ಇನ್ಮುಂದೆ ವಿದೇಶದಲ್ಲೂ ಫೋನ್ ಪೇ ಬಳಸಬಹುದು; ಹೇಗೆ ಗೊತ್ತಾ!?
ಪ್ರಮುಖ ಯುಪಿಐ ಪಾವತಿ ಪ್ರಕ್ರಿಯೆ ವ್ಯವಸ್ಥೆಯಲ್ಲಿ ಫೋನ್‌ಪೇ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಯಾಕೆಂದರೆ ಭಾರತದ ಹಲವಾರು ಬಳಕೆದಾರರು ಈ ಆಪ್ ಮೂಲಕ ದಿನನಿತ್ಯ ದೊಡ್ಡ ಮಟ್ಟದಲ್ಲಿ ಆರ್ಥಿಕ ವಹಿವಾಟು ನಡೆಸುತ್ತಾರೆ. ಅದೂ ಸಹ ತುಂಬಾ ಸರಳ ಮಾರ್ಗದಲ್ಲಿ. ಇದರ ನಡುವೆ ಫೋನ್‌ಪೇ ತನ್ನ ಬಳಕೆದಾರರಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದೆ.

ಹೌದು ಫೋನ್ ಪೇ ಇನ್ಮುಂದೆ ಭಾರತದ ಗಡಿಯಾಚೆಗೂ ಕೆಲಸ ಮಾಡಲಿದೆ. ಈ ಮೂಲಕ ಭಾರತದ ಹೊರಗೂ ಸಹ ಯುಪಿಐ ಪಾವತಿಗೆ ಅನುಕೂಲ ಮಾಡಿಕೊಡುವ ಆಪ್‌ಗಳಲ್ಲಿ ಪ್ರಮುಖವಾದ ಆಪ್ ಆಗಿ ಮನ್ನಣೆ ಪಡೆಯಲಿದೆ. ಅದರಲ್ಲೂ ವಿದೇಶಕ್ಕೆ ಹೋಗುವ ಭಾರತೀಯ ಬಳಕೆದಾರರಿಗೆ ಇದೊಂದು ದೊಡ್ಡ ವರದಾನ. ಹಾಗಿದ್ರೆ, ಯಾವೆಲ್ಲಾ ದೇಶಗಳಲ್ಲಿ ಫೋನ್‌ಪೇ ಬಳಕೆ ಮಾಡಬಹುದು?, ಯಾವ ರೀತಿಯ ಪ್ರಕ್ರಿಯೆ ಇದರಲ್ಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಗಡಿಯಾಚೆಗೆ ಫೋನ್‌ಪೇ...
ಭಾರತದ ಅತಿದೊಡ್ಡ ಡಿಜಿಟಲ್ ಪಾವತಿ ಕಂಪೆನಿಯಾಗಿ ಗುರುತಿಸಿಕೊಂಡಿರುವ ಫೋನ್‌ಪೇ ಯುಪಿಐ ಇಂಟರ್ನ್ಯಾಷನಲ್ ಪಾವತಿಗಳಿಗೆ ಬೆಂಬಲವನ್ನು ಪ್ರಾರಂಭಿಸಿರುವುದಾಗಿ ಮಾಹಿತಿ ನೀಡಿದೆ. ಈ ಸೌಲಭ್ಯದ ಮೂಲಕ ಭಾರತೀಯ ಬಳಕೆದಾರರು ವಿದೇಶದಲ್ಲಿ ಪ್ರಯಾಣ ಮಾಡುವಾಗ ಬಹಳ ಪ್ರಯೋಜನ ಆಗಲಿದೆ. ಅದರಲ್ಲೂ ಕ್ಯೂ ಆರ್ ಕೋಡ್ ಆಯ್ಕೆ ಹೊಂದಿರುವ ದೇಶಗಳಲ್ಲಿ ಎಲ್ಲಾ ಅಂತಾರಾಷ್ಟ್ರೀಯ ವ್ಯಾಪಾರ ಮಳಿಗೆಯಲ್ಲಿ ಇದು ಮಾನ್ಯವಾಗಿರಲಿದೆ.
