ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ಹೊಸ ಆಪ್‌ನಲ್ಲಿ ನೂತನ ಸೌಲಭ್ಯ!
ಸುಗಮ ಹಾಗೂ ಸರಳ ಸಂಚಾರಕ್ಕೆ ಭಾರತದಲ್ಲಿ ಬಹುಪಾಲು ಮಂದಿ ರೈಲನ್ನೇ ಅವಲಂಬಿಸಿದ್ದಾರೆ. ಈ ನಡುವೆ ಭಾರತೀಯ ರೈಲು ಇಲಾಖೆ ಸಹ ಡಿಜಿಟಲೀಕರಣವಾಗುತ್ತಿದ್ದು, ಈ ಮೂಲಕ ಪ್ರಯಾಣ ಮಾಡುವವರಿಗೆ ಹಲವಾರು ರೀತಿಯಲ್ಲಿ ವಿವಿಧ ಸೌಲಭ್ಯ ನೀಡುತ್ತಿದೆ. ಇದರ ಭಾಗವಾಗಿ ಈಗ ಹೊಸ ಆಪ್‌ವೊಂದು ಅನಾವರಣ ಆಗಿದ್ದು, ಈ ಮೂಲಕ ರೈಲು ಪ್ರಯಾಣಿಕರು ಈ ಮೊದಲು ಪಡೆಯುತ್ತಿದ್ದ ಸೇವೆಗಿಂತ ಇನ್ನೂ ಹೆಚ್ಚಿನ ಸೇವೆ ಪಡೆದುಕೊಳ್ಳಬಹುದಾಗಿದೆ.
ಹೌದು, 3i ಇನ್ಫೋಟೆಕ್ ಒಡೆತನದ ನ್ಯುರೆ ಭಾರತ್ ನೆಟ್‌ವರ್ಕ್ ಮತ್ತು ರೈಲ್‌ಟೆಲ್ (RailTel) ಜಂಟಿಯಾಗಿ ಹೊಸ ಮೊಬೈಲ್ ಆಪ್‌ವೊಂದನ್ನು ಲಾಂಚ್ ಮಾಡಿದ್ದು, ಈ ಆಪ್ ಈವರೆಗೂ ಯಾವ ಆಪ್‌ಗಳು ನೀಡಲಾಗದ ಹಾಗೂ ನೀಡಿರದ ಹೊಸ ಸೌಲಭ್ಯ ಕಲ್ಪಿಸಿಕೊಡಲಿದೆ. ಈ ಮೂಲಕ ರೈಲು ಪ್ರಯಾಣದಲ್ಲಿ ಪ್ರಯಾಣಿಕರು ಹೊಸ ಅನುಭವ ಪಡೆದುಕೊಳ್ಳಬಹುದು. ಹಾಗಿದ್ರೆ, ಯಾವುದು ಈ ಹೊಸ ಆಪ್, ಇದರಿಂದ ಸಿಗುವ ಹೊಸ ಸೇವೆ ಏನು ಎಂಬಿತ್ಯಾದಿ ಮಾಹಿತಿಗಾಗಿ ಈ ಲೇಖನ ಓದಿರಿ.

ಪಿಪೊನೆಟ್ ಆಪ್ ಲಾಂಚ್: 3i ಇನ್ಫೋಟೆಕ್ ಒಡೆತನದ ನ್ಯುರೆ ಭಾರತ್ ನೆಟ್‌ವರ್ಕ್ ಮತ್ತು ರೈಲ್‌ಟೆಲ್ ಒಟ್ಟಾಗಿ ಸೇರಿ ಈ ಪಿಪೊನೆಟ್(PIPOnet) ಆಪ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಆಪ್ ಮೂಲಕ ಇ-ಟಿಕೆಟಿಂಗ್, ಪ್ರಯಾಣ, ವಾಸ್ತವ್ಯ ಮತ್ತು ಮನರಂಜನಾ ಆಪ್‌ಗಳ ಸೇವೆ ಪಡೆದುಕೊಳ್ಳಬಹುದಾಗಿದೆ. ಈ ಮೊದಲು ಇದ್ದ ಹಲವಾರು ಆಪ್‌ಗಳು ರೈಲು ಹಾಗೂ ಆಹಾರ ಸಂಬಂಧಿ ಸೇವೆಯನ್ನು ಮಾತ್ರ ನೀಡುತ್ತಿದ್ದವು. ಆದರೆ, ಈ ಆಪ್ ಒಂದು ಹೆಜ್ಜೆ ಮುಂದೆ ಹೋಗಿದ್ದು, ಈ ಮೂಲಕ ಬಳಕೆದಾರರು ಅತ್ಯುತ್ತಮ ಪ್ರಯಾಣದ ಅನುಭವ ಪಡೆದುಕೊಳ್ಳಬಹುದಾಗಿದೆ.
ಈ ಬಗ್ಗೆ ನ್ಯೂರೆ ಭಾರತ್ ನೆಟ್‌ವರ್ಕ್ ಸಿಇಒ ಸ್ಯಾಕ್ಸ್ ಕೃಷ್ಣ ಮಾಹಿತಿ ನೀಡಿದ್ದು, ರೈಲ್‌ಟೆಲ್ ಐದು ವರ್ಷಗಳ ಅವಧಿಗೆ 3i ಇನ್ಫೋಟೆಕ್ ಎಫ್‌ಐಎಸ್‌ಎಸ್‌ಟಿ ಮತ್ತು ಯೆಲ್ಲೋ ನಡುವೆ ಜಂಟಿ ಉದ್ಯಮ ಒಕ್ಕೂಟವಾಗಿರುವ ನ್ಯೂರೆ ಭಾರತ್ ನೆಟ್‌ವರ್ಕ್‌ನೊಂದಿಗೆ ವಿಶೇಷ ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಹಾಗೆಯೇ ಈ ಆಪ್ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇರಲಿದೆ ಎಂದು ತಿಳಿಸಿದ್ದಾರೆ.

