ಡಿಸ್‌ಪ್ಲೇ ಒಡೆದಿದ್ರೂ ಫೋನ್ ಬಳಕೆ ಮಾಡ್ತೀರಾ?... ಈ ಸಮಸ್ಯೆಗಳ ಗಂಭೀರತೆ ಗೊತ್ತಿರಲಿ!
ಸ್ಮಾರ್ಟ್‌ಫೋನ್‌ಗಳು(Smartphones) ಇಂದು ಅಗತ್ಯ ಡಿವೈಸ್ ಆಗಿದ್ದು, ಅರೆಕ್ಷಣವೂ ಬಿಟ್ಟಿರಲಾರದ ಅನುಬಂಧ ಉಂಟು ಮಾಡಿರುತ್ತವೆ. ಈ ಕಾರಣಕ್ಕಾಗಿಯೇ ಫೋನ್‌ನಲ್ಲಿ ಏನಾದರೂ ಸಮಸ್ಯೆ ಎದುರಾದರೆ ತಕ್ಷಣಕ್ಕೆ ಅದನ್ನು ರಿಪೇರಿ ಮಾಡಿಸಲು ಮುಂದಾಗುವುದೇ ಇಲ್ಲ. ಯಾಕೆಂದರೆ ರಿಪೇರಿಗೆ ಎಷ್ಟು ದಿನ ಆಗುತ್ತೋ ಏನೋ ಎನ್ನುವ ಭಯ ಹಲವರಲ್ಲಿದೆ. ಈ ನಡುವೆ ಬಹುಪಾಲು ಮಂದಿ ಡಿಸ್‌ಪ್ಲೇ ಸಮಸ್ಯೆಗಳನ್ನೇ(Display issues) ವರದಿ ಮಾಡುತ್ತಾರೆ.
ಹೌದು, ನಿಮ್ಮ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಏನಾದರೂ ಹಾಳಾಗಿದ್ದರೆ ಅಂದರೆ ಒಡೆದು ಹೋಗಿದ್ದರೆ (broken display) ಬಳಕೆ ಮಾಡುವಾಗ ಕಿರಿಕಿರಿಯುಂಟು ಮಾಡುತ್ತದೆ. ಆದರೂ ಸಹ ಮೊದಲೇ ತಿಳಿಸಿದಂತೆ ಫೋನ್ ಬಿಟ್ಟಿರಲಾರದ ಅದೆಷ್ಟೋ ಜನರು ಅದನ್ನು ರಿಪೇರಿ ಮಾಡಿಸದೆ ಹಾಗೆಯೇ ಕಷ್ಟವಾದರೂ ಪರವಾಗಿಲ್ಲ ಎಂದು ಬಳಕೆ ಮಾಡುವುದು ಸಹಜ. ಈ ರೀತಿ ಮಾಡುವುದರಿಂದ ಏನೆಲ್ಲಾ ಗಂಭೀರ ಸಮಸ್ಯೆಗಳು ಎದುರಾಗುತ್ತದೆ ಎಂಬುದರ ಬಗ್ಗೆ ನಿಮಗೆ ಅರಿವಿದೆಯಾ?.

ಇನ್ನಷ್ಟು ಒಡೆಯಬಹುದು: ನಿಮ್ಮ ಫೋನ್ ಡಿಸ್‌ಪ್ಲೇ ಹಾಳಾಗಿದ್ದು, ಅದನ್ನು ರಿಪೇರಿ ಮಾಡಿಸದೆ ಬಳಕೆ ಮಾಡುವುದರಿಂದ ಮಗದಷ್ಟು ಹಾಳಾಗುವ ಸಾಧ್ಯತೆ ಖಂಡಿತಾ ಹೆಚ್ಚಾಗಿಯೇ ಇರುತ್ತದೆ. ಯಾವುದೋ ಮೂಲೆಯಲ್ಲಿ ಒಂದು ಸಣ್ಣ ಗೀರು ಬಿದ್ದರೆ ಫೋನ್ ಅನ್ನು ಬಳಕೆ ಮಾಡಬಹುದು. ಆದರೆ, ಮತ್ಯಾವಾಗಲಾದರೂ ಫೋನ್ ಅನ್ನು ಕೆಡವಿದರೆ ಅಥವಾ ಒರಟಾಗಿ ಬಳಕೆ ಮಾಡಿದರೆ ದೊಡ್ಡ ಮಟ್ಟದಲ್ಲಿ ಡಿಸ್‌ಪ್ಲೇ ಹಾಳಾಗುತ್ತದೆ.
