ಫೋನ್‌ಪೇ ಬಳಕೆದಾರರೇ ಎಚ್ಚರ... 50,000ರೂ.ಗೂ ಅಧಿಕ ಹಣ ಕಳೆದುಕೊಂಡ ಉದ್ಯಮಿ!
ಸಾಮಾನ್ಯವಾಗಿ ಆನ್‌ಲೈನ್ ಪಾವತಿಗಾಗಿ ಫೋನ್‌ಪೇ ಹಾಗೂ ಗೂಗಲ್ ಪೇ (PhonePe, Google Pay) ಬಳಕೆ ಮಾಡುತ್ತೇವೆ. ಅದರಲ್ಲೂ ಫೋನ್‌ಪೇ ಬಳಕೆ ಹೆಚ್ಚಾಗಿಯೇ ಇದೆ. ಈ ನಡುವೆ ಪಾವತಿ ಆಪ್‌ಗಳು ಬಳಕೆದಾರರನ್ನು ಸೆಳೆಯುವ ಉದ್ದೇಶದಿಂದ ಹೊಸ ಹೊಸ ಸೌಲಭ್ಯ ಕಲ್ಪಿಸಿಕೊಡುತ್ತಲೇ ಬರುತ್ತಿವೆ. ಆದರೆ, ಈ ನಡುವೆ ಇಲ್ಲೋರ್ವ ಫೋನ್‌ಪೇ ಬಳಕೆದಾರ ಸುಖಾಸುಮ್ಮನೆ ಹಣ ಕಳೆದುಕೊಂಡಿದ್ದಾರೆ.
ಹೌದು, ಸಾಮಾನ್ಯವಾಗಿ ಫೋನ್‌ಪೇಯನ್ನು ಎಲ್ಲರೂ ಬಳಕೆ ಮಾಡೇ ಮಾಡುತ್ತಾರೆ. ಆದರೆ, ಈ ಆಪ್‌ನಲ್ಲಿ ಅಷ್ಟೇನು ಸಮಸ್ಯೆಗಳು ವರದಿ ಆಗುವುದಿಲ್ಲ. ಸಮಸ್ಯೆಗಳು ಎದುರಾದರೂ ಆಪ್ ಮೂಲವೇ ಎಲ್ಲವನ್ನು ಸರಿಪಡಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಅದಾಗ್ಯೂ ಇಲ್ಲೋರ್ವ ವ್ಯಕ್ತಿ ಫೋನ್ ಪೇನಲ್ಲಿ ಸಮಸ್ಯೆ ಎದುರಿಸಿದ್ದು, 50,000 ರೂಪಾಯಿಗಳಿಗಿಂತ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಏನಿದು ಫೋನ್ ಪೇ ಮೂಲಕ ಮೋಸ?, ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ದೇಶದಲ್ಲಿ ಆನ್‌ಲೈನ್ ವಂಚನೆ (Online fraud) ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಕಷ್ಟಪಟ್ಟು ದುಡಿದ ಹಣದ ಕ್ಷಣಮಾತ್ರದಲ್ಲಿ ಯಾರದೋ ಪಾಲಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಸ್ಕ್ಯಾಮರ್‌ಗಳು ಈಗ ತಮ್ಮ ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಸ್ಕ್ರೀನ್‌ಶೇರಿಂಗ್ ಆಪ್‌ಗಳನ್ನು (Screensharing app) ಇನ್‌ಸ್ಟಾಲ್ ಮಾಡಲು ಜನರನ್ನು ಕೇಳುತ್ತಿದ್ದಾರೆ. ಬಳಿಕ ಅವರ ಬ್ಯಾಂಕ್ ಖಾತೆಗಳನ್ನು ನಿಮಿಷಗಳಲ್ಲಿ ಖಾಲಿ ಮಾಡುತ್ತಿದ್ದಾರೆ. ಇದೇ ರೀತಿಯ ಮೋಸ ಈಗ ಉದ್ಯಮಿಯೊಬ್ಬರಿಗೆ ಆಗಿದೆ.
