AI Anchor: ಈಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ್ಯೂಸ್ ಆಂಕರ್, ಹೆಸರು ಲಿಸಾ!
ಭಾರತದಲ್ಲಿ ಎಐ ಅಭಿವೃದ್ಧಿ ತೀವ್ರಗತಿಯಲ್ಲಿ ಸಾಗುತ್ತಿದ್ದು, ಇದರಿಂದಾಗಿ ಜಗತ್ತೇ ಭಾರತದ ಕಡೆ ತಿರುಗಿ ನೋಡುತ್ತಿದೆ. ಈ ನಡುವೆ ಭಾರತದಲ್ಲಿ ತನ್ನದೇ ಆದ ರೀತಿಯಲ್ಲಿ ಹಲವಾರು ಮೈಲಿಗಲ್ಲುಗಳನ್ನು ನಿರ್ಮಾಣ ಮಾಡಿರುವ ಒಡಿಶಾದ ಮೊದಲ ಖಾಸಗಿ ಉಪಗ್ರಹ ಸುದ್ದಿ ವಾಹಿನಿ ಓಟಿವಿ (OTV) ಇದೀಗ ರಾಜ್ಯದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸುದ್ದಿ ನಿರೂಪಕಿಯನ್ನು ಪರಿಚಯಿಸಿದೆ.
ಹೌದು, ಈವರೆಗೂ ಎಐ ಅನ್ನು ಕಥೆ, ಕಾದಂಬರಿ, ಚಿತ್ರ ಬಿಡಿಸುವ ಹಾಗೂ ಸ್ಟೋರಿ ಬರೆಯುವ ಕೆಲಸ ಸೇರಿದಂತೆ ಇನ್ನಿತರೆ ವಿಭಾಗಗಳಿಗೆ ಬಳಕೆ ಮಾಡಲಾಗುತ್ತಿತ್ತು.ಆದರೆ, ಈಗ ಸುದ್ದಿ ವಾಚನಕ್ಕೂ ಎಐ ಸೈ ಎಂದಿದೆ. ಅದರಂತೆ ಒಡಿಶಾದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ಸುದ್ದಿ ನಿರೂಪಕರನ್ನು ಪರಿಚಯಿಸಲಾಗಿದ್ದು, ಥೇಟ್ ನಿಜವಾದ ಸುದ್ದಿ ನಿರೂಪರಂತೆಯೇ ಕೆಲಸ ಮಾಡುತ್ತದೆ. ಹಾಗಿದ್ರೆ,ಈ ಎಐ ಸುದ್ದಿ ನಿರೂಪಕಿಯ ಹೆಸರೇನು?,ಇದು ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಸುದ್ದಿ ನಿರೂಪಕಿ ಲಿಸಾ :ಈ ಎಐ ಸುದ್ದಿ ನಿರೂಪಕಿಗೆ ಲಿಸಾ ಎಂದು ಹೆಸರಿಡಲಾಗಿದೆ. ಭಾರತದ ಕೈಮಗ್ಗ ಸೀರೆಯನ್ನು ಉಟ್ಟುಕೊಂಡು ಅಂದವಾಗಿ ಕಾಣುವ ಈಕೆ ಅಚ್ಚುಕಟ್ಟಾದ ಮಾತುಗಳ ಮೂಲಕ ಗಮನ ಸೆಳೆಯುತ್ತಿದ್ದಾಳೆ. ಇನ್ನು ಟೆಲಿವಿಷನ್ ಪ್ರಸಾರದಲ್ಲಿ ಎಐ ಬಳಕೆ ಆರಂಭ ಆಗಿದ್ದು, ಈ ಲಿಸಾ ಓಪನ್ ಏರ್ ಪ್ರಾದೇಶಿಕ ದೂರದರ್ಶನ ಪ್ರಸಾರ ಕ್ಷೇತ್ರದಲ್ಲಿ ಮೊದಲ ಎಐ ಆಂಕರ್ ಆಗಿ ಗುರುತಿಸಿಕೊಳ್ಳಲಿದ್ದಾಳೆ.
ಲಿಸಾ ಹೇಗೆ ಕೆಲಸ ಮಾಡುತ್ತಾಳೆ?: ಇನ್ನು ಈ ಲಿಸಾ ನಿಖರ ಮತ್ತು ದಕ್ಷತೆಯೊಂದಿಗೆ ಸುದ್ದಿಗಳನ್ನು ತಲುಪಿಸಲು ಎಐ ಮತ್ತು ಎಲ್‌ಎಲ್‌ಎಮ್‌ನ ಶಕ್ತಿಯನ್ನು ಬಳಕೆ ಮಾಡಿಕೊಳ್ಳುತ್ತಾಳಂತೆ. ಹಾಗೆಯೇ ವರ್ಚುವಲ್ ಪ್ರೆಸೆಂಟರ್‌ನೊಂದಿಗೆ ಗ್ರೌಂಡ್‌ಬ್ರೇಕಿಂಗ್ ಮೆಷಿನ್ ಲರ್ನಿಂಗ್ ಅಲ್ಗಾರಿದಮ್‌ಗಳನ್ನು ಸಂಯೋಜಿಸಿ, ತಂತ್ರಜ್ಞಾನ ಮತ್ತು ಪತ್ರಿಕೋದ್ಯಮದ ಶ್ರೇಷ್ಠತೆಯ ಪರಿಪೂರ್ಣ ಸಂಶ್ಲೇಷಣೆಯಾಗಲು ಈಕೆ ಶ್ರಮಿಸುತ್ತಾಳೆ ಎಂದು ಟಿವಿ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಹಾಗೆಯೇ ಈ ಲಿಸಾ ಅನೇಕ ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯ ಪಡೆದಿಕೊಂಡಿದ್ದಾಳಂತೆ. ಆದರೆ ಓಟಿವಿ ನೆಟ್‌ವರ್ಕ್‌ನ ದೂರದರ್ಶನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಆಕೆ ಒಡಿಯಾ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಸುದ್ದಿಗಳನ್ನು ಪ್ರಸ್ತುತಪಡಿಸುತ್ತಿದ್ದಾಳೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಒಡಿಯಾದಲ್ಲಿ ಲೀಸಾಳನ್ನು ಇನ್ನಷ್ಟು ಪ್ರವೀಣಳಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಓಟಿವಿಯ ವ್ಯವಸ್ಥಾಪಕ ನಿರ್ದೇಶಕ ಜಗಿ ಮಂಗತ್ ಪಾಂಡಾ ಹೇಳಿದ್ದಾರೆ.