ಬಳಕೆದಾರರಿಗೆ ಫೋನ್‌ಪೇ ಯಾವ ರೀತಿ ಅನುಕೂಲ
ಫೋನ್ ಪೇ ಬಳಕೆದಾರರು ವಿದೇಶಕ್ಕೆ ಹೋದಾಗ ಹಣ ಪಾವತಿ ಮಾಡಲು ಪರದಾಡಬೇಕಿಲ್ಲ. ಯಾಕೆಂದರೆ ಯುಪಿಐ ಆಯ್ಕೆಯ ಮೂಲಕ ಅಲ್ಲಿನ ವ್ಯಾಪಾರಿಗಳಿಗೆ ತಕ್ಷಣವೇ ಹಣ ಪಾವತಿ ಮಾಡಲು ಇದು ಅನುವು ಮಾಡಿಕೊಡುತ್ತದೆ. ಅದರಲ್ಲೂ ಭಾರತೀಯ ಬಳಕೆದಾರರು ತಮ್ಮ ಭಾರತೀಯ ಬ್ಯಾಂಕ್‌ನಿಂದ ನೇರವಾಗಿ ವಿದೇಶಿ ಕರೆನ್ಸಿಯಲ್ಲಿ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಮತ್ತು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳೊಂದಿಗೆ ವ್ಯವಹಾರ ಮಾಡಲು ಸುಲಭ ಪರಿಹಾರವಾಗಿದೆ.

ಭಾರತದ ಮೊದಲ ಆಪ್ ಇದು
ಭಾರತದಲ್ಲಿ ಸದ್ಯಕ್ಕೆ ಹಲವಾರು ಯುಪಿಐ ಪಾವತಿ ಆಪ್‌ಗಳಿದ್ದು, ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಸೇವೆ ನೀಡುತ್ತಾ ಬರುತ್ತಿವೆ. ಅದಾಗ್ಯೂ ಈ ವಿಶೇಷ ಸೌಲಭ್ಯವನ್ನು ಭಾರತದಲ್ಲಿ ಮೊದಲ ಬಾರಿಗೆ ಕಲ್ಪಿಸಿದ ಕೀರ್ತಿ ಫೋನ್‌ಪೇ ಗೆ ಸಲ್ಲುತ್ತದೆ. ಈ ಮೂಲಕ ಭಾರತ ಮೊದಲ ಫಿನ್‌ಟೆಕ್ ಆಗಿ ಗುರುತಿಸಿಕೊಳ್ಳಲಿದೆ.
ಯಾವೆಲ್ಲಾ ದೇಶಗಳಲ್ಲಿ ಫೋನ್‌ಪೇ ಬಳಕೆ ಮಾಡಬಹುದು?
ಈ ಹೊಸ ನಿರ್ಧಾರದಿಂದಾಗಿ ಸ್ಥಳೀಯ ಕ್ಯೂಆರ್ ಕೋಡ್ ಹೊಂದಿರುವ ಯುಎಇ, ಸಿಂಗಾಪುರ, ನೇಪಾಳ ಮತ್ತು ಭೂತಾನ್‌ನಲ್ಲಿರುವ ಎಲ್ಲಾ ಅಂತಾರಾಷ್ಟ್ರೀಯ ವ್ಯಾಪಾರಿ ಮಳಿಗೆಗಳಲ್ಲಿ ಫೋನ್‌ಪೇ ಯನ್ನು ಬಳಕೆ ಮಾಡಬಹುದಾಗಿದೆ. ಅದರಂತೆ ಈ ಯುಪಿಐ ಇಂಟರ್ನ್ಯಾಷನಲ್ ಅನ್ನು ವಿದೇಶದಲ್ಲಿ ಇರುವ ಲಕ್ಷಾಂತರ ಭಾರತೀಯರನ್ನು ಗುರಿಯಾಗಿಸಿಕೊಂಡು ಪರಿಚಯಿಸಲಾಗಿದೆ ಎನ್ನಲಾಗಿದೆ.

