Online scam: ಹೋಟೆಲ್‌ಗಳಿಗೆ ರೇಟಿಂಗ್ ನೀಡುವ ಕೆಲಸ; 13 ಲಕ್ಷ ರೂ. ಕಳೆದುಕೊಂಡ ಮಹಿಳೆ!
ಆನ್‌ಲೈನ್ ಸ್ಕ್ಯಾಮ್ (Online scam) ಪ್ರಕರಣಗಳಿಗೆ ಕಡಿವಾಣವೇ ಇಲ್ಲದಂತೆ ಆಗಿದೆ. ಯಾಕೆಂದರೆ ಸ್ಕ್ಯಾಮರ್‌ಗಳು ವಿವಿಧ ರೀತಿಯಲ್ಲಿ ಜನರನ್ನು ವಂಚನೆ ಮಾಡುತ್ತಿದ್ದು, ಈ ಮೂಲಕ ಸಾಕಷ್ಟು ವರ್ಷಗಳಿಂದ ದುಡಿದು ಸಂಪಾದನೆ ಮಾಡಿ ಇಟ್ಟಿದ್ದ ಜನರ ಹಣವನ್ನು ಕ್ಷಣಮಾತ್ರದಲ್ಲಿ ಎಗರಿಸುತ್ತಿದ್ದಾರೆ. ಇಂತಹುದೇ ಘಟನೆ ಈಗ ಪುಣೆಯಲ್ಲಿ ನಡೆದಿದ್ದು, ಇದರಿಂದಾಗಿ ಮಹಿಳೆ 13 ಲಕ್ಷ ರೂ.ಕಳೆದುಕೊಂಡಿದ್ದಾರೆ.
ಹೌದು, ಆನ್‌ಲೈನ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರ ಭಾಗವಾಗಿಯೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರು ಆನ್‌ಲೈನ್‌ನಲ್ಲಿ ಹೆಚ್ಚುವರಿ ಹಣ ಸಂಪಾದಿಸಲು ಮುಂದಾಗಿ 13 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಈ ಮಹಿಳೆ ಮೋಸ ಹೋಗಿದ್ದು ಹೇಗೆ?, ಈ ರೀತಿಯ ಮೋಸದಿಂದ ಎಚ್ಚೆತ್ತುಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಆನ್‌ಲೈನ್ ವಂಚನೆ: ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪುಣೆ ಮೂಲದ ಮಹಿಳೆ ಈ ಮೋಸದ ಜಾಲಕ್ಕೆ ಬಿದ್ದಿದ್ದಾರೆ. ಈ ಮಹಿಳೆಯನ್ನು ಕರೆ ಮೂಲಕ ಅನಾಮಿಕ ವ್ಯಕ್ತಿ ಸಂಪರ್ಕಿಸಿ ವ್ಯಕ್ತಿ ಅರೆಕಾಲಿಕ ಕೆಲಸ (Part time job) ನೀಡುವುದಾಗಿ ತಿಳಿಸಿದ್ದಾನೆ. ಅಂದರೆ ಆನ್‌ಲೈನ್‌ನಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ರೇಟಿಂಗ್ ನೀಡುವ ಉದ್ಯೋಗ ಇದಾಗಿತ್ತಂತೆ. ಪ್ರತಿ ದಿನ ಕೆಲವು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಗೆ ರೇಟಿಂಗ್ ನೀಡಿದರೆ, ಪ್ರತಿ ರೇಟಿಂಗ್‌ಗೆ ತಲಾ 150 ರೂಪಾಯಿ ಪಡೆಯುವುದಾಗಿ ಆತ ಮಾಹಿತಿ ನೀಡಿದ್ದಾನೆ.
ಇದಾದ ನಂತರದಲ್ಲಿ ನ್ಯಾಯಯುತ ವ್ಯವಹಾರ ಎಂದು ನಂಬಿದ ಮಹಿಳೆ ವಂಚಕರು ಮಾಹಿತಿ ನೀಡಿದ್ದ ಹೋಟೆಲ್ ರೇಟಿಂಗ್ ಕೆಲಸ ಆರಂಭ ಮಾಡಿದ್ದಾರೆ. ಆರಂಭದಲ್ಲಿ ಮಹಿಳೆಗೆ ನಂಬಿಕೆ ಅವರಿಂದ ಬ್ಯಾಂಕ್ ಮಾಹಿತಿ ಪಡೆದುಕೊಂಡು ಹಣವನ್ನು ಪಾವತಿ ಮಾಡಿದ್ದಾರೆ. ಜುಲೈ 18 ರಿಂದ ಈ ಮಹಿಳೆ ಹೆಚ್ಚುವರಿ ಹಣ ಸಂಪಾದನೆ ಮಾಡಲು ಈ ಕೆಲಸ ಆರಂಭ ಮಾಡಿದ್ದಾರೆ. ಆದರೆ ಅಕ್ಟೋಬರ್ 13 ರಿಂದ ವಂಚಕರು ಇವರನ್ನು ಸಂಪರ್ಕ ಮಾಡುವುದನ್ನು ನಿಲ್ಲಿಸಿದ್ದಾರೆ.
