ಫೇಸ್‌ಬುಕ್ ಸ್ಥಗಿತ ಆದ ದಿನ ಜನರು ಯಾವ ವೆಬ್‌ಸೈಟ್ ಹೆಚ್ಚು ವೀಕ್ಷಿಸಿದ್ದಾರೆ ಗೊತ್ತೆ?
ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್ ಗಳು ಕಳೆದ ಸೋಮವಾರ ಸರ್ವರ್ ಎರರ್‌ನಿಂದಾಗಿ 6 ಗಂಟೆಗಳ ಕಾಲ ಸ್ಥಗಿತ ಆಗಿದ್ದವು. ಈ ಅವಧಿಯಲ್ಲಿ ಟೆಲಿಗ್ರಾಂ ಸಾಮಾಜಿಕ ತಾಣವು ತನ್ನ ಬಳಕೆದಾರರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡಿದೆ. ಹಾಗೆಯೇ ಅಚ್ಚರಿಯ ಸಂಗತಿಯೆಂದರೇ ಅದೇ (ಅ.4) ದಿನ ಪೋರ್ನ್ ವೆಬ್‌ಸೈಟ್ ವೀಕ್ಷಣೆ ಮಾಡಿದ್ದಾರೆ ಎಂದು ವರದಿವೊಂದರಿಂದ ತಿಳಿದು ಬಂದಿದೆ.

ಹೌದು, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಆಪ್‌ಗಳನ್ನು ಅಕ್ಟೋಬರ್ 4 ರಂದು ಬಳಸಲು ಸಾಧ್ಯವಾಗದೇ ಅನೇಕ ಜನರು ಪೋರ್ನ್ ವೆಬ್‌ಸೈಟ್ ಹೆಚ್ಚು ವೀಕ್ಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವದ ನೆಚ್ಚಿನ ಅಶ್ಲೀಲ ಪೋರ್ಟಲ್ ಪೋರ್ನ್‌ಹಬ್‌ನ ಟ್ರಾಫಿಕ್ ಶೇಕಡಾ 10.5 ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಸೋಶಿಯಲ್ ಮೀಡಿಯಾದ ದೈತ್ಯ ಪ್ಲಾಟ್‌ಫಾರ್ಮ್ ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಾಪ್‌ಗಳ ಸ್ಥಗಿತವು ಜನರು ಪೋರ್ನ್ ವೆಬ್‌ಸೈಟ್ ನತ್ತ ಮುಖ ಮಾಡಲು ಕಾರಣವಾಯಿತು. ಪೋರ್ನ್‌ಹಬ್ ತಾಣ ಅರ್ಧ ಮಿಲಿಯನ್ ಹೆಚ್ಚುವರಿ ಬಳಕೆದಾರರನ್ನು ಪಡೆದಿದೆ ಎಂದು ತಿಳಿದುಬಂದಿದೆ.

ಫೇಸ್‌ಬುಕ್ ವ್ಯತ್ಯಯ; ಮಾರ್ಕ್ ಜುಕರ್‌ಬರ್ಗ್‌ಗೆ ನಷ್ಟ
ಅ.4ರಂದು ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂ ಸ್ಥಗಿತದ್ದೇ ಸುದ್ದಿ. ಈ ಸೋಶಿಯಲ್ ಮೀಡಿಯಾಗಳ ಸೇವೆಯ ವ್ಯತ್ಯಯ ಷೇರು ಮಾರುಕಟ್ಟೆಗೆ ಬಿಸಿ ತಟ್ಟಿತು. ಈ ದೈತ್ಯ ಪ್ಲಾಟ್‌ಫಾರ್ಮ್ ಗಳ ಷೇರುಗಳು ಕಳೆದ ಸೋಮವಾರ 4.9% ನಷ್ಟು ಕುಸಿತ ಕಂಡಿತ್ತು. ಹಾಗೆಯೇ ಮಾರ್ಕ್ ಜುಕರ್‌ಬರ್ಗ್ ವೈಯಕ್ತಿಕ ಸಂಪತ್ತು 6 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ ಎಂದು ವರದಿಯೊಂದರಿಂದ ತಿಳಿದು ಬಂದಿದೆ.

ಇದರಿಂದ ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಅವರನ್ನು ಕೆಳಕ್ಕೆ ತಳ್ಳಿತು. ಫೇಸ್‌ಬುಕ್ ಇಂಕ್‌ನ ಪ್ರಮುಖ ಉತ್ಪನ್ನಗಳು ಆಫ್‌ಲೈನ್‌ಗೆ ಹೋದ ಕಾರಣ ಮಾರ್ಕ್ ಜುಕರ್‌ಬರ್ಗ್ ಆಸ್ತಿ ಕರಗಿದೆ. ಷೇರುಗಳ ಮಾರಾಟದ ಪರಿಣಾಮ ಸಾಮಾಜಿಕ ಮಾಧ್ಯಮ ದೈತ್ಯ ಮಾರ್ಕ್ ಜುಕರ್‌ಬರ್ಗ್ ಷೇರುಗಳು ಸೋಮವಾರ ಶೇ. 5ರಷ್ಟು ಕುಸಿದಿದೆ. ಅಲ್ಲದೆ, ಸೆಪ್ಟೆಂಬರ್ ಮಧ್ಯಭಾಗದಿಂದ ಒಟ್ಟಾರೆ ಸುಮಾರು ಶೇ. 15 ರಷ್ಟು ಷೇರುಗಳ ಮೌಲ್ಯ ಕುಸಿದಿದೆ.

