಿದ್ದರು. ಅವರ ಹೊಸ ವಿಳಾಸಗಳನ್ನು ಬಳಕೆ ಮಾಡಿಕೊಂಡು ಹೊಸ ಬ್ಯಾಂಕ್ ಖಾತೆಗಳನ್ನು ತೆರೆಸಿದ್ದಾರೆ. ಈ ವೇಳೆ ಕಾರ್ಮಿಕರಿಗೆ ತಲಾ15,000 ರೂ.ಗಳನ್ನು ನೀಡಿ ಬ್ಯಾಂಕ್ ವಿವರ ಹಾಗೂ ಸಿಮ್‌ಕಾರ್ಡ್‌ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಇಷ್ಟೆಲ್ಲಾ ಆದ ಮೇಲೆ ಬ್ಯಾಂಕ್ ದಾಖಲೆಗಳು ಮತ್ತು ಸಿಮ್‌ಗಳನ್ನು ಸಿಂಗ್ ತನ್ನ ಬಳಿಯೇ ಇಟ್ಟುಕೊಂಡು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವ ಇತರ ಗ್ಯಾಂಗ್ ಸದಸ್ಯರಿಗೆ ಅದನ್ನು ರವಾನೆ ಮಾಡುವ ಕೆಲಸ ಮಾಡಿದ್ದಾನೆ. ಈ ಬ್ಯಾಂಕ್ ಖಾತೆಗಳೊಂದಿಗೆ ಮಾಡಿದ ಪ್ರತಿ ವಹಿವಾಟಿನ ಮೇಲೆ ಆತ 10% ಕಮಿಷನ್ ಪಡೆದುಕೊಳ್ಳುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ವಂಚನೆಯಲ್ಲಿ ಸ್ಕ್ಯಾಮರ್‌ಗಳು ಮ್ಯಾನ್-ಇನ್-ದಿ-ಮಿಡಲ್ ದಾಳಿಯನ್ನು ಬಳಕೆ ಮಾಡಿದ್ದಾರೆ. ಇಂತಹ ದಾಳಿಗಳಲ್ಲಿ ಆಕ್ರಮಣಕಾರರು ಎರಡು ಪಕ್ಷಗಳ ನಡುವಿನ ಸಂವಹನ ಮತ್ತು ಡೇಟಾ ವಿನಿಮಯವನ್ನು ಕಂಟ್ರೋಲ್ ಮಾಡುತ್ತಾರೆ ಮತ್ತು ಅನಧಿಕೃತ ಖರೀದಿಗಳನ್ನು ಮಾಡುವುದು, ಸೂಕ್ಷ್ಮ ಡೇಟಾವನ್ನು ಕದಿಯುವುದು ಮತ್ತು ಹೆಚ್ಚಿನವುಗಳಂತಹ ದುರುದ್ದೇಶಪೂರಿತ ಉದ್ದೇಶಗಳಿಗಾಗಿ ಈ ಮಾಹಿತಿಯನ್ನು ಬಳಕೆ ಮಾಡುವ ಕೆಲಸ ಮಾಡಲಾಗುತ್ತದೆ.


Click it and Unblock the Notifications








