ಒಟಿಪಿ ಇಲ್ಲದೆಯೂ ಹಣ ಕದಿಯುತ್ತಾರೆ..! 40 ಸಾವಿರ ಕಳೆದುಕೊಂಡ ನಟ
ಆನ್‌ಲೈನ್ ವಂಚನೆ (online fraud) ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದು ಯಾವ ರೀತಿ ಹೊಸ ಮುಖ ಹಾಕಿಕೊಂಡು ಬರುತ್ತದೆ ಅನ್ನೋದನ್ನು ಕಂಡುಕೊಳ್ಳಲು ಪೊಲೀಸರಿಗೂ ಸಹ ಕಷ್ಟಸಾಧ್ಯ. ಈ ಮೂಲಕ ಸ್ಕ್ಯಾಮರ್‌ಗಳು ಜನಸಾಮಾನ್ಯರ ಹಣವನ್ನು ಕುಂತಲ್ಲಿಯೇ ಕದಿಯುವ ಕೆಲಸ ಮಾಡುತ್ತಿದ್ದಾರೆ.
ಹೌದು, ಈ ಮೊದಲು ಆನ್‌ಲೈನ್ ಹಗರಣಕ್ಕೆ ಸಂಬಂಧಿಸಿದಂತೆ ಒಟಿಪಿ (OTP) ಬಗ್ಗೆ ಎಚ್ಚರದಿಂದಿರಿ, ಯಾರಿಗೂ ಒಟಿಪಿ ಶೇರ್ ಮಾಡಬೇಕು ಎಂದೆಲ್ಲಾ ಮಾಹಿತಿ ನೀಡಲಾಗುತ್ತಿತ್ತು. ಆದರೆ ಸ್ಕ್ಯಾಮರ್‌ಗಳು ಈಗ ಒಟಿಪಿ ಇಲ್ಲದೆಯೂ ಸಹ ಹಣ ದೋಚುವ ತಂತ್ರ ಕಂಡುಕೊಂಡಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ನಟ ಅರ್ಜುನ್ ಬಿಜಲಾನಿ (Actor Arjun Bijlani) ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಈ ರೀತಿಯ ಮೋಸದ ಪ್ರಕರಣ ಹೇಗೆ ನಡೆಯುತ್ತವೆ?, ಇದರಿಂದ ಎಚ್ಚೆತ್ತುಕೊಳ್ಳುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಆನ್‌ಲೈನ್ ವಂಚನೆ: ಹಿಂದಿ ನಟ-ನಿರೂಪಕ ಅರ್ಜುನ್ ಬಿಜಲಾನಿ ಇತ್ತೀಚೆಗೆ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ಅವರ ಕ್ರೆಡಿಟ್ ಕಾರ್ಡ್‌ನಲ್ಲಿ ಅನಧಿಕೃತ ವ್ಯವಹಾರ ನಡೆದಿದ್ದು, 40 ಸಾವಿರ ಹಣ ಕಳೆದುಕೊಂಡಿದ್ದಾರೆ. ಜಿಮ್ ಸೆಷನ್‌ನಲ್ಲಿ ತನ್ನ ಫೋನ್ ಅನ್ನು ನೋಡಿದಾಗ ಮೋಸ ಆಗಿರುವುದು ತಿಳಿದುಬಂದಿದೆ. ನನ್ನ ಕ್ರೆಡಿಟ್ ಕಾರ್ಡ್ ನನ್ನ ಬಳಿ ಮಾತ್ರ ಇತ್ತು ಮತ್ತು ನಾನು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದೆ ಎಂದು 41 ವರ್ಷದ ನಟ ಮಾಹಿತಿ ಹಂಚಿಕೊಂಡಿದ್ದಾರೆ. ಆದರೂ ಪ್ರತಿ ನಿಮಿಷಕ್ಕೂ ತನ್ನ ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿರುವ ಬಗ್ಗೆ ಹಲವಾರು ಮೆಸೆಜ್‌ಗಳು ಬಂದಿವೆ ಎಂದು ಹಿಂದೂಸ್ಥಾನ್ ಟೈಮ್ಸ್ ಜೊತೆ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.
ಇದೆಲ್ಲಾ ಆದ ಮೇಲೆ ನಾನು ಹೆಂಡತಿಯನ್ನು ವಿಚಾರಿಸಿದೆ. ಯಾಕೆಂದರೆ ಆಕೆಯ ಬಳಿಯೂ ಇದರ ಪೂರಕ ಕಾರ್ಡ್ ಇದೆ. ಆದರೆ ಇದು ಹೇಗೆ ಸಂಭವಿಸಿತು ಎಂಬುದರ ಕುರಿತು ನಮಗೆ ಸುಳಿವು ಇಲ್ಲ. ಅದಾಗ್ಯೂ ಈ ಬಗ್ಗೆ ಎಚ್ಚೆತ್ತುಕೊಂಡಿದ್ದರಿಂದ ಬ್ಯಾಂಕ್ ನಲ್ಲಿ ಇದ್ದ ಹನ್ನೆರಡು ಲಕ್ಷ ಹಣ ಉಳಿಯಿತು ಎಂದಿದ್ದಾರೆ. ಅಂದರೆ ಅವರು ತಕ್ಷಣವೇ ತಮ್ಮ ಕಾರ್ಡ್ ಅನ್ನು ಬ್ಲಾಕ್ ಮಾಡಿದರು ಮತ್ತು ಘಟನೆಯನ್ನು ಸೈಬರ್ ಕ್ರೈಮ್ ಸೆಲ್‌ಗೆ ವರದಿ ಮಾಡಿದ್ದಾರೆ.