ಮುಂದಿನ ಎರಡು ವಾರಗಳಲ್ಲಿ ನಾವು ಆಪ್‌ನೊಂದಿಗೆ ನೆಟ್‌ಫ್ಲಿಕ್ಸ್, ಊಬರ್ , ಓಲಾ ಆಪ್‌ಗಳನ್ನು ಸಂಯೋಜಿಸಿದ್ದೇವೆ. ಅದರಂತೆ ಪಿಪೊನೆಟ್ ಆಪ್‌ನಲ್ಲಿ ಪ್ರಯಾಣಿಕರು ಇ-ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು, ಪೋರ್ಟರ್‌ಗಳು, ತಂಗುವಿಕೆ, ಆಹಾರ ಮತ್ತು ಇತರ ಹಲವು ವಸ್ತುಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಈ ಆಪ್ ಜಾಹೀರಾರುದಾರರಿಗೂ ಅಗತ್ಯ ಜಾಗ ನೀಡಲಿದೆ. ಇದರೊಂದಿಗೆ ಮುಂದಿನ ಐದು ವರ್ಷಗಳಲ್ಲಿ ನಾವು 1,000ಕೋಟಿ ಆದಾಯವನ್ನು ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.
ಈ ಹೊಸ ಪಿಪೊನೆಟ್ ಅಪ್ಲಿಕೇಶನ್‌ನೊಂದಿಗೆ ಜಾಹೀರಾತುದಾರರು ದೇಶದಾದ್ಯಂತ ಶ್ರೇಣಿ 1, 2, 3 ಮತ್ತು 4 ನಗರಗಳ ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಯಾಕೆಂದರೆ ಸುಮಾರು 1.7 ಮಿಲಿಯನ್ ಜನರು ನಮ್ಮ ವೈಫೈ ನೆಟ್‌ವರ್ಕ್‌ಗೆ ಲಾಗ್ ಇನ್ ಆಗಿದ್ದಾರೆ. ನಮ್ಮ ಅಂದಾಜಿನ ಪ್ರಕಾರ ಸುಮಾರು 1 ಲಕ್ಷ ಹಳ್ಳಿಗಳು ಭಾರತೀಯ ರೈಲ್ವೇ ವ್ಯಾಪ್ತಿಯ 5 ಕಿಲೋಮೀಟರ್‌ಗಳೊಳಗೆ ಬರುತ್ತವೆ ಎಂದು ರೈಲ್‌ಟೆಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಜೊತೆಗೆ ನವೀನ ಡಿಜಿಟಲ್ ತಂತ್ರಜ್ಞಾನದೊಂದಿಗೆ ನಮ್ಮ ಪಾಲುದಾರರು ಹೆಚ್ಚಿನ ಸಂಖ್ಯೆಯ ಜಾಹೀರಾತುದಾರರನ್ನು ಆಕರ್ಷಿಸಬಹುದು. ಅವರು ಹಲವಾರು ಇತರ ಉಪಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಉಲ್ಲೇಖಿಸಿದ್ದಾರೆ. ಇನ್ನು ನೂರ್ ಭಾರತ್ ನೆಟ್‌ವರ್ಕ್ ಸೇವೆಗಳಿಂದ ಗಳಿಸಿದ ಆದಾಯದ 40 ಪ್ರತಿಶತವನ್ನು ಅಥವಾ ವರ್ಷಕ್ಕೆ ಕನಿಷ್ಠ 14 ಕೋಟಿ ರೂಪಾಯಿಗಳನ್ನು ರೈಲ್‌ಟೆಲ್‌ನೊಂದಿಗೆ ಹಂಚಿಕೊಳ್ಳುತ್ತದೆ ಎಂದು ತಿಳಿದುಬಂದಿದೆ.


Click it and Unblock the Notifications