ಏ.4ಕ್ಕೆ ಲಾಂಚ್..! 5200mAh ಬ್ಯಾಟರಿ.. 32MP ಕ್ಯಾಮೆರಾ.. 7000ಕ್ಕಿಂತ ಅಗ್ಗದ ಬೆಲೆ; ಯಾವ ಫೋನ್?
ಪೊಕೊ ತನ್ನ ಮತ್ತೊಂದು ಅಗ್ಗದ ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ಇಂದು ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಿದೆ. ಹೌದು, ಕಂಪನಿಯು ತನ್ನ ನೂತನ ಪೊಕೊ C71 (POCO C71) ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಮೊಬೈಲ್ ಕಳೆದ ವರ್ಷ ಬಿಡುಗಡೆಯಾಗಿದ್ದ ಪೊಕೊ C61 (POCO C61) ಉತ್ತರಾಧಿಕಾರಿಯಾಗಿ ಬರಲಿದೆ. ಇದನ್ನು 7,000 ರೂ.ಗಳ ಬಜೆಟ್ ವಿಭಾಗದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುವುದು. ಈ ಮುಂಬರುವ ಫೋನಿನ ಬೆಲೆ, ವಿಶೇಷತೆಗಳು ಮತ್ತು ಇನ್ನಿತರ ಮಾಹಿತಿ ಇಲ್ಲಿದೆ.
ಪೊಕೊ C71 ಮೊಬೈಲ್ ಇದೇ ಏಪ್ರಿಲ್ 4 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ ದೊಡ್ಡ ಡಿಸ್ಪ್ಲೇ, ಶಕ್ತಿಯುತ ಬ್ಯಾಟರಿ ಮತ್ತು ಅತ್ಯುತ್ತಮ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರಲಿದೆ. ಈ ಫೋನಿನ ವಿನ್ಯಾಸವು ಸ್ಪ್ಲಿಟ್ ಗ್ರಿಡ್ ಮಾದರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ನೀವು ಪವರ್ ಬ್ಲ್ಯಾಕ್, ಕೂಲ್ ಬ್ಲೂ ಮತ್ತು ಡೆಸರ್ಟ್ ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಕೊಳ್ಳಬಹುದು. ಹಾಗೆಯೇ IP52 ರೇಟಿಂಗ್, ಡ್ಯುಯಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪೊಕೊ C71 ಬೆಲೆ (ನಿರೀಕ್ಷಿತ)
ಪೊಕೊ C71 ಮೊಬೈಲ್ ಬಿಡುಗಡೆಯ ಬಳಿಕ ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಕಂಪನಿಯು ಇದರ ಬೆಲೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಆದರೆ ಈ ಫೋನ್ 7,000 ರೂ.ಗಳ ಬಜೆಟ್ ವಿಭಾಗದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.
ಪೊಕೊ C71 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಪೊಕೊ C71 ಸ್ಮಾರ್ಟ್‌ಫೋನ್ ಇಂಚಿನ 6.88 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರಲಿದೆ. ಇದು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಅಗ್ಗದ ಬಜೆಟ್ ವಿಭಾಗದಲ್ಲಿ ಅತಿದೊಡ್ಡ ಡಿಸ್ಪ್ಲೇ ಹೊಂದಿರುವ ಫೋನ್ ಇದಾಗಿದೆ. ಇದು ಕಣ್ಣಿಗೆ ಅನುಕೂಲಕರವಾದ ಸ್ಕ್ರೀನ್ ಆಗಿದೆ ಎಂದು ಕಂಪನಿ ಹೇಳಿದೆ. ನೀವು ಒದ್ದೆಯಾದ ಬೆರಳುಗಳಿಂದಲೂ ಸುಲಭವಾಗಿ ಕೆಲಸ ಮಾಡಲು ಮಾಡಬಹುದು.
ಪ್ರೊಸೆಸರ್ ಸಾಮರ್ಥ್ಯ
ಪೊಕೊ C71 ಮೊಬೈಲ್ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದು ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಸ್ಮಾರ್ಟ್‌ಫೋನ್ 300K+ ಅಂಕಗಳನ್ನು ಗಳಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಫೋನ್ 6GB RAM ಮತ್ತು 6GB ವರ್ಚುವಲ್ RAM ಹೊಂದಿರಲಿದೆ. ನೀವು ಒಟ್ಟು 12GB RAM ಬಳಸಬಹುದು. ನೀವು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್
ಪೊಕೊ C71 ಫೋನ್ 32 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾಹೊಂದಿರಲಿದೆ. ಇದರೊಂದಿಗೆ ದ್ವಿತೀಯ ಕ್ಯಾಮೆರಾ ಸಹ ಇರುರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಲಭ್ಯವಿರುತ್ತದೆ. ಈ ವೈಶಿಷ್ಟ್ಯಗಳಲ್ಲಿ ಒಟ್ಟು 7 ಫಿಲ್ಮ್ ಫಿಲ್ಟರ್‌ಗಳು ಇರಲಿವೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಪೊಕೊ C71 ಸ್ಮಾರ್ಟ್‌ಫೋನ್ 5200mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿರಲಿದೆ. ಈ ಬೆಲೆ ವಿಭಾಗದಲ್ಲಿ ಈವರೆಗಿನ ದೊಡ್ಡ ಬ್ಯಾಟರಿ ಎಂದು ಹೇಳಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಈ ಫೋನಿನ ಬ್ಯಾಟರಿ 3 ವರ್ಷಗಳ ನಂತರವೂ ಶೇ.80 ರಷ್ಟು ಆರೋಗ್ಯಕರವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.
ಇತರೆ ವೈಶಿಷ್ಟ್ಯಗಳು
ಪೊಕೊ C71 ಫೋನ್ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕೆಲಸ ಮಾಡಲಿದೆ. ಇದು 2 ವರ್ಷಗಳ ಓಎಸ್ ನವೀಕರಣಗಳು ಮತ್ತು 4 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯಲಿದೆ. ಈ ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಹಾಗೆಯೇ 3.5 ಎಂಎಂ ಆಡಿಯೊ ಜ್ಯಾಕ್, ಡ್ಯುಯಲ್ ಬ್ಯಾಂಡ್ ವೈ-ಫೈ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.


Click it and Unblock the Notifications