ಈ ಸಂಬಂಧ ಹಿಂದೂ ಪತ್ರಿಕೆಯ ವರದಿ ಮಾಡಿದೆ. ಕರ್ನಾಟಕದ ಬೆಳ್ತಂಗಡಿ ಮೂಲದ ಉದ್ಯಮಿಯೊಬ್ಬರು ತಮ್ಮ ಫೋನ್‌ಪೇ ಅಪ್ಲಿಕೇಶನ್ ನಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರಂತೆ. ಅವರ ಖಾತೆಯನ್ನು ಆಕ್ಸಿಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡಲಾಗಿದೆ. ಈ ವೇಳೆ ವ್ಯಕ್ತಿ ಸಹಾಯಕ್ಕಾಗಿ ಗೂಗಲ್‌ನಲ್ಲಿ ಕಾಂಟ್ಯಾಕ್ಟ್ ನಂಬರ್ ಹುಡುಕಾಡಿದ್ದಾರೆ.
ಈ ವೇಳೆ ಅವರಿಗೆ 08918924399 ನಂಬರ್ ಸಿಕ್ಕಿದೆ. ಇದಕ್ಕೆ ಜುಲೈ 9 ರಂದು ಬೆಳಿಗ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇನ್ನು ಕರೆಯಲ್ಲಿ ಮಾತನಾಡಿದ ವ್ಯಕ್ತಿ ತಕ್ಷಣ ಕರೆಯನ್ನು ಕಟ್ ಮಾಡಿ ಉದ್ಯಮಿಗೆ ಮತ್ತೊಂದು ನಂಬರ್ ಆದ 01725644238 ಮೂಲಕ ಕರೆ ಮಾಡಿ ಮತ್ತೆಸಮಸ್ಯೆ ಏನೆಂದು ವಿಚಾರಿಸಿದ್ದಾನೆ. ಈ ವೇಳೆ ಉದ್ಯಮಿ ಅಪರಿಚಿತರಿಗೆ ಫೋನ್‌ಪೇ ಆಪ್‌ನಲ್ಲಿನ ಸಮಸ್ಯೆಯ ಬಗ್ಗೆ ಎಲ್ಲವನ್ನೂ ತಿಳಿಸಿದ್ದಾರೆ.
ಇದಾದ ನಂತರದಲ್ಲಿ ಸ್ಕ್ಯಾಮರ್‌ಗಳು ಬ್ಯಾಂಕ್ ವಿವರ ಹಾಗೂ ಇನ್ನಿತರೆ ಮಾಹಿತಿಯನ್ನು ಕೇಳಿದ್ದಾರೆ ಜೊತೆಗೆ ನಿಮ್ಮ ಫೋನ್‌ನಲ್ಲಿ ರಸ್ಟ್ ಡೆಸ್ಕ್ ಇನ್‌ಸ್ಟಾಲ್ ಮಾಡಿ ಎಂದು ತಿಳಿಸಿದ್ದಾರೆ. ಅದರಂತೆ ಉದ್ಯಮಿ ಸಹ ಮಾಡಿದ್ದು, ಈ ಮೂಲಕ ವಂಚಕರ ಬಲೆಗೆ ಸುಲಭವಾಗಿ ಬಿದ್ದಿದ್ದಾರೆ. ಈ ರಸ್ಟ್ ಡೆಸ್ಕ್ ಎನ್ನುವುದು ಸ್ಕ್ರೀನ್ ಶೇರ್ ಆಪ್ ಆಗಿದ್ದು, ನೀವು ನಿಮ್ಮ ಫೋನ್‌ನಲ್ಲಿ ಮಾಡುವ ಎಲ್ಲಾ ಕಾರ್ಯಗಳನ್ನು ಸ್ಕ್ಯಾಮರ್‌ಗಳಿಗೆ ಕಾಣಿಸುತ್ತದೆ.
