AC ಬಳಕೆ ಮಾಡುವ ಕಾಲ ಬಂದೇಬಿಡ್ತು...ಈ ವೇಳೆ ನೀವು ತಿಳಿಯಲೇ ಬೇಕಾದ ಪ್ರಮುಖ ವಿವರ!
ಬಹುತೇಕ ಕಡೆ ಈಗಾಗಲೇ ಸುಡು ಬಿಸಿಲು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ನಡುವೆ ಮನೆ ಅಥವಾ ಆಫೀಸ್‌ಗಳಿಗೆ ಎಸಿ ಅಗತ್ಯವಾಗಿದ್ದು, ಈ ಮೂಲಕ ಧಗೆಯಿಂದ ಪಾರಾಗಲು ಎಸಿ ಅತ್ಯುತ್ತಮ ಮಾರ್ಗವಾಗಿದೆ. ಅದರಂತೆ ಪ್ರಮುಖ ಎಲೆಕ್ಟ್ರಾನಿಕ್ ಬ್ರ್ಯಾಂಡ್‌ಗಳು ಈಗಾಗಲೇ ವಿವಿಧ ರೀತಿಯ ಫೀಚರ್ಸ್ ಇರುವ ಎಸಿ ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.

ಹೌದು, ಬೇಸಿಗೆ ಹಿನ್ನೆಲೆ ಎಸಿ ಬಹುಪಾಲು ಮಂದಿಗೆ ಅಗತ್ಯವಾಗಿದ್ದು, ಅದರಂತೆ ಈ ವೇಳೆ ಹೊಸದಾಗಿ ಎಸಿ ಖರೀದಿ ಮಾಡಲು ಜನರು ಆಫ್‌ಲೈನ್ ಹಾಗೂ ಆನ್‌ಲೈನ್ ಸ್ಟೋರ್‌ಗಳಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನೀವು ಅಗತ್ಯವಾಗಿ ಎಸಿ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.
ಬಜೆಟ್ ಬೆಲೆ ನಿರ್ಧಿಸಿಕೊಳ್ಳಿ
ಹೊಸ ಎಸಿ ಖರೀದಿ ಮಾಡುವಾಗ ಮೊದಲು ಬಜೆಟ್ ಬಗ್ಗೆ ಅಲೋಚನೆ ಮಾಡಬೇಕಿದೆ. ಅಂದರೆ ಯಾವ ಮೊತ್ತದಲ್ಲಿ ಏನೆಲ್ಲಾ ಫೀಚರ್ಸ್ ಇರುವ ಹಾಗೂ ಯಾವ ಬ್ರ್ಯಾಂಡ್‌ನ ಎಸಿ ಖರೀದಿ ಮಾಡಬಹುದು ಎಂಬುದನ್ನು ನಿರ್ಧಿಷ್ಟಪಡಿಸಿಕೊಳ್ಳಬೇಕು
ಕೋಣೆಯ ಗಾತ್ರ
ಇನ್ನು ಎಸಿ ವಿಭಾಗದಲ್ಲಿ ವಿವಿಧ ರೀತಿಯ ಎಸಿಗಳು ಲಭ್ಯವಾಗಲಿದ್ದು, ನಿಮ್ಮ ಕೋಣೆ ಅಥವಾ ನಿಮ್ಮ ಆಫೀಸಿನ ಗಾತ್ರಕ್ಕೆ ಹೊಂದಿಕೆಯಾಗುವ ಎಸಿಗಳನ್ನು ಆಯ್ಕೆ ಮಾಡಬೇಕು. ನಿಮ್ಮ ಕೋಣೆ 100-120 ಚದರ ಅಡಿ ಇದೆ ಎಂದುಕೊಂಡರೆ ನೀವು 1 ಟನ್ ಎಸಿ ಖರೀದಿ ಮಾಡಬಹುದು. ಇದಕ್ಕೂ ದೊಡ್ಡದಾದ ಕೋಣೆ ಇದ್ದರೆ ಅದಕ್ಕೆ ತಕ್ಕಂತಹ ಎಸಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ವಾಸಿಸುವ ಪ್ರದೇಶ ಗಮನಿಸಿ
ಎಸಿ ಖರೀದಿ ಮಾಡುವ ಮುನ್ನ ನಾವು ಯಾವ ಸ್ಥಳದಲ್ಲಿ ವಾಸ ಮಾಡುತ್ತಿದ್ದೇವೆ ಎಂದು ಗಮನಿಸಬೇಕು. ಯಾಕೆಂದರೆ ಕೆಲವು ನಗರ ಹಾಗೂ ಪಟ್ಟಣದಲ್ಲಿ ಬಹುಮಹಡಿ ಕಟ್ಟಡಗಳಿರುತ್ತವೆ. ಹಾಗೂ ಇನ್ನೂ ಕೆಲವು ಮನೆಗಳ ಸುತ್ತ ಮುತ್ತ ಯಾವುದೇ ಮನೆಗಳಿರುವುದಿಲ್ಲ. ಹೀಗಿರುವಾಗ ನೀವು ಸೂರ್ಯನ ಬೆಳಕಿನ ತೀವ್ರತೆ ಯಾವ ರೀತಿಯಲ್ಲಿ ನಿಮ್ಮ ಮನೆ ಮೇಲೆ ಬೀಳಲಿದೆ ಎನ್ನುವುದನ್ನು ಆಧಾರವಾಗಿರಿಸಿಕೊಂಡು ಅದಕ್ಕೆ ತಕ್ಕಂತಹ ಸಾಮರ್ಥ್ಯದ ಎಸಿ ಖರೀದಿ ಮಾಡಬಹುದು.