ವರದಿ ಪ್ರಕಾರ ಸೋಮವಾರದ ಷೇರುಗಳ ಕುಸಿತದ ಕಾರಣದಿಂದ ಜುಕರ್‌ಬರ್ಗ್‌ನ ಆಸ್ತಿ ಮೌಲ್ಯ 120.9 ಬಿಲಿಯನ್ ಡಾಲರ್‌ಗೆ ಕುಸಿದಿದ್ದು, ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಅಗ್ರ ಶ್ರೀಮಂತರ ಪೈಕಿ 5ನೇ ಸ್ಥಾನಕ್ಕಿಳಿದಿದ್ದಾರೆ. ಬಿಲ್ ಗೇಟ್ಸ್ ನಂತರದ ಸ್ಥಾನಕ್ಕೆ ಕುಸಿದಿದ್ದಾರೆ ಜುಕರ್‌ಬರ್ಗ್. ಸೆಪ್ಟೆಂಬರ್ 13ರಂದು ಸುಮಾರು 140 ಶತಕೋಟಿ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದ ಜುಕರ್‌ಬರ್ಗ್‌ನ ಆಸ್ತಿ ಬರೋಬ್ಬರಿ ಸುಮಾರು 19 ಬಿಲಿಯನ್ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದಾರೆ.

ಸೆಪ್ಟೆಂಬರ್ 13 ರಂದು, ವಾಲ್ ಸ್ಟ್ರೀಟ್ ಜರ್ನಲ್ ಆಂತರಿಕ ದಾಖಲೆಗಳ ಸಂಗ್ರಹವನ್ನು ಆಧರಿಸಿ ಕಥೆಗಳ ಸರಣಿಯನ್ನು ಪ್ರಕಟಿಸಲು ಪ್ರಾರಂಭಿಸಿತು. ಇದರಲ್ಲಿ, ಫೇಸ್‌ಬುಕ್ ತನ್ನ ಉತ್ಪನ್ನಗಳಿಂದ ಆಗುತ್ತಿರುವ ವ್ಯಾಪಕ ಸಮಸ್ಯೆಗಳ ಬಗ್ಗೆ ತಿಳಿದಿದ್ದರೂ, ಸಮಸ್ಯೆಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿಲ್ಲ ಎಂದು ಬಹಿರಂಗಪಡಿಸಿತು. ಹಾಗೆಯೇ ಇನ್‌ಸ್ಟಾಗ್ರಾಂ ನಲ್ಲಿ ಹದಿಹರೆಯದ ಹುಡುಗಿಯರ ಮಾನಸಿಕ ಆರೋಗ್ಯಕ್ಕೆ ಹಾನಿ ಹಾಗೂ ಜನವರಿ 6ರ ಅಮೆರಿಕದ ಕ್ಯಾಪಿಟಲ್ ಗಲಭೆಗಳ ಬಗ್ಗೆ ತಪ್ಪು ಮಾಹಿತಿ ಹರಡುವಿಕೆ ಮುಂತಾದ ಸಮಸ್ಯೆ ಗಳು ಬಹಿರಂಗಗೊಂಡ ಬಳಿಕ ಮಾರ್ಕ್ ಜುಕರ್‌ಬರ್ಗ್ ಸಂಪತ್ತು ಇಳಿಕೆ ಆಗುತ್ತಲೇ ಇದೆ.

ಹಾಗೆಯೇ ಸೋಮವಾರ (ಅ.4) ಜನಪ್ರಿಯ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂ ಗಳ ಕಾರ್ಯ ವೂಖರಿಯಲ್ಲಿ ವ್ಯತ್ಯಯ ಉಂಟಾಗಿತ್ತು. ಇನ್ನು ಉಂಟಾಗಿರುವ ವ್ಯತ್ಯಯ ಬಗ್ಗೆ ಫೇಸ್‌ಬುಕ್ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಲ್ಲಿ ಪ್ರತಿಕ್ರಿಯಿಸಿತ್ತು. 'ಕೆಲವು ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಬಳಕೆಯಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಆದಷ್ಟು ಬೇಗನೇ ಸರಿಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಅಲ್ಲದೆ ಈ ಅಡಚಣೆಗಾಗಿ ನಾವು ಕ್ಷಮೆ ಕೋರುತ್ತೇವೆ' ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದೆ. ಅದೇ ರೀತಿ ಫೇಸ್‌ಬುಕ್ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ತಾಣ ವಾಟ್ಸಾಪ್ ಸಹ ವ್ಯತ್ಯಯ ವನ್ನು ಸರಿಪಡಿಸಲಾಗುವುದು ಎಂದು ಟ್ವಿಟ್ ಮಾಡಿದೆ.


Click it and Unblock the Notifications