ಈ ವೇಳೆ ಕರೆ ಮಾಡಿಲ್ಲದಿದ್ದರೆ ಏನಂತೆ ಮಾಡಿದ್ದ ಕೆಲಸಕ್ಕೆ ಹಣ ಪಾವತಿ ಮಾಡಿದ್ದಾರಾ ಎಂದುಕೊಂಡು ಮಹಿಳೆ ತನ್ನ ಬ್ಯಾಂಕ್ ಖಾತೆ (Bank account) ಪರಿಶೀಲಿಸಲು ಮುಂದಾದಾಗ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣ ಸಂಪೂರ್ಣ ಕಾಣೆಯಾಗಿರುವುದು ಗೊತ್ತಾಗಿದೆ. ಇದನ್ನು ತಿಳಿದು ಮಹಿಳೆ ಆಘಾತಕ್ಕೊಳಗಾಗಿದ್ದಾಳೆ. ಅಂದರೆ ಅವರ ಬ್ಯಾಂಕ್ ಖಾತೆಯಲ್ಲಿದ್ದ 13 ಲಕ್ಷ ರೂ. ಹಣವನ್ನು ಸ್ಕ್ಯಾಮರ್ಸ್ ದೋಚಿದ್ದಾರೆ. ದುರಂತ ಏನೆಂದರೆ ಹಣವನ್ನು ವಂಚಕರು ಹೇಗೆ ಕದ್ದಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ.
ಮಹಿಳೆ ಈಗ ಪೊಲೀಸರಿಗೆ ದೂರು ನೀಡಿದ್ದು, ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ರೀತಿಯ ಮತ್ತೊಂದು ವಂಚನೆ ಪ್ರಕರಣ ಇತ್ತೀಚೆಗಷ್ಟೇ ವರದಿಯಾಗಿತ್ತು. ಅದರಲ್ಲಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯೊಬ್ಬರಿಗೆ ಈ ವಂಚನೆ ಮಾಡಲಾಗಿದೆ. ಬ್ಯಾಂಕ್ ಅಧಿಕಾರಿಯಂತೆ ನಟಿಸಿ ಲಾಕರ್ ಮೊತ್ತವನ್ನು ತಕ್ಷಣ ಪಾವತಿಸುವಂತೆ ಹೇಳಿದ್ದ ಗ್ಯಾಂಗ್ ಇವರಿಗೆ ಒಟ್ಟು 2.37 ಲಕ್ಷ ರೂ. ವಂಚಿಸಿದ್ದಾರೆ..
ಈ ರೀತಿಯ ವಂಚನೆಗಳಿಂದ ಪಾರಾಗುವುದು ಹೇಗೆ?:
-ಯಾವುದೇ ಅನಾಮಿಕ ಕರೆಗಳಿಗೆ ಉತ್ತರಿಸಬೇಡಿ. ಅದರಲ್ಲೂ ಅರೆಕಾಲಿಕ ಹುದ್ದೆಗಳು ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಗಳಿಸುವ ಆಸೆ ತೋರಿಸಿದ್ರೆ ಖಂಡಿತಾ ಇದು ಮೋಸದ ಕರೆ ಎಂದು ಎಚ್ಚೆತ್ತುಕೊಳ್ಳಿ. ಈ ರೀತಿ ಮಾಡುವುದರಿಂದ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನಾದರೂ ಉಳಿಸಿಕೊಳ್ಳಬಹುದು.
-ಅಷ್ಟೇ ಅಲ್ಲದೆ ಅನಾಮಿಕ ವ್ಯಕ್ತಿಗಳು ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಹಾಗೆ ಹೀಗೆ ಎಂದು ಹೇಳಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಕ್ರಿಯ ಮಾಡಬೇಕು ಎಂದು ಹೇಳಿಕೊಂಡು ಕರೆ ಮಾಡುವವರನ್ನು ಎಂದಿಗೂ ನಂಬಬೇಡಿ. ಯಾಕೆಂದರೆ ಯಾವ ಬ್ಯಾಂಕ್ ಸಿಬ್ಬಂದಿಯೂ ಕರೆ ಮೂಲಕ ನಿಮ್ಮ ಮಾಹಿತಿಯನ್ನು ಹಾಗೂ ಬ್ಯಾಂಕ್ ವಿವರವನ್ನು ಕೇಳುವುದಿಲ್ಲ.
-ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ನೀವು ಬಳಸಬಹುದಾದ ಏಕೈಕ ಅತ್ಯಂತ ಪರಿಣಾಮಕಾರಿ ತಂತ್ರ ಏನೆಂದರೆ ಆಗಾಗ್ಗೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ಲಾಗಿನ್ ಆಗುವ ಮೂಲಕ ಉಳಿತಾಯ ಹಣವನ್ನು ಚೆಕ್ ಮಾಡಿ. ಈ ಮೂಲಕ ಯಾವುದೇ ಅನಿರೀಕ್ಷಿತ ವಹಿವಾಟುಗಳಿಲ್ಲ ಎಂದು ಖಚಿತಪಡಿಸಿಳ್ಳಿ. ಇದನ್ನು ನೀವು ವಾರಕ್ಕೆ ಒಮ್ಮೆ ಮಾಡಿದರೂ ಸಾಕು.

-ನಿಮ್ಮ ಪಿನ್ ಮತ್ತು ಪಾಸ್‌ವರ್ಡ್‌ಗಳನ್ನು ರಹಸ್ಯವಾಗಿಡುವುದು ಸಹ ಪ್ರಮುಖವಾದ ಕೆಲಸವಾಗಿದೆ. ಇದು ನಿಮ್ಮ ಹಣದ ಕೀಲಿಗಳಾಗಿವೆ. ಅದೆಲ್ಲಕ್ಕೂ ಮಿಗಿಲಾಗಿ ಈ ಮಾಹಿತಿಯನ್ನು ಯಾರಿಗೂ ನೀಡಬೇಡಿ ಜೊತೆಗೆ ಅವುಗಳನ್ನು ಎಂದಿಗೂ ಕಾಗದದ ಮೇಲೆ, ಇಮೇಲ್ ಅಥವಾ ಪಠ್ಯ ಸಂದೇಶದಲ್ಲಿ ಬರೆದಿಟ್ಟುಕೊಳ್ಳಬೇಡಿ.


Click it and Unblock the Notifications