ಕುಟುಂಬ ಸದಸ್ಯರನ್ನು ಪರಿಗಣಿಸಿ
ಒಂದು ಕುಟುಂಬ ಎಂದ ಮೇಲೆ ಅದರಲ್ಲಿ ಹಲವು ಜನರು ಇರುತ್ತಾರೆ. ಅದರಂತೆ ನಿಮ್ಮ ಮನೆಯಲ್ಲಿ ಹೆಚ್ಚು ಸದಸ್ಯರಿದ್ದರೆ ಸೆಖೆ ಹೆಚ್ಚಾಗುತ್ತದೆ. ಇದು ನಿಮ್ಮ ಗಮನಕ್ಕಿರಲಿ. ಹೀಗಾಗಿ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬುದನ್ನು ಪರಿಗಣಿಸಿಕೊಂಡು ಅದಕ್ಕೆ ತಕ್ಕನಾದ ಎಸಿ ಖರೀದಿ ಮಾಡಿದರೆ ಒಳಿತು.
ಸ್ಪ್ಲಿಟ್ ಹಾಗೂ ವಿಂಡೋ ಎಸಿ
ಎಸಿ ವಿಭಾಗದಲ್ಲಿ ಎರಡು ಆಯ್ಕೆಗಳಿವೆ. ಒಂದು ಸ್ಪ್ಲಿಟ್ ಎಸಿ ಮತ್ತೊಂದು ವಿಂಡೋ ಎಸಿ. ಸ್ಪ್ಲಿಟ್ ಮತ್ತು ವಿಂಡೋ ಎಸಿಗಳು ಎರಡೂ ಸಮಾನವಾಗಿ ಕೆಲಸ ಮಾಡಲಿವೆಯಾದರೂ ವಿಂಡೋ ಎಸಿಗಳು ಸ್ಪ್ಲಿಟ್ ಎಸಿಗೆ ಹೋಲಿಸಿದರೆ ಕೈಗೆಟುವ ದರದಲ್ಲಿ ಲಭ್ಯವಾಗುತ್ತವೆ. ಆದರೆ, ಕಡಿಮೆ ಫೀಚರ್ಸ್‌ಗಳನ್ನು ಹೊಂದಿರುತ್ತವೆ. ಸ್ಪ್ಲಿಟ್ ಎಸಿಗಳು ದುಬಾರಿಯಾಗಿದ್ದು ಹಲವಾರು ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಹೀಗಾಗಿ ನಿಮ್ಮ ಮನೆ ಹಾಗೂ ಹೊಂದಿಕೆಯಾಗುವ ಸ್ಥಳವನ್ನು ಪರಿಗಣನೆ ಮಾಡಿಕೊಂಡು ಯಾವ ಎಸಿ ಖರೀದಿ ಮಾಡಿದರೆ ಅನುಕೂಲ ಎಂಬುದನ್ನು ಕಂಡುಕೊಳ್ಳಿ.