ಇನ್ನು ಕಂಪ್ಯೂಟರ್ ಒಂದು ಆಶ್ಚರ್ಯಕರ ವಿಷಯವಾಗಿತ್ತು. ಆದರೆ ಕಾಲ ಬದಲಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ, ಜನರು ಇಂಟರ್ನೆಟ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಆದ್ದರಿಂದ ಸಮಯಕ್ಕೆ ತಕ್ಕಂತೆ ಪತ್ರಿಕೋದ್ಯಮದಲ್ಲಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಓಟಿವಿ ಒಡಿಶಾದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸುದ್ದಿ ನಿರೂಪಕರನ್ನು ಪರಿಚಯಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಓಟಿವಿಯ ಡಿಜಿಟಲ್ ಬ್ಯುಸಿನೆಸ್ ಹೆಡ್ ಲಿತಿಶಾ ಮಂಗತ್ ಪಾಂಡಾ ಮಾತನಾಡಿ, ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಅತ್ಯಂತ ಸಮಗ್ರ ಮತ್ತು ದೊಡ್ಡ ಅನುಭವವಾಗಿದೆ. ಗೂಗಲ್ ಕೂಡ ಒಡಿಯಾವನ್ನು ಇಂಗ್ಲಿಷ್‌ಗೆ ಸರಿಯಾಗಿ ಭಾಷಾಂತರಿಸುವುದಿಲ್ಲ. ಆದರೆ, ಇದು ಅದನ್ನು ಸಾಧ್ಯವಾಗಿಸುತ್ತದೆ. ಒಡಿಶಾಕ್ಕೆ ಮಾತ್ರವಲ್ಲದೆ ಭಾರತದ ಮೊದಲ ಎಐ ಒಡಿಯಾ ಆಂಕರ್ ಅನ್ನು ಪರಿಚಯಿಸಲು ನಾವು ಸಂತಸಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಈಕೆ ಫೇಮಸ್: ಇನ್ನು ಈ ಲಿಸಾ ತನ್ನದೇ ಆದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಸೇರಿದಂತೆ ಅನೇಕ ಖಾತೆಗಳನ್ನು ಹೊಂದಿದ್ದು, ಇದರಲ್ಲಿ ಅನೇಕ ಅನುಯಾಯಿಗಳನ್ನು ಪಡೆದುಕೊಂಡಿದ್ದಾಳೆ. ಜೊತೆಗೆ ತಾನು ಓದುವ ಸುದ್ದಿಗಳನ್ನು ಇಲ್ಲಿ ಶೇರ್ ಮಾಡುವ ಮೂಲಕ ಹೆಚ್ಚು ಜನಪ್ರಿಯತೆ ಸಹ ಪಡೆದುಕೊಳ್ಳುತ್ತಿದ್ದಾಳೆ. ಇದರಿಂದಾಗಿ ಈ ಟಿವಿ ಸಹ ಜನರಿಗೆ ಇನ್ನಷ್ಟು ಹತ್ತಿರ ಆಗುತ್ತಿದೆಯಂತೆ.
ಈ ಎಐ ಆಂಕರ್ ಇದೇ ಮೊದಲಲ್ಲ ವಿದೇಶದಲ್ಲಿ ಮೊದಲು ಆರಂಭ ಆಗಿ ನಂತರ ಭಾರತಕ್ಕೂ ಈ ಸಂಪ್ರದಾಯ ಕಾಲಿಟ್ಟಿದೆ. ಅದರಂತೆ ಕೆಲವು ಖಾಸಗಿ ಚಾನಲ್‌ಗಳು ಹಲವಾರು ಎಐ ಆಂಕರ್‌ಗಳನ್ನು ಬಳಕೆ ಮಾಡಿಕೊಂಡು ವಿಶೇಷ ರೀತಿಯಲ್ಲಿ ಜನರನ್ನು ತಲುಪಲು ಮುಂದಾಗಿವೆ. ಇದರ ಭಾಗವಾಗಿಯೇ ಈಗ ಓಡಿಯಾ ಹಾಗೂ ಇಂಗ್ಲಿಸ್‌ನಲ್ಲಿ ಈ ಲಿಸಾ ತನ್ನದೇ ಆದ ಛಾಪು ಮೂಡಿಸಲಿದ್ದಾಳೆ.


Click it and Unblock the Notifications