ಅದೃಷ್ಟವಶಾತ್, ನಾನು ಆ ಮೆಸೆಜ್ ಅನ್ನು ನೋಡಿದೆ ಮತ್ತು ಅಲ್ಲಿಯವರೆಗೆ ಕೇವಲ ಏಳೆಂಟು ವಹಿವಾಟುಗಳು ನಡೆದಿದ್ದವು. ಪ್ರತಿ ವಹಿವಾಟಿನಲ್ಲಿ 3K ನಿಂದ 5K ವರೆಗೆ ಕಡಿತ ಆಗುತ್ತಿತ್ತು. ಹಾಗೆಯೇ ಒಟ್ಟಾರೆಯಾಗಿ 40 ಸಾವಿರ ಕಡಿತ ಆಗಿತ್ತು ಎಂದು ವಿವರಿಸಿದ್ದು, ನನ್ನ ಕ್ರೆಡಿಟ್ ಕಾರ್ಡ್ 10-12 ಲಕ್ಷದ ಮಿತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಅಲ್ಲದೆ ಒಟಿಪಿ ಪಡೆಯದೇ ಇದನ್ನು ಹೇಗೆ ಮಾಡಲಾಯಿತು ಎಂಬುದರ ಕುರಿತು ಬಿಜ್ಲಾನಿ ಗೊಂದಲಕ್ಕೀಡಾಗಿದ್ದಾರೆ. ಈ ಸಂಬಂಧ ಡಿಜಿಟಲ್ ವಹಿವಾಟುಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಬಗ್ಗೆ ನಟ ಕಳವಳ ವ್ಯಕ್ತಪಡಿಸಿದ್ದಾರೆ.

ಸುರಕ್ಷತಾ ಸಲಹೆ: ಡಿಜಿಟಲ್ ವ್ಯವಹಾರ ಎಷ್ಟು ಸರಳವೋ ಅಷ್ಟೇ ಡೇಂಜರ್. ಆದರೆ ಇದರ ಬಗ್ಗೆ ಅರಿವು ಇದ್ದರೆ ಯಾರೂ ಕೂಡ ಮೋಸ ಮಾಡಲು ಆಗುವುದಿಲ್ಲ. ಈ ಘಟನೆಯ ಹಿನ್ನೆಲೆಯಲ್ಲಿ ಡಿಜಿಟಲ್ ಯುಗದಲ್ಲಿ ವೈಯಕ್ತಿಕ ಹಣಕಾಸುಗಳನ್ನು ರಕ್ಷಿಸುವಲ್ಲಿ ಜಾಗರೂಕತೆ ಮತ್ತು ಪೂರ್ವಭಾವಿ ಕ್ರಮಗಳ ಪ್ರಾಮುಖ್ಯತೆಯನ್ನು ಬಿಜ್ಲಾನಿ ಒತ್ತಿ ಹೇಳಿದ್ದಾರೆ. ಆನ್‌ಲೈನ್ ವಂಚನೆಯ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಜನರು ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ನಿಯಮಿತವಾಗಿ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ.
ಈ ಹಗರಣಕ್ಕೆ ಬಿದ್ದವರಲ್ಲಿ ಬಿಜಲಾನಿ ಮೊದಲಿಗರಲ್ಲ, ಈ ಮೊದಲು ಸಾಕಷ್ಟು ಜನರು ಇನ್ನೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ. ಯಾವುದೇ ಪೂರ್ವ ಸೂಚನೆಯಿಲ್ಲದೆ ವ್ಯಕ್ತಿಗಳು ತಮ್ಮ ಕ್ರೆಡಿಟ್ ಕಾರ್ಡ್‌ಗಳಲ್ಲಿ ಅನಧಿಕೃತ ವ್ಯವಹಾರಗಳನ್ನು ಪತ್ತೆ ಮಾಡಿದ್ದಾರೆ. ಅಧಿಕಾರಿಗಳು ಈ ಘಟನೆಗಳಿಗೆ ಎರಡು ಹಂತದ ಪರಿಶೀಲನೆಯ ಕೊರತೆ ಅಥವಾ ಸಂಪರ್ಕವಿಲ್ಲದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಬಳಕೆಯಂತಹ ಸಾಕಷ್ಟು ಭದ್ರತಾ ಕ್ರಮಗಳು ಕಾರಣ ಎಂದು ಹೇಳುತ್ತಾರೆ.


Click it and Unblock the Notifications