ಕಾಪರ್ ಕಾಯಿಲ್ ಎಸಿಗಳಿಗಳಿಗೆ ಹೆಚ್ಚಿನ ಗಮನಕೊಡಿ
ಸಾಮಾನ್ಯವಾಗಿ ಕಾಪರ್ ಕಾಯಿಲ್ ಎಸಿಗೆ ಹೆಚ್ಚಿನ ಬೇಡಿಕೆ ಇದೆ. ಯಾಕೆಂದರೆ ಅಲ್ಯೂಮಿನಿಯಂ ಕಾಯಿಲ್ ಎಸಿಗಳಿಗೆ ಹೋಲಿಸಿದರೆ ಇವು ಹೆಚ್ಚು ಪರಿಣಾಮಕಾರಿ ಮತ್ತು ಉತ್ತಮ ಕೂಲಿಂಗ್ ಅನ್ನು ನೀಡುತ್ತವೆ. ಇದಿಷ್ಟೇ ಅಲ್ಲದೆ ಕಾಪರ್ ಕಾಯಿಲ್ ಎಸಿ ನಿಯಂತ್ರಣ ಸುಲಭ ಮತ್ತು ಹೆಚ್ಚು ಬಾಳಿಕೆ ಸಹ ಬರುತ್ತವೆ.
ಸ್ಟಾರ್ ರೇಟಿಂಗ್ ಬಗ್ಗೆ ತಿಳಿದುಕೊಳ್ಳಿ
ಎಸಿ ಅಷ್ಟೇ ಅಲ್ಲದೆ ಯಾವುದೇ ಡಿವೈಸ್ ಖರೀದಿ ಮಾಡುವ ಸಮಯದಲ್ಲಿ ಸ್ಟಾರ್ ರೇಟಿಂಗ್ ಬಗ್ಗೆ ಪ್ರಮುಖವಾಗಿ ಕೇಂದ್ರೀಕರಿಸಬೇಕಾಗುತ್ತದೆ. ಇದರಲ್ಲಿ ನೀವು ಕನಿಷ್ಠ 4 ಅಥವಾ 5 ಸ್ಟಾರ್ ಇರುವ ಎಸಿ ಖರೀದಿ ಮಾಡಿದರೆ ಒಳಿತು. ಇದಕ್ಕಿಂತ ಕಡಿಮೆ ಎಂದರೆ 3 ಸ್ಟಾರ್ ಇರುವ ಎಸಿ ಉತ್ತಮ ಎನ್ನಬಹುದು. ಇದಕ್ಕೂ ಕಡಿಮೆ ರೇಟಿಂಗ್ ಇರುವ ಎಸಿಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬೇಡಿ.
ಇನ್ವರ್ಟರ್ ಎಸಿಗಳನ್ನೂ ಖರೀದಿಸಬಹುದು
ಇನ್ವರ್ಟರ್ ಎಸಿಗಳು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿದ್ದು, ಈ ಮೂಲಕ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಕಡಿಮೆ ಹಣ ಪಾವತಿ ಮಾಡಬಹುದಾಗಿದೆ. ಅದರಂತೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಉತ್ತಮ ದಕ್ಷತೆಯನ್ನು ಹೆಚ್ಚಿಸಲು ಇನ್ವರ್ಟರ್ ಎಸಿ ಅತ್ಯುತ್ತಮ ಆಯ್ಕೆಯಾಗಿದೆ.
ಅತ್ಯುತ್ತಮ ಸ್ಮಾರ್ಟ್ ಫೀಚರ್ಸ್ ಇರುವ ಎಸಿ ಖರೀದಿಸಬೇಕೆಂದೇನಿಲ್ಲ
ವೈ ಫೈ ಸಕ್ರಿಯಗೊಳಿಸಿದ ಎಸಿಗಳು ಇಂದು ಸಾಮಾನ್ಯ. ನಿಮ್ಮ ಬಳಿ ಕಡಿಮೆ ಹಣ ಇದ್ದರೆ ವೈ ಫೈ ಸಕ್ರಿಯಗೊಳಿಸಿದ IR ಸೆನ್ಸರ್ ಅಥವಾ ಸ್ಮಾರ್ಟ್ ಪ್ಲಗ್ ಅನ್ನು ಬಳಸಿಕೊಂಡು ನೀವು ಯಾವುದೇ ಎಸಿ ಅನ್ನು ಸ್ಮಾರ್ಟ್ ಎಸಿ ಆಗಿ ಪರಿವರ್ತಿಸಬಹುದು. ಈ ಎಸಿಗಳ ಬೆಲೆ 800 ರಿಂದ 1,200 ರೂ. ಗಳ ಮಾತ್ರ.


Click it and Unblock the Notifications