ಭಾರತೀಯ ಬ್ಯಾಂಕ್ ಖಾತೆ ಮೂಲಕವೇ ನಡೆಯಲಿದೆ ಈ ಪ್ರಕ್ರಿಯೆ
ಇಲ್ಲಿ ಗಮನಿಸಬೇಕಾದ ಮಾಹಿತಿ ಏನೆಂದರೆ ಈ ಪ್ರಕ್ರಿಯೆಯಲ್ಲಿ ಬಳಕೆದಾರರು ವಿದೇಶಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂಬ ನಿಯಮವಿಲ್ಲ. ಭಾರತೀಯ ಬ್ಯಾಂಕ್ ಖಾತೆಗಳ ಮೂಲಕವೇ ವಿದೇಶದಲ್ಲಿ ತಮ್ಮ ಆರ್ಥಿಕ ವಹಿವಾಟುಗಳನ್ನು ನಡೆಸಬಹುದಾಗಿದೆ ಎನ್ನುವುದು ಬಹಳ ವಿಶೇಷವಾದ ಸಂಗತಿ ಎಂದೇ ಹೇಳಬಹುದು. ಇನ್ನು NPCI (ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್) NIPL ಸಹಯೋಗದೊಂದಿಗೆ ಈ ಯುಪಿಐ ಇಂಟರ್ನ್ಯಾಷನಲ್ ಅನ್ನು ಹೆಚ್ಚಿನ ದೇಶಗಳಿಗೆ ಹೊರತರಲು ತಯಾರಿ ನಡೆಸಿದೆ. ಇದರ ಭಾಗವಾಗಿಯೇ ಈ ಪ್ರಕ್ರಿಯೆಗಳು ಜರುಗುತ್ತಿವೆ.
ಯುಪಿಐ ಇಂಟರ್ನ್ಯಾಷನಲ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಫೋನ್‌ಪೇ ಬಳಕೆದಾರರು ತಮ್ಮ ಯುಪಿಐ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯನ್ನು ಯುಪಿಐ ಇಂಟರ್ನ್ಯಾಷನಲ್‌ಗಾಗಿ ವ್ಯಾಪಾರಿ ಸ್ಥಳದಲ್ಲಿ ಅಥವಾ ಅವರ ಅಂತಾರಾಷ್ಟ್ರೀಯ ಪ್ರವಾಸದ ಮೊದಲು ಫೋನ್‌ಪೇನಲ್ಲಿಯೇ ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ. ಈ ವೇಳೆ ಗ್ರಾಹಕರು ತಮ್ಮ ಯುಪಿಐ ಪಿನ್ ಅನ್ನು ನಮೂದಿಸುವ ಅಗತ್ಯವಿದೆ.
ಈ ಸಂಬಂಧ ಸಿಟಿಓ ಹಾಗೂ ಫೋನ್‌ಪೇ ನ ಸಹ-ಸಂಸ್ಥಾಪಕರಾದ ರಾಹುಲ್ ಚಾರಿ ಮಾತನಾಡಿ, ಕಳೆದ ಆರು ವರ್ಷಗಳಲ್ಲಿ ಭಾರತದಾದ್ಯಂತ ನಾವು ನಮ್ಮ ದೈನಂದಿನ ಜೀವನವನ್ನು ಪರಿವರ್ತಿಸುವ ಯುಪಿಐ ಪಾವತಿಗಳ ಕ್ರಾಂತಿಯನ್ನು ಮಾಡಿದ್ದು, ಅದೃಷ್ಟಶಾಲಿಯಾಗಿದ್ದೇವೆ. ಅದರಂತೆ ಯುಪಿಐ ಇಂಟರ್ನ್ಯಾಷನಲ್ ಪ್ರಪಂಚದ ಉಳಿದ ಭಾಗಗಳಿಗೆ ಈ ಯುಪಿಐ ಅನ್ನು ಅನುಭವಿಸಲು ಅವಕಾಶ ನೀಡುವ ಮೊದಲ ಪ್ರಮುಖ ಹಂತವಾಗಿದೆ. ವಿದೇಶಕ್ಕೆ ಪ್ರಯಾಣಿಸುವ ಭಾರತೀಯರು ಅಲ್ಲಿನ ವ್ಯಾಪಾರಿ ಮಳಿಗೆಗಳಲ್ಲಿ ಪಾವತಿಸುವ ವಿಧಾನವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.


Click it and Unblock the Notifications