ಅಪರಿಚಿತರ ಸಲಹೆಯ ಮೇರೆಗೆ ಆಪ್ ಇನ್‌ಸ್ಟಾಲ್ ಮಾಡಿಕೊಂಡ ಉದ್ಯಮಿ ಸ್ಕ್ಯಾಮರ್ ಏನನ್ನೆಲ್ಲಾ ಕೇಳಿದರೋ ಅದಕ್ಕೆಲ್ಲಾ ಉತ್ತರಿಸಿದ್ದಾರೆ. ಈ ವೇಳೆ ಎರಡೂ ಕ್ರೆಡಿಟ್ ಕಾರ್ಡ್‌ಗಳ ಸಂಪೂರ್ಣ ಮಾಹಿತಿಯನ್ನೂ ಸಹ ನೀಡಲಾಗಿದೆ. ಇದಾದ ನಂತರ ಉದ್ಯಮಿಯ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ನಿಂದ 29,998 ರೂ., ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ 27,803 ರೂ.ಗಳು ಡ್ರಾ ಆಗಿದೆ. ಈ ಸಂಬಂಧ ದೂರು ದಾಖಲು ಮಾಡಲಾಗಿದೆ.
ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ?
ಇಂತಹ ವಂಚನೆಗಳಿಂದ ಸುರಕ್ಷಿತವಾಗಿರಲು ಉತ್ತಮ ಮಾರ್ಗವೆಂದರೆ ನೀವು ಯಾವುದೇ ಅಪರಿಚಿತರನ್ನು ನಂಬದಿರುವುದೇ ಆಗಿದೆ. ಅದಾಗ್ಯೂ ನಿಮಗೆ ಹೆಚ್ಚಿನ ಮಾಹಿತಿ ಬೇಕು ಎಂದಾದರೆ ಕಂಪನಿಯ ಅಧಿಕೃತ ಪ್ರತಿನಿಧಿಗಳನ್ನು ಇಮೇಲ್ ಅಥವಾ ಕಂಪನಿಯ ಅಧಿಕೃತ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು. ಆನ್‌ಲೈನ್‌ನಲ್ಲಿ ಸಹಾಯವನ್ನು ಹುಡುಕುವ ಬದಲು, ನಿಮ್ಮ ಸುತ್ತ ಮುತ್ತ ಇರುವ ವೃತ್ತಿಪರರನ್ನು ಮೊದಲು ಸಂಪರ್ಕಿಸಿ.
ಜೊತೆಗೆ ಈ ರೀತಿಯ ಸಮಸ್ಯೆಗಳನ್ನು ಆಲಿಸುವ ಯಾರೇ ಆದರೂ ತಕ್ಷಣವೇ ನಿಮ್ಮ ಫೋನ್‌ನಲ್ಲಿ ಆ ಆಪ್ ಇನ್‌ಸ್ಟಾಲ್ ಮಾಡಿ, ಈ ಆಪ್ ಇನ್‌ಸ್ಟಾಲ್ ಮಾಡಿ. ನಿಮ್ಮ ಬ್ಯಾಂಕ್ ಕಾರ್ಡ್‌ಗಳ ಸಂಫೂರ್ಣ ಮಾಹಿತಿ ನೀಡಿ ಎಂದು ಎಂದಿಗೂ ಕೇಳುವುದಿಲ್ಲ. ಈ ರೀತಿ ಯಾರಾದರೂ ನಿಮ್ಮನ್ನು ಕೇಳಿದರೆ ತಕ್ಷಣವೇ ಎಚ್ಚೆತ್ತುಕೊಳ್ಳುವ ಮೂಲಕ ನಿಮ್ಮ ಹಣವನ್ನು ಭದ್ರಮಾಡಿಕೊಳ್ಳಿ.

ಇದಿಷ್ಟು ಮಾತ್ರವಲ್ಲದೆ ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ಜನರನ್ನು ಸಂಪರ್ಕಿಸುವ ವಂಚಕರ ಜಾಲ ಹೆಚ್ಚಾಗಿದೆ. ಅದರಲ್ಲೂ ಈ ರೀತಿಯ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದು, ಅಪರಿಚಿತ ಸಂಖ್ಯೆಯಿಂದ ನೀವು ಫಿಶಿಂಗ್ ಮೆಸೆಜ್ ಪಡೆದರೆ, ತಕ್ಷಣವೇ ಆ ಸಂಖ್ಯೆಯನ್ನು ವರದಿ ಮಾಡಿ ಅಥವಾ ಬ್ಲಾಕ್ ಮಾಡಲು ಮುಂದಾಗಿ.


Click it and Unblock the Notifications