ಗಾಜಿನ ಚೂರುಗಳಿಂದ ಸಮಸ್ಯೆ: ಇನ್ನು ಡಿಸ್‌ಪ್ಲೇ ಹಲವು ಲೇಯರ್‌ಗಳ ಆಯ್ಕೆ ಪಡೆದುಕೊಂಡಿರುತ್ತದೆ. ಈ ವೇಳೆ ಸಾಮಾನ್ಯವಾಗಿ ಡಿಸ್‌ಪ್ಲೇ ಒಡೆದ ಸಂದರ್ಭದಲ್ಲಿ ಟ್ಯಾಪ್ ಮಾಡಲು ಮುಂದಾದರೆ ಅಥವಾ ಸ್ವೈಪ್ ಮಾಡುವಾಗ ಸಣ್ಣ ಸಣ್ಣ ಗಾಜಿನ ಚೂರುಗಳು ನಿಮ್ಮ ಬೆರಳಿಗೆ ಗಂಭೀರ ಹಾನಿ ಮಾಡುತ್ತದೆ. ಒಡೆದ ಡಿಸ್‌ಪ್ಲೇಯನ್ನು ಸ್ವೈಪ್ ಮಾಡಿದಷ್ಟು ನಿಮ್ಮ ಕೈಗೂ ತೊಂದರೆ ಹಾಗೂ ಫೋನ್‌ಗೂ ತೊಂದರೆ. ಈ ವೇಳೆ ಮನೆಯಲ್ಲಿನ ಮಕ್ಕಳಿಗೆ ಯಾವ ಕಾರಣಕ್ಕೂ ಫೋನ್ ಕೊಡಬೇಡಿ.
ಟಚ್ ಸ್ಕ್ರೀನ್ ಪ್ರತಿಕ್ರಿಯೆ ನಿಲ್ಲಿಸಬಹುದು: ಡಿಸ್‌ಪ್ಲೇನಲ್ಲಿ ಉಂಟಾದ ಬಿರುಕುಗಳು ಮತ್ತು ಗೀರುಗಳು ನಿಮ್ಮ ಟಚ್ ಸ್ಕ್ರೀನ್ (Touch screen) ಸರಿಯಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತವೆ. ಅಂದರೆ ನೀವು ಒಂದು ಕಡೆ ಟಚ್ ಮಾಡಿದರೆ ಫೋನ್ ಮತ್ತೆಲ್ಲೋ ಕೆಲಸ ಮಾಡಲು ಶುರು ಮಾಡುತ್ತದೆ. ಕೆಲವು ಬಾರಿ ನೀವು ಟ್ಯಾಪ್ ಮಾಡಿದಾಗ ಆಪ್‌ಗಳು ಓಪನ್ ಆಗದಿರಬಹುದು. ಜೊತೆಗೆ ಫೋನ್ ಪ್ರತಿಕ್ರಿಯಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಅಥವಾ ನಿಮ್ಮ ಟಚ್ ಸ್ಕ್ರೀನ್ ಸಂಪೂರ್ಣವಾಗಿ ಕೆಲಸ ಮಾಡುವುದನ್ನೇ ನಿಲ್ಲಿಸಬಹುದು.
ಕಣ್ಣುಗಳಿಗೂ ಹಾನಿ: ಸಾಮಾನ್ಯವಾಗಿ ಏನೂ ಸಮಸ್ಯೆ ಇಲ್ಲದ ಫೋನ್ ಬಳಕೆ ಕಣ್ಣುಗಳಿಗೆ ಹಾನಿ ಮಾಡುತ್ತದೆ. ಅಂತಹುದರಲ್ಲಿ ಒಡೆದ ಡಿಸ್‌ಪ್ಲೇ ಇರುವ ಫೋನ್ ಬಳಕೆ ಮಾಡಿದರೆ ಕಣ್ಣುಗಳ ಸ್ಥಿತಿ ಏನಾಗಬೇಡ ಎಂದು ಯೋಚನೆ ಮಾಡಿ. ಗೀರುಗಳು ಮತ್ತು ಬಿರುಕುಗಳಿಂದಾಗಿ ಇಮೇಲ್‌ಗಳನ್ನು ಓದುವುದು ಅಥವಾ ವಿಡಿಯೋಗಳನ್ನು ವೀಕ್ಷಣೆ ಮಾಡಲು ಆಗುವುದಿಲ್ಲ. ಇದರಿಂದಾಗಿ ನಿಮ್ಮ ಕಣ್ಣಿನ ಆಯಾಸ ಹೆಚ್ಚಾಗಲಿದ್ದು, ಇದು ತಲೆನೋವಿಗೂ ಕಾರಣವಾಗುತ್ತದೆ.
ಹೆಚ್ಚು ಕೊಳಕಾಗುತ್ತದೆ?: ಸ್ಮಾರ್ಟ್‌ಫೋನ್ ಮೊದಲೇ ಅತ್ಯಂತ ಕೊಳಕು ಸಾಧನ ಎಂದು ನಿಮಗೆಲ್ಲರಿಗೂ ಗೊತ್ತು. ಈ ನಡುವೆ ಒಡೆದ ಡಿಸ್‌ಪ್ಲೇನಲ್ಲಿ ನೀರಿನ ಹನಿ, ಕಸ ಹಾಗೂ ಎಣ್ಣೆಯ ಅಂಶ ಸೇರುವ ಮೂಲಕ ಇನ್ನೂ ಹೆಚ್ಚು ಕೊಳಕಾಗುತ್ತದೆ. ಇದು ನಿಮಗೆ ಅರಿವಿಲ್ಲದಂತೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ಈ ಕೊಳಕನ್ನು ನೀವು ಅಷ್ಟು ಸುಲಭವಾಗಿ ತೆಗೆಯಲೂ ಸಹ ಆಗುವುದಿಲ್ಲ.
ಮರುಮಾರಾಟ ಮೌಲ್ಯ ಕಡಿಮೆ ಆಗುತ್ತದೆ: ಉತ್ತಮ ಸ್ಥಿತಿಯಲ್ಲಿರುವುದಕ್ಕೆ ಹೋಲಿಸಿದರೆ ಕ್ರ್ಯಾಕ್ಡ್ ಡಿಸ್‌ಪ್ಲೇ ಅಂದರೆ ಒಡೆದ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಸಾಮಾನ್ಯವಾಗಿ ಕಡಿಮೆ ಮರುಮಾರಾಟ ಮೌಲ್ಯ ಹೊಂದಿರುತ್ತದೆ. ಭವಿಷ್ಯದಲ್ಲಿ ನಿಮ್ಮ ಡಿವೈಸ್ ಅನ್ನು ಮಾರಾಟ ಮಾಡಲು ನೀವು ಯೋಜಿಸಿದರೆ, ಬಿರುಕುಗೊಂಡ ಡಿಸ್‌ಪ್ಲೇಯನ್ನು ಈಗಲೇ ಸರಿಪಡಿಸಿಕೊಳ್ಳಿ.

ಸಾಫ್ಟ್‌ವೇರ್ ಮತ್ತು ಸಿಸ್ಟಂ ಸಮಸ್ಯೆಗಳು: ಕೆಲವು ಸಂದರ್ಭಗಳಲ್ಲಿ ಒಡೆದ ಡಿಸ್‌ಪ್ಲೇಯು ಸಾಫ್ಟ್‌ವೇರ್ ಗ್ಲಿಚ್‌ಗಳು(Software glitch), ಟಚ್ ಮಾಪನಾಂಕ ನಿರ್ಣಯದ ಮೇಲೆ ಪ್ರಭಾವ ಬೀರುತ್ತವೆ. ಇದು ಅನಿಯಮಿತ ನಡವಳಿಕೆಗೆ ಕಾರಣವಾಗಬಹುದು. ಅಂದರೆ ತಂತಾನೆ ಟಚ್ ಆಗಿ ಏನೇನನ್ನೋ ಓಪನ್ ಮಾಡುವುದು, ಕರೆ ಮಾಡುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣ ಆಗುತ್ತದೆ.


Click it and Unblock the Notifications